ಅಂಕೋಲಾ: ರಾ.ಹೆ. 66 ರ ಜಮಗೋಡ್ ಬಳಿ ಕಾರೊಂದು ಸಿನಿಮೀಯ ರೀತಿಯಲ್ಲಿ ಮುಗುಚಿ ಬಿದ್ದು , ನೋಡುಗರ ಮೈ ಜುಂ ಎನಿಸುವಂತ ಘಟನೆ ಗುರುವಾರ ಸಂಭವಿಸಿದೆ.
ಪಟ್ಟಣದ ಹೃದಯ ಭಾಗದಲ್ಲಿ ದ್ವಿಚಕ್ರ ವಾಹನ ಶೋರೂಂ ನಡೆಸುತ್ತಿದ್ದ ಯುವಕನೋರ್ವ,ತನ್ನ ಸಂಬಂಧಿಗಳ ಮನೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡು , ಮಾದನಗೇರಿ ಕಡೆಯಿಂದ ಅಂಕೋಲಾ ಕಡೆಗೆ ಕಾರ್ ಚಲಾಯಿಸಿಕೊಂಡು ಬರುತ್ತಿದ್ದ ಎನ್ನಲಾಗಿದೆ.
ಈ ಕುಮಟಾ – ಅಂಕೋಲಾ ದಾರಿ ಮಧ್ಯೆ ಜಮಗೋಡ ಬಳಿ, ಒಮ್ಮೇಲೆ ಹೆದ್ದಾರಿಗೆ ಬಂದ ಜಾನುವಾರು ತಪ್ಪಿಸಲು ಹೋಗಿ, ಅಥವಾ ಇತರೆ ಕಾರಣಗಳಿಂದ ಗಾಬರಿಗೊಂಡ ಚಾಲಕ ಬ್ರೇಕ್ ಬದಲು ಎಕ್ಸಲೇಟರ್ ಒತ್ತಿರುವ ಸಾಧ್ಯತೆ ಇದೆ ಎನ್ನಲಾಗಿದ್ದು, ಕ್ಷಣ ಮಾತ್ರದಲ್ಲಿ ಚಾಲಕನ ನಿಯಂತ್ರಣ ಕಳೆದು ಕೊಂಡ ಕಾರ್, ಅತಿ ವೇಗವಾಗಿ ಚತುಷ್ಪಥ ರಸ್ತೆಯ ಡಿವೈಡರ್ ದಾಟಿ , ವಿರುದ್ಧ ದಿಕ್ಕಿನತ್ತ ನೇರವಾಗಿ ಚಲಿಸಿ, ಗಿಡಮರಗಳಿಗೆ ಬಡಿದು, ಹೆದ್ದಾರಿ ಅಂಚಿನ ಕಲ್ಲು ಮಣ್ಣುಗಳ ತಗ್ಗು ಪ್ರದೇಶದಲ್ಲಿ ಪಲ್ಟಿಯಾಗಿ ಬಿದ್ದಿದೆ.ಅಪಘಾತದ ರಭಸಕ್ಕೆ ಕಾರಿನ ಒಂದು ಟೈರ್ ಸ್ಪೋಟಗೊಂಡತಿದ್ದು, ಕಾರಿನ ಬಹುತೇಕ ಭಾಗ ಜಖಂಗೊಂಡಿದೆ.
ಅಪಘಾತದ ತೀವ್ರತೆಯನ್ನು ಗಮನಿಸಿದರೆ ಎಂಥವರ ಮೈ ಜುಂ ಎನ್ನದಿರಲಾರದು. ಆದರೆ ಅದೃಷ್ಟವಶಾತ್ ಕಾರಿನಲ್ಲಿದ್ದ ಯುವಕನ ಕೈ ಮತ್ತಿತರ ಭಾಗಗಳಿಗೆ ಚಿಕ್ಕ ಪುಟ್ಟ ಗಾಯಗಳಾಗಿದ್ದು,ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಆಯ್ ಆರ್ ಬಿ 1033 ಅಂಬುಲೆನ್ಸ್ ಮೂಲಕ ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲಾಯಿತು. 112 ತುರ್ತು ವಾಹನ ಸಿಬ್ಬಂದಿಗಳು, ಸ್ಥಳೀಯರು, ಗೆಳೆಯರು. ಸಹಕರಿಸಿದರು. ಮಧ್ಯಾಹ್ನದ ಸಮಯವಾಗಿದ್ದರಿಂದ ಹೆದ್ದಾರಿಯಲ್ಲಿ ಇತರೆ ವಾಹನ ಸಂಚಾರ ಕಡಿಮೆ ಇರುವುದು ಸಹ ,ಸರಣಿ ಅಪಘಾತ ಇಲ್ಲವೇ ಬೇರೆ ರೀತಿಯ ಅಪಘಾತ ವಾಗದಂತೆ ತಡೆಯಿತು ಎನ್ನಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ