Follow Us On

WhatsApp Group
Big News
Trending

ಹೆಸರಿಗಷ್ಟೇ ಪ್ರಮುಖ ರಾಜ್ಯ ಹೆದ್ದಾರಿ: ಎಲ್ಲಿ ನೋಡಿದ್ರೂ ಹೊಂಡ ಗುಂಡಿಗಳು

ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾದ ದುಸ್ಥಿತಿ

ಇದು ಹೆಸರಿಗಷ್ಟೇ ಪ್ರಮುಖ ರಾಜ್ಯ ಹೆದ್ದಾರಿ.ಆದರೆ ಇಲ್ಲಿನ ಹೊಂಡ ಗುಂಡಿಗಳಲ್ಲಿ ರಸ್ತೆ ಇದೆಯೇ ಎಂದು ಹುಡುಕ ಬೇಕಾದ ದುಸ್ಥಿತಿ.ಸಾಲದೆಂಬಂತೆ ಶಿಥಿಲಾವಸ್ಥೆಯಲ್ಲಿರುವ ಕಿರಿದಾದ ಸೇತುವೆ ಮೇಲೆ ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾದ ಅನಿವಾರ್ಯತೆ.ಈ ಹೆದ್ದಾರಿ ಪ್ರಯಾಣದ ವೇಳೆ ನಿತ್ಯ ನರಕಯಾತನೆ ಅನುಭವಿಸುತ್ತಿರುವ ಜನತೆ , ಹೆದ್ದಾರಿಯಲ್ಲಿ ಇಂಗು ಗುಂಡಿ ನಿರ್ಮಿಸಲು ಹೊರಟಂತಿರುವ ಇಲಾಖೆಯ ಲೋಕೋಪಯೋಗಿ ಕೆಲಸಕ್ಕೆ ಗಾಂಧೀ ಜಯಂತಿಯಂದು ವಿನೂತನ ರೀತಿಯಲ್ಲಿ ಪ್ರತಿಭಟಿಸಲು ಸಿದ್ದರಾಗುತ್ತಿದ್ದಾರೆ .

ಇದನ್ನೂ ಓದಿ: ಉದ್ಯೋಗಾವಕಾಶ: 1 ಲಕ್ಷದ ವರೆಗೆ ವೇತನ: SSLC, ಡಿಪ್ಲೋಮಾ, ಪದವಿ ಆದವರು ಅರ್ಜಿ ಸಲ್ಲಿಸಿ

ಅಂಕೋಲಾ ತಾಲೂಕಿನ ಪಟ್ಟಣ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಹಾದುಹೋಗಿರುವ ಪ್ರಮುಖ ರಾಜ್ಯ ಹೆದ್ದಾರಿಯಾಗಿರುವ ಮಂಜುಗುಣಿ ಬೆಲೇಕೇರಿ ಮಾರ್ಗದ, ಪೂಜಗೇರಿ ತೆಂಕಣಕೇರಿ ಗಡಿ ಪ್ರದೇಶದ ವ್ಯಾಪ್ತಿಯಲ್ಲಿ , ಹೆದ್ದಾರಿ ಸಂಪೂರ್ಣ ಹದಗೆಟ್ಟಿದ್ದು, ಇಲ್ಲಿನ ದುಸ್ಥಿತಿ ಹೇಳತೀರದ್ದಾಗಿದೆ. ಹೆದ್ದಾರಿ ಮಾರ್ಗಮಧ್ಯೆ ಪೂಜಗೇರಿ ಹಳ್ಳಕ್ಕೆ ಕಳೆದ ಕೆಲ ದಶಕಗಳ ಹಿಂದೆ ಕಟ್ಟಿದ್ದ ಕಿರು ಸೇತುವೆ ಶಿಥಿಲಾವಸ್ಥೆಗೆ ತಲುಪಿದ್ದು, ಸುರಕ್ಷತಾ ತಡೆಗೋಡೆ ಕೂಡ ದೊಡ್ಡ ಪ್ರಮಾಣದಲ್ಲಿ ಹಾನಿಗೊಳಗಾಗಿದ್ದು,ಈ ಕಿರು ಸೇತುವೆ ದಾಟಿ ಹೋಗಬೇಕಾದರೆ ಜೀವ ಕೈಯಲ್ಲಿ ಹಿಡಿದುಕೊಂಡೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾದಂತಿದೆ.

ಕಿರು ಸೇತುವೆಯ ಎರಡು ಕಡೆ ಕೂಡು ರಸ್ತೆಯು, ನೂರಿನ್ನೂರು ಮೀಟರ್ ದೂರದವರೆಗೆ ಪೂರ್ಣ ಪ್ರಮಾಣದ ಅಭಿವೃದ್ಧಿ ಕಾಣದೇ ವರ್ಷದಿಂದ ವರ್ಷಕ್ಕೆ ಕೇವಲ ತೇಪೆ ಹಚ್ಚೋ ಕಾರ್ಯ ಕೈಗೊಂಡು, ಹೊಂಡ – ಗುಂಡಿಗಳನ್ನು ಮುಚ್ಚಿದಂತೆ ಮಾಡಿ ಕೈ ತೊಳೆದುಕೊಳ್ಳಲಾಗುತ್ತದೆ ಎಂಬ ಆರೋಪ ಸಾರ್ವಜನಿಕ ವಲಯದಿಂದ ಕೇಳಿ ಬರಲಾರಂಭಿಸಿದೆ. ಹೆದ್ದಾರಿ ಅಂಚಿಗೆ ನೀರು ಸರಾಗವಾಗಿ ಹರಿದು ಹೋಗಲು ಅವಕಾಶ ಮಾಡಿಕೊಡದಿರುವುದು,ಬೇಕಾ ಬಿಟ್ಟಿಯಾಗಿ ಕಲ್ಲು ,ಮಣ್ಣು ,ಜೆಲ್ಲಿ ,ಗ್ ಗ್ರೀಟ್ ಪೌಡರ್, ಇಲ್ಲವೇ ಕಾಂಕ್ರೀಟ್ ಸುರಿದು ತಾತ್ಕಾಲಿಕವಾಗಿ ಹೆದ್ದಾರಿ ಹೊಂಡ-ಗುಂಡಿ ಮುಚ್ಚಲು ಮುಂದಾಗುವ ಇಲಾಖೆಯ ಕ್ರಮದಿಂದ,ಒಂದು ಹೋಂಡ ಮುಚ್ಚಿದರೆ,ಮತ್ತೆ ಕೆಲ ಹೊಂಡಗಳು ನಿರ್ಮಾಣವಾಗುತ್ತಿದೆ.

ಪೂಜಗೇರಿಯ ಈ ಭೂ ಪ್ರದೇಶದಲ್ಲಿ ದೇಶದ ಸ್ವತಂತ್ರ ಚಳುವಳಿ ಕಾಲದಲ್ಲಿ ಉಪ್ಪು ತಯಾರಿಸಿದ ಹಿರಿಮೆಯಿದೆ.ಸಮುದ್ರ ಹಿನ್ನೀರಿನ ಈ ಪ್ರದೇಶದಲ್ಲಿ ಈಗಲೂ ಕುಡಿಯುವ ನೀರಿಗೆ ತತ್ವಾರ ಇದು,ಸಿಹಿ ನೀರು ಸಂಗ್ರಹಕ್ಕೆ ನದಿ ಭಾಗದ ಬಳಿ ಕಿಂಡಿ ಅಣೆಕಟ್ಟು ಮಾದರಿ ಯೋಜನೆ ನಿರ್ಮಿಸಿ,ಅಂತರ್ಜಲಸಿಹಿಯಾಗಿಸಲು ಪ್ರಯತ್ನಿಸಲಾಗುತ್ತಿದೆ. ಅದೇ ಕಾರಣಕ್ಕೋ ಏನೋ ಎಂಬಂತೆ ,ಕುಡಿಯುವ ನೀರು ಪೂರೈಕೆಗೆ ಸಂಬಂಧ ಪಡದ, ಆದರೆ ಹೆದ್ದಾರಿ ನಿರ್ವಹಣೆ ಮಾಡಲೇಬೇಕಿದ್ದ ಇಲಾಖೆಯೊಂದು ಹೆದ್ದಾರಿಯಲ್ಲಿಯೇ ಇಂಗು ಗುಂಡಿ ನಿರ್ಮಿಸುವ ಮೂಲಕ ತಾನೂ ಲೋಕೋಪಯೋಗಿ ಕೆಲಸ ಮಾಡಲು ಹೊರಟಿದೆಯೇ ಎಂದು ಸಾರ್ವಜನಿಕರು ಅಣಕಿಸುವಂತಾಗಿದೆ.

ಪೂಜಗೇರಿ ಕಿರು ಸೇತುವೆ ಮತ್ತು ಸೇತುವೆಯ ಕೂಡ ರಸ್ತೆ ಎರಡು ಕಡೆ ಸಂಪೂರ್ಣ ಹದಗೆಟ್ಟಿದ್ದು ವಾಹನ ಸವಾರರು ಮತ್ತು ರಸ್ತೆ ಸಂಚಾರಿಗಳ ಪಾಲಿಗೆ ನರಕಯಾತನೆ ಅನುಭವಿಸುವಂತಾಗಿ ರಸ್ತೆಯಲ್ಲಿ ಹೊಂ ಡ ಗುಂಡಿಗಳಿವೆಯೇ ಅಥವಾ ಹೊಂಡ- ಗುಂಡಿಗಳಲ್ಲಿ ರಸ್ತೆಯ ಒಂದು ಭಾಗವಾದರೂ ಕಂಡಿತೇ ಎಂದು ಹುಡುಕುವ ದುಸ್ಥಿತಿ ಬಂದೊದಗಿದಂತಿದೆ. ಹೊಂಡ ಗುಂಡಿಗಳಲ್ಲಿ ಕೆಂಪು ರಾಡಿ ನೀರು ನಿಂತು, ಗುಂಡಿಯ ಆಳ ಒಮ್ಮೇಲೆ ವಾಹನ ಚಾಲಕರ ಗಮನಕ್ಕೆ ಬಾರದಿರುವುದರಿಂದ ವಾಹನಗಳ ಚಕ್ರ ಹೊಂಡಗಳಲ್ಲಿ ಸಿಲುಕಿ ಏಳು – ಬೀಳಿಗೆ ಕಾರಣವಾಗುತ್ತಿದೆ. ರಿಕ್ಷಾ ಮತ್ತಿತರ ಸಣ್ಣ ಚಕ್ರದ ವಾಹನಗಳು ಮುಗ್ಗರಿಸಿ ಬೀಳುವ ಸಾಧ್ಯತೆ ಹೆಚ್ಚಿದೆ. ಕೆಲ ದ್ವಿಚಕ್ರ ವಾಹನ ಸವಾರರೂ ಆಯತಪ್ಪಿ ಬಿದ್ದ ಉದಾಹರಣೆಗಳು ಇವೆ.

ರಾತ್ರಿ ಸಮಯ ಇಲ್ಲವೇ ಅನಾರೋಗ್ಯ ಮತ್ತು ಇತರ ಕೆಲ ತುರ್ತು ಸಂದರ್ಭಗಳಲ್ಲಿ ಇಲ್ಲಿ ಸಂಚರಿಸುವುದು ಯಮಪುರಿಗೆ ರಹಧಾರಿ ಎನ್ನುವಂತಾಗಿದೆ. ಈ ರಸ್ತೆ ಹೊಂಡ ತಪ್ಪಿಸಲು ಹೋಗಿ ವಾಹನ ಸವಾರರು ಹಳ್ಳದ ನೀರಿಗೆ , ಇಲ್ಲವೇ ಹೆದ್ದಾರಿಯಲ್ಲಿಯೇ ಬೀಳುವ ಸಾಧ್ಯತೆಗಳೂ ಹೆಚ್ಚಿವೆ. ಈ ಹಿಂದೆ ಇಲ್ಲಿನ ಅವ್ಯವಸ್ಥೆ ಕುರಿತು ಸುದ್ದಿ ಮಾಧ್ಯಮಗಳಲ್ಲಿ ವರದಿಯಾದಾಗ,ರಸ್ತೆಗಳಿಗೆ ತಾತ್ಕಾಲಿಕ ತೇಪೆ ಭಾಗ್ಯ ಕರುಣಿಸಿದ್ದ ಸಂಬಂಧಿತ ಇಲಾಖೆಯವರು,ಸೇತುವೆ ತಡೆಗೋಡೆ ಹಾನಿಗೊಳಗಾದ ಜಾಗದಲ್ಲಿ ಅಡಿಕೆ ದಬ್ಬೆ,ಕಟ್ಟಿಗೆ ರೀಪ್ಗಳನ್ನು ತೆಂಗಿನ ನಾರಿನ ಹುರಿಯಿಂದ ಕಟ್ಟಿ,ಅದಕ್ಕೆ ಕೆಂಪು ಬಾವುಟ ನೇತುಹಾಕಿ ತನ್ನ ಜವಾಬ್ದಾರಿಯಿಂದ ಕೈ ತೊಳೆದುಕೊಂಡಿತ್ತು.ಈ ಕುರಿತು ಮತ್ತೆ ಇಲಾಖೆಯವರನ್ನು ಪ್ರಶ್ನಿಸಿದಾಗ ಹೊಸ ಸೇತುವೆ ನಿರ್ಮಾಣಕ್ಕೆ ಈಗಾಗಲೇ ಟೆಂಡರ್ ಆಗಿದ್ದು ಕಾಮಗಾರಿ ಶೀಘ್ರವೇ ಆರಂಭಗೊಳ್ಳುತ್ತದೆ ಎಂದು ಹಾರಿಕೆಯ ಉತ್ತರ ನೀಡಿದ್ದರು.

ನಂತರ ಟೆಂಡರ್ ಪ್ರಕ್ರಿಯೆ ನಡೆದರೂ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರನ ವಿಳಂಬ ನೀತಿಯಿಂದಾಗಿ ಹೊಸ ಸೇತುವೆ ಹಾಗೂ ರಸ್ತೆ ನಿರ್ಮಾಣದ ಕನಸು ಬಗ್ನ ಗೊಂಡು,ಕರೆದ ಟೆಂಡರ್ ಸಹ ರದ್ದುಪಡಿಸಿ,ಹೊಸ ಟೆಂಡರ್ ಹಂತಕ್ಕೆ ಹೋಗಿದೆ ಎನ್ನಲಾಗಿದೆ.ಈಗ ಮತ್ತೆ ಮಳೆಗಾಲ ಮುಗಿಯುತ್ತ ಬರುತ್ತಿದ್ದು, ಆದರೂ ಸದ್ಯಕ್ಕೆ ಕಾಮಗಾರಿ ಆರಂಭಗೊಳ್ಳುವ ಯಾವುದೆ ಲಕ್ಷಣಗಳಿಲ್ಲ.

ಹೆದ್ದಾರಿಯಲ್ಲಿ ದಿನನಿತ್ಯ ಪ್ರತಿಷ್ಠಿತ ಶಾಲಾ ಕಾಲೇಜುಗಳು,ಹತ್ತಾರು ಶೈಕ್ಷಣಿಕ ಸಂಸ್ಥೆಗಳು ,ಬ್ಯಾಂಕ್ ಮತ್ತು ಇತರ ಹಣಕಾಸು ಸಂಸ್ಥೆಗಳು,ಸರ್ಕಾರಿ ಇಲಾಖೆಗಳು,ವ್ಯಾಪಾರ ವಾಣಿಜ್ಯ ಮಳಿಗೆಗಳಿಗೆ ಸಾವಿರಾರು ಜನ ಹೋಗಿ ಬರುವ ಕಾರಣ ಈ ಪ್ರದೇಶ ಅತ್ಯಂತ ಜನನಿಬಿಡ ವಾಗಿರುತ್ತದೆ.ಪೂಜಗೇರಿ, ಬಾಸಗೋಡ, ಕೋಗ್ರೆ, ಬೆಳಂಬಾರ, ಮಂಜಗುಣಿ, ಹೊನ್ನೆಬೈಲ್ ಸೇರಿದಂತೆ ಸುತ್ತ ಮುತ್ತಲ ಹತ್ತಾರು ಹಳ್ಳಿಗಳ ಸಂಪರ್ಕ ರಸ್ತೆಯು ಇದಾಗಿದ್ದು,ಗಂಗಾವಳಿ ನದಿ ದಾಟಿ ಗೋಕರ್ಣ ಸಂಪರ್ಕಿಸುವ ಹೊಸ ಸೇತುವೆಯ ಮೇಲೂ ಲಘುವಾಹನ ಮತ್ತಿತರ ವಾಹನಗಳ ಓಡಾಟಕ್ಕೆ ತೆರೆದುಕೊಂಡಿದ್ದು, ಅದರ ನೇರ ಪರಿಣಾಮ ಈ ಹೆದ್ದಾರಿಯಲ್ಲಿಯೂ ಸಂಚಾರದಟ್ಟಣೆ ಇನ್ನಷ್ಟು ಹೆಚ್ಚುವಂತಾಗಿದೆ.

ಶಾಲಾ ಬಸ್ಸುಗಳು ಸೇರಿದಂತೆ ಇತರೆ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುವದರಿಂದ ರಸ್ತೆ ಅಪಘಾತದ ಸಾಧ್ಯತೆಗಳು ಹೆಚ್ಚಿದೆ., ಸೇತುವೆಗೆ ಹೊಂದಿಕೊಂಡಿರುವ ಸಂಪರ್ಕ ರಸ್ತೆಗಳಲ್ಲಿ ಇತ್ತೀಚಿಗಷ್ಟೇ ಕೆಲ ಸೂಚನಾ ಫಲಕಗಳನ್ನು ಅಳವಡಿಸಲಾಗಿದ್ದರೂ,ವೇಗ ನಿಯಂತ್ರಕಗಳು ಇಲ್ಲದಿರುವುದರಿಂದ ಶಿಥಿಲಾವಸ್ಥೆಯಲ್ಲಿರುವ ಸೇತುವೆ ಮೇಲಿನ ಸಂಚಾರವು ಅಪಾಯಕಾರಿಯಾಗಿದೆ ಎನ್ನುವ ಮಾತು ಸ್ಥಳೀಯರಿಂದ ಕೇಳಿ ಬಂದಿದೆ.

ಈ ಕೂಡಲೇ ಇಲ್ಲಿನ ಅವ್ಯವಸ್ಥೆಯನ್ನು ಸರಿಪಡಿಸಿ ತುರ್ತು ಕ್ರಮ ಕೈಗೊಳ್ಳಬೇಕೆನ್ನುತ್ತಾರೆ ಪೂಜಗೇರಿ ಹಾಗೂ ಸುತ್ತಮುತ್ತಲ ಹತ್ತಾರು ಹಳ್ಳಿಗಳ ಗ್ರಾಮಸ್ಥರು.,ಸಂಬಂಧಿಸಿದ ಅಧಿಕಾರಿಗಳು ಈ ಕುರಿತು ರಸ್ತೆ ಸುಧಾರಣೆಗೆ ಒತ್ತು ನೀಕುವಂತೆ . ಹೊಂಡ ಗುಂಡಿಗಳು ಇಲ್ಲವೇ ಹೆದ್ದಾರಿಯಲ್ಲಿಯೇ ಇಂಗು ಗುಂಡಿ ನಿರ್ಮಾಣ ಮಾಡಲು ಹೊರಟಂತಿರುವ ಲೋಕೋಪಯೋಗಿ ಘನಂದಾರಿ ಕಾರ್ಯಕ್ಕೆ ಸಂಬಂಧಿತ ಆಯಾ ಇಲಾಖೆಗಳಿಗೆ ಅಣಕು ಸನ್ಮಾನ ಸಮಾರಂಭ ಮಾಡಿ,,ಹೋಂಡ ಗುಂಡಿಗಳಲ್ಲಿ ಗಿಡ ನೆಟ್ಟು, ಗಾಂಧಿ ಜಯಂತಿಯಂದು ವಿನೂತನ ರೀತಿಯಲ್ಲಿ ಸಾರ್ವಜನಿಕರು, ಪ್ರತಿಭಟಿಸಲು ಸಿದ್ದರಾಗುವಂತಿದೆ.ಅಷ್ಟರೊಳಗೆ ಯಾದರೂ ಹೆದ್ದಾರಿ ಶಾಶ್ವತ ಅಭಿವೃದ್ಧಿಗೆ,ಇಲ್ಲವೇ ಸಮಸ್ಯೆ ನಿವಾರಣೆಗೆ ಸಂಬಂಧಿತ ಲೋಕೋಪಯೋಗಿ ಇಲಾಖೆ ತುರ್ತು ಕ್ರಮ ಕೈಗೊಂಡು,ತಮ್ಮ ಜವಾಬ್ದಾರಿ ಮತ್ತು ಕರ್ತವ್ಯ ನಿಭಾಯಿಸಿಯಾರೇ ಕಾದುನೋಡಬೇಕಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button