Focus News
Trending

ಕಾಂಗ್ರೆಸ್ ಸರ್ಕಾರ ಅಸಂವಿಧಾನಿಕವಾಗಿ ಪಠ್ಯ-ಪುಸ್ತಕ ಪರಿಷ್ಕರಣೆ ಮಾಡುತ್ತಿದೆ: ರೋಹಿತ್ ಚಕ್ರತೀರ್ಥ ವಾಗ್ದಾಳಿ

ಶಿರಸಿ: ಕಾಂಗ್ರೆಸ್ ಸರ್ಕಾರ ಸರ್ವಾಧಿಕಾರ ಧೋರಣೆ ಅನುಸರಿಸುತ್ತಿದ್ದು, ಅಸಂವಿಧಾನಿಕವಾಗಿ ಪಠ್ಯ-ಪುಸ್ತಕ ಪರಿಷ್ಕರಣೆ ಮಾಡಿ ಸರ್ಕಾರಿ ಕನ್ನಡ ಶಾಲೆಗಳನ್ನು ಸಾಯಿಸುವ ಪ್ರಯತ್ನ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿ ಮಾಜಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ವಾಗ್ದಾಳಿ ನಡೆಸಿದರು.

ಅವರು ಮಾಧ್ಯಮದವರ ಜೊತೆ ಮಾತನಾಡಿ, ಪಠ್ಯ-ಪುಸ್ತಕ ಪರಿಷ್ಕರಣೆ ಮಾಡಿ ಈಗಿರುವ ಪಾಠಗಳನ್ನು ತೆಗೆದು ಯಾವ ಹೊಸತನದ ಪಾಠಗಳನ್ನು ಸೇರಿಸುತ್ತಾರೆ ಎಂಬುದನ್ನು ತಿಳಿಸಿಲ್ಲ. ಹಿಂದಿನ ಸರ್ಕಾರ ಮಾಡಿದ ಮಾಡಿದ ಪರಿಷ್ಕರಣೆ ಮಾಡಿದೆ ಎಂಬ ಅಜೆಂಡಾ ಮುಂದಿಟ್ಟುಕೊoಡು ಪಠ್ಯಗಳನ್ನು ತೆಗೆದು ಹಾಕಲಾಗಿದೆ ಎಂದರು.

ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ, 16 ಪಾಠಗಳನ್ನು ಏಕಾಏಕಿ ತೆಗೆಯಲಾಗಿದ್ದು, ಇದಕ್ಕೆ ಶಿಕ್ಷಣ ಇಲಾಖೆಯಲ್ಲಿ ಆಸ್ಪದವಿಲ್ಲ. ಸಮಿತಿ ರಚಿಸಿ, ಪತ್ರದ ಮೂಲಕ ಸರ್ಕಾರಕ್ಕೆ ಯಾವ ಪಾಠ ತೆಗೆಯಲಾಗುತ್ತದೆ ಎಂಬ ಮಾಹಿತಿ ನೀಡಿ, ಅನುಮತಿ ಪಡೆದು ಪರಿಷ್ಕರಣೆ ಮಾಡಬೇಕು. ಇವೆಲ್ಲವನ್ನೂ ಕಾಂಗ್ರೆಸ್ ಸರ್ಕಾರ ಗಾಳಿಗೆ ತೂರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹಿಂದಿನ ಸರ್ಕಾರದ ಅವಧಿಯಲ್ಲಿ ಪಠ್ಯ-ಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೆ. ಬರಗೂರ ರಾಮಚಂದ್ರಪ್ಪ ಮಾಡಿರುವ ಪಠ್ಯ-ಪುಸ್ತಕಗಳನ್ನು ಯಾಕೆ ಪರಿಷ್ಕರಣೆ ಮಾಡುತ್ತೇವೆ ಎಂಬುದನ್ನು ಮುಕ್ತವಾಗಿ ತಿಳಿಸಲಾಗಿತ್ತು. ಇಂದಿನ ಸರ್ಕಾರ ಕನಿಷ್ಠ ಸೌಜನ್ಯಕ್ಕೂ ನನ್ನ ಬಳಿ ಚರ್ಚಿಸಿಲ್ಲ. ಏಕಪಕ್ಷೀಯವಾಗಿ ನಿರ್ಣಯ ಕೈಗೊಂಡಿರುವುದು ತಪ್ಪು. ಇದು ಮಕ್ಕಳ ಮೇಲೆ ನೇರ ಪರಿಣಾಮ ಬೀರಲಿದೆ ಎಂದರು.

ಪದೇ ಪದೇ ಪಠ್ಯ-ಪುಸ್ತಕ ಪರಿಷ್ಕರಣೆಯಿಂದ ಮಕ್ಕಳಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ. ಪರಿಷ್ಕರಣೆ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಸಾಯಿಸುವ ವ್ಯವಸ್ಥಿತ ಸಂಚು ನಡೆಯುತ್ತಿದೆ. ಇದರಿಂದ ಸರ್ಕಾರಿ ಕನ್ನಡ ಶಾಲೆಗಳು ಮುಚ್ಚುವ ಹಂತ ತಲುಪುತ್ತದೆ. ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುವುದಿಲ್ಲ ಎಂಬುದನ್ನು ರಾಜ್ಯ ಸರ್ಕಾರ ಸ್ಪಷ್ಟನೆ ನೀಡಿದೆ. ಪೋಷಕರು ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಕಳುಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕನ್ನಡ ಶಾಲೆಗಳು ಮುಚ್ಚುವ ಹಂತ ತಲುಪುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.

ವಿಸ್ಮಯ ನ್ಯೂಸ್, ಶಿರಸಿ

Back to top button