ಬಸ್ ನಿಲ್ದಾಣದ ಸಮೀಪ ನರ್ಸಿಂಗ್ ವಿದ್ಯಾರ್ಥಿನಿ ಸಹಿತ ಇತರರಿಗೂ ಜೇನು ಕಡಿತ : ಓಡಿದರೂ ಬಿಡದ ಜೇನು: ಕಡಿತಕ್ಕೊಳಗಾದವರಿಗೆ ಗೋಣಿ ಚೀಲ, ಪ್ಲಾಸ್ಟಿಕ್ ಹೊದಿಕೆಗಳನ್ನು ನೀಡಿ ರಕ್ಷಣೆ
ಅಂಕೋಲಾ: ತಾಲೂಕಿನ ಬಸ್ ನಿಲ್ದಾಣದ ಬಳಿ ಕೆ.ಎಲ್. ಇ ರಸ್ತೆಯಲ್ಲಿ ಹೆಜ್ಜೇನು ದಾಳಿ ಮಾಡಿದ್ದರಿಂದ ನರ್ಸಿಂಗ್ ವಿದ್ಯಾರ್ಥಿನಿ ಸೇರಿದಂತೆ ಮೂವರು ಅಸ್ವಸ್ಥರಾಗಿರುವ ಘಟನೆ ನಡೆದಿದೆ.
ಪಟ್ಟಣದ ಕೆ ಎಲ್ ಇ ಸಂಸ್ಥೆಯಲ್ಲಿ ನರ್ಸಿಂಗ್ ಕೋರ್ಸ್ (ಎಎನ್ ಎಮ್). ಮುಗಿಸಿ ಮನೆಗೆ ತೆರಳುತ್ತಿದ್ದಳೆನ್ನಲಾದ ಗೋವಾ ಮೂಲದ ಯುವತಿ ಆಕೆಯ ಸಂಬಂಧಿಗಳೊಂದಿಗೆ ಬಸ್ ನಿಲ್ದಾಣ ಮಾರ್ಗವಾಗಿ ತೆರಳುತ್ತಿರುವ ವೇಳೆ ಎಲ್ಲಿಂದಲೋ ಬಂದ ಜೇನು ನೊಣಗಳು ಅಕಸ್ಮಿಕ ದಾಳಿ ನಡೆಸಿದ ಪರಿಣಾಮ, ಕೆಲ ದಾರಿಹೋಕರೂ ಜೇನು ಕಡಿತಕ್ಕೆ ಒಳಗಾಗುವಂತೆ ಆಯಿತು ಎನ್ನಲಾಗಿದೆ.
ರಸ್ತೆಯಲ್ಲಿ ಹೋಗುತ್ತಿದ್ದ ಕೆಲವರಿಗೆ ಜೇನು ಕಡಿದರೂ, ಗೋವಾ ಮೂಲದ ನರ್ಸಿಂಗ್ ವಿದ್ಯಾರ್ಥಿನಿ ಹಾಗೂ ಅವಳ ಜೊತೆ ಇದ್ದ ಇನ್ನಿಬ್ಬರನ್ನು ಮುತ್ತಿದ ಜೇನುನೊಣಗಳು ಹೆಚ್ಚಿನ ಪ್ರಮಾಣದಲ್ಲಿ ಕಡಿದವು ಎನ್ನುವುದು ಸ್ಥಳೀಯರ ಅಭಿಪ್ರಾಯವಾಗಿದೆ.
ಈ ವೇಳೆ ವಿದ್ಯಾರ್ಥಿನಿ ಮತ್ತು ಸಂಗಡಿಗರು ಪ್ರಾಣಭಯದಿಂದ ತಮ್ಮ ಜೊತೆ ತಂದಿದ್ದ ಲಗೇಜ್ ಬ್ಯಾಗ್ ಮೊಬೈಲ್ ಮತ್ತಿತರ ವಸ್ತುಗಳನ್ನು ರಸ್ತೆಯಲ್ಲಿ ಬಿಸಾಡಿ ಓಡಿ ಬಂದಿದ್ದರು ಎನ್ನಲಾಗಿದೆ.
ರಸ್ತೆ ಅಕ್ಕಪಕ್ಕದ ಅಂಗಡಿಯವರು, ಟೆಂಪೊ ಚಾಲಕರು, ಇತರರು ಬೆಂಕಿ ಹೊತ್ತಿಸಿ ಹೊಗೆ ಮಾಡುವ ಮೂಲಕ ಜೇನು ನೊಣಗಳನ್ನು ಓಡಿಸುವ ಪ್ರಯತ್ನಗಳನ್ನು ಮಾಡಿದ್ದಲ್ಲದೇ, ಜೇನು ಕಡಿತಕ್ಕೊಳಗಾದವರಿಗೆ ಗೋಣಿ ಚೀಲ, ಪ್ಲಾಸ್ಟಿಕ್ ಹೊದಿಕೆಗಳನ್ನು ನೀಡಿ ರಕ್ಷಣಾ ಕಾರ್ಯಕ್ಕೆ ಮುಂದಾಗಿ ಮಾನವೀಯತೆ ಮೆರೆದರು.
ಮತ್ತು ಜೇನು ಕಡಿತಕ್ಕೊಳಗಾದವರ ಬ್ಯಾಗ್ ಮತ್ತಿತರ ಸ್ವತ್ತುಗಳನ್ನು ಮರಳಿಸಿದ್ದಾರೆ ಎನ್ನಲಾಗಿದೆ. ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡ ಕೆಲವರಿಗೂ ಒಂದೆರಡು ಜೇನುಹುಳುಗಳ ಕಡಿತದ ಅನುಭವವಾಗಿದೆ.ಆದರೂ ಅವರು ಅಂಜದೇ,ಜೇನು ಕಡಿತದಿಂದ ಅಸ್ವಸ್ಥರಾಗಿರುವ ಮೂವರನ್ನು ಅಂಕೋಲಾ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದರು..
ತಾಲೂಕಾ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಸ್ವಲ್ಪ ಚೇತರಿಸಿಕೊಂಡ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದ್ದು,ಅವಶ್ಯಕತೆ ಕಂಡುಬಂದಲ್ಲಿ ಕಾರವಾರ ಇಲ್ಲವೇ ಗೋವಾ ಆಸ್ಪತ್ರೆಯಲ್ಲಿ ಮತ್ತೆ ಚಿಕಿತ್ಸೆಗೊಳಪಡಲಿದ್ದಾರೆ ಎನ್ನಲಾಗಿದೆ.
ಹವಾಮಾನ ವೈಪರೀತ್ಯ,ಮಂಗಗಳು,ಪಕ್ಷಿಗಳು,ಮತ್ತಿತರ ಕಾರಣದಿಂದ ಜೇನುಗೂಡಿಗೆ ಜೇನುಗೂಡಿಗೆ ಆಗುವ ಹಾನಿಯಿಂದ ರೊಚ್ಚಿಗೇಳುವ ಜೇನುನೊಣಗಳು ಜನ-ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿವೆ ಎನ್ನಲಾಗಿದೆ, ಕಳೆದ ವಾರವಷ್ಟೇ ಬಬ್ರುವಾಡಾ ಗ್ರಾಮ ಚಾವಡಿಗೆ ಹೊರಟಿದ್ದ ಕುಂಬಾರಕೇರಿಯ ವೃದ್ಧೆಯೋರ್ವಳ ಮೇಲೆ ಪಳ್ಳಿಕೇರಿ ಗೇರುಕೊಪ್ಪದ ಹತ್ತಿರ ಒಮ್ಮೆಲೆ ನೂರಾರು ಸಂಖ್ಯೆಯ ಜೇನುನೊಣಗಳು ದಾಳಿ ಮಾಡಿದ ಪರಿಣಾಮ,ಜೇನುನೊಣಗಳ ತೀವ್ರ ಕಡಿತದಿಂದ ಅಸ್ವಸ್ಥಗೊಂಡಿದ್ದ ವೃದ್ಧೆಯನ್ನು ಸ್ಥಳೀಯರ ಸಹಕಾರ ದಲ್ಲಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು.
ತೀವ್ರ ಕಡಿತಕ್ಕೊಳಗಾಗಿದ್ದ ವೃದ್ಧೆಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಆಂಬುಲೆನ್ಸ್ ಮೂಲಕ ಕಾರವಾರ ಆಸ್ಪತ್ರೆಗೆ ದಾಖಲಿಸಿ ತೀವ್ರ ನಿಗಾ ಘಟಕದಲ್ಲಿ ಇಡಲಾಗಿತ್ತು. ಕ್ರೀಮ್ಸ್ ನಿರ್ದೇಶಕ ಡಾ. ಗಜಾನನ ನಾಯಕ, ವೈದ್ಯರಾದ ಅಮಿತ್ ಕಾಮತ್ ಸೇರಿದಂತೆ,ಇತರೆ ವೈದ್ಯರು ಹಾಗೂ ಆಸ್ಪತ್ರೆ ಸಿಬ್ಬಂದಿಗಳ ವಿಶೇಷ ಚಿಕಿತ್ಸೆ ಹಾಗೂ ಕಾಳಜಿಯಿಂದ ,ವೃದ್ಧೆಯ ಆರೋಗ್ಯದಲ್ಲಿ ಶೀಘ್ರ ಚೇತರಿಕೆಯಾಗಿ,ಕಳೆದ ಎರಡು ದಿನಗಳ ಹಿಂದಷ್ಟೇ ಮನೆಗೆ ಮರಳಿದ್ದನ್ನು ಸ್ಮರಿಸಬಹುದಾಗಿದೆ.
ಪಟ್ಟಣದ ಕೋಟೆ ವಾಡ ಮತ್ತಿತರ ಪ್ರದೇಶಗಳಲ್ಲಿ ಜೇನು ಕಡಿತದ ಚಿಕ್ಕಪುಟ್ಟ ಪ್ರಕರಣಗಳು ಆಗಾಗ ಕೇಳಿಬರುತ್ತಲೇ ಇದ್ದು ,ಅಕ್ಕಪಕ್ಕದ ನಿವಾಸಿಗಳು ಹಾಗೂ ಸಾರ್ವಜನಿಕರು,ಮತ್ತು ದಾರಿಹೋಕರು ತಮ್ಮ ತಮ್ಮ ವೈಯಕ್ತಿಕ ಕಾಳಜಿ ತೆಗೆದುಕೊಳ್ಳುವ ಜೊತೆ,ಅಪಾಯಕಾರಿ ಜೇನುನೊಣಗಳು ಹಾಗೂ ಗೂಡು ಕಂಡುಬಂದರೆ ಹತ್ತಿರದ ಪುರಸಭೆ, ಅರಣ್ಯ ಇಲಾಖೆ, ಪೊಲೀಸ್ ಮತ್ತಿತರ ಸಂಬಂಧಿತ ಇಲಾಖೆಯವರ ಗಮನಕ್ಕೆ ತರಬೇಕಿದೆ.
ಅಂತೆಯೇ ಸಂಬಂಧಿಸಿದ ಇಲಾಖೆಗಳು,ಅಂತಹ ಸ್ಥಳಗಳನ್ನು ಗುರುತಿಸಿ,ಜೇನುಗೂಡುಗಳನ್ನು ತೆರವುಗೊಳಿಸುವ ಮೂಲಕ ಮತ್ತೆ ಮತ್ತೆ ಜೇನು ಕಡಿತದ ಭೀತಿ ಸಾರ್ವಜನಿಕರನ್ನು ಕಾಡದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ