Important
Trending

ಕಂಡ ಕಂಡ ಲಿಂಕ್ ಕ್ಲಿಕ್ ಮಾಡುವ ಮುನ್ನ ಇರಲಿ ಎಚ್ಚರ: ಈತ ಹೇಗೆ ಹಣ ಕಳೆದುಕೊಂಡ ನೋಡಿ?

ಕಂಡ ಕಂಡ ಲಿಂಕ್ ಕ್ಲಿಕ್ ಮಾಡುವ ಮುನ್ನ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಿದೆ. ಲಿಂಕ್ ಅಧಿಕೃತವಾಗಿದೆಯೇ ಎಂದು ಖಚಿತಪಡಿಸಿಕೊಂಡ ನಂತರವಷ್ಟೆ ಲಿಂಕ್ ಕ್ಲಿಕ್ ಮಾಡಬೇಕಿದೆ.

ಹೊನ್ನಾವರ: ಜಾಹೀರಾತಿನ ಲಿಂಕ್ ಅನ್ನು ಒತ್ತಿ ವ್ಯಕ್ತಿಯೊಬ್ಬ ತನ್ನ ಖಾತೆಯಲ್ಲಿದ್ದ ಹಣ ಕಳೆದುಕೊಂಡಿದ್ದಾನೆ. ಕೆಲ ದಿನಗಳ ಹಿಂದೆ ವ್ಯಕ್ತಿಯೊಬ್ಬ ಸಾಮಾಜಿಕ ಜಾಲತಾಣದ ಖಾತೆಯನ್ನು ನೋಡುತ್ತಿರುವಾಗ ಡಿಜಿಟಲ್ ಇಂಡಿಯಾ ಸಿಎಸ್‌ಪಿ ಪಾಯಿಂಟ್ ಮಿನಿ ಬ್ಯಾಂಕ್ ಜಾಹೀರಾತು ಕಾಣಿಸಿಕೊಂಡಿದೆ.


ಇದರ ಬಗ್ಗೆ ತಿಳಿದುಕೊಳ್ಳಲು ಲಿಂಕ್ ಕ್ಲಿಕ್ ಮಾಡಿದ್ದರು. ಮಾರನೇ ದಿನ ಸಿಎಸ್‌ಪಿ ಕಂಪನಿ ಕಡೆಯಿಂದ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಕರೆ ಮಾಡಿದ್ದು, ಮಿನಿ ಬ್ಯಾಂಕ್ ಎನ್ನುವ ಆ್ಯಪ್ ಇದೆ. ಅದನ್ನು ಬಳಸುವಂತೆ ತಿಳಿಸಿದ್ದಾನೆ.

ನೀವು ಮಿನಿ ಬ್ಯಾಂಕ್ ತೆರೆದು ಹಣಕಾಸಿನ ವ್ಯವಹಾರ ನಿರ್ವಹಿಸಲು ಎರಡು ಕಂಪ್ಯೂಟರ್, ನಾಲ್ಕು ಸಿ.ಸಿ ಟಿವಿ ಕ್ಯಾಮೆರಾ ಕಳುಹಿಸುತ್ತೇವೆ. ಹಣ ವರ್ಗಾವಣೆ ಮಾಡಿದರೆ ಕಮೀಷನ್ ಕೊಡುತ್ತೇವೆ ಎಂದು ನಂಬಿಸಿದ್ದಾರೆ.


ಮಿನಿ ಬ್ಯಾಂಕ್ ತೆರೆಯಲು ಹತ್ತು ಸಾವಿರದ ಒಂದು ನೂರು ರೂಪಾಯಿ ಅನ್ನು ಕಂಪನಿಯ ಖಾತೆಗೆ ಜಮಾ ಮಾಡುವಂತೆ ತಿಳಿಸಿದಾಗ ನಂಬಿದ ಮೈದೀನ್ ಹಣ ವರ್ಗಾಯಿಸಿದ್ದಾರೆ.

ಮಾರನೇ ದಿನ ಮತ್ತೆ ಕಂಪೆನಿಯವ ಎಂದು ಹೇಳಿಕೊಂಡು ಕರೆ ಮಾಡಿದ ವಂಚಕರು, ನಿಮ್ಮ ಖಾತೆಯಲ್ಲಿ 50 ಸಾವಿರ ಹಣ ಇರಬೇಕು. ಅದನ್ನ ಐಆರ್‌ಬಿಯವರು ಪರಿಶೀಲಿಸಲಿದ್ದಾರೆ. ಒಂದು ಗಂಟೆಯ ನಂತರ ನಿಮ್ಮ ಹಣವನ್ನು ವಾಪಸ್ ನಿಮ್ಮ ಖಾತೆಗೆ ವರ್ಗಾಯಿಸುತ್ತೇವೆ ಎಂದು ತಿಳಿಸಿದ್ದಾರೆ.


ಇದನ್ನೂ ನಂಬಿದ ಮೈದೀನ್ 50 ಸಾವಿರ ಹಣವನ್ನು ವಂಚಕರು ಹೇಳಿದ ಖಾತೆಗೆ ವರ್ಗಾಯಿಸಿದ್ದಾರೆ. ಆದರೆ ನಂತರ ಕಂಪನಿಯವರ ಪ್ರತಿಕ್ರಿಯೆ ಇಲ್ಲದಿರುವುದನ್ನು ಕಂಡಾಗ ಮೈದೀನ್‌ಗೆ ತಾವು ಮೋಸ ಹೋಗಿದ್ದು ಅರಿವಾಗಿದೆ. ತಾಲೂಕಿನ ಕಾಸರಕೋಡ ಮೂಲದ ಮೈದೀನ್ ಖಾಸೀಂ ಸಾಬ್ ವಂಚನೆಗೊಳಗಾಗಿದ್ದು, ಕಾರವಾರದ ಸೈಬರ್ ಅಪರಾಧ ಠಾಣೆಗೆ ದೂರು ನೀಡಿದ್ದಾನೆ. ಟೊಂಕಾ ಕಾಸರಕೋಡದ ಹಣ ಕಳೆದುಕೊಂಡಾತ.


ಒಟ್ನಲ್ಲಿ ಕಂಡ ಕಂಡ ಲಿಂಕ್ ಕ್ಲಿಕ್ ಮಾಡುವ ಮುನ್ನ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕಿದೆ. ಲಿಂಕ್ ಅಧಿಕೃತವಾಗಿದೆಯೇ ಎಂದು ಖಚಿತಪಡಿಸಿಕೊಂಡ ನಂತರವಷ್ಟೆ ಲಿಂಕ್ ಕ್ಲಿಕ್ ಮಾಡಬೇಕಿದೆ. ಸ್ವಲ್ಪ ಅನುಮಾನ ಬಂದರೂ ಅವುಗಳಿಂದ ದೂರ ಉಳಿಯುವುದೇ ಒಳಿತು.

ವಿಸ್ಮಯ ನ್ಯೂಸ್, ಹೊನ್ನಾವರ

Back to top button