Follow Us On

WhatsApp Group
Important
Trending

ನೇಣಿಗೆ ಶರಣಾದ ಎಂಜಿನೀಯರಿಂಗ್ ಪದವೀಧರ: ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಿಧ್ಧತೆ ನಡೆಸಿದರೂ ಜೀವನ ಎದುರಿಸಲು ಫೇಲಾದ ?

ಅಂಕೋಲಾ : ಎಂಜಿನೀಯರಿಂಗ್ ಶಿಕ್ಷಣ ಮುಗಿಸಿ ಉದ್ಯೋಗವನ್ನರಸುತ್ತ, ವಿವಿಧ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆಗೆ ಸಿಧ್ಧತೆ ಮಾಡಿಕೊಳ್ಳುತ್ತಿದ್ದ ಯುವಕ ನೋರ್ವ ಅದಾವುದೋ ಕಾರಣದಿಂದ ಮನನೊಂದು ಅತ್ಮಹತ್ಯೆಗೆ ಶರಣಾಗಿರುವ ಘಟನೆ, ಪುರಸಭೆ ವ್ಯಾಪ್ತಿಯ ಲಕ್ಷ್ಮೇಶರದಲ್ಲಿ ಸೋಮವಾರ ನಡೆದಿದೆ.

ಗಜಾನನ ನಾರಾಯಣ ನಾಯಕ(25) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದು , ಈತನು ಕಳೆದ ಕೆಲ ತಿಂಗಳ ಹಿಂದಷ್ಟೇ ತನ್ನ ಎಂಜಿನೀಯರಿಂಗ್ ಶಿಕ್ಷಣ ಮುಗಿಸಿ ಮನೆಗೆ ವಾಪಸ್ಸಾಗಿದ್ದ. ತನ್ನ ವಿದ್ಯಾರ್ಹತೆಗೆ ತಕ್ಕ ಉದ್ಯೋಗ ಮತ್ತು ವೇತನ ಸಿಗುವುದು ಕಷ್ಟಸಾಧ್ಯ ಎಂದು ಸಂಬಂಧಿಯೋರ್ವರ ಬಳಿ ನಿರಾಶೆಯ ಭಾವನೆಯಲ್ಲಿ ಹೇಳಿಕೊಂಡಿದ್ದ ಎನ್ನಲಾಗಿದೆ.

ಅದೇ ಕಾರಣದಿಂದ ಮನನೊಂದು ಆತ್ಮಹತ್ಯೆಗೆ ಶರಣಾದನೇ ಎಂಬ ಮಾತು ಅಲ್ಲಲ್ಲಿ ಕೇಳಿ ಬಂದಿದೆ. ಮೊದಲಿನಿಂದಲೂ ಮಿತಭಾಷಿ ಆಗಿದ್ದ ಗಜಾನನ ಅತ್ಯಂತ ಸರಳ ವ್ಯಕ್ತಿತ್ವವನ್ನು ರೂಡಿಸಿಕೊಂಡಿದ್ದ. ಇತ್ತೀಚೆಗೆ ಸ್ವಲ್ಪ ಏಕಾಂತವಾಗಿರುವುದನ್ನೇ ಹೆಚ್ಚಾಗಿ ಇಷ್ಟ ಪಡುತ್ತಿದ್ದ ಎನ್ನಲಾಗಿದೆ.

ಇಂಜಿನಿಯರಿಂಗ್ ಪದವಿಗೆ ಸರಿಹೊಂದುವ ಉದ್ಯೋಗ ದೊರೆಯದಿದ್ದರೂ, ಇತರೆ ಸ್ಪರ್ಧಾತ್ಮಕ ಪ್ರವೇಶ ಪರೀಕ್ಷೆ ಎದುರಿಸಿ, ನೌಕರಿ ಪಡೆಯಲು ಮನಸ್ಸು ಮಾಡಿ ಹೆಚ್ಚಿನ ವ್ಯಾಸಂಗಕ್ಕಾಗಿ , ಧಾರವಾಡಕ್ಕೆ ಹೋಗಿ ಕೋಚಿಂಗ್ ಪಡೆಯಲು ಸಿಧ್ಧತೆ ನಡೆಸಿದ್ದ ಎನ್ನಲಾಗಿದೆ.

ಆದರೆ ಆಕಸ್ಮಿಕವಾಗಿ ಆತನಲ್ಲಿ ಮೂಡಿರಬಹುದಾದ ಅದಾವುದೇ ಯೋಚನೆ, ಜೀವನವೇ ಕೊನೆಗಾಣುವಂತೆ ಮಾಡಿದ್ದು, ಯುವಕ ಮತ್ತು ತಂದೆ ತಾಯಿಗಳು ಕಂಡ ಕನಸು ನುಚ್ಚು ನೂರಾಗುವಂತೆ ಮಾಡಿದೆ.

ಸೋಮವಾರ ತಂದೆ ತಾಯಿ ಮತ್ತು ಸಹೋದರಿ ,ಮಂಗಲ ಕಾರ್ಯವೊಂದಕ್ಕೆ ಮನೆಯಿಂದ ಹೊರಗೆ ಹೋದ ವೇಳೆ, ತಾನೊಬ್ಬನೇ ಇದ್ದು ಮನೆಯ ಬಾಗಿಲ ಚಿಲಕ ಒಳ ಬದಿಯಿಂದ ಭದ್ರಪಡಿಸಿಕೊಂಡು, ಮನೆಯ ಹಾಲ್‌ನ ಫ್ಯಾನಿನ ಹುಕ್ಕಿಗೆ, ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೃತ ಯುವಕನ ತಂದೆ ನಾರಾಯಣ ನಾಯಕ ನಿವೃತ್ತ ಅರಣ್ಯ ಅಧಿಕಾರಿಯಾಗಿದ್ದು, ತಾಯಿ ವಿದ್ಯಾವತಿ ನಿವೃತ್ತ ಶಿಕ್ಷಕಿಯಾಗಿದ್ದಾರೆ. ಮೃತನ ಇಬ್ಬರೂ ಸಹೋದರಿಯರೂ ಸಹ ಉತ್ತಮ ಶಿಕ್ಷಣ ಪಡೆದು ವೈವಾಹಿಕ ಜೀವನ ನಡೆಸುತ್ತಿದ್ದಾರೆ.

ಸುಂದರ ಮತ್ತು ಸುಸಂಸ್ಕೃತ ಕುಟುಂಬದಲ್ಲಿ ಜನಿಸಿದ್ದ ಗಜಾನನ ತೆಗೆದುಕೊಂಡ ಅನಿರೀಕ್ಷೀತ ನಿರ್ಧಾರದಿಂದ, ಈಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗುವಂತಾಗಿದೆ. ಸುದ್ದಿ ತಿಳಿದ ಪಿಎಸೈ ಪ್ರವೀಣ ಕುಮಾರ ಮತ್ತು ಸಿಬ್ಬಂದಿಗಳು ಆಗಮಿಸಿ, ಸ್ಥಳ ಮಹಜರು ನಡೆಸಿ, ದೂರು ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ. ತಾಲೂಕಾ ಅಸ್ಪತ್ರೆ ಶವಾಗಾರಲ್ಲಿ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ನಂತರ ಬೆಲೇಕೇರಿಯಲ್ಲಿ ಶವಸಂಸ್ಕಾರ ನಡೆಸಲಾಯಿತು.

ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ನಾಯ್ಕ ಮತ್ತು ಸಹಾಯಕ ಗೌರೀಶ, ಶವ ಸಾಗಿಸಲು ನೆರವಾದರು. ಲಕ್ಷೇಶ್ವರ – ಬೆಲೇಕೇರಿ ಊರ ನಾಗರಿಕರು, ಮೃತನ ಕುಟುಂಬ ಸದಸ್ಯರು, ಸಂಬಂಧಿಗಳು ಇತರರು ಸಹಕರಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button