ಪ್ರಮಾಣ ವಚನ ಸ್ವೀಕರಿಸಿದ ಗಣಪತಿ ಉಳ್ವೇಕರ್: ಭಗವಂತನ ಹೆಸರಿನಲ್ಲಿ ಕರ್ತವ್ಯ ಹಾಗೂ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುವ ಪ್ರತಿಜ್ಞೆ
ವಿಧಾನ ಪರಿಷತ್ ಚುನಾವಣೆಯಲ್ಲಿ ಉತ್ತರ ಕನ್ನಡ ಜಿಲ್ಲೆಯಿಂದ ಗೆಲುವು ಸಾಧಿಸಿ ಮೇಲ್ಮನೆ ಪ್ರವೇಶಿಸಿರುವ ಸದಸ್ಯ ಗಣಪತಿ ಉಳ್ವೇಕರ್ ಅವರು ಬೆಂಗಳೂರಿನ ವಿಧಾನ ಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಜನವರಿ 6ರ ಗುರುವಾರ ನೂತನ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಉಪಸ್ಥಿಯಲ್ಲಿ ಸರಳವಾಗಿ ನಡೆದ ವಿಧಾನ ಪರಿಷತ್ತಿನ ನೂತನ ಸದಸ್ಯರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಭಗವಂತನ ಹೆಸರಿನಲ್ಲಿ ಪ್ರಮಾಣ ಮಾಡಿದ ಗಣಪತಿ ಉಳ್ವೇಕರ್ ಅವರು ತಮ್ಮ ಕರ್ತವ್ಯ,ಹಾಗೂ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುವುದಾಗಿ ಪ್ರತಿಜ್ಞೆ ಮಾಡಿದರು.
ಜಿಲ್ಲೆಯ ಪ್ರಭಾವಿ ಮೀನುಗಾರ ಸಮುದಾಯದ ಮುಖಂಡರಾಗಿರುವ ಉಳ್ವೇಕರ, ಕಾರವಾರ ನಗರ ಸಭೆ ಅಧ್ಯಕ್ಷರಾಗಿ, ಸದಸ್ಯರಾಗಿ ಸುದೀರ್ಘ ಅವಧಿಗೆ ಕಾರ್ಯ ನಿರ್ವಹಿಸುವ ಮೂಲಕ ಅಪಾರ ರಾಜಕೀಯ ಅನುಭವ ಹೊಂದಿದ್ದಾರೆ.ಸಾಮಾಜಿಕ-ಧಾರ್ಮಿಕ,ಇನ್ನಿತರ ವಿಧಾಯಕ ಕಾರ್ಯಕ್ರಮಗಳಲ್ಲಿ ಸದಾ ತನ್ನನ್ನು ತೊಡಗಿಸಿಕೊಂಡು, ಎಲ್ಲಾ ಜಾತಿ ಜನಾಂಗದವರು ಪ್ರೀತಿಯಿಂದ ಗಣಪತಣ್ಣ ಎಂದೇ ಕರೆಯಿಸಿಕೊಳ್ಳುವಷ್ಟರಮಟ್ಟಿಗೆ ಎಲ್ಲರ ಪ್ರೀತಿ ವಿಶ್ವಾಸ ಗೌರವ ಗಳಿಸಿದ್ದಾರೆ.
ಕಾರವಾರ – ಜೊಯ್ಡ ಭಾಗದ ಈ ಹಿಂದಿನ ಜನಪ್ರಿಯ ಶಾಸಕರಾಗಿದ್ದ,ವಸಂತ ಅಸ್ನೋಟಿಕರ ಅವರ ಆತ್ಮೀಯ ಶಿಷ್ಯನಾಗಿ,ಆ ಕುಟುಂಬದ ನಿಕಟ ಸಂಪರ್ಕದಲ್ಲಿ ಬೆಳೆದು ಬಂದು, ಆ ಕುಟುಂಬದ ಏಳ್ಗೆಗೂ ತನ್ನ ಜೀವ ಪಣಕ್ಕಿಟ್ಟು,ಧೈರ್ಯ ಹಾಗೂ ಸಾಹಸಕ್ಕೆ ಮಾದರಿ ಎನಿಸಿದವರು. ಮಾಜಿ ಎಂಎಲ್ಸಿ ಶುಭಲತಾ ಅಸ್ನೋಟಿಕರ, ಹಾಗೂ ಮಾಜಿ ಸಚಿವ ಆನಂದ ಅಸ್ಕೋಟಿಕರ ಸಹ ಗಣಪತಿ ಉಳ್ವೇಕರ ಗೆಲುವಿಗೆ ವಿಶೇಷ ಸಂತಸ ವ್ಯಕ್ತಪಡಿಸಿದ್ದಾರೆ.
ಉಳ್ವೇಕರ್ ಅವರು ಕಾರವಾರ ಅಂಕೋಲಾ ಸುತ್ತ ಮುತ್ತ ಭಾರತೀಯ ಜನತಾ ಪಕ್ಷದ ಸಂಘಟನೆಗಾಗಿ ಸೇವೆ ಸಲ್ಲಿಸುವ ಮೂಲಕ ಪಕ್ಷದ ವರಿಷ್ಠರ ಮನ ಗೆದ್ದು ಭಾರೀ ಪೈಪೋಟಿಯ ನಡುವೆಯೂ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿಯಿಂದ ಟಿಕೆಟ್ ಪಡೆದು ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸುವ ಮೂಲಕ ಜಿಲ್ಲೆಯಲ್ಲಿ
ಪ್ರಥಮ ಬಾರಿಗೆ ಎಂಎಲ್ಸಿ ಪಟ್ಟ ಕಮಲ ಪಾಳಯದ ಪರವಾಗುವಂತೆ ತನ್ನ ವೈಯಕ್ತಿಕ ವರ್ಚಸ್ಸನ್ನೂ ಹೆಚ್ಚಿಸಿಕೊಂಡವರು.
ಪ್ರಮಾಣ ವಚನ ಸ್ವೀಕರಿಸಿದ ನಂತರ ಮಾತನಾಡಿದ ಶಾಸಕ ಗಣಪತಿ ಉಳ್ವೇಕರ್ ಅವರು ಉತ್ತರ ಕನ್ನಡ ಜಿಲ್ಲೆಯ ಅಭಿವೃದ್ಧಿಗೆ ಆದ್ಯತೆ ನೀಡುವ ಮೂಲಕ ಜವಾಬ್ದಾರಿಯನ್ನು ನಿಭಾಯಿಸುವುದಾಗಿ ತಿಳಿಸಿದರು.
ಮೇಲ್ಮನೆ ಶಾಸಕರಾಗಿ ಆಯ್ಕೆ ಆಗಿರುವ ಗಣಪತಿ ಉಳ್ವೇಕರ್ ಅವರಿಗೆ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಸೇರಿದಂತೆ ಹಲವಾರು ಗಣ್ಯರು ಹಾಜರಿದ್ದು ಅಭಿನಂದನೆಗಳನ್ನು ಸಲ್ಲಿಸಿದರು. ಕಾರವಾರ ಅಂಕೋಲಾ ಹಾಗೂ ಜಿಲ್ಲೆಯ ಪಕ್ಷದ ಹಿರಿ-ಕಿರಿ ಮುಖಂಡರು, ಕಾರ್ಯಕರ್ತರು ಪಾಲ್ಗೊಂಡು ಉಳ್ವೇಕರ ಪರ ಹರ್ಷೋದ್ಗಾರ ಮಾಡಿದರು.
ಗಣಪತಿ ಉಳ್ವೇಕರ ಅವರ ಧರ್ಮಪತ್ನಿ ಗೀತಾ ಉಳ್ವೇಕರ,ಮಗ ಅವಿನಾಶ ಉಳ್ವೇಕರ ತಮ್ಮ ಕುಟುಂಬದ ಹೆಮ್ಮೆಯ ಕ್ಷಣಗಳಿಗೆ ಸಾಕ್ಷಿಯಾದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ