Big News
Trending

‘ಮೇಘದೂತ’ವೆಂಬ ಯಕ್ಷನೊಬ್ಬನ ವಿರಹಗೀತೆ’: ಕಾಳಿದಾಸನ ಅಭಿಜ್ಞಾನ ಶಾಂಕುಂತಲ ಕೃತಿ

ಆಂಗ್ಲರು ಈ ದೇಶಕ್ಕೆ ಕಾಲಿಟ್ಟಾಗ, ಅವರ ಮನಸ್ಸಿನಲ್ಲಿ ಭಾರತೀಯರೆಂದರೆ, ಸಂಸ್ಕøತಿ ವಿಹೀನರು, ಗೊಡ್ಡು ಸಂಪ್ರದಾಯದವರು ಎಂದು ತಿಳಿದಿದ್ದರು. ಯಾವಾಗ ಪ್ರಾಚೀನವಾದ ವೇದ, ರಾಮಾಯಣ, ಮಹಾಭಾರತ, ಪುರಾಣಗಳು ಅವರ ಗಮನ ಸೆಳೆದವೋ, ಅದರಲ್ಲೂ ಕಾಳಿದಾಸನ ಅಭಿಜ್ಞಾನ ಶಾಂಕುಂತಲ ಕೃತಿ ಅವರ ಗಮನ ಸೆಳೆಯಿತೋ, ಭಾರತೀಯರ ಮೇಲೆ ಗೌರವಾದರವನ್ನು ಹೊಂದಲು ಕಾರಣವಾಯಿತು. ಆ ಕಾಲದ ಪ್ರತಿಭಾವಂತರಲ್ಲಿ ಒಬ್ಬರೆಂದು ಖ್ಯಾತರಾದ ಹದಿನೈದು ಭಾಷೆಗಳನ್ನು ಕಲಿತ ಸರ್. ವಿಲಿಯಂ ಜೋನ್ಸ್ ಭಾರತದ ಸರ್ವೋಚ್ಚ ನ್ಯಾಯಾಲಯದ ಪ್ರಥಮ ಮುಖ್ಯನ್ಯಾಯಾಧೀಶರಾಗಿ ಭಾರತಕ್ಕೆ ಆಗಮಿಸಿ, ಆರುವರ್ಷಗಳಲ್ಲಿ ಸಂಸ್ಕøತ ಕಲಿತು ಕಾಳಿದಾಸನ ಅಭಿಜ್ಞಾನ ಶಾಂಕುಂತಲ ನಾಟಕಗ್ರಂಥವನ್ನು ಆಂಗ್ಲಭಾಷೆಗೆ ಅನುವಾದಿಸಿದ.

ನಂತರ ಇದನ್ನು ಜಾರ್ಜ ಫಾರಸ್ಟರ್ ಎಂಬಾತನು ಜರ್ಮನ್ ಭಾಷೆಗೆ ಭಾಷಾಂತರಿಸಿದ. ಈ ಅನುವಾದವನ್ನು ಓದಿಯೇ ಜರ್ಮನಿಯ ಶ್ರೇಷ್ಟಕವಿ-ಮಹಾಕವಿ ಗಯಟೆಯು ನಾಟಕವನ್ನು, ಕೃತಿ ರಚಿಸಿದ ಕಾಳಿದಾಸನನ್ನು ಮೆಚ್ಚಿಕೊಂಡಾಗ, ಕಾಳಿದಾಸ ವಿಶ್ವದ ಗಮನ ಸೆಳೆದಿದ್ದ. ಆಂಗ್ಲರು ಸೇರಿದಂತೆ ವಿಶ್ವದ ಜನರು ಭಾರತೀಯರನ್ನು ನೋಡುವ ಬಗೆ ಬೇರೆಯಾಯಿತು. ಕವಿಕುಲಗುರು, ವರಕವಿ ಎಂದು ಖ್ಯಾತನಾದ ಕವಿರತ್ನ ಕಾಳಿದಾಸನು ತನ್ನ ಅಮರಕೃತಿಗಳ ಮೂಲಕ ಸಂಸ್ಕøತ ಸಾಹಿತ್ಯಕ್ಕೆ ವಿಶ್ವಮಟ್ಟದ ಕೀರ್ತಿಯನ್ನು ಗಳಿಸಿಕೊಟ್ಟ ಶಾಶ್ವತ ಪ್ರಸಿದ್ಧಿ ಸಲ್ಲುತ್ತದೆ.

ದೇಶ-ಕಾಲ-ಕೃತಿ:- ಅಮೂಲ್ಯ ಕೃತಿಗಳನ್ನು ರಚಿಸಿದ ಸಂಸ್ಕøತಕವಿಗಳು, ತನ್ನ ಹುಟ್ಟು, ವಾಸ, ಜೀವಿತಾವಧಿಯ ಕುರಿತಾಗಿ ಎನನ್ನೂ ತಮ್ಮ ಕೃತಿಗಳಲ್ಲಿ ಹೇಳಿಕೊಳ್ಳದಿರುವುದು, ಕವಿಗಳ ವಿಷಯವಾಗಿ ಅಧ್ಯಯನ ಕುತೂಹಲಿಗಳಿಗೆ ತೊಡಕನ್ನುಂಟುಮಾಡಿದೆ. ಆದ್ದರಿಂದ ಕವಿ ರಚಿಸಿದ ಕೃತಿಗಳ ಆಧಾರದಿಂದ, ಇತರ ಕವಿಗಳು ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿದ ಸಂಗತಿಗಳಿಂದ ಹುಟ್ಟಿದ ಪ್ರದೇಶ, ಕಾಲಗಳನ್ನು ತಿಳಿಯಬಹುದು.

ಕವಿ ಕಾಳಿದಾಸನ ಮೇಘದೂತ ಗ್ರಂಥದಲ್ಲಿ ಸಿಪ್ರಾನದೀ ತೀರದ ಉಜ್ಜಯನಿ, ಅಲ್ಲಿಯ ಮಹಾಕಾಲದೇವ, ಅಲ್ಲಿಯ ಪ್ರದೇಶಗಳು ಕಾಳಿದಾಸನ ಮೇಲೆ ಪ್ರಭಾವ ಬೀರಿರುವುದರಿಂದ ಕವಿಯ ಜನ್ಮಸ್ಥಳ, ‘ಉಜ್ಜಯನಿ’ಯೆಂದು, ಕಾಶ್ಮೀರದಲ್ಲಿ ಮಾತ್ರ ಬೆಳೆಯುವ ಕೇಸರ ಪುಷ್ಪಗಳನ್ನು ಕಣ್ಣಿಗೆ ಕಂಡಂತೆ ವರ್ಣಿಸಿರುವುದರಿಂದ ಕವಿಯ ಜನ್ಮಸ್ಥಳ ‘ಕಾಶ್ಮೀರ’ವೆಂದು, ಕವಿಯ ಕಾಳಿಯ ಭಕ್ತನಾಗಿರುವುದರಿಂದ ಬಂಗಾಳದವರು ‘ಬಂಗಾಳ’ ಪ್ರದೇಶದಲ್ಲಿ ಜನಿಸಿದವನೆಂದು, ಹೀಗೆ ಜನ್ಮಸ್ಥಳದ ಕುರಿತು ಹಲವು ವಾದಗಳಿದ್ದರೂ, ಕವಿ ಕಾಳಿದಾಸ ಸಮಗ್ರ ಭಾರತದ ಕವಿ ಎನ್ನುವುದು ನಿರ್ವಿವಾದ.

ಕ್ರಿ.ಶ. ನಾಲ್ಕನೇ ಶತಮಾನದ ಅಂತ್ಯ ಹಾಗೂ ಐದನೇ ಶತಮಾನದ ಆದಿಯಲ್ಲಿದ್ದ ಕವಿ ಕಾಳಿದಾಸ ರಘುವಂಶ-ಕುಮಾರಸಂಭವ ಮಹಾಕಾವ್ಯಗಳನ್ನು, ಋತುಸಂಹಾರ-ಮೇಘದೂತ ಖಂಡಕಾವ್ಯಗಳನ್ನು, ವಿಕ್ರಮೋರ್ವಶೀಯ-ಮಾಲವಿಕಾಗ್ರಿಮಿತ್ರ-ಅಭಿಜ್ಞಾನಶಾಕುಂತಲಗಳೆಂಬ ನಾಟಕಗಳನ್ನು ರಚಿಸಿದ್ದಾನೆ. ಕಾಳಿದಾಸನ ಜೀವಿತದ ಕುರಿತಾಗಿ ಅನೇಕ ಕಥೆಗಳು ಪ್ರಚಲಿತವಿದೆ. ಹೀಗೊಂದು ಗಾಥೆ ಆತನ ಕುರಿತಾಗಿದೆ.

ಕಾಳಿದಾಸ ಬಾಲ್ಯದಲ್ಲಿ ದಡ್ಡನಾಗಿದ್ದ. ರಾಜ‘ಭೀಮಶುಕ್ಲ’ನು ತನ್ನ ಮಗಳಾದ ‘ವಾಸಂತಿ’ ಯನ್ನು ಆಸ್ಥಾನದ ಪ್ರಮುಖ ಪಂಡಿತ ‘ವರರುಚಿ’ಗೆ ವಿವಾಹ ಮಾಡಿಕೊಡಲು ನಿಶ್ಚಯಿಸಿದ್ದ. ಆತನಿಗಿಂತ ವಿದ್ಯಾವಂತೆಯೆಂದು ಹೆಮ್ಮೆಪಡುತ್ತಿದ್ದ ರಾಜಕುಮಾರಿ ಇದಕ್ಕೆ ಒಪ್ಪಲಿಲ್ಲ. ಇದರಿಂದ ಅವಮಾನಿತನಾಗಿ ರಾಜಕುಮಾರಿಯ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ, ವರರುಚಿಯು ಮಂತ್ರಿಯೊಂದಿಗೆ ಸೇರಿ, ದಡ್ಡನಾಗಿದ್ದ ಕಾಳಿದಾಸನನ್ನು ರಾಜಕುಮಾರಿ ವಾಸಂತಿಗೆ ವಿವಾಹ ಮಾಡಲು ಪ್ರಯತ್ನಿಸಿ, ಯಶಸ್ವಿಯಾಗುತ್ತಾನೆ.

ನಂತರ ನಿಜ ವಿಷಯ ತಿಳಿದ ರಾಜಕುಮಾರಿ ವಾಸಂತಿಯು ಕಾಳಿದಾಸನಿಗೆ ತನ್ನ ಆರಾಧ್ಯದೇವತೆ ಕಾಳಿಯನ್ನು ಆರಾಧಿಸು ಎಂಬ ಸಲಹೆಯಂತೆ, ಆತ ಹಾಗೆ ಮಾಡಲು, ಕಾಳಿ ಪ್ರಸನ್ನಳಾಗಿ ಕಾಳಿದಾಸನ ನಾಲಿಗೆ ಮೇಲೆ ಬೀಜಾಕ್ಷರವನ್ನು ಬರೆದ ಕಾರಣ ಆತನಲ್ಲಿ ಅನ್ಯಾದೃಶ್ಯವಾದ ಕವಿತಾಶಕ್ತಿ-ಪಾಂಡಿತ್ಯ ಮೂಡಿದವು. ಆ ಕ್ಷಣದಲ್ಲೇ ದೇವಿಯ ಕುರಿತು ‘ಶ್ಯಾಮಲಾದಂಡಕ’ ರಚಿಸಿ, ಕಾಳಿಯನ್ನು ಮೆಚ್ಚಿಸಿ ಮಹಾಮೇಧಾವಿ ಕಾಳಿದಾಸನಾದ. ಪತ್ನಿಯು ಗಂಡನಲ್ಲಾದ ಈ ಬದಲಾವಣೆಯನ್ನು ಗಮನಿಸಿ “ಅಸ್ತಿ ಕಶ್ಚಿತ್ ವಾಗ್ವಿಶೇಷಃ?” ಎಂದು ಕೇಳಿದಾಗ, ಕಾಳಿದಾಸ ‘ಅಸ್ತ್ಯುತ್ತರಸ್ಯಾಂದಿಶಿ ದೇವತಾತ್ಮಾ….. ಎಂದು ಪ್ರಾರಂಭಿಸಿ ಕುಮಾಸಂಭವ ಮಹಾಕಾವ್ಯವನ್ನು, ‘ಕಶ್ಚಿತ್ ಕಾಂತಾ ವಿರಹಗುರುಣಾ….. ಎಂದು ಮೇಘದೂತ ಖಂಡಕಾವ್ಯವನ್ನು, ‘ವಾಗರ್ಥಾವಿವ ಸಂಪ್ರಕ್ತೌ …..’ ಎಂದು ರಘುವಂಶ ಮಹಾಕಾವ್ಯದ ಉದಯಕ್ಕೆ ಕಾರಣವಾಯ್ತು. ಕವಿ ಕಾಳಿದಾಸನ ಕುರಿತಾಗಿ ಬೇರೆ ಬೇರೆ ರೀತಿಯಾಗಿ, ಬೇರೆ ಬೇರೆ ಹೆಸರಿನಿಂದ ಕಥೆ ಪ್ರಚಲಿತವಿರುವುದನ್ನು ಕಾಣುತ್ತೇವೆ.

ಋಗ್ವೇದದಲ್ಲಿ ಸರಮೆಯೆಂಬ ನಾಯಿಯ ಕೈಯಲ್ಲಿ ಒಂದು ಸಂದೇಶವನ್ನು ಕಳುಹಿಸಿದುದಾಗಿ ನಿರೂಪಿತವಾಗಿದೆ. ರಾಮಾಯಣದಲ್ಲಿ ರಾಮನು ಆಂಜನೇಯನ ಮೂಲಕ, ಯುಧಿಷ್ಠಿರನು ಕೃಷ್ಣನ ಮೂಲಕ, ನಳನು ಹಂಸದ ಮೂಲಕ ಸಂದೇಶಗಳನ್ನು ಕಳುಹಿಸಿದರೆಂದು ನಿರೂಪಿತವಾದಂತೆ, ಮೇಘದೂತ ಕಾವ್ಯದಲ್ಲಿಯೂ ವಿರಹಿಯಾದ ಯಕ್ಷನೊಬ್ಬನು, ಮೇಘ (ಮೋಡ)ವನ್ನೆ ದೂತ (ಸಂದೇಶವಾಹಕ)ನನ್ನಾಗಿ ಪ್ರಾರ್ಥಿಸಿ, ಕ್ಷೇಮ ಸಂದೇಶವನ್ನು ವಿರಹಿಣಿಯಾದ ತನ್ನ ಭಾರ್ಯೆಗೆ ತಲುಪಿಸುವಂತೆ ಕೇಳಿಕೊಳ್ಳುವ ಕಾಲ್ಪನಿಕ ಪ್ರಸಂಗವನ್ನು ಕಾಣಬಹುದು.

ಅದು ಯಕ್ಷರು ವಾಸಿಸುವ ಪ್ರದೇಶ. ‘ಅಲಕಾಪಟ್ಟಣ’ ವೆಂದು ಅದರ ಹೆಸರು. ಅಲಕಾಪಟ್ಟಣದ ಅಧಿಪತಿಯೇ ಕುಬೇರ. ಕುಬೇರನ ಪ್ರಾತಃಕಾಲದ ಶಿವಪೂಜೆಗೆ ಹೊಸ ಕಮಲಗಳನ್ನು ಕೊಯ್ದು ಸಿದ್ಧಪಡಿಸುವುದು ಯಕ್ಷನೊಬ್ಬನ ಕೆಲಸವಾಗಿತ್ತು. ಆದರೆ ನವವಿವಾಹಿತನಾದ ಆ ಯಕ್ಷನು ಮುಂಜಾನೆ ಪತ್ನಿಯನ್ನು ಅಗಲಿರಲಾರದೆ, ಮರುದಿನ ಕುಬೇರನು ಕೈಗೊಳ್ಳುವ ಶಿವಪೂಜೆಗೆ ಬೇಕಾಗುವ ಕಮಲಗಳನ್ನು ಹಿಂದಿನ ದಿನವೇ ಕೊಯ್ದಿಟ್ಟ. ದುಂಬಿಯೊಂದು ಕಮಲದ ರಸಾಸ್ವಾದಕ್ಕಾಗಿ ಕಮಲದಲ್ಲಿ ಸೇರಿ ಅಲ್ಲಿಯೇ ಬಂದಿಯಾಗಿತ್ತು.

ದುಂಬಿ ಬಂದಿತವಾಗಿದ್ದ ಕಮಲವನ್ನು ಅರಿಯದೇ ಯಕ್ಷ ಕೊಯ್ದು ತಂದಿದ್ದ. ಮರುದಿನ ಪೂಜಾ ಸಮಯದಲ್ಲಿ ಆ ಕಮಲಪುಷ್ಪವನ್ನು ಅರ್ಪಿಸುವಾಗ ದುಂಬಿ ಕುಬೇರನ ಕೈ ಕಡಿಯಿತು. ಇದರಿಂದ ಕುಬೇರನ ಕೋಪ ಕೆರಳಿ ಯಕ್ಷನಿಗೆ ‘ನೀನು ಯಾರನ್ನು ಒಂದರೆಕ್ಷಣ ಅಗಲಿರಲಾರೆಯೋ, ಆಕೆಯಿಂದ ಒಂದು ವರ್ಷ ದೂರವಿರು’ ಎಂದು ಶಾಪವಿತ್ತನು. ಅದರ ಪರಿಣಾಮ ಯಕ್ಷನು ದೂರದ ರಾಮಗಿರಿ ಆಶ್ರಮದಲ್ಲಿ ತನ್ನ ಕಾಂತೆಯನ್ನು ಬಿಟ್ಟು ಕಾಲಕಳೆಯುತ್ತಿದ್ದನು. ಪತ್ನಿಯನ್ನು ನೆನೆಸಿಕೊಂಡು ಹೇಗೋ ಎಂಟು ತಿಂಗಳು ಕಳೆಯುವ ವೇಳೆಗೆ ಮುಂಗೈಯಲ್ಲಿದ್ದ ಚಿನ್ನದ ಕಡಗವು ಮೊಳಕೈಗೆ ಏರುವಷ್ಟು ಸೊರಗಿದ್ದ. ‘ಆಷಾಢಸ್ಯ ಪ್ರಥಮ ದಿವಸೇ ಮೇಘಸಾಶ್ಲಿಷ್ಟಸಾನುಃ’ ಆಷಾಢಮಾಸದ ಮೊದಲ ದಿನ ಮೋಡವೊಂದು ಕಾಣಿಸಿತು. ಕೂಂಬುಗಳಿಂದ ದಿಣ್ಣೆಗಳನ್ನು ಕೆದರುತ್ತಾ ಗೂಟಯಾಟವಾಡುವ ಮದ್ದಾನೆಯಂತೆ, ಆತನ ಕಂಗಳಿಗೆ ಅತ್ಯಂತ ಸೊಗಸೆನಿಸಿತು. ‘ಮಳೆಗಾಲವು ಬಂದೇ ಬಿಟ್ಟಿತು.

ಸುಖವಾಗಿರುವವರೂ ಭೋಗಕ್ಕಾಗಿ ಚಿಂತೆ ಮಾಡುವ ಈ ಕಾಲದಲ್ಲಿ, ವಿರಹದಿಂದ ಕೊರಗಿರುವ ನನ್ನ ಹೆಂಡತಿಯ ಜೀವಿತಕ್ಕೆ ಅಪಾಯವಾಗದಂತೆ ನೋಡಿಕೊಳ್ಳಬೇಕು. ನಾನು ಕ್ಷೇಮವಾಗಿರುವೆನೆಂಬ ಸುದ್ದಿಯನ್ನು ಈ ಮೇಘದ ಮೂಲಕವೇ ತಿಳಿಸುವೆನು’ ಎಂದುಕೊಂಡು ಅಲ್ಲೆ ಬೆಳೆದಿದ್ದ ಕಾಡುಕುಸುಮಗಳನ್ನು ತಂದು, ಮೋಡಕ್ಕೆ ಪೂಜಿಸಿ, ಪ್ರೀತಿಯಿಂದ ಸ್ವಾಗತಿಸಿದನು. ‘ಈ ಮೋಡ ನನ್ನ ಸಂದೇಶವನ್ನು ಒಯ್ಯಬಲ್ಲದೇ?’ ಎಂಬ ಸಂಶಯವೂ ಯಕ್ಷನಿಗೆ ಬರಲಿಲ್ಲ. ತನ್ನ ದುಃಖವೆಲ್ಲಾ ಮೋಡಕ್ಕೆ ಹೇಳಿಕೊಂಡನು. ‘ನನ್ನ ಕೆಲಸ ಮಾಡಿಕೊಡು’ ಎಂದು ಯಾಚಿಸಿದನು. ‘ಕಾಮಾರ್ತಾಹಿ ಪ್ರಕೃತಿಕೃಪಣಾಶ್ಚೇತನಾಶ್ಚೇತನೇಷು’ ಕಾಮಾರ್ತರಾದವರು, ಚೇತನ, ಅಚೇತನ ಎನ್ನುವುದನ್ನು ನೋಡದೆ ಎಲ್ಲವನ್ನೂ ಆಶ್ರಯಿಸುವುದಿಲ್ಲವೇ? ಎಂದು ಮೋಡವನ್ನು ಕುರಿತು ತಾನು ಪ್ರಾರ್ಥಿಸಿದ್ದನ್ನು ಯಕ್ಷ ತನ್ನನ್ನು ತಾನು ಸಮರ್ಥಿಸುತ್ತಾನೆ.


ಎಲೈ ಮೇಘವೇ ನೀನು ತ್ರಿಲೋಕಾಧಿಪತಿಯಾದ ಇಂದ್ರನ ಸಚಿವನು. ಇಚ್ಛೆಬಂದ ರೂಪ ಧರಿಸುವವನು. ನಾನಾದರೋ ಪ್ರಭುವಿನ ಕೋಪಕ್ಕೆ ಗುರಿಯಾಗಿ ಪತ್ನಿಯಿಂದ ಆಗಲಿ ಬಂದವನು. ತನ್ನ ಕೋರಿಕೆ ನೆರವೇರಿಸು. ‘ವಾಂಛಾಮೋಘಾವರಮಧಿಗುಣೇ ನಾಧಮೇ ಲಬ್ಧಕಾಮಾ’ ನೀನು ಉತ್ತಮನು. ನಿನ್ನಲ್ಲಿ ನನ್ನ ಪ್ರಾರ್ಥನೆಯು ವಿಫಲವಾದರೂ ಚಿಂತೆಯಿಲ್ಲ. ಅಧಮರಲ್ಲಿ ಸಫಲವಾಗುವ ಪ್ರಾರ್ಥನೆಗಿಂತಲೂ ಅದೇ ಶ್ರೇಷ್ಟವು. ನನ್ನ ಪ್ರಿಯೆಗೆ ಒಂದು ಸಂದೇಶವನ್ನು ಕೊಂಡೊಯ್ಯುವೆಯೊ? ಯಕ್ಷೇಶ್ವರರ ವಸತಿಯಾಗಿ, ನಗರೋದ್ಯಾನದಲ್ಲಿ ನೆಲಸಿದ ಪರಶಿವನ ಶಿರಶ್ಚಂದ್ರನ ಚಂದ್ರಿಕೆಯಿಂದ ಮಡಿಯಾದ ಅಲಕಾಪಟ್ಟಣಕ್ಕೆ ನೀನು ಹೋಗಬೇಕು.

ಅಲ್ಲಿ ದಿನಗಳನ್ನು ಲೆಕ್ಕ ಮಾಡುತ್ತಿರುವ, ವಿರಹದಿಂದ ಹಾರಿಹೋಗುವ ಜೀವನವನ್ನು ಆಶೆಯಿಂದ ತಡೆದು ನಿಲ್ಲಿಸಿಕೊಂಡಿರುವ ಪತಿವ್ರತೆಯಾದ ನನ್ನ ಭಾರ್ಯೆಯನ್ನು ನೀನು ನೋಡುವೇ ಎಂದು ತಿಳಿಸಿ, ಮೋಡಕ್ಕೆ ಅಲ್ಲಿ ಸಾಗುವ ದಾರಿಯನ್ನು ವಿಸ್ತಾರವಾಗಿ ಹೇಳುವನು. ಆ ಅಲಕಾಪಟ್ಟದಲ್ಲಿ ಅರಮನೆಯ ಉತ್ತರ ದಿಕ್ಕಿನಲ್ಲಿ ನನ್ನ ಮನೆ ಇದೆ. ಕಾಮನಬಿಲ್ಲಿನಂತೆ ಮನೋಹರವಾಗಿರುವ ಹೆಬ್ಬಾಗಿಲಿನಿಂದ ಆ ಮನೆಯನ್ನು ದೂರದಿಂದಲೇ ಗುರುತಿಸಬಹುದು.

ಅಲ್ಲಿ ನನ್ನ ಪತ್ನಿಯನ್ನು ಕಾಣುವೆ. ನಿನ್ನನ್ನು ನೋಡುವ ಆ ಮಾನವತಿಯನ್ನು ಮಿಂಚಿನಿಂದ ಕೂಡಿ ನಿನ್ನ ಗುಡುಗಿನ ನುಡಿಗಳಿಂದ ಧೈರ್ಯವಾಗಿ ಮಾತನಾಡಿಸು. ಕುಶಲವೇ ಎಂದು ಕೇಳಿ, ನಿನ್ನ ಸಹಚರನು ರಾಮಗಿರಿಯಾಶ್ರಮದಲ್ಲಿ ವಿಯೋಗ ದುಃಖ ಅನುಭವಿಸುತ್ತಿರುವ ಅವನು ನಿನ್ನ ಕುಶಲವನ್ನು ವಿಚಾರಿಸುತ್ತಿದ್ದಾನೆ’ ಎಂದು ತಿಳಿಸು. ಜಾನಕಿಯು ಹನುಮನನ್ನು ನೋಡಿದಂತೆ ಆಕೆಯೂ ನಿನ್ನನ್ನು ತಲೆಯೆತ್ತಿ ನೋಡಿ ನಿನ್ನನ್ನು ಗೌರವಿಸಿ, ನೀನು ಹೇಳುವುದನ್ನು ಮನಸ್ಸಿಟ್ಟು ಕೇಳುವಳು. ಆಕೆಯನ್ನು ಹೀಗೆ ಸಮಾಧಾನಪಡಿಸು. “ಕಸ್ಯಾತ್ಯಂತಂ ಸುಖಮುಪನತಂ ದುಃಖಮೇಕಾಂತತೋ ವಾ| ನೀಚೈರ್ಗಚ್ಛತ್ಯುಪರಿ ಚದಶಾ ಚಕ್ರನೇಮಿಕ್ರಮೇಣ”||

ಈಗ ಒದಗಿರುವ ದುಃಖವನ್ನು ಸಹಿಸಿಕೋ. ಏಕೆಂದರೆ, ಯಾರಿಗೆ ತಾನೇ ಸುಖವೇ ಆಗಲಿ, ದುಃಖವೇ ಆಗಲಿ, ಒಂದೇ ಬರುವುದೇ? ಸುಖದುಃಖಗಳು ಚಕ್ರನೇಮಿಕ್ರಮದಲ್ಲಿ ಒಂದಾಗುತ್ತಲೊಂದು ಪ್ರಾಪ್ತವಾಗುವುದು. ಆದುದರಿಂದ ನಮಗೆ ಈಗ ದುಃಖ ಪ್ರಾಪ್ತವಾಗಿದೆ. ಮುಂದೆ ದುಃಖದೂರವಾಗಿ ಸುಖ ದೊರಕುವುದು. ಈ ಆಶೆಯಿಂದ ಧೈರ್ಯತಾಳು. ನನ್ನ ವೃತ್ತಾಂತವು ಆಕೆಗೆ ಸಂತಸ ಉಂಟುಮಾಡುವುದು. ಹೀಗೆ ಆಕೆಯನ್ನು ಸಂತೈಸಿ, ಆಕೆ ಹೇಳಿದ ಗುರುತಿನ ಮಾತುಗಳನ್ನು ನನಗೂ ಹೇಳಿ, ವಿರಹದಿಂದ ಬೆಂದ ನನ್ನ ಪ್ರಾಣವನ್ನು ಉಳಿಸು ಎಂದು ಯಕ್ಷನು ಮೇಘನಲ್ಲಿ ಪ್ರಾರ್ಥಿಸುತ್ತಾನೆ. ಮಂದಾಕ್ರಾಂತ ವೃತ್ತದಲ್ಲಿ, ಪ್ರಧಾನರಸವಾದ ವಿಪ್ರಲಂಭ ಶೃಂಗಾರದ ಮೂಲಕ ವಿರಹಾವಸ್ಥೆಯ ಸೂಚನೆಗೆ ತಕ್ಕಂತೆ ಹೇಳ ಬೇಕಾದುದನ್ನು ಹೇಳುವಲ್ಲಿ ಕವಿರತ್ನ ಅಪೂರ್ವವಾದ ಕೌಶಲವನ್ನೇ ಮೆರೆದಿದ್ದಾನೆ.

ಸಕಲವೇದ-ಶಾಸ್ತ್ರ-ಪುರಾಣೇತಿಹಾಸಗಳ ಸಾರಸ್ವತ ನಿಧಿಯೇ ಆಗಿದ್ದ, ಅಲೌಕಿಕ ಪ್ರತಿಭಾ ಸಂಪನ್ನನಾದ ಕವಿ ಕಾಳಿದಾಸ, ದೇಶಪ್ರೇಮ-ಈಶಪ್ರೇಮ ಹಾಗೂ ಅಪಾರವಾದ ಪ್ರವಾಸದ ಅನುಭವ ಪಡೆದಿದ್ದ. ತನ್ನೆಲ್ಲಾ ಕಾವ್ಯಗಳಲ್ಲಿ ಸರಳ-ಸುಂದರ-ಸರಸತೆಯಿಂದ ಕೂಡಿದ, ಅರ್ಥ ಮಾಧುರ್ಯ ಭರಿತವಾದ ವೈದರ್ಭಿಶೈಲಿಯಪದಗಳ ಬಳಕೆಯಿಂದ ಸರ್ವ ಸಹೃದಯರನ್ನು ಆಕರ್ಷಿಸಿದ್ದಾನೆ. ಔಚಿತ್ಯಪೂರ್ಣವಾದ ಉಪಮಾಮುಂತಾದ ಅಲಂಕಾರಗಳ ಮೂಲಕ, ಆ ಆ ರಸಕ್ಕೆ ಉಚಿತವಾದ ವಿವಿಧ ಛಂದಸ್ಸಿನ ಮೂಲಕ ತನ್ನ ಕಾವ್ಯದ ಸೊಬಗನ್ನು ತೆರೆದಿಟ್ಟಿದ್ದಾನೆ. ವರಕವಿ ಕಾಳಿದಾಸನು ಸಹಸ್ರಾರು ವರ್ಷಗಳಿಂದ ತನ್ನ ಕಾವ್ಯದ ಮೂಲಕ ವಿಶ್ವವನ್ನೇ ತನ್ನತ್ತ ಸೆಳುದು ವಿಶ್ವವಂದ್ಯನಾಗಿದ್ದಾನೆ, ವಿಶ್ವಕವಿಯಾಗಿದ್ದಾನೆ.

ಆಷಾಢಮಾಸ ಪ್ರಾರಂಭವಾಗಿದೆ. ಕಾಳಿದಾಸ ಆಷಾಢಮಾಸದಂದು ಜನಿಸಿದ ಎಂದು ನಂಬಲಾಗಿದೆ. ಈ ಆಷಾಢಮಾಸದಲ್ಲಿ ಕಾಳಿದಾಸ, ಕಾಳಿದಾಸನ ಮೇಘದೂತದ ‘ಯಕ್ಷ’ನನ್ನು ನೆನಪಿಸುವತ್ತ ಈ ಲೇಖನ.

ಲೇಖಕರು: ಶ್ರೀಗಣೇಶ್ ಭಟ್, ಸಂಸ್ಕøತ ಉಪನ್ಯಾಸಕರು ನೇಲ್ಲಿಕೇರಿ, ಕುಮಟಾ
[email protected]

Back to top button