Follow Us On

WhatsApp Group
Important
Trending

ಮದುವೆ ಆಗುವುದಿಲ್ಲ ಎಂದವಳಿಗೆ ಮಸಣಕ್ಕೆ ಕಳಿಸಿದ ಯುವಕ ? ಸಾಯಿಸಿ, ಸತ್ತು ಹೋದ ಹತಾಶ ಪ್ರೇಮಿ ! ಕತ್ತಲಾವರಿಸಿದ ದೀಪಾವಳಿ ?

ಅಂಕೋಲಾ: ತಾಲೂಕಿನ ಮೂಲದ ಸದ್ಯ ಬೆಂಗಳೂರಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಇದ್ದ ಯುವತಿಯೋರ್ವಳು ಅಲ್ಲೇ ಪರಿಚಿತನಾಗಿದ್ದ ಯುವಕನೋರ್ವ ತನ್ನನ್ನು  ಮದುವೆಯಾಗುವಂತೆ ನೀಡಿದ್ದ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಹತ್ಯೆಯಾದ ಧಾರುಣ ಘಟನೆಗೆ ಸಂಬಧಿಸಿದಂತೆ ಸ್ವಲ್ಪ ತಡವಾಗಿ ಪ್ರಕರಣ ದಾಖಲಾಗಿದೆ.

ಅಂಕೋಲಾ ತಾಲೂಕಿನ ಬೆಳಂಬಾರ ಗ್ರಾಮದ ಉಷಾ ಸುಕ್ರು ಗೌಡ (26) ಮೃತಳಾದ ದುರ್ದೈವಿಯಾಗಿದ್ದು , ತಾನು ಕಲಿತ ಬಿಇಡ್ ಶಿಕ್ಷಣಕ್ಕೆ ತಕ್ಕ ನೌಕರಿ ಸಿಗುವುದು ಕಷ್ಟ-ಸಾಧ್ಯ ಎಂದು ಅರಿತು, ಉದ್ಯೋಗವನ್ನರಸಿ  ಬೆಂಗಳೂರಿಗೆ ಬಂದು, ಅಲ್ಲಿಯೇ   ಖಾಸಗಿ ಕಂಪನಿಯೊಂದರಲ್ಲಿ  ಕೆಲಸಕ್ಕೆ ಇದ್ದಳಲ್ಲದೇ, ಕೆಲ ತಿಂಗಳುಗಳ ಹಿಂದೆ  ತನ್ನ ಅಣ್ಣನನ್ನು ಬೆಂಗಳೂರಿಗೆ ಕರೆಯಿಸಿಕೊಂಡು, ಆತನಿಗೂ ಉದ್ಯೋಗ ಕೊಡಿಸಿ, ಅಣ್ಣ-ತಂಗಿ ಇಬ್ಬರೂ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು.

ಉಷಾ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಪರಿಚಿತನಾದ ಯುವಕ ನೋರ್ವ ಹೆಚ್ಚಿನ ಆತ್ಮೀಯತೆ ಬೆಳಿಸಿಕೊಂಡಿದ್ದಲ್ಲದೇ ಅದೇ ಸಲುಗೆಯಲ್ಲಿ ಆಗಾಗ ಇವರ ಬಾಡಿಗೆ ಮನೆಗೂ ಬಂದು ಹೋಗುತ್ತಿದ್ದ ಎನ್ನಲಾಗಿದೆ. ಬರ -ಬರುತ್ತ ಆತ ಅವಳ ಸ್ನೇಹವನ್ನು ಪ್ರೀತಿ – ಪ್ರೇಮದ ಭಾವನೆಯಲ್ಲಿ  ಕಂಡು, ತನ್ನನ್ನು ಮದುವೆಯಾಗುವಂತೆ ಪದೇ ಪದೇ ಒತ್ತಾಯಿಸುತ್ತಿದ್ದ, ಮತ್ತು ಆ ಕುರಿತು ಪೀಡಿಸಿ ಮದುವೆಯಾಗಲು ಒಪ್ಪದಿದ್ದರೆ ಕೊಲೆ ಮಾಡುವ ಬೆದರಿಕೆ ಹಾಕಿದ್ದ ಎನ್ನಲಾಗಿದೆ.

ಕಳೆದ 2-3 ದಿನಗಳ ಹಿಂದಷ್ಟೇ  ( 24-10 – 21 ) ರಂದು ಅವಳ ಹುಟ್ಟು ಹಬ್ಬಕ್ಕೆ ಬಂದು ಶುಭಾಶಯ ಸಲ್ಲಿಸಿ ಅವರ ಜೊತೆಯೇ ಉಂಡು ಹೋಗಿದ್ದ ಗೋಪಾಲಕೃಷ್ಣ ಎನ್ನುವ ಯುವಕ ತನ್ನ ಪ್ರೇಮ ನಿವೇದನೆ – ಮದುವೆ ಪ್ರಸ್ತಾಪ ನೆರವೇರದಿರುವುದಕ್ಕೆ ನಿರಾಸೆಗೊಂಡು ಹತ್ಯೆ ಮಾಡಿದಂತಿದ್ದು, ಅವಳ ಮೊಬೈಲ್ ನ್ನು ಒಯ್ದಿರುವ ಕುರಿತು ಸಂಶಯಿಸಿ, ಮೃತ ಉಷಾ ಗೌಡಳ ಸಹೋದರ ಸಂದೀಪ ಗೌಡ ಪೊಲೀಸ್ ದೂರಿನಲ್ಲಿ ತಿಳಿಸಿದಂತಿದೆ.

ಒಂದೆಡೆ ಉಷಾ ಗೌಡಳನ್ನು ಉಸಿರುಗಟ್ಟಿಸಿ ಸಾಯಿಸಲಾಗಿದ್ದರೆ, ಅವಳನ್ನು ಹತ್ಯೆ ಮಾಡಿರಬಹುದಾದ ಗೋಪಾಲಕೃಷ್ಣ ಬೇರೆಡೆ ಹೋಗಿ ತಾನೂ ವಿಷ ಸೇವಿಸಿ ಅತ್ಮಹತ್ಯೆ ಮಾಡಿಕೊಂಡಿದ್ದು, ಈ ಪ್ರೇಮ ಪ್ರಕರಣ ದುರಂತ ಅಂತ್ಯ ಕಂಡಂತಾಗಿದೆ. ಮಗಳು ಹಾಗೂ ಮಗನೊಂದಿಗೆ ಕೆಲ ಕಾಲ ಬೆಂಗಳೂರಿನ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮೃತ ಯುವತಿಯ ತಂದೆ ತಾಯಿಗಳು,ಕಳೆದ ಎರಡು ತಿಂಗಳ ಹಿಂದಷ್ಟೇ ಅಂಕೋಲ ತಾಲೂಕಿನ ತಮ್ಮ ಮೂಲ ಮನೆಗೆ ವಾಪಸ್ಸಾಗಿದ್ದರಲ್ಲದೇ,ದೀಪಾವಳಿಗೆ ಮಗ ಹಾಗೂ ಮಗಳಿಗೂ ಬರುವಂತೆ ತಿಳಿಸಿದ್ದರು.

ಅದಕ್ಕೆ ಪೂರಕ ಎಂಬಂತೆ ಅಣ್ಣ-ತಂಗಿಯರಿಬ್ಬರೂ ಹೊಸ ಬಟ್ಟೆ ಖರೀದಿಸಿಟ್ಟು ಹಬ್ಬಕ್ಕೆ ಊರಿಗೆ ಬರುವ ಸಿದ್ಧತೆ ನಡೆಸಿದ್ದರು.ಮನೆಯ ದೀಪದಂತಿದ್ದ ಮಗಳ ಬರುವಿಕೆಗೆ ಕಾದಿದ್ದ ಪಾಲಕರಿಗೆ, ಗರಬಡಿದಂತೆ ಅಪ್ಪಳಿಸಿದ ಉಷಾಳ ಸಾವಿನ ಸುದ್ದಿಯ ಆಘಾತ  ಮನೆಯಲ್ಲಿ ಬಾಳಿ ಬೆಳಗಬೇಕಿದ್ದ ದೀಪವೇ ಆರಿ ಹೋದಂತಾಗಿ ಎಲ್ಲಡೆಯೂ ಕತ್ತಲಾವರಿಸಿದಂತಾಗಿದೆ.

ಉಷಾಳ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಪೋಲೀಸರು ಮೃತ ದೇಹವನ್ನು ಕುಟುಂಬಸ್ಥರಿಗೆ ಒಪ್ಪಿಸಲಿದ್ದಾರೆ. ಸಮಯಾವಕಾಶ ಮತ್ತಿತರ ಅನುಕೂಲತೆ ನೋಡಿಕೊಂಡು ಮೃತಳ ಅಂತ್ಯಕ್ರಿಯೆ ಬೆಂಗಳೂರಿನಲ್ಲಿಯೇ ಅಥವಾ ಅಂಕೋಲಾಕ್ಕೆ ತಂದು ಮಾಡಲು, ಉಷಾಳ ತಂದೆ ಹಾಗೂ ಕುಟುಂಬ ಸಂಬಂಧಿಗಳು ಯೋಚಿಸಿ ಕಾರ್ಯಪ್ರವೃತ್ತವಾಗಿದ್ದಾರೆ.

ಘಟನಾ ಸ್ಥಳದ ಪೊಲೀಸ್ ಅಧಿಕಾರಿ ಕೆಂಪೇಗೌಡ, ಹಿಂದೆ ಅಂಕೋಲಾದಲ್ಲಿ ಕರ್ತವ್ಯ ನಿರ್ವಹಿಸಿ ಸದ್ಯ ಬೆಂಗಳೂರಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಜಯರಾಜ ಎಚ್,ಅಂಕೋಲಾ ಪಿಎಸ್ಐ ಪ್ರವೀಣ್ ಕುಮಾರ್ ಸೇರಿದಂತೆ  ಪೊಲೀಸ್ ಇಲಾಖೆ ಇತರೆ ಹಿರಿಕಿರಿ ಅಧಿಕಾರಿಗಳು ತಮ್ಮ ಕರ್ತವ್ಯ ಜವಾಬ್ದಾರಿ ಜೊತೆಯಲ್ಲಿ ನೊಂದ ಬಡಕುಟುಂಬಕ್ಕೆ ಮಾನವೀಯ ನೆಲೆಯಲ್ಲಿ ಸಹಕಾರ – ಧೈರ್ಯ ತುಂಬುವ ಪ್ರಯತ್ನ ಮಾಡುತ್ತಿದ್ದು,,ಶಾಸಕಿ ರೂಪಾಲಿ ನಾಯ್ಕ ಸಹ ತನ್ನ ವೈಯಕ್ತಿಕ ನೆಲೆಯಲ್ಲಿ ವಿಶೇಷ ಕಾಳಜಿ ತೋರ್ಪಡಿಸಿದ್ದಾರೆ.

ಬೆಳಂಬರ ಗ್ರಾಮದ ಸ್ಥಳೀಯ ಮುಖಂಡ ಮಾದೇವಗೌಡ ಹಾಗೂ ಹಾಲಕ್ಕಿ ಸಮಾಜದ ಇತರೆ ಪ್ರಮುಖರು ಸಹ ತಮ್ಮ ತಮ್ಮ ನೆಲೆಯಲ್ಲಿ ದುಃಖಕ್ಕೆ ಸ್ಪಂದಿಸುತ್ತಿದ್ದು,ಇತರ ಅನೇಕರು ಎಲೆಮರೆಯ ಕಾಯಿಯಂತೆ ಟಿವಿ ಸಲ್ಲಿಸುತ್ತಿರುವುದು ಶ್ಲಾಘನೀಯ. ಒಟ್ಟಿನಲ್ಲಿ ಗ್ರಾಮೀಣ ವ್ಯಾಪ್ತಿಯ ಬೆಳಂಬರದಿಂದ ರಾಜಧಾನಿ ಬೆಂಗಳೂರಿಗೆ ಹೋಗಿ ,ತನ್ನದೇ ಕನಸು ಕಟ್ಟಿಕೊಂಡಿದ್ದ ಯುವತಿಯ ಉಸಿರು ಇನ್ನಿಲ್ಲದಂತೆ ಮಾಡಿದ ಹತಾಶ ಮತ್ತು ಹೃದಯ ಹೀನ ಪ್ರೇಮಿಯ ಉಸಿರಿನ ಜೊತೆ ಬೆರೆತು ಪ್ರಕೃತಿಯಲ್ಲಿ ಲೀನವಾಗುವಂತಾಗಿದೆ. 

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ಶ್ರೀ ಗುರುರಾಘವೇಂದ್ರ ಸ್ವಾಮಿ ಜ್ಯೋತಿಷ್ಯ ಕೇಂದ್ರ.. ಮದುವೆ ವಿಳಂಬ ಸಮಸ್ಯೆಯನ್ನು, ಸಂತಾನ ಸಮಸ್ಯೆಯನ್ನು ಕೂಡಲೇ ನಿವಾರಿಸಬಲ್ಲರು. ಉದ್ಯೋಗ ಮತ್ತು ಆರ್ಥಿಕ ಸಮಸ್ಯೆಗೂ ಪರಿಹಾರ ಶತಸಿದ್ಧ. ಪ್ರೀತಿಯಲ್ಲಿ ತೊಂದರೆ? ಗಂಡ-ಹೆoಡತಿಯಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಸಮಸ್ಯೆ? ವಿಧ್ಯಾಭ್ಯಾಸದಲ್ಲಿ ಅಡೆತಡೆ, ಮಾನಸಿಕ ತೊಂದರೆ, ಇನ್ನೂ ನಿಮ್ಮ ಯಾವುದೇ ಗುಪ್ತ ಸಮಸ್ಯೆಗಳಿಗೆ 100%ರಷ್ಟು ಗ್ಯಾರಂಟಿ ಪರಿಹಾರ. ಪ್ರಸಿದ್ಧ ದೈವಶಕ್ತಿ ಜ್ಯೋತಿಷ್ಯರು: ಪಂಡಿತ್- ಆರ್ ವಿ ಭಟ್ .. ಇಂದೇ ಸಂಪರ್ಕಿಸಿ ಮೊಬೈಲ್ ನಂಬರ್ : 9880446537

Back to top button