Focus News
Trending

ಹಿರೇಗುತ್ತಿ ಹೈಸ್ಕೂಲ್‌ಗೆ ಕಂಪ್ಯೂಟರ್ ದೇಣಿಗೆ – ಬೀರಣ್ಣ ಮೋನಪ್ಪ ನಾಯಕ

ಕುಮಟಾ: “ನಿರಂತರ ಓದು ಮತ್ತು ಕ್ರೀಯಾಶೀಲತೆಯಿಂದ ಮಾತ್ರ ಸಾಧನೆ ಸಾಧ್ಯ. ಹೈಸ್ಕೂಲ್ ವಿದ್ಯಾರ್ಥಿಗಳು ಹಿರೇಗುತ್ತಿಯ ಪ್ರತಿಭಾ ಸಂಪನ್ನ ಮಕ್ಕಳಾಗಿ ಶಾಲೆಗೆ ಪಾಲಕರಿಗೆ ಊರಿಗೆ ಸತ್ಕೀರ್ತಿ ತರಬೇಕು” ಎಂದು ಚುಟುಕು ಸಾಹಿತಿ ಬೀರಣ್ಣ ಮೋನಪ್ಪ ನಾಯಕ ಹಿರೇಗುತ್ತಿ ನುಡಿದರು.
ಅವರು ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ಅವರ ಮಕ್ಕಳಾದ ಮಂಜುನಾಥ ನಾಯಕ ಹಾಗೂ ಗುರುಪ್ರಸಾದ ನಾಯಕ ಕೊಡುಗೆ ಆಗಿ ನೀಡಿದ 60000/-ರೂಗಳ 2 ಕಂಪ್ಯೂಟರ್ ಹಾಗೂ ಅಂತರ್ಜಾಲ ವ್ಯವಸ್ಥೆ(Wiಈi) ಶಾಲೆಗೆ ನೀಡಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದರು. “ಹೈಸ್ಕೂಲಿನ ವಿದ್ಯಾರ್ಥಿಗಳಿಗೆ ಇಂದಿನ ಆಧುನಿಕ ಶಿಕ್ಷಣಕ್ಕೆ ತಕ್ಕಂತೆ ಶಿಕ್ಷಣ ದೊರೆಯಬೇಕು ಎಂಬ ಉದ್ದೇಶದಿಂದ ಕಂಪ್ಯೂಟರ್ ಮತ್ತು ಅಂತರ್ಜಾಲ ವ್ಯವಸ್ಥೆ ನೀಡಿದ್ದೇವೆ ಸರಿಯಾಗಿ ಪ್ರಯೋಜನ ಪಡೆದುಕೊಳ್ಳಿ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಶ್ರೀಕಾಂತ ನಾಯಕ “ಸೇವೆಯ ಪ್ರತಿಫಲ ಸೇವೆ ಎಂಬoತೆ ಮಂಜುನಾಥ ನಾಯಕ ಹಾಗೂ ಗುರುಪ್ರಸಾದ ನಾಯಕ ಸಹೋದರರು ಶಾಲೆಗೆ ಕಂಪ್ಯೂಟರ್ ನೀಡಿದಕ್ಕೆ ತುಂಬಾ ಆಭಾರಿಯಾಗಿದ್ದೇವೆ. ಮುಂದಿನ ದಿನಗಳಲ್ಲಿ ಸಹೋದರರು ಇನ್ನೂ ಹೆಚ್ಚಿನ ಸಾಮಾಜಿಕ ಸೇವಾ ಕಾರ್ಯಕ್ರಮದಲ್ಲಿ ತೊಡಗಿಸಿಕೊಳ್ಳಲಿ” ಎಂದರು.

ಎನ್ ರಾಮು ಹಿರೇಗುತ್ತಿ ಮಾತನಾಡಿ “ಸಮುದಾಯ ಶೈಕ್ಷಣಿಕ ಅಗತ್ಯಗಳಿಗೆ ದಾನಿಗಳು ನೆರವಾಗಬೇಕೆಂಬ ಉದ್ದೇಶದಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿ ಹೆಚ್ಚಿಸಲು ತಂತ್ರಜ್ಞಾನಾಧಾರಿತ ಶಿಕ್ಷಣ ನೀಡಲು ಸಹೋದರರ ಕೊಡುಗೆ ಸಹಕಾರಿಯಾಗಲಿದೆ” ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ಬಾಲಚಂದ್ರ ಹೆಗಡೇಕರ, ನಾಗರಾಜ ಜಿ ನಾಯಕ, ವಿಶ್ವನಾಥ ಬೇವಿನಕಟ್ಟಿ, ಜಾನಕಿ ಗೊಂಡ, ಇಂದಿರಾ ನಾಯಕ, ಶಿಲ್ಪಾ ನಾಯಕ, ಕವಿತಾ ಅಂಬಿಗ, ದೇವಾಂಗಿನಿ ನಾಯಕ, ಗೋಪಾಲಕೃಷ್ಣ ಗುನಗಾ, ಬಿ.ಇಡಿ ಪ್ರಶಿಕ್ಷಣಾರ್ಥಿ ಸ್ವಾತಿ ಹರಿಕಂತ್ರ ಉಪಸ್ಥಿತರಿದ್ದರು. ಮಹಾದೇವ ಗೌಡ ಕಾರ್ಯಕ್ರಮ ನಿರ್ವಹಿಸಿ ವಂದನಾರ್ಪಣೆ ಮಾಡಿದರು.

ವರದಿ:ಎನ್ ರಾಮು ಹಿರೇಗುತ್ತಿ

Back to top button