ಕಾರವಾರ: ಅದು ಕೋಟ್ಯಂತರ ರೂಪಾಯಿ ವೆಚ್ಛದಲ್ಲಿ ನಿರ್ಮಿಸಲಾಗಿರುವ ಬುಡಕಟ್ಟು ಜನಾಂಗಗಳ ಕಲೆ, ಸಂಸ್ಕೃತಿ ಬಿಂಬಿಸುವ ಶಿಲ್ಪಕಲಾಕೃತಿಗಳ ವನ. ಅದರಲ್ಲೂ ಈ ವನ ಹೆದ್ದಾರಿಗೆ ಹೊಂದಿಕೊoಡು ಕಡಲತೀರದಲ್ಲೇ ಇರೋದ್ರಿಂದ ಸಾಕಷ್ಟು ಮಂದಿ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿ ತೆರಳುತ್ತಿದ್ದರು. ಆದ್ರೆ ಇದರ ನಿರ್ವಹಣೆಯ ಜವಾಬ್ದಾರಿಯನ್ನ ಹೊತ್ತಿರುವ ಗುತ್ತಿಗೆದಾರರ ನಿರ್ಲಕ್ಷ್ಯದಿಂದಾಗಿ ಪ್ರವಾಸಿಗರ ಆಕರ್ಷಣೆಯ ತಾಣ ತನ್ನ ಅಂದ ಕಳೆದುಕೊಳ್ಳುವಂತಾಗಿದೆ. ಅಷ್ಟಕ್ಕೂ ಆ ವನವಾದ್ರೂ ಯಾವುದು, ಅದು ಇರೋದಾದ್ರೂ ಎಲ್ಲಿ ಅಂತೀರಾ. ಹಾಗಿದ್ರೆ ಈ ಸ್ಟೋರಿ ನೋಡಿ.
ಒಂದೆಡೆ ವಿವಿಧ ಸಮುದಾಯಗಳ ಸಂಪ್ರದಾಯವನ್ನ ತಿಳಿಸುವ ಶಿಲ್ಪಕಲಾಕೃತಿಗಳು ಬಣ್ಣ ಕಳೆದುಕೊಂಡು ಹಳತಾಗಿರುವುದು. ಇನ್ನೊಂದೆಡೆ ಕಲಾಕೃತಿಗಳು ಇದ್ದ ಸ್ಥಳದಲ್ಲಿ ಬೆಳೆದುಕೊಂಡಿರುವ ಗಿಡ ಗಂಟಿಗಳು. ಮತ್ತೊಂದೆಡೆ ಹೆದ್ದಾರಿಗೆ ಹೊಂದಿಕೊAಡೇ ಇದ್ರೂ ಬೆರಳೆಣಿಕೆಯಷ್ಟು ಪ್ರವಾಸಿಗರೂ ಬರದೇ ಬಿಕೋ ಎನ್ನುತ್ತಿರುವ ಪ್ರವಾಸಿ ತಾಣ. ಈ ಎಲ್ಲ ದೃಶ್ಯಗಳು ಕಂಡುಬರೋದು ಉತ್ತರಕನ್ನಡ ಜಿಲ್ಲೆಯ ಕಾರವಾರದ ರಾಕ್ ಗಾರ್ಡನ್‌ನಲ್ಲಿ. ಒಂದು ಕಾಲದಲ್ಲಿ ಸಾವಿರಾರು ಪ್ರವಾಸಿಗರನ್ನ ತನ್ನತ್ತ ಕೈಬೀಸಿ ಕರೆಯುವಂತಹ ಪ್ರವಾಸಿತಾಣವಾಗಿದ್ದ ರಾಕ್‌ಗಾರ್ಡನ್ ನತ್ತ ಇದೀಗ ಪ್ರವಾಸಿಗರೇ ಸುಳಿಯದ ಸ್ಥಿತಿ ನಿರ್ಮಾಣವಾಗಿದೆ.
ಕಾರವಾರದ ರಾಷ್ಟ್ರೀಯ ಹೆದ್ದಾರಿ 66ಕ್ಕೆ ಹೊಂದಿಕೊoಡು ಇಲ್ಲಿನ ಟ್ಯಾಗೋರ್ ಕಡಲತೀರದಲ್ಲಿ ಕಳೆದ 2018ರಲ್ಲಿ ರಾಕ್‌ಗಾರ್ಡನ್ ನಿರ್ಮಾಣವಾಗಿತ್ತು. ಸುಮಾರು 3 ಕೋಟಿ ವೆಚ್ಛದಲ್ಲಿ ಜಿಲ್ಲೆಯ ಬುಡಕಟ್ಟು ಸಮುದಾಯಗಳ ಕಲೆ, ಸಂಸ್ಕೃತಿ ಹಾಗೂ ಜೀವನ ಶೈಲಿಯನ್ನ ಬಿಂಬಿಸುವ ಸಿಮೆಂಟ್ ಶಿಲ್ಪಕಲಾಕೃತಿಗಳನ್ನ ರಚಿಸಿ ಸ್ಥಾಪಿಸಲಾಗಿತ್ತು. ಕೋಟೆಯ ಮಾದರಿಯಲ್ಲಿ ಸುತ್ತಲೂ ಕಲ್ಲುಗಳನ್ನೇ ಬಳಸಿ ನಿರ್ಮಿಸಲಾಗಿದ್ದ ಈ ರಾಕ್ ಗಾರ್ಡನ್ ದೂರದಿಂದಲೇ ಪ್ರವಾಸಿಗರನ್ನ ಸೆಳೆಯುವಂತೆ ನಿರ್ಮಾಣವಾಗಿದ್ದು ಉದ್ಘಾಟನೆಯಾದ ವರ್ಷದಲ್ಲೇ ಕೋಟ್ಯಂತರ ರೂಪಾಯಿ ಆದಾಯವನ್ನೂ ತಂದುಕೊಟ್ಟಿತ್ತು.
ಬಳಿಕ ರಾಕ್‌ಗಾರ್ಡನ್ ನಿರ್ವಹಣೆಯನ್ನ ಖಾಸಗಿಯವರಿಗೆ ನೀಡಿದ್ದು ಈ ನಡುವೆ 2020ರಲ್ಲಿ ಅಪ್ಪಳಿಸಿದ ಚಂಡಮಾರುತ ಹಾಗೂ ಕೊರೊನಾ ಕಾರಣದಿಂದಲೂ ರಾಕ್‌ಗಾರ್ಡನ್ ಬಂದ್ ಆಗಿತ್ತು. ಕೋವಿಡ್ ನಿಯಮಗಳನ್ನ ಸಡಿಲಿಕೆ ಮಾಡಿದ ಬಳಿಕವೂ ಸೂಕ್ತ ನಿರ್ವಹಣೆ ಮಾಡದ ಕಾರಣ ಶಿಲ್ಪಕಲಾಕೃತಿಗಳು ಬಣ್ಣ ಕಳೆದುಕೊಂಡಿದ್ದು ರಾಕ್ ಗಾರ್ಡನ್ ಅಂದ ಕಳೆದುಕೊಳ್ಳುವಂತಾಗಿದೆ.
ಇನ್ನು ಈ ರಾಕ್‌ಗಾರ್ಡನ್ ಪ್ರಾರಂಭಗೊoಡ 2018-19ರಲ್ಲಿ ಸುಮಾರು 2.13 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು. 2019-20ರಲ್ಲಿ 1.48 ಲಕ್ಷ ಹಾಗೂ ಕೊರೊನಾ ಮೊದಲನೇಯ ಅಲೆಯ ಬಳಿಕ 2020-21ರಲ್ಲಿ 24 ಸಾವಿರ ಮಂದಿ ಪ್ರವಾಸಿಗರು ಭೇಟಿ ನೀಡಿದ್ದರು. ಈ ಅಂಕಿ ಅಂಶಗಳ ಪ್ರಕಾರ ಕೋವಿಡ್ ಅವಧಿ ಹೊರತುಪಡಿಸಿ ಉಳಿದ ಸಮಯದಲ್ಲಿ ಸಾಕಷ್ಟು ಪ್ರವಾಸಿಗರು ಈ ತಾಣಕ್ಕೆ ಭೇಟಿ ನೀಡಿದ್ದು ಸಾಕಷ್ಟು ಆದಾಯವನ್ನ ತಂದುಕೊಟ್ಟಿದೆ. ಇಷ್ಟಾದರೂ ರಾಕ್‌ಗಾರ್ಡನ್ ನಿರ್ವಹಣೆ ಮಾಡುವವರು ಕಲಾಕೃತಿಗಳಿಗೆ ಪೇಂಟಿoಗ್ ಮಾಡದೇ, ಬೆಳೆದಿರುವ ಕಳೆಹುಲ್ಲು ತೆರವುಗೊಳಿಸದೇ ನಿರ್ಲಕ್ಷ್ಯವಹಿಸಿರುವುದು ಪ್ರವಾಸಿಗರ ಬೇಸರಕ್ಕೆ ಕಾರಣವಾಗಿದೆ.
ಇನ್ನು ಈ ಬಗ್ಗೆ ಜಿಲ್ಲಾಧಿಕಾರಿಗಳನ್ನ ಕೇಳಿದ್ರೆ, ರಾಕ್ ಗಾರ್ಡನ್ ನಿರ್ವಹಣಾ ಕೆಲಸಕ್ಕೆ ಕೆಲ ಹಳೆಯ ಸಮಸ್ಯೆಗಳಿಂದಾಗಿ ವಿಳಂಬವಾಗಿದೆ. ಆದರೆ ಶೀಘ್ರದಲ್ಲೇ ಈ ಬಗ್ಗೆ ಪರಿಶೀಲಿಸಿ ಪ್ರವಾಸಿಗರಿಗೆ ರಾಕ್ ಗಾರ್ಡನ್ ವೀಕ್ಷಣೆಗೆ ಅನುಕೂಲ ಮಾಡಿಕೊಡೋದಾಗಿ ತಿಳಿಸಿದ್ದಾರೆ.
ಒಟ್ಟಾರೇ ಕೋಟ್ಯಂತರ ಖರ್ಚು ಮಾಡಿ ನಿರ್ಮಿಸಲಾಗಿದ್ದ ರಾಕ್‌ಗಾರ್ಡನ್ ಇದೀಗ ಸೂಕ್ತ ನಿರ್ವಹಣೆಯಿಲ್ಲದೇ ಹಾಳು ಕೊಂಪೆಯ0ತಾಗಿರೋದು ನಿಜಕ್ಕೂ ದುರಂತವೇ. ಇನ್ನಾದ್ರೂ ಸಂಬoಧಪಟ್ಟವರು ಎಚ್ಚೆತ್ತು ರಾಕ್‌ಗಾರ್ಡನ್‌ನ್ನ ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡಿ ಪ್ರವಾಸಿಗರಿಗೆ ವೀಕ್ಷಣೆಗೆ ಸರಿಪಡಿಸಿಕೊಡಬೇಕಿದೆ.
ವಿಸ್ಮಯ ನ್ಯೂಸ್, ಕಾರವಾರ