ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ ಲಾರಿ: ಮನೆಯಲ್ಲಿ ಬಟ್ಟೆ ಒಗೆಯುತ್ತಿದ್ದ ಮಹಿಳೆ ಕಂಗಾಲು: ಕೂದಲೆಳೆ ಅಂತರದಲ್ಲಿ ಬಚಾವ್ ಆದ ಮಕ್ಕಳು
ಯಲ್ಲಾಪುರ: 12 ಚಕ್ರದ ಲಾರಿಯೊಂದು ಹೆದ್ದಾರಿಯಲ್ಲಿ ಎದುರಿನಿಂದ ಬರುತ್ತಿದ್ದ ಲಾರಿಗೆ ಅಪಘಾತಪಡಿಸಿದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ಮನೆಗೆ ನುಗ್ಗಿದ್ದು, ಮನೆಯ ಮಾಲೀಕರು ಸೇರಿದಂತೆ ಮಕ್ಕಳು ಕೂದಲೆಳೆಯ ಅಳತೆಯಿಂದ ಅಪಾಯದಿಂದ ಪಾರಾಗಿದ್ದಾರೆ. ಯಲ್ಲಾಪುರ ಕಡೆಯಿಂದ ಹುಬ್ಬಳ್ಳಿ ಕಡೆಗೆ ತೆರಳುತ್ತಿದ್ದ 12 ಚಕ್ರದ ಲಾರಿ ರಸ್ತೆ ಅಪಘಾತದ ನಂತರ ಏಕಾಏಕಿ ನಿಯಂತ್ರಣ ತಪ್ಪಿ ಜಯಂತಿ ನಗರದ ಮನೆಯೊಂದಕ್ಕೆ ನುಗ್ಗಿದೆ.
ಮನೆ ಪಕೀರಮ್ಮ ನಾಯಕ ಎಂಬುವವರಿಗೆ ಸಂಬoಧಿಸಿದ್ದಾಗಿದ್ದು, ಅಲ್ಲಿಯೇ ಬಟ್ಟೆ ಒಗೆಯುತ್ತಿದ್ದ ಅವರು, ನಿಯಂತ್ರಣ ತಪ್ಪಿ ಲಾರಿ ಬರುವುದನ್ನು ಗಮನಿಸಿ ಮನೆಯೊಳಗಿದ್ದ ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗಿ ಅಪಾಯದಿಂದ ಪಾರು ಮಾಡಿದ್ದಾರೆ. ಅಪಘಾತದಲ್ಲಿ ಮನೆ ಸಂಪೂರ್ಣವಾಗಿ ಜಖಂ ಆಗಿದ್ದು, ಬಡ ಮಹಿಳೆಗೆ ಸೇರಿದ ಮನೆಯ ಗೋಡೆಗಳು ಸಂಪೂರ್ಣವಾಗಿ ಬಿರುಕು ಬಿಟ್ಟಿವೆ.
ಅಪಘಾತದಲ್ಲಿ ಲಾರಿ ಚಾಲಕನಿಗೆ ಸಾಮಾನ್ಯ ಗಾಯಗಳಾಗಿದ್ದು, ಕಿರವತ್ತಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ರಸ್ತೆ ಪಕ್ಕ ನಿಲ್ಲಿಸಿಟ್ಟಿದ್ದ ಎರಡು ಬೈಕುಗಳಿಗೆ ಕೂಡ ಹಾನಿಯಾಗಿದೆ. ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ವಿಸ್ಮಯ ನ್ಯೂಸ್, ಯಲ್ಲಾಪುರ