ಮನೆಯೊಳಗೆ ಸೇರಿಕೊಂಡಿತ್ತು 14 ಅಡಿ ಉದ್ದದ ಬೃಹತ್ ಕಾಳಿಂಗ ಸರ್ಪ: ಆತಂಕ ನಿವಾರಿಸಿದ ಉರಗ ಪ್ರೇಮಿ
ಅಂಕೋಲಾ: ಮನೆಯೊಂದರ ಬಳಿ ಬಂದ ಸುಮಾರು 14 ಅಡಿ ಉದ್ದದ ಕಾಳಿಂಗ ಸರ್ಪವನ್ನು ಹಿಡಿದು, ಸಂರಕ್ಷಿಸುವ ಮೂಲಕ ಅವರ್ಸಾದ ಉರಗ ಪ್ರೇಮಿ ಮಹೇಶ್ ನಾಯ್ಕ,ಸ್ಥಳೀಯರ ಆತಂಕ ದೂರ ಮಾಡಿದ್ದಾರೆ.
ಅಂಕೋಲಾ ತಾಲೂಕಿನ ಕೊಡ್ಲಗದ್ದೆ ಗ್ರಾಮದ ವಸಂತ ಅಂಬಿಗರ ಮನೆಯಲ್ಲಿ 14 ಅಡಿ ಉದ್ದದ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಇದರಿಂದ ಅಂಬಿಗ ಕುಟುಂಬದವರು ಭಯಭೀತರಾಗಿದ್ದರು. ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ತಿಳಿಸಿದ್ದರು.ವಿಷಯ ತಿಳಿದ ಅರಣ್ಯ ಇಲಾಖೆಯವರು ಉರಗ ತಜ್ಞ ಅವರ್ಸಾದ ಮಹೇಶ ನಾಯ್ಕರನ್ನು,ಫೋನ್ ಕರೆಯ ಮೂಲಕ ಸಂಪರ್ಕಿಸಿ, ಅವರನ್ನು ಸ್ಥಳಕ್ಕೆ ಕರೆಸಿ ಕಾಳಿಂಗ ಸರ್ಪವನ್ನು ಹಿಡಿದು ಸಂರಕ್ಷಿಸಿದರು.
ಮಹೇಶ್ ನಾಯಕ್ ಸ್ಥಳಕ್ಕೆ ಆಗಮಿಸುವ ವರೆಗೆ,ಅರಣ್ಯ ಇಲಾಖೆಯ ಸಿಬ್ಬಂದಿಗಳು,ಸ್ಥಳೀಯ ನಾಗರಿಕರು ಹಾಗೂ ವಿಶೇಷವಾಗಿ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವಿಪತ್ತು ನಿರ್ವಹಣಾ ಘಟಕದ ಪದಾಧಿಕಾರಿಗಳು,ಕಾಳಿಂಗ ಸರ್ಪದ ಚಲನವಲನಗಳ ಮೇಲೆ ನಿಗಾವಹಿಸಿ,ಅಂಬಿಗ ಕುಟುಂಬದ ಸದಸ್ಯರಿಗೆ ಧೈರ್ಯ ತುಂಬಿದರು.ಮತ್ತು ಮಹೇಶ್ ನಾಯಕ್ ಬಂದನಂತರ ಅತಿ ಉದ್ದದ ಕಾಳಿಂಗ ಸರ್ಪ ,ಹಿಡಿಯಲು ಸಹಕರಿಸಿದರು.
ಉರಗ ಪ್ರೇಮಿ ಮಹೇಶ್ ನಾಯಕ್ ಕೊಡ್ಲಗದ್ದೆ ಗೆ ಬಂದು ತಾಸಿಗೂ ಹೆಚ್ಚು ಕಾಲ ಸ್ಥಳೀಯರ ಸಹಕಾರದಲ್ಲಿ ಕಾರ್ಯಾಚರಣೆ ನಡೆಸಿ ಕಿಂಗ್ ಕೋಬ್ರಾವನ್ನು ಹಿಡಿದು,ಅಂಬಿಗ ಕುಟುಂಬದವರ ಆತಂಕ ದೂರ ಮಾಡಿದರು.
ಇದೇ ವೇಳೆ ವಿವಿಧ ವಿಷಜಂತು ಹಾಗೂ ಇತರೆ ಹಾವುಗಳ ಬಗ್ಗೆ ಮಾಹಿತಿಯನ್ನು ನೀಡಿದ ಮಹೇಶ್ ನಾಯ್ಕ,ಪರಿಸರ ಸಂರಕ್ಷಣೆಯಲ್ಲಿ ಉರಗಗಳು, ಪ್ರಾಣಿ-ಪಕ್ಷಿಗಳು,ಕೀಟಗಳು ತಮ್ಮದೇ ಆದ ಕೊಡುಗೆ ನೀಡುತ್ತಿದ್ದು,ಮನುಕುಲ ಇದನ್ನು ಅರ್ಥೈಸಿಕೊಂಡು ಬಾಳಬೇಕಿದೆ ಎಂಬ ಜಾಗೃತಿ ಸಂದೇಶ ನೀಡಿದರು.
ಕಾರ್ಯಾಚರಣೆಯಲ್ಲಿ ರಾಮನಗುಳಿ ಉಪವಲಯ ಅರಣ್ಯಾಧಿಕಾರಿ ಹಜರತ್ ಅಲಿ ಕುಂದಗೋಳ,ಅರಣ್ಯ ರಕ್ಷಕ ಸೋಮನಾಥ ಕಂಬಾರ,ಕೊಡ್ಲಗದ್ದೆ ವಿಪತ್ತು ನಿರ್ವಹಣಾ ಘಟಕದ ಸದಸ್ಯರು,ಅರಣ್ಯ ಇಲಾಖೆ ಸಿಬ್ಬಂದಿಗಳು, ಇತರರು ಪಾಲ್ಗೊಂಡಿದ್ದರು.ಅಂಕೋಲಾ ಹಾಗೂ ಸುತ್ತಮುತ್ತಲು ಮಹೇಶ್ ನಾಯ್ಕ ಅವರ್ಸಾ ಚಿರಪರಿಚಿತ ಹೆಸರಾಗಿದ್ದು,ಅವರು ಈವರೆಗೆ ಸುಮಾರು 14 ಸಾವಿರಕ್ಕೂ ಹೆಚ್ಚು ವಿವಿಧ ಬಗೆಯ ಹಾವುಗಳನ್ನು ಹಿಡಿದು ಸಂರಕ್ಷಿಸಿದ್ದಾರೆ.
ಅವುಗಳಲ್ಲಿ ಸುಮಾರು 7000ಕ್ಕೂ ಹೆಚ್ಚು ಹಾವುಗಳು ನಾಗರಹಾವುಗಳು ಎನ್ನುವುದು ವಿಶೇಷ. ಭಾರಿ ಗಾತ್ರದ ಹೆಬ್ಬಾವು ಗಳು,ವಿಷಪೂರಿತ ರಸೆಲ್ಸ್ ಸ್ನೇಕ ಮತ್ತಿತರ ಹಾವುಗಳನ್ನು ಹಿಡಿದು ಸಂರಕ್ಷಿಸಿರುವ ಮಹೇಶ್ ನಾಯ್ಕ,ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಸಂರಕ್ಷಣಾ ತಂಡದೊಂದಿಗೆಸೇರಿಕೊಂಡು,ಚಿರತೆ,ಮೊಸಳೆ,ಮಂಗಗಳು,ಚಿಪ್ಪು ಹಂದಿ ಮುಂತಾದ ಪ್ರಾಣಿಗಳ ಸಂರಕ್ಷಣೆಯನ್ನು ಮಾಡಿ,ಹಲವರ ಪ್ರಶಂಸೆಗೆ ಕಾರಣರಾಗಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ