ಕೆರೆಮನೆ ಮಹಾಬಲ ಹೆಗಡೆ ಮತ್ತು ಕೆರೆಮನೆ ರಾಮ ಹೆಗಡೆಯವರ ಸಂಸ್ಮರಣಾ ಕಾರ್ಯಕ್ರಮ: ರಾಮ ಹೆಗಡೆ ನೆನಪಿನ ಹೊತ್ತಿಗೆ ಲೋಕಾರ್ಪಣೆ
ಬಹು ಆಯಾಮದ ಶಾಸ್ತ್ರೀಯ ಕಲೆ ಯಕ್ಷಗಾನಕ್ಕೆ ದಕ್ಷಿಣೋತ್ತರ ಜಿಲ್ಲೆಗಳ ಕಲಾವಿದರ ಕೊಡುಗೆಗಳನ್ನು ಶ್ಲಾಘಿಸುತ್ತಾ, ಯಕ್ಷಗಾನದಲ್ಲಿ ಹಳೆಯ ಪರಂಪರೆಗಳು, ಚಿಂತನೆಗಳು ಮಾಯವಾಗುತ್ತಿರುವ ಬಗ್ಗೆ ಹೊನ್ನಾವರ-ಭಟ್ಕಳ ಶಾಸಕರಾದ ಶ್ರೀ ಸುನೀಲ್ ನಾಯ್ಕ್ ಬೇಸರ ವ್ಯಕ್ತಪಡಿಸಿದರು. ಅವರು ಹೊನ್ನಾವರ ತಾಲೂಕಿನ ಗುಣವಂತೆಯ ಕೆರೆಮನೆ ಶಿವರಾಮ ಹೆಗಡೆ ರಂಗಮoದಿರದಲ್ಲಿ ಖ್ಯಾತ ಯಕ್ಷಗಾನ ಕಲಾವಿದರಾದ ಡಾ. ಕೆರೆಮನೆ ಮಹಾಬಲ ಹೆಗಡೆ ಮತ್ತು ಕೆರೆಮನೆ ರಾಮ ಹೆಗಡೆಯವರ ಸಂಸ್ಮರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಸಾಮಾನ್ಯನಿಂದ ವಿದ್ವಜ್ಜನರ ಸಲಹೆ, ಸೂಚನೆಗಳೊಂದಿಗೆ ಯಕ್ಷಗಾನಕ್ಕೆ ಜೀವ ತುಂಬುವ ಯೋಜನೆಯೊಂದಿಗೆ ಕೆಲಸ ಮಾಡುತ್ತೇನೆ ಎಂದು ಆಶ್ವಾಸನೆ ನೀಡಿದರು.
ಶ್ರೀ ರಾಮ ಹೆಗಡೆ ಮತ್ತು ಶ್ರೀಮತಿ ನಾಗವೇಣಿ ಹೆಗಡೆ ಕೆರೆಮನೆ ಇವರ ಭಾಗವತಿಕೆಯಲ್ಲಿ ರಾಗಗಳ ಪರಿಚಯದೊಂದಿಗೆ ಯಕ್ಷಗಾನ ಹಾಡುಗಳ ಧ್ವನಿ ಮುದ್ರಣವನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿಯ ರಿಜಿಸ್ಟಾçರ್ ಶ್ರೀ ಎಚ್. ಎಸ್. ಶಿವರುದ್ರಪ್ಪನವರು ಬಿಡುಗಡೆಗೊಳಿಸಿ ಮಾತನಾಡುತ್ತಾ ಗಮಕಗಳ ಹಿನ್ನೆಲೆಯುಳ್ಳ ಈ ಅಪರೂಪದ ಯಕ್ಷಗಾನ ರಾಗಗಳ ಪರಿಚಯ ಉಳಿಸಿ, ಬೆಳೆಸುವುದರಲ್ಲಿ ಸಹಕಾರಿಯಾಗಿದೆ ಎಂದರು.
ಮುಂದಿನ ತಲೆಮಾರಿನ ಯಕ್ಷಗಾನ ಕಲಾವಿದರಿಗೆ ಸಹಕಾರಿಯಾಗಲು ಈ ರಾಗಗಳನ್ನು ಅಕಾಡೆಮಿಯಲ್ಲಿ ದಾಖಲೀಕರಿಸಿಕೊಳ್ಳುತ್ತೇನೆಂದರು. ಹೆಸರಾಂತ ವಿದ್ವಾಂಸ ಶ್ರೀ ಗುರುರಾಜ್ ಮಾರ್ಪಳ್ಳಿಯವರು ಮಾತನಾಡಿ ಸ್ಪಷ್ಟವಾದ ಭಾವ ಉಚ್ಚಾರದೊಂದಿಗೆ ಸ್ವರ, ರಾಗ, ಶೃತಿ ಬದ್ಧವಾಗಿ ಹಾಡಿ ಗಾನ ಗಂಧರ್ವರಾಗುವ ಸಾಮರ್ಥ್ಯ ಶ್ರೀ ರಾಮ ಹೆಗಡೆಯವರಿಗೆ ಇತ್ತು ಎಂದು ಅಭಿಪ್ರಾಯಪಟ್ಟರು.
ಡಾ. ಕೆರೆಮನೆ ಮಹಾಬಲ ಹೆಗಡೆ ಪ್ರಶಸ್ತಿಯನ್ನು ಮರಣೋತ್ತರವಾಗಿ ಹಡಿನಬಾಳ ಶ್ರೀಪಾದ ಹೆಗಡೆಯವರಿಗೆ ನೀಡಲಾಯಿತು. ಇದನ್ನು ಅವರ ಪುತ್ರ ಶ್ರೀಶ ಹೆಗಡೆ ಸ್ವೀಕರಿಸಿದರು. ಹಡಿನಬಾಳಾ ಶ್ರೀಪಾದ ಹೆಗಡೆಯವರ ಒಡನಾಡಿಯಾದ ಶ್ರೀ ಕೃಷ್ಣ ಯಾಜಿ ಬಳಕೂರ ಇವರು ಅಭಿನಂದನಾ ನುಡಿಗೈದರು. ಶ್ರೀ ಎನ್. ಜಿ. ಭಟ್, ಮಾಳ್ಕೋಡ ಸನ್ಮಾನ ಪತ್ರ ವಾಚಿಸಿದರು.
ಇದೇ ಸಂದರ್ಭದಲ್ಲಿ ‘ಬಹುಬಲ’ ರಾಮ ಹೆಗಡೆ ನೆನಪಿನ ಹೊತ್ತಿಗೆಯನ್ನು ಲೋಕಾರ್ಪಣೆಗೊಳಿಸಲಾಯಿತು. ಪುಸ್ತಕ ಪರಿಚಯಿಸಿದ ಪ್ರಾಧ್ಯಾಪಕ ನಾಗರಾಜ ಹೆಗಡೆ ಅಪಗಾಲರವರು ಮಾತನಾಡುತ್ತಾ ಕುಟುಂಬ ವತ್ಸಲನಾಗಿ, ಜೀವನ ಪ್ರೇಮಿಯಾಗಿ, ಶಿಷ್ಯಾನುರಾಗಿಯಾಗಿ, ಶೋಧನೆಯಲ್ಲಿ ಸದಾ ತನ್ನನ್ನು ತನ್ಮಯತೆಯಿಂದ ತೊಡಗಿಸಿಕೊಳ್ಳುತ್ತಾ ಇರುವ ರಾಮ ಹೆಗಡೆಯವರು ನಿಜಕ್ಕೂ ‘ಬಹುರಾಮ’ರೇ ಆಗಿ ‘ಬಹುಬಲ’ರಾಗಿದ್ದರು ಎಂದರು.
‘ಬಹುಬಲ’ ಹೊತ್ತಗೆಯ ಮುಖ್ಯ ಸಂಪಾದಕರಾದ ಡಾ. ಶ್ರೀಪಾದ ಶೆಟ್ಟಿಯವರು ಮಾತನಾಡುತ್ತಾ ಕೆರೆಮನೆಯ ಯಕ್ಷಗಾನ ಪರಂಪರೆಗೆ ರಾಮ ಹೆಗಡೆಯವರು ಶಕ್ತ ಪ್ರತಿನಿಧಿಯಾಗಿ ತಮ್ಮದೇ ಆದ ಪ್ರತಿಭೆ, ಪರಿಣಿತಿ, ಕಲಾಭಿಜ್ಞತೆಯಿಂದ ಯಕ್ಷಗಾನ ಕಲೆಗೆ ಹೆಸರನ್ನು ತಂದುಕೊಟ್ಟವರು ಎಂದರು. ಮುಖ್ಯ ಅತಿಥಿಗಳಾಗಿ ಅಕಾಡೆಮಿಯ ಸದಸ್ಯರಾದ ಶ್ರೀಮತಿ ನಿರ್ಮಲಾ ಹೆಗಡೆ, ಕೆರೆಮನೆ ಶಿವಾನಂದ ಹೆಗಡೆ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀ ಗಂಗಾಧರ ಗೌಡ ಶುಭ ಹಾರೈಸಿದರು.
ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಹೆಸರಾಂತ ವಿದ್ವಾಂಸ, ವಾಗ್ಮೀ, ಮೇಲುಕೋಟೆ ಸಂಸ್ಕೃತ ವಿದ್ಯಾಲಯದ ನಿವೃತ್ತ ಪ್ರಾಚಾರ್ಯರಾಗಿರುವ ಶ್ರೀ ವಿ. ಉಮಾಕಾಂತ ಭಟ್ಟರು ಮಾತನಾಡಿ ಸಂಗೀತ, ಸಾಹಿತ್ಯ ಮತ್ತು ರಸಸ್ವಾದದಲ್ಲಿ ಸಾಧನೆ ಮಾಡಿ, ಕೆರೆಮನೆಯನ್ನು ಗುರುಮನೆಯನ್ನಾಗಿ ಮಾಡಿದ ಡಾ. ಮಹಾಬಲ ಹೆಗಡೆ ಅವರ ಮಗ ದಿವಂಗತ ರಾಮ ಹೆಗಡೆ ಹುಟ್ಟಿದಲ್ಲಿಯೇ ಅರಳಿ ತನ್ನ ಕಂಪು-ಕೆoಪುಗಳನ್ನು ಹರಡಿ ಸೂರ್ಯನಿಗೆ ಮುಖ ಮಾಡಿ ನಿಂತ ಕೆರೆಮನೆ ಕಮಲ ಎಂದು ಅಭಿಪ್ರಾಯಪಟ್ಟರು. ಈ ನೆಲದಿಂದ ನೆಲೆಯಿಂದ ಯಕ್ಷಗಾನಕ್ಕೆ ಬೆಲೆ ಬರಲಿ ಎಂದರು.
ಕಾರ್ಯಕ್ರಮದ ಆರಂಭದಲ್ಲಿ ಅಗಲಿದ ಯಕ್ಷ ಚೇತನಗಳಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು. ಯಕ್ಷಗಾನ ಶೈಲಿಯಲ್ಲಿ ಗಣಪತಿ ಸ್ತುತಿಯನ್ನು ಶ್ರೀ ಗಣೇಶ ಯಾಜಿಯವರು ಹಾಡಿದರು. ಶ್ರೀ ಶಶಾಂಕ ಹೆಗಡೆ ಸರ್ವರನ್ನು ಪರಿಚಯಿಸಿ ಸ್ವಾಗತಿಸಿದರು. ಶ್ರೀಮತಿ ನಾಗವೇಣಿ ಹೆಗಡೆ ಆಶಯ ನುಡಿ ವ್ಯಕ್ತಪಡಿಸಿದರು. ಶ್ರೀ ಕಿಶೋರ ಹೆಗಡೆ ವಂದಿಸಿದರು. ಶ್ರೀ ಎಲ್. ಎಂ. ಹೆಗಡೆ, ಕೆರೆಮನೆ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ನಂತರ ಪಂಡಿತ ಶ್ರೀ ಪರಮೇಶ್ವರ ಹೆಗಡೆ, ಕಲ್ಭಾಗ ಇವರಿಂದ ಶಾಸ್ತ್ರೀಯ ಸಂಗೀತ ಏರ್ಪಟ್ಟಿತು. ಶ್ರೀ ಶ್ರೀಧರ ಹೆಗಡೆ ಕಲ್ಭಾಗ, ಶ್ರೀ ಗೋಪು ಹೆಗಡೆ ಕಲ್ಭಾಗ ಮತು ಶ್ರೀ ಗೌರೀಶ ಯಾಜಿ ಸಾಥ್ ನೀಡಿದರು. ಡಾ. ಮಹಾಬಲ ಹೆಗಡೆ ಮೊಮ್ಮಕ್ಕಳಾದ ಶ್ರೀ ಶಶಾಂಕ ಹೆಗಡೆ ಮತ್ತು ಶ್ರೀ ಕಿಶೋರ ಹೆಗಡೆಯವರು ಗೆಜ್ಜೆ ಕಟ್ಟಿ, ಶಾಸ್ತ್ರೀಯ ಹೆಜ್ಜೆಗಳೊಂದಿಗೆ ಬಬ್ರುವಾಹನ ಕಾಳಗ ಪ್ರಸಂಗವನ್ನು ಇತರ ಸಹ ಕಲಾವಿದರೊಂದಿಗೆ ಪ್ರದರ್ಶಿಸಿ ಹೊಸ ಮನ್ವಂತರದ ಅರಳುವ ಪ್ರತಿಭೆಗಳಾಗಿ ಕಂಡರು.