ರಸ್ತೆ ಮಧ್ಯೆಯೇ ಉದ್ಯಮಿಗಳ ಕಾರು ಅಡ್ಡಗಟ್ಟಿ ಮುಂಭಾಗದ ಗ್ಲಾಸ್ ಒಡೆದು 6 ಲಕ್ಷ ದೋಚಿದ ಬೈಕ್ ಸವಾರರು
ಅಂಕೋಲಾ: ರಾಷ್ಟ್ರೀಯ ಹೆದ್ದಾರಿ 63 ರ ಅಂಕೋಲಾ ಹುಬ್ಬಳ್ಳಿ ಮಾರ್ಗ ಮಧ್ಯೆ ಮಾಸ್ತಿಕಟ್ಟಾ ಬಳಿ ಬೈಕ್ ನಲ್ಲಿ ಆಗಮಿಸಿದ್ದ ಇಬ್ಬರು ವ್ಯಕ್ತಿಗಳು ಹುಬ್ಬಳ್ಳಿ ಮೂಲದ ವ್ಯಾಪಾರಿ ಕಾರನ್ನು ಅಡ್ಡಗಟ್ಟಿ, ಮುಂಬದಿ ಗ್ಲಾಸಿಗೆ ಕಲ್ಲು ಎಸೆದು, ಜಖಂ ಗೊಳಿಸಿ, ಕಾರನಲ್ಲಿದ್ದವರ ಮೇಲೆ ಹಲ್ಲೆ ನಡೆಸಿ ಸುಮಾರು 6 ಲಕ್ಷ ರೂಪಾಯಿ ದೋಚಿದ ಘಟನೆ ಬುಧವಾರ ರಾತ್ರಿ 11.30ರ ಸುಮಾರು ನಡೆದಿದೆ.
ಎಲೆಕ್ಟ್ರಿಕಲ್ ವ್ಯವಹಾರಸ್ಥ ಉದ್ದಿಮೆದಾರ ತನ್ನ ಹೋಂಡಾ ಐ 20 ಕಾರ್ (KA22 p 6306 ) ರಲ್ಲಿ ತೆರಳುವ ಸಂದರ್ಭದಲ್ಲಿ,ಅವರನ್ನು ಹಿಂಬಾಲಿಸಿದಂತೆ ಇದ್ದ ಬೈಕ್ ಸವಾರರೇ ಈ ಕುಕೃತ್ಯ ನಡೆಸಿದ್ದಾರೆ ಎನ್ನಲಾಗಿದೆ.ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಹುಬ್ಬಳ್ಳಿ ನಿವಾಸಿಗಳಾದ ವಿನೋದ ಬಾಲಚಂದ್ರ ಮತ್ತು ಕೇವಲಚಂದ್ ಎನ್ನುವವರ ಮೇಲೆ ಹಲ್ಲೆ ಮಾಡಿದ ಬೈಕ್ ಮೇಲೆ ಬಂದಿದ್ದ ಈರ್ವರು, ಕಾರನಲ್ಲಿದ್ದವರ ಬಳಿ ಇದ್ದ ನಗದು, ಮೊಬೈಲ್, ವ್ಯವಹಾರಿ ಸಂಬಂಧಿತ ಇತರೆ ಕಾಗದಪತ್ರಗಳುಳ್ಳ ಬ್ಯಾಗ್ ಹೊತ್ತೊಯ್ದಿದ್ದಾರೆ.
ಗಾಯಾಳುಗಳನ್ನು ಅಂಕೋಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಘಟನೆ ಕುರಿತು ವಿನೋದ ಬಾಲಚಂದ್ರ ನೀಡಿದ ದೂರಿನನ್ವಯ ದೂರು ದಾಖಲಿಸಿಕೊಂಡ ಪೊಲೀಸರು ಸುಲಿಗೆಕೋರ ರನ್ನು ಬಂದಿಸಲು,ಚುರುಕಿನ ಕಾರ್ಯಾಚರಣೆ ಕೈಗೊಂಡಿದ್ದಾರೆ ಎನ್ನಲಾಗಿದೆ. ಪರಿಚಿತರೇ ಹಲ್ಲೆ ಮಾಡಿ ಸುಲಿಗೆ ನಡೆಸಿದ್ದಾರೆಯೇ ಎನ್ನುವ ಸತ್ಯ ಪೊಲೀಸ್ ತನಿಖೆಯಿಂದ ತಿಳಿದುಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ