ಬೆಕ್ಕು ಕಣ್ಮುಚ್ಚಿ ಹಾಲು ಕುಡಿದದ್ದು ಯಾರಿಗೆಲ್ಲ ತಿಳಿಯಿತು ?. ಬಿಜೆಪಿ ಅಭಿನಂದನಾ ಸಭೆಯಲ್ಲಿ ಶಾಸಕಿ ಆಡಿದ ಮಾತಿನ ಒಳ ಮರ್ಮವೇನು ? ರಾಜಕೀಯದಾಟ -ಬೆಕ್ಕಿಗೇ ಪ್ರಾಣ ಸಂಕಟ ! ?
ಅಂಕೋಲಾ : ಗಣಪತಿ ಉಳ್ವೇಕರ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲುವ ನಿರೀಕ್ಷೆ ಇತ್ತಾದರೂ, ನಾವಂದುಕೊಂಡದ್ದಕ್ಕಿಂತ ಕಡಿಮೆ ಮತಗಳು ದೊರಕಿವೆ. ಜಿಲ್ಲೆಯ ವಿವಿಧ ಸ್ಥಳೀಯ ಸಂಸ್ಥೆಗಳಲ್ಲಿ ನಮ್ಮ ಪಕ್ಷದ ಮತ್ತು ಪಕ್ಷ ಬೆಂಬಲಿತ ಚುನಾಯಿತ ಜನಪ್ರತಿನಿಗಳು 1650 ಕ್ಕಿಂತ ಹೆಚ್ಚಿದ್ದಾರೆ., ಈ ಚುನಾವಣೆಯಲ್ಲಿ ನಮ್ಮ ಸದಸ್ಯರ ಮತಗಳ ಸಂಗಡ, ಇತರೆ ಸ್ವತಂತ್ರರು ಹಾಗೂ ಬೇರೆ ಪಕ್ಷದ ಕೆಲವರು ಬೆಂಬಲ ನೀಡಿರುವಾಗ ನಮ್ಮ ಒಟ್ಟಾರೆ ಮತಗಳಿಕೆ ಪ್ರಮಾಣ ಹೆಚ್ಚಲೇ ಬೇಕಿತ್ತು.ಆದರೆ ಇಂದಿನ ಫಲಿತಾಂಶದ ಕುರಿತು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ. ನಮ್ಮ ಪಕ್ಷದವರು ಪಕ್ಷ ನಿಷ್ಠೆಯ ಬಗ್ಗೆ ಯೋಚಿಸಲೇ ಬೇಕಿದೆ.
ಬೆಕ್ಕು ಕಣ್ಮುಚ್ಚಿ ಹಾಲು ಕುಡಿದ ಮಾತ್ರಕ್ಕೆ ಅದು ಯಾರಿಗೂ ಗೊತ್ತಾಗುವದಿಲ್ಲ ಎಂದು ತಿಳಿದರೆ ಅದು ಬೆಕ್ಕಿನ ಭ್ರಮೆ ಮಾತ್ರ ?. ನೋಡುಗರಿಗೆ ಅದು ಗೊತ್ತಾಗಲೇ ಬೇಕು ಎಂದು ಹೇಳುವ ಮೂಲಕ ಶಾಸಕಿ ರೂಪಾಲಿ ನಾಯ್ಕ ಪಕ್ಷ ವಿರೋಧಿಗಳಿಗೆ ಮಾತಿನಲ್ಲೇ ತಿವಿದರು. ಅಂಕೋಲಾ ಬಿಜೆಪಿ ಕಾರ್ಯಾಲಯದಲ್ಲಿ ಮಂಗಳವಾರ ಸಂಜೆ ನಡೆದ ವಿ.ಪ.ಗೆ ಆಯ್ಕೆಯಾದ ಪಕ್ಷದ ಅಭ್ಯರ್ಥಿ ಗಣಪತಿ ಉಳ್ವೇಕರ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಅಭ್ಯರ್ಥಿ ಗೆಲುವಿಗೆ ಪಕ್ಷದ ಹಿರಿ – ಕಿರಿಯ ಮುಖಂಡರು, ಕಾರ್ಯಕರ್ತರು,ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು ಹೆಚ್ಚಿನ ಪ್ರಯತ್ನ ಮಾಡಿದ್ದಾರೆ.
ಕೆಲವರು ಪಕ್ಷನಿಷ್ಠೆ ಮರೆತು ನಮ್ಮನ್ನು ಸೋಲಿಸುವ ಲೆಕ್ಕಾಚಾರದಲ್ಲಿದ್ದರು.ಅದು ಎಂದಿಗೂ ಸಾಧ್ಯವಿಲ್ಲ.ನಮ್ಮ ಪಕ್ಷ ಇನ್ನಷ್ಟು ಬಲ ಗೊಳ್ಳಲಿದೆ.ಅಲ್ಲದೆ ವೈಯಕ್ತಿಕವಾಗಿ ನನ್ನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ.ಹಾಗೆಂದ ಮಾತ್ರಕ್ಕೆ ನಾನು ಕೇವಲ ಚುನಾವಣೆ ವಿಷಯದಲ್ಲಿ ಈ ಮಾತನ್ನು ಹೇಳುತ್ತಿಲ್ಲ.ಚುನಾವಣೆಯಲ್ಲಿ ಮತದಾರರು ಮನಸ್ಸು ಮಾಡಿದರೆ ಯಾರನ್ನೂ ಸೋಲಿಸಬಹುದು.ಪಕ್ಷದಲ್ಲಿದ್ದುಕೊಂಡೇ ಸೋಲಿಸಲು ಪ್ರಯತ್ನಿಸುವುದು ಸರಿಯಲ್ಲ. ಅಂತವರು ನನ್ನನ್ನು ಸೋಲಿಸಬಹುದು. ಆದರೆ ನನ್ನ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ.
ನಾನು ಅನ್ಯಾಯ ಮಾಡಿದಿರುವಾಗ ಇಂತಹ ಸೋಲೊಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ವೀರಾವೇಶದಲ್ಲಿ ಮಾತಾಡಿದರು. ಶಾಸಕಿಯ ಈ ಆತ್ಮಸ್ಥೈರ್ಯ ಹಾಗೂ ಧೈರ್ಯದ ಗಟ್ಟಿ ಧ್ವನಿ ಪಕ್ಷದ ಕೆಲ ಮುಖಂಡರು ಹಾಗೂ ಕಾರ್ಯಕರ್ತರಲ್ಲಿ ಹುರುಪನ್ನು ಇಮ್ಮಡಿಸಿದರೆ,ಇನ್ನು ಕೆಲವರಿಗೆ ಅದೇಕೋ ಈ ಮಾತುಗಳು ನೇರವಾಗಿ ತಮ್ಮನ್ನೇ ಚುಚ್ಚಿದಂತೆ ಭಾಸವಾಗಿರಬಹುದು ಎಂಬ ಮಾತು ಪಕ್ಷದ ವಲಯದಲ್ಲಿಯೇ ಅಲ್ಲಲ್ಲಿ ಕೇಳಿ ಬಂದಂತಿದೆ.
ಈ ಮೂಲಕ ಪಕ್ಷದಲ್ಲಿದ್ದುಕೊಂಡೇ ಕಣ್ಣು ಮುಚ್ಚಿ ಹಾಲು ಕುಡಿದವರಾರು ? ಹಾಗಾದರೆ ಬೆಕ್ಕಿಗೆ ಆಟ – ಇಲಿಗೆ ಪ್ರಾಣ ಸಂಕಟ ಎಂಬ ಈ ಹಿಂದಿನ ಗಾದೆ ಮಾತಿನ ಬದಲಾಗಿ , ಅಧುನಿಕ ಪರಿಭಾಷೆಯಲ್ಲಿ ರಾಜಕೀಯದಾಟ – ಬೆಕ್ಕಿಗೇ ಪ್ರಾಣ ಸಂಕಟ ಎನ್ನುವಂತಾಯಿತೇ ಎಂಬ ಮಾತು ಕೇಳಿಬಂದಿದೆ. ಕಳೆದ ಎಮ್. ಎಲ್.ಎ ಚುನಾವಣೆಯಲ್ಲಿಯೂ ಕೆಲವರು ಪಕ್ಷ ದ್ರೋಹ ಎಸಗಿದ್ದರೂ ಸಹ ದೈವಬಲ, ಪಕ್ಷ ಬಲ ಹಾಗೂ ಅದೃಷ್ಟ ಬಲದಿಂದ ಮಾತ್ರ ರೂಪಾಲಿ ನಾಯ್ಕ ಶಾಸಕಿಯಾಗಿ ಆಯ್ಕೆ ಆಗುವಂತೆ ಆಗಿತ್ತು ಎನ್ನಲಾಗಿದೆ.
ಅಂದಿನಿಂದ ಇಂದಿನ ವರೆಗಿನ ಅನೇಕ ರಾಜಕೀಯ ಘಟನಾವಳಿಗಳನ್ನು ಅವಲೋಕಿಸುತ್ತಾ ಬಂದಿರುವ ಶಾಸಕಿ,ಎಂಎಲ್ಸಿ ಚುನಾವಣೆಯಲ್ಲಿಯೂ ಹಾಗೆ ಆಗಿರುವ ಸಾಧ್ಯತೆಯನ್ನು ಮನಗಂಡೇ ,ಪಕ್ಷ ವಿರೋಧಿಗಳಿಗೆ ಖಡಕ್ ಆಗಿ ಎಚ್ಚರಿಸಿರಬಹುದು ಎನ್ನಲಾಗಿದೆ. ಅಲ್ಲದೇ ಸ್ಥಳೀಯ ಸಂಸ್ಥೆಗಳಿಂದ ಆಯ್ಕೆಯಾದ ಎಲ್ಲಾ ಜನಪ್ರತಿನಿಧಿಗಳಿಗೆ, ನಮ್ಮ ಪಕ್ಷದಿಂದ ಸಮಾನ ಗೌರವ ನೀಡಿ,ಅವರ ಒಲವು ಮತ್ತು ವಿಶ್ವಾಸ ಗಳಿಸಬೇಕೆಂಬ ಶಾಸಕಿಯವರ ಉದ್ದೇಶಕ್ಕೆ,ಪಕ್ಷದ ಕೆಲ ಕಿರಿಯ ನಾಯಕರು ಎಲ್ಲ ಸದಸ್ಯರಿಗೂ ಅದಾವ ಕಾರಣದಿಂದಲೋ ಸರಿಯಾದ ಗೌರವ ನೀಡದೇ, ಕೊನೆಯ ಹಂತದಲ್ಲಿ ಎಸಗಿರಬಹುದಾದ ಅತೀ ಬುದ್ಧಿವಂತಿಕೆಯೂ, ಪಕ್ಷದ ಬುಟ್ಟಿಗೆ ಸೇರಬೇಕಾದ ಹೆಚ್ಚುವರಿ ಮತಗಳ ಮೇಲೂ ಪರಿಣಾಮ ಬೀರಿದಂತಿದೆ ಎನ್ನಲಾಗಿದೆ.
ಇವೆಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದಂತೆ ಇರುವ ಶಾಸಕಿ, ಉಳ್ವೇಕರ ಗೆಲುವಿನ ಸಂತಸದ ನಡುವೆಯೂ ತಮ್ಮ ಮನದಾಳದ ನೋವು ವ್ಯಕ್ತಪಡಿಸಿರುವುದು,ಶಾಸಕಿಯ ಈ ಎಲ್ಲಾ ಮಾತುಗಳು ಒಂದರ್ಥದಲ್ಲಿ, ಪಕ್ಷದ ಸಂಘಟನೆ ಹಿತದೃಷ್ಟಿಯಿಂದ ಮುಂದೆ ಮತ್ತೆ ಮತ್ತೆ ತಪ್ಪುಗಳಾಗದಂತೆ ಎಚ್ಚರಿಕೆ ಹೆಜ್ಜೆ ಇಡಬೇಕಾದ ಸಂದೇಶ ಸಾರಿ ಸಾರಿ ಹೇಳಿದಂತಿತ್ತು. ಜೊತೆಗೆ ಕೆಲವರ ಆತ್ಮಸಾಕ್ಷಿ ಬಡಿದೆಬ್ಬಿಸುವಂತಿತ್ತು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ