ಸಿ.ಎಂ ಉತ್ತರಕನ್ನಡ ಪ್ರವಾಸ ಹೇಗಿರಲಿದೆ? ಜಿಲ್ಲೆಯ ಎಲ್ಲೆಲ್ಲಿ ಭೇಟಿ ನೀಡಲಿದ್ದಾರೆ? ಈಗಾಗಲೇ ನಡೆಯುತ್ತಿದೆ ಜಿಲ್ಲಾಮಟ್ಟದ ಸಭೆಗೆ ಸಿದ್ಧತೆ
ಅಂಕೋಲಾ ಜುಲೈ 28 : ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಪ್ರಮಾಣವಚನ ಸ್ವೀಕರಿಸಿ,ರಾಜ್ಯಭಾರದ ಜವಾಬ್ದಾರಿ ಹೊತ್ತಿದ್ದಾರೆ.
ರಾಜ್ಯದಲ್ಲಿ ಇತ್ತೀಚಿಗೆ ಸುರಿದ ಕುಂಬದ್ರೋಣ ಮಳೆ ಹಲವು ಜಿಲ್ಲೆಗಳಲ್ಲಿ ಅವಾಂತರವನ್ನೇ ಸೃಷ್ಟಿಸಿದ್ದು,ಉತ್ತರ ಕನ್ನಡದ ವಿವಿಧ ತಾಲೂಕುಗಳು ಪ್ರವಾಹಪೀಡಿತ ವಾಗಿ ಜನಜೀವನ ಅಸ್ತವ್ಯಸ್ಥವಾಗಿದೆ. ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಅನೇಕ ಸೇತುವೆಗಳ ಸಂಪರ್ಕ ಕಡಿ ತಗೊಂಡು ಸಂಚಾರಕ್ಕೆ ತೊಡಕಾಗಿದೆ. ಇವೆಲ್ಲವುಗಳ ಅರಿವಿರುವ ಪಕ್ಕದ ಜಿಲ್ಲೆ ಹಾವೇರಿಯ ಶಿಗ್ಗಾವಿ ಕ್ಷೇತ್ರದ ಸರದಾರ, ನಾಡ ಜನತೆಯ ಜವಾಬ್ದಾರಿ ಹೊತ್ತು ಮುಂದಡಿ ಇಡುತ್ತಿದ್ದು,ನೆರೆಪೀಡಿತ ಪ್ರದೇಶಗಳ ಸ್ಥಿತಿಗತಿ ವೀಕ್ಷಣೆ ಹಾಗೂ ಪರಿಹಾರೋಪಾಯ ಕ್ರಮಗಳ ಕುರಿತು ಸಂಬಂಧಿಸಿದ ಅಧಿಕಾರಿ ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಲಿದ್ದಾರೆ.
ಎಲ್ಲೆಲ್ಲಿ ಭೇಟಿ ? ಎಲ್ಲಿ ಸಭೆ?
ಸಿಎಂ ಕಾರ್ಯಾಲಯದಿಂದ,ಮುಖ್ಯಮಂತ್ರಿಗಳ ತಾತ್ಕಾಲಿಕ ಪ್ರವಾಸ ಪಟ್ಟಿ ಸಿದ್ಧಗೊಳಿಸಿ ಬಿಡುಗಡೆ ಮಾಡಲಾಗಿದೆ. ಜುಲೈ 29ರ ಬೆಳಿಗ್ಗೆ 9:30 ಕ್ಕೆ ಬೆಂಗಳೂರಿನ ಎಚ್ಎಎಲ್ ನಿಂದ್ ವಿಶೇಷ ವಿಮಾನದ ಮೂಲಕ ಹೊರಟು, 10.30ಕ್ಕೆ ಹುಬ್ಬಳ್ಳಿ ತಲುಪಲಿದ್ದಾರೆ.ಅಲ್ಲಿಂದ ಹೆದ್ದಾರಿ ಮಾರ್ಗವಾಗಿ ಹೊರಟು 11, 45ಕ್ಕೆ ಯಲ್ಲಾಪುರ ತಲುಪಲಿದ್ದಾರೆ. ಯಲ್ಲಾಪುರದಲ್ಲಿ ನೆರೆ ಪೀಡಿತ ಪ್ರದೇಶ ಹಾಗೂ ರಾಷ್ಟ್ರೀಯ ಹೆದ್ದಾರಿ ಕುಸಿತದ ಪ್ರದೇಶ ಮತ್ತು ಕೊಚ್ಚಿಹೋದ ಗುಳ್ಳಾಪುರ ಸೇತುವೆ ವೀಕ್ಷಿಸಲಿದ್ದಾರೆ.
ನಂತರ ಕಾರವಾರ – ಅಂಕೋಲಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಳೆ ಹಾನಿಗೊಳಗಾದ ಕೆಲ ಪ್ರದೇಶಗಳ ವೀಕ್ಷಣೆ, ಕಾಳಜಿ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಮಧ್ಯಾಹ್ನ 2:00 ಗಂಟೆ ಇಂದ 3.00 ರ ವರೆಗೆ ಅಂಕೋಲಾದ ನಾಡವರ ಸಮುದಾಯಭವನದಲ್ಲಿ ಶಾಸಕರು, ಸಂಸದರು ಹಾಗೂಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಉಕ ಜಿಲ್ಲೆಯಲ್ಲಿ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಕೈಗೊಂಡಿರುವ ಪರಿಹಾರ ಕಾರ್ಯಗಳ ಬಗ್ಗೆ ಚರ್ಚಿಸಲಿದ್ದಾರೆ. ನಂತರ ಅಂಕೋಲದಿಂದ ಯಲ್ಲಾಪುರ ಮಾರ್ಗವಾಗಿ ಹುಬ್ಬಳ್ಳಿಗೆ ತೆರಳಿ, ಅಲ್ಲಿಂದ ವಿಶೇಷ ವಿಮಾನದ ಮೂಲಕ ಪುನಃ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ.
ಮುಖ್ಯಮಂತ್ರಿಗಳ ಕಾರ್ಯಕ್ರಮ ಪಟ್ಟಿಯಲ್ಲಿ ಅಂಕೋಲಾದ ಸ್ವಾತಂತ್ರ್ಯ ಸಂಗ್ರಾಮ ಸ್ಮಾರಕ ಭವನದಲ್ಲಿ ಜಿಲ್ಲಾ ಮಟ್ಟದ ಸಭೆ ಎಂದು ನಮೂದಿಸಲಾಗಿದ್ದು,ಅನಿವಾರ್ಯ ಕಾರಣಗಳಿಂದ ಅದನ್ನು ಮಾರ್ಪಡಿಸಿ,ಜಿಲ್ಲಾಡಳಿತದ ನಿರ್ದೇಶನದಲ್ಲಿ ಸ್ಥಳೀಯ ಅಧಿಕಾರಿಗಳು ನಾಡವರ ಸಮುದಾಯಭವನದಲ್ಲಿ ಹಮ್ಮಿಕೊಳ್ಳಲು ಪೂರ್ವ ಸಿದ್ಧತೆಯಲ್ಲಿ ತೊಡಗಿದ್ದಾರೆ.
ಒಟ್ಟಿನಲ್ಲಿ ನೂತನ ಮುಖ್ಯಮಂತ್ರಿ ಬರುವಿಕೆ,ಜಿಲ್ಲೆಯ ವಿವಿಧ ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರಲ್ಲಿ ಹೊಸ ಭರವಸೆ ಮೂಡಿಸಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ