ಕುಮಟಾ: ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಅಂಗವಾಗಿ ಇಲ್ಲಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಸಿವಿಎಸ್ಕೆ ಪ್ರೌಢಶಾಲೆಯ ಅಟಲ್ ಟಿಂಕರಿಂಗ್ ಲ್ಯಾಬ್(ಎಟಿಎಲ್)ನ ವತಿಯಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ತಾಲೂಕಾ ಮಟ್ಟದ ವಿಜ್ಞಾನ ಮಾದರಿ ಪ್ರದರ್ಶನ(ಎಕ್ಸ್ಪೋ 2022)ವನ್ನು ಏರ್ಪಡಿಸಲಾಗಿತ್ತು.
ಜೆ.ಸಿ.ಕಾಲೇಜ್ ಅಂಕೋಲಾದ ವಿಶ್ರಾಂತ ಪ್ರಾಂಶುಪಾಲರಾದ ಶ್ರೀ ವಿ.ಆರ್.ವೆರ್ಣೇಕರ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂದಿನ ವಿದ್ಯಾರ್ಥಿಗಳ ಒತ್ತಡದ ಬದುಕು ಹಾಗೂ ಸ್ಮರಣಶಕ್ತಿಯ ಕುರಿತಾಗಿ ಮನೋಜ್ಞವಾಗಿ ವಿವರಿಸಿದರು. ಸ್ಮರಣಶಕ್ತಿ ವಂಶಪಾರಂಪರ್ಯಕವಲ್ಲ, ಅದು ನಮ್ಮ ಸ್ವಂತ ಶಕ್ತಿ. ಪಂಚೇಂದ್ರಿಯಗಳಿಗೆ ಸಂಸ್ಕಾರ ನೀಡಿ ಅದನ್ನು ವರ್ಧಿಸಿಕೊಳ್ಳುವುದು ಹೇಗೆ ಎಂಬುದನ್ನು ಹತ್ತು-ಹಲವು ಉದಾಹರಣೆಗಳೊಂದಿಗೆ ವಿವರಿಸಿ, ಕಲಿಕೆಯಲ್ಲಿ ಕಠಿಣ ಪರಿಶ್ರಮ ಅಗತ್ಯ ಹಾಗೂ ಅನಿವಾರ್ಯ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಂತರ ಮಾತನಾಡಿದ ಇನ್ನೋರ್ವ ಅತಿಥಿಗಳಾದ ಮಂಗಳೂರು ಇನಸ್ಟಿಟ್ಯೂಟ್ ಆಫ್ ಟೆಕ್ನೋಲೊಜಿ ಆಂಡ್ ಎಂಜಿನಿಯರಿಂಗ್ ರಸಾಯನಶಾಸ್ತೃ ವಿಭಾಗದ ನಿಕಟಪೂರ್ವ ಹಿರಿಯ ಸಹಾಯಕ ಉಪನ್ಯಾಸಕರಾದ ಡಾ. ಅಪರ್ಣಾ ಪಿ.ಐ.ಭಟ್ಟ, ಪ್ರಶ್ನೆಗಳನ್ನು ಮಾಡುವುದರ ಮೂಲಕ ವಿಷಯಜ್ಞಾನವನ್ನು ಪಡೆದು ಕುತೂಹಲವನ್ನು ಬಗೆಹರಿಸಿಕೊಳ್ಳಬೇಕು. ಜೀವನದಲ್ಲಿ ಯಾವ ರೀತಿಯ ಕನಸನ್ನು ಕಾಣಬೇಕೆಂಬುದರ ಕುರಿತು ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ಅವರ ಉದಾಹಣೆಯ ಮೂಲಕ ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು. ಹಲವು ರೀತಿ ಹಾಗೂ ಮಜಲುಗಳಲ್ಲಿ ನಾನಾ ವಿಜ್ಞಾನದ ಮಾದರಿಗಳನ್ನು ತಯಾರುಮಾಡುವುದರ ಮೂಲಕ ಭದ್ರ ಬುನಾದಿ ನಿರ್ಮಿಸಿ ಆ ಮೂಲಕ ವಿಜ್ಞಾನಿಯಾಗುವುದರ ಕುರಿತು ಆರಂಭದಲ್ಲಿಯೇ ಕನಸು ಕಾಣಬೇಕೆಂದು ವಿಶ್ಲೇಷಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕೊಂಕಣ ಸಂಸ್ಥೆಯ ಅಧ್ಯಕ್ಷರಾದ ವಿಠ್ಠಲ ಆರ್. ನಾಯಕ ಮಾತನಾಡಿ, ವಿಜ್ಞಾನದಲ್ಲಿ ಕ್ರಿಯಾಶೀಲತೆಯಿಂದ ಯಶಸ್ಸನ್ನು ಪಡೆಯಿರಿ ಎನ್ನುತ್ತ, ಮುಂಬರುವ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಎಲ್ಲಾ ವಿದ್ಯಾರ್ಥಿಗಳು ಸಫಲರಾಗಲಿ ಎಂದು ಹಾರೈಸಿದರು. ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಮುರಲೀಧರ ಪ್ರಭು ಅವರು ವಿಜ್ಞಾನದ ಕುರಿತು ಮಾತನಾಡಿ, ವಿಜ್ಞಾನ ಮಾನವನ ಭೌತಿಕ ಜೀವನವನ್ನೇ ಬದಲಾಯಿಸಿದೆ ಎಂದು ಸಾಂದರ್ಭಿಕವಾಗಿ ವಿವರಿಸಿದರು. ಬಳಿಕಕಾರ್ಯಕ್ರಮಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಜೇಂದ್ರ ಎಲ್. ಭಟ್ಟರವರು ಮಾದರಿಗಳ ಪ್ರದರ್ಶನವನ್ನು ವೀಕ್ಷಿಸಿ ಮೆಚ್ಚುಗೆಯನ್ನು ವ್ಯಕ್ತಪಡಿಸಿ ಮಕ್ಕಳನ್ನು ಪ್ರೋತ್ಸಾಹಿಸಿದರು.
ವೇದಿಕೆಯಲ್ಲಿ ಶಾಲೆಯ ಶೈಕ್ಷಣಿಕ ಸಲಹೆಗಾರರಾದ ಆರ್.ಎಚ್.ದೇಶಭಂಡಾರಿ, ಮುಖ್ಯಾಧ್ಯಾಪಕಿಯರಾದ ಸುಮಾ ಪ್ರಭು ಉಪಸ್ಥಿತರಿದ್ದರು. ವಿಜ್ಞಾನದಲ್ಲಿ ಯುವ ವಿಜ್ಞಾನಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. ಶಿಕ್ಷಕಿ ಶಾಹಿದಾ ಶೆಟ್ಟಿ ಸ್ವಾಗತಿಸಿ ಪರಿಚಯಿಸಿದರು. ಪ್ರಕಾಶ ಗಾವಡಿ ನಿರೂಪಿಸಿದರು. ಶಿಕ್ಷಕ ಚಿದಾನಂದ ಭಂಡಾರಿ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿಗಳಾಗ ಶಾಂತಿಕಾ ಭಟ್ಟ ಸಂಗಡಿಗರು ಪ್ರಾರ್ಥನೆ ಹಾಡಿದರು. ತಾಲೂಕಿನ ಪ್ರೌಢಶಾಲಾ ವಿದ್ಯಾರ್ಥಿಗಳು, ವಿಜ್ಞಾನ ಶಿಕ್ಷಕರು, ವಿಜ್ಞಾನದಲ್ಲಿ ಆಸಕ್ತಿ ಹೊಂದಿದ ಅನೇಕರು ಪ್ರದರ್ಶನಕ್ಕಾಗಮಿಸಿ ಪ್ರಯೋಜನ ಪಡೆದುಕೊಂಡರು.