ಭಟ್ಕಳ: ಕೆಲವು ಹಳ್ಳಿಗಳಲ್ಲಿ ಜನಪದ ಜೀವನ ಇನ್ನೂ ಜೀವಂತವಾಗಿದೆ. ಹಳ್ಳಿಗಳಲ್ಲಿ ಕಬ್ಬು ಬೆಳೆಯುವುದು, ಹಾಗು ಅದನ್ನು ಕಡಿದು ಆಲೆಯಾಡುವುದು. ಅದರಿಂದ ಬಂದ ಬೆಲ್ಲದಲ್ಲಿ ಮನೆಬಳಕೆಗೆ ಬೇಕಾದಷ್ಟು ಇಟ್ಟುಕೊಂಡು ಉಳಿದದ್ದನ್ನು ಮಾರುವುದು ಇವೆಲ್ಲವನ್ನು ಹಳ್ಳಿಜನರು ಮುಂದುವರಿಸಿಕೊಂಡು ಬಂದಿದ್ದಾರೆ. ಈ ಆಲೆಮನೆ ಎನ್ನುವುದು ಒಂದು ಸಂಪ್ರದಾಯದಂತೆ ನಡೆದುಕೊಂಡು ಬರುತ್ತಿದೆ. ಈ ಆಲೆಮನೆಯ ತನ್ನದೇ ವಿಶಿಷ್ಠತೆ ಉಳಿಸಿಕೊಂಡು ಬಂದಿದೆ. ಆಲೆಮನೆಗೆ ಮೊದಲು ಮರದ ನೆರಳಿರುವ ನಿವೇಶನವನ್ನು ಆರಿಸಿ ಸಿದ್ದಗೊಳಿಸುತ್ತಾರೆ. ನಂತರದಲ್ಲಿ ಕಬ್ಬನ್ನು ಹಿಂಡುವ ಗಾಣಕ್ಕೆ ಎತ್ತನ್ನು ಕಟ್ಟಿ ಗಾಣಕ್ಕೆ ಕಬ್ಬನ್ನು ಹಾಕಿ, ಗಾಣಕ್ಕೆ ಎತ್ತನ್ನು ಕಟ್ಟುತ್ತಾರೆ. ಒಬ್ಬಾತ ವೃತ್ತಾಕಾರವಾಗಿ ಎತ್ತನ್ನು ಓಡಿಸುವಾಗ ಗಾಣದಲ್ಲಿರುವ ಲೋಹದ ಆಲೆಗಳು ಕಬ್ಬನ್ನು ಹಿಂಡುತ್ತವೆ. ಆ ಗಾಣದಿಂದ ಬರುವ ಕಬ್ಬಿನ ರಸವು ಗಾಣದ ಕೆಳಗೆ ಮಾಡಿದ ದೊಡ್ಡ ಹೊಂಡದೊಳಗಿಟ್ಟ ಮಡಿಕೆಗೆ ಬಂದು ಸೇರುತ್ತದೆ.
ಹೀಗೆ ಇಲ್ಲಿ ಶೇಖರಣೆಯಾದ ಕಬ್ಬಿನ ಹಾಲನ್ನು ಮತ್ತೊಂದು ಡಬ್ಬಿಯಲ್ಲಿ ತುಂಬಿಸಿ ಬೆಂಕಿಯಲ್ಲಿಟ್ಟ ಕೊಪ್ಪರಿಗೆಗೆ ಹಾಕುತ್ತಾರೆ. ಕೊಪ್ಪರಿಗೆಗೆ ಹಾಕಿದ ನಂತರದಲ್ಲಿ ಕಬ್ಬಿನ ಹಾಲು ಕಾದ ಮೇಲೆ ಬರುವ ವೇಸ್ಟೆಜ್ ತೆಗೆಯುತ್ತಾರೆ. ವೇಸ್ಟೆಜ್ ತೆಗೆದ ನಂತರದಲ್ಲಿ ಕೊಪ್ಪರಿಗೆಗೆಯಲ್ಲಿ ಕಾಯುತ್ತಿರುವ ಕಬ್ಬಿನ ಹಾಲಿಗೆ ಸುಣ್ಣವನ್ನು ಸೇರಿಸುತ್ತಾರೆ. ಸುಣ್ಣದ ಮಿಶ್ರಣದ ನಂತರ ಕುದಿಯುತ್ತಿರುವ ಕಬ್ಬಿನ ಹಾಲು ಕಡು ಕೆಂಪು ಬಣ್ಣಕ್ಕೆ ತಿರುಗುತ್ತದೆ. ಇದಾದ ಕೆಲವೇ ಗಂಟೆಗಳಲ್ಲಿ ಬೆಲ್ಲದ ತಯಾರಿಕೆಗೆ ಸಿದ್ದವಾಗುತ್ತದೆ.
ಹೌದು, ಸಿಹಿ ಅಂದರೆ ಯಾರಿಗೆ ತಾನೇ ಇಷ್ಟವಾಗುದಿಲ್ಲ. ಅದರಲ್ಲು ಈಗಂತೂ ಸಕ್ಕರೆ ಕಾಯಿಲೆ ಬಂದಿರುವವರಿಗೂ ಸಿಹಿ ತಿನ್ನಬೇಡಿ ಎಂದರು ಅಲ್ಪಸ್ವಲ್ಪ ಸಿಹಿ ತಿನ್ನುತ್ತಾರೆ. ಇದೇ ಸಿಹಿಗೆ ಈಗ ಕಂಟಕ ಎದುರಾಗಿದೆ. ಕಬ್ಬು ಕಟಾವಿಗೆ ಬಂದ ಮೇಲೆ ಅದನ್ನು ಕಡಿದು ಆಲೆಮನೆಯಲ್ಲಿ ಕಬ್ಬಿನ ರಸ ತೆಗೆದು ಬೆಲ್ಲದ ಉಂಡೆ ಮಾಡುತ್ತಾರೆ. ಆದರೆ ಸದ್ಯ ದೇಶಕ್ಕೆ ದೇಶವೇ ಕೋರೋನಾ ಸಾಂಕ್ರಾಮಿಕದಿಂದ ತತ್ತರಿಸಿ ಹೋಗಿದ್ದು ಇದರ ಪರಿಣಾಮ ಕಬ್ಬು ಬೆಳೆಗಾರರಿಂದ ಹಿಡಿದು ಆಲೆಮನೆಯ ತನಕ ತಟ್ಟಿದೆ.
ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಬೆಳಕೆ ಪಂಚಾಯತ ವ್ಯಾಪ್ತಿಯ ಕಾನಮದ್ಲು ಎಂಬ ಗ್ರಾಮದ ಸುತ್ತಮುತ್ತ ಆಲೆಮನೆ ಹಬ್ಬಂ ಶುರುವಾಗಿದೆ. ಆದರೆ ಈ ಕೋರೋನಾ ಕಂಟಕದಿಂದ ಬೆಲ್ಲದ ಉಂಡೆ ಮಾರಾಟ ಹೇಗೆ ಎಂಬ ಪ್ರಶ್ನೆ ಎದುರಾಗಿದೆ. ಭಟ್ಕಳ ತನ್ನದೇ ಆದ ವಿಶಿಷ್ಠತೆಯನ್ನು ಹೊಂದಿದ್ದು ಸಾಕಷ್ಟು ವಿಧದ ಕೃಷಿಯಲ್ಲಿ ಹೆಸರುವಾಸಿ. ಅದರಂತೆ ಇಲ್ಲಿ ಆಲೆಮನೆ ರಾಜ್ಯದೆಲ್ಲೆಡೆ ಫೇಮಸ ಆಗಿದೆ. ಜನವರಿ ತಿಂಗಳಿನಿಂದ ಜೂನ ತನಕ ಕಬ್ಬು ಬೆಳೆಯುವ ಇಲ್ಲಿನ ರೈತಾಪಿ ಜನರು ಈ ಮಧ್ಯೆ ಕಬ್ಬು ಕಟಾವಿಗೆ ಬಂದ ಮೇಲೆ ಅದನ್ನು ಕತ್ತರಿಸಿ ಸ್ವಚ್ಛಗೊಳಿಸಿ ಮರಗಳ ಮಧ್ಯೆಯಲ್ಲಿ ಆಲೆಮನೆಯನ್ನು ನಿರ್ಮಿಸಿ ಕಬ್ಬಿನ ರಸವನ್ನು ಹಿಂಡಿ ತೆಗೆಯುತ್ತಾರೆ. ತಮ್ಮ ಕಷ್ಟದ ಜೀವನದ ಜೊತೆಗೆ ಆಲೆಮನೆಯನ್ನು ಅತ್ಯಂತ ಶ್ರದ್ಧೆಯಿಂದ ನಡೆಸುತ್ತಿದ್ದು, ಆದರೆ ಈ ವರ್ಷ ಈ ಕೊರೋನಾ ಈ ಆಲೆಮನೆಯ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಮೊದಲು ಆಲೆಮನೆ ಆರಂಭದ ಸುದ್ದಿ ಕೇಳಿ ಜನರು ಆಲೆಮನೆ ನಡೆಯುತ್ತಿರುವ ಸ್ಥಳಕ್ಕೆ ಬಂದು ಬೆಲ್ಲದ ಉಂಡೆಯನ್ನು ಖರೀದಿ ಮಾಡಿ ಹೋಗುತ್ತಿದ್ದರು. ಹಾಗೂ ಕೆಲವು ದಿನಸಿ, ಕಿರಾಣಿ ಅಂಗಡಿಕಾರರು ಸಿಹಿ ಬೆಲ್ಲದ ಉಂಡೆಯನ್ನು ಖರೀದಿ ಮಾಡಿ ವ್ಯಾಪಾರ ಮಾಡುತ್ತಿದ್ದರು. ಇದರಿಂದ ಕಬ್ಬು ಬೆಳೆಗಾರರು ಉತ್ತಮ ರೀತಿಯಲ್ಲಿ ಹಣಗಳಿಸುತ್ತಿದ್ದರು. ಆದರೆ ಲಾಕ್ ಡೌನ ಆದ ಹಿನ್ನೆಲೆ ಅಂಗಡಿ, ಮುಂಗಟ್ಟುಗಳೆಲ್ಲಿ ಬಂದ್ ಆಗಿವೆ. ಕೃಷಿ ಇಲಾಖೆಯ ವ್ಯಾಪ್ತಿಗೆ ಬರುವ ಈ ಕಬ್ಬು ಬೆಳೆಯನ್ನು ಕೃಷಿ ಇಲಾಖೆ ಸ್ವಲ್ಪ ಮುತುವರ್ಜಿ ವಹಿಸಿ ಅವರ ಬೆಳೆಯ ವ್ಯಾಪಾರಕ್ಕೆ ಅನುವು ಮಾಡಿಕೊಡಬೇಕೆಂಬುದು ರೈತರ ಮನವಿಯಾಗಿದೆ.
ಇವರು ಕಷ್ಟಪಟ್ಟು ಬೆವರು ಸುರಿಸಿ ಹಗಲು ರಾತ್ರಿ ಕೆಲಸ ಮಾಡಿ ಜನರಿಗೆ ಸಿಹಿಯನ್ನು ನೀಡುತ್ತಿದ್ದು, ಈಗ ಕೊರೋನಾದಿಂದಾಗಿ ವ್ಯಾಪಾರ ಮಾಡುವುದು ಹೇಗೆ ಎಂದು ತಲೆ ಮೇಲೆ ಕೈ ಹೊತ್ತು ಕುಳಿತಿದ್ದಾರೆ. ಪಕ್ಕದ ಬೈಂದೂರಿನಿಂದ ಬೆಲ್ಲ ತಯಾರಿಕೆಯ ಸುಣ್ಣವನ್ನು ಖರೀದಿ ಮಾಡಬೇಕಿದ್ದು, ತಯಾರಿಕೆಯ ಯಂತ್ರದ ಸಾಗಾಟ, ಕಟ್ಟಿಗೆ ಸಾಗಾಟಕ್ಕೆ ರೈತರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತೆರಳಬೇಕಾಗಿದ್ದು, ಪೊಲೀಸರ ಭಯದಲ್ಲಿ ದಿಕ್ಕು ತೋಚದಂತಾಗಿದೆ. ಕಬ್ಬಿನ ಗದ್ದೆಯಲ್ಲಿ 10-12 ಜನ ಅವರಿಗೆ ತಿಂಡಿ, ಊಟ, ಹಾಗೂ ಕಬ್ಬನ್ನು ಹಿಂಡುವ ಗಾಣದಲ್ಲಿ 4 ಜನರು ಕೆಲಸ ಮಾಡಬೇಕಾಗಿದ್ದು, ಇನ್ನು ಒಂದು ದಿನಕ್ಕೆ 3 ಸಾವಿರ ರೂ. ಖರ್ಚು ಬೀಳಲಿದೆ. ಇಷ್ಟು ಖರ್ಚಿನ ಮಧ್ಯೆ ಅವರಿಗೆ ಉತ್ತಮ ದರ ಸಿಗುವಂತೆ ಕೃಷಿ ಇಲಾಖೆ ಗಮನ ಹರಿಸಬೇಕಿದೆ.
ಸಾಕಷ್ಟು ರೈತರು ತಮ್ಮ ಬೆಳೆಯನ್ನು ಸ್ಥಳಿಯವಾಗಿ ವ್ಯಾಪಾರ, ಸಾಗಾಟಕ್ಕೆ ಮುಂದಾಗಲು ಭಯಪಡುತ್ತಿದ್ದು, ಇನ್ನು ಹೆಚ್ಚಾಗಿ ಶಿರೂರು, ಬೈಂದುರು ಕಡೆಗಳಲ್ಲಿಯೇ ಬೆಲ್ಲದ ವ್ಯಾಪಾರ ಮಾಡುವವರು ಹೆಚ್ಚಿದ್ದು, ಸದ ಶಿರೂರು ಗಡಿ ಬಂದ್ ಹಿನ್ನೆಲೆ ಎಲ್ಲವೂ ಸ್ಥಗಿತಗೊಂಡಿದೆ. ಆದರೆ ಸರಕಾರದ ಸುತ್ತೋಲೆಯಲ್ಲಿ ರೈತರ ಚಟುವಟಿಕೆಗೆ ಯಾವುದೇ ಸಮಸ್ಯೆ ಮಾಡಬಾರದೆಂಬುದಿದ್ದು, ಈ ಬಗ್ಗೆ ಭಟ್ಕಳ ಕೃಷಿ ಇಲಾಖೆ ರೈತರಿಗೆ ಧೈರ್ಯ ತುಂಬಿ ಅವರನ್ನು ಸಂಪರ್ಕಿಸಿ ಅವರು ಕಷ್ಟಪಟ್ಟು ಬೆಳೆದ ಬೆಳೆಯನ್ನು ರಕ್ಷಿಸಬೇಕಿದೆ. ಈ ಬಗ್ಗೆ ಭಟ್ಕಳ ಕೃಷಿ ಇಲಾಖೆಯನ್ನು ಸಂಪರ್ಕಿಸಿದಾಗ, ಕೆಲವೇ ದಿನದಲ್ಲಿ ರೈತರಇಗೆ ಹಸಿರು ಪಾಸ ವಿತರಣೆ ಆಗಲಿದೆ ಎಂದು ತಿಳಿಸಿದರು.
ವಿಸ್ಮಯ ನ್ಯೂಸ್, ಉದಯ್ ಎಸ್ ನಾಯ್ಕ, ಭಟ್ಕಳ