Big News
Trending

ಚಾತುರ್ಮಾಸ್ಯ ವ್ರತವು ಆತ್ಮೋನ್ನತಿ-ಸಮಾಜೋನ್ನತಿಗೆ ಕಾರಣವಾಗಬಲ್ಲದು

ಚಾತುರ್ಮಾಸ್ಯ ವೃತವೆಂದರೇನು?
ಆಚರಿಸುವುದು ಹೇಗೆ?
ಆಹಾರ ನಿಯಮ ಹೇಗಿದೆ?

ನಮ್ಮ ಸನಾತನ ಭಾರತೀಯ ಪರಂಪರೆಯಲ್ಲಿ ಅನೇಕ ವ್ರತಾಚರಣೆಗಳು ಬಳಕೆಯಲ್ಲಿವೆ. ಈ ಎಲ್ಲಾ ವ್ರತಾಚರಣೆಗಳ ಮುಖ್ಯ ಉದ್ದೇಶವೇನೆಂದರೆ ಭಗವದ್ಭಕ್ತಿ ಹಾಗೂ ಚಿತ್ತಶಾಂತಿಯೇ ಆಗಿದೆ. ಅನೇಕ ವ್ರತಗಳಲ್ಲಿ ‘ಚಾತುರ್ಮಾಸ್ಯವ್ರತ’ವೂ ಕೂಡ ಒಂದು. ನಾವು ಹೆಚ್ಚಿನವರು ಚಾತುರ್ಮಾಸ್ಯ ವ್ರತವೆಂದರೆ ಸನ್ಯಾಸಿಗಳು ಮಾತ್ರ ಆಚರಿಸುವ ವ್ರತಗಳೆಂದು ತಿಳಿದಿದ್ದೇವೆ. ಅದು ತಪ್ಪು ಕಲ್ಪನೆ. ಸ್ತ್ರೀ-ಪುರುಷರ ಭೇದವಿಲ್ಲದೇ ಎಲ್ಲಾ ವರ್ಣಾಶ್ರಮದವರೂ ಕೂಡ ಆಚರಿಸುವ ವ್ರತವೇ ಚಾತುರ್ಮಾಸ್ಯ ವ್ರತವಾಗಿದೆ.

ಆಷಾಡೇತು ಸೀತೆ ಪಕ್ಷೇ ಏಕಾದಶ್ಯಾಮುಪೋಷಿತಃ |
ಚಾತುರ್ಮಾಸ್ಯವ್ರತಂ ಕುರ್ಯಾತ್ ಯತ್ಕಿಂಚಿನ್ನಿಯತೋ ನರಃ||

ಆಷಾಢ ಶುಕ್ಲಪಕ್ಷದ ಏಕಾದಶಿಯಿಂದ ಪ್ರಾರಂಭಿಸಿ, ಕಾರ್ತಿಕಶುಕ್ಲಪಕ್ಷದ ಏಕಾದಶಿ ತನಕ ಅಂದರೆ ದೇವಶಯನಿ ಏಕಾದಶಿಯಿಂದ ಪ್ರಾರಂಭಿಸಿ ದೇವೋತ್ಥಾನದ ಏಕಾದಶಿ ತನಕ ಮಾಡುವ ವ್ರತವನ್ನು ಚಾತುರ್ಮಾಸ್ಯ ವ್ರತ ಎಂದು ಕರೆಯುವರು. ಈ ನಾಲ್ಕು ತಿಂಗಳುಗಳ ಕಾಲ ಭಗವಂತ ವಿಷ್ಣುವು ಪಾತಾಳದಲ್ಲಿ ವಾಸಿಸುವ ರಾಜಾಬಲಿಯ ನಿವಾಸದಲ್ಲಿ ವಾಸಿಸುವನು. ಈ ಅವಧಿಯನ್ನೇ ಭಗವಂತನ ಯೋಗನಿದ್ರೆಯೆಂದು ಪುರಾಣಗಳು ಹೇಳುತ್ತವೆ. ಈ ಸಮಯದಲ್ಲಿ ಯಾವುದೇ ಪ್ರಯಾಣ-ವಿವಾಹ-ಉಪನಯನ-ಭೂಮಿ ಖರೀದಿ, ಮನೆ ಕಟ್ಟುವುದು ಮುಂತಾದ ಕಾರ್ಯಗಳನ್ನು ಮಾಡಕೂಡದು ಎಂದು ಧರ್ಮಶಾಸ್ತ್ರಗಳು ನಿಷೇಧಿಸಿವೆ. ಭಕ್ತಿಭಾವದಿಂದ ಒಂದೇ ಕಡೆ ಕುಳಿತು ಭಗವಂತನ ಧ್ಯಾನ-ಚಿಂತನೆಯಲ್ಲಿ ತೊಡಗಿಕೊಂಡು ಆಧ್ಯಾತ್ಮ ಕಲ್ಯಾಣ ಅಥವಾ ಶ್ರೇಯಸ್ಸು ಹೊಂದುವುದು ಇದರ ಮುಖ್ಯ ಉದ್ದೇಶ. ಇದಕ್ಕಾಗಿಯೇ ಆತ್ಮೋನ್ನತಿಯ ಕಾಮನೆಯನ್ನು ಹೊಂದಿರುವ ಸಾಧಕರು ಸನ್ಯಾಸಿಗಳು ಮುಂತಾದವರು ಒಂದೆಡೆ ನೆಲೆಯಿದ್ದು, ಈ ಚಾತುರ್ಮಾಸ್ಯವನ್ನು ಆಚರಿಸುವರು. ಇದನ್ನು ನಾಲ್ಕೂ ಪಕ್ಷಗಳಲ್ಲೂ ಆಚರಿಸುವ ಪದ್ಧತಿ ಕೂಡ ಇದೆ.

ಆಹಾರನಿಯಮ:ಎಲ್ಲಾ ವ್ರತಾಚರಣೆಯಲ್ಲಿಯೂ ಆಹಾರ ನಿಯಮ ಇದ್ದೇ ಇದೆ. ಆದರೆ ಈ ಚಾತುರ್ಮಾಸ್ಯ ವ್ರತದಲ್ಲಿ ಆಹಾರನಿಯಮವು ಈ ವ್ರತದ ಮುಖ್ಯಭಾಗವೇ ಆಗಿದೆ. ಈ ನಾಲ್ಕೂ ತಿಂಗಳುಗಳಲ್ಲಿ ಒಂದೊಂದು ಬಗೆಯ ಆಹಾರ ವಸ್ತುವಿನ ಮೇಲೆ ನಿರ್ಬಂಧವನ್ನು ಹಾಕಿಕೊಂಡು, ಅದಕ್ಕೆ ಪರ್ಯಾಯವಾಗಿ ಆಹಾರ ಬಳಸಿ ಸೇವಿಸುವರು. ಶಾಕವ್ರತ, ದಧಿವ್ರತ, ಪಯೋವ್ರತ, ದ್ವಿದಲವ್ರತ, ಎಂದು ನಾಲ್ಕು ತಿಂಗಳುಗಳಲ್ಲಿ ಒಂದೊಂದು ಆಹಾರ ನಿಯಮವನ್ನು ಪಾಲಿಸುವರು.

ಶ್ರಾವಣೇ ವರ್ಜಯೇತ್ ಶಾಕಂ, ದಧಿ ಭಾದ್ರಪದೇ ತಥಾ|
ದುಗ್ಧುಂ ಅಶ್ವಯುಜೇ ಮಾಸಿ, ಕಾರ್ತಿಕೇ ದ್ವಿದಲಂ ತ್ಯಜೇತ್||

ಆಷಾಢ-ಶ್ರಾವಣ ತಿಂಗಳಿನಲ್ಲಿ ಕೈಗೊಳ್ಳುವ ಆಹಾರ ನಿಯಮವನ್ನು “ಶಾಕವ್ರತವೆಂದು” ಕರೆದಿದ್ದಾರೆ. ಈ ತಿಂಗಳಿನಲ್ಲಿ ತರಕಾರಿ ಹಣ್ಣು ಹಂಪಲು ಬಳಸಿ ಆಹಾರ ಸದ್ಧಪಡಿಸುವುದಿಲ್ಲ. ಆಹಾರದಲ್ಲಿ ತರಕಾರಿ ನಿಷೇಧ. ತರಕಾರಿ ಬದಲಾಗಿ ವಿವಿಧ ಧಾನ್ಯದ ಕಾಳುಗಳನ್ನು, ಹುಣಸೆ ಹಣ್ಣಿನ ಬದಲಾಗಿ ಮಾವಿನ ಕಾಯಿಯನ್ನು, ಮೆಣಸಿನ ಬದಲಾಗಿ ಕಾಳುಮೆಣಸನ್ನು ಬಳಸಿ ಆಹಾರ ಸಿದ್ಧಪಡಿಸಿ ಸೇವಿಸುವರು. ಮಳೆಗಾಲದಲ್ಲಿ ಕಾಯಿಪಲ್ಲೆ, ಗಡ್ಡೆ-ಗೆಣಸು ಬಳಸಿ ಆಹಾರ ಸೇವಿಸಿದರೆ ದೇಹದಲ್ಲಿ ವಾತದಂಶ ಅಧಿಕವಾಗಿ ಅನಾರೋಗ್ಯಕ್ಕೆ ಕಾರಣವಾಗಬಹುದು ಎಂಬುದು ಆಯುರ್ವೇದದ ಅಭಿಮತ. ಅದಕ್ಕಾಗಿ ತರಕಾರಿಗಳನ್ನು ಬಲಸದೇ ಈ ತಿಂಗಳು ಆಹಾರ ಸೇವಿಸುವ ಕ್ರಮವೇ ‘ಶಾಕವ್ರತ’. ಎರಡನೇಯದಾಗಿ ಶ್ರಾವಣ-ಭಾದ್ರಪದ ಮಾಸದಲ್ಲಿ ‘ದಧಿವ್ರತ’ವನ್ನು ಆಚರಿಸುವರು. ಆಹಾರದಲ್ಲಿ ಮೊಸರು ಬಳಸುವಂತಿಲ್ಲ. ಆಯುರ್ವೇದದ ಪ್ರಕಾರ ಮೊಸರಿನ ಸೇವನೆಯಿಂದ ಕಫದಂಶ ದೇಹದಲ್ಲಿ ಹೆಚ್ಚಾಗಿ ಕಫಜನ್ಯ ರೋಗಕ್ಕೆ ಕಾರಣವಾಗುವುದು. ಹಾಗಾಗಿ ಮೊಸರಿನ ನಿಯಂತ್ರಣ ದೇಹಕ್ಕೆ ಹಿತಕಾರಿ. ಅಲ್ಲದೇ ಈ ಮಾಸದಲ್ಲಿ ಹಸು- ಎಮ್ಮೆ-ಆಡು ಮುಂತಾದವುಗಳು ಸಂತಾನಾಭಿವೃದ್ದಿಯಲ್ಲಿ ತೊಡಗುವುದರಿಂದ ಅವುಗಳ ಹಾಲಿನಿಂದ ಆದ ಮೊಸರು ವರ್ಜ್ಯ ಎಂಬ ನಂಬಿಕೆಯಿದೆ. ಒಟ್ಟಿನಲ್ಲಿ ಯಾವುದೇ ಮೊಸರಿನ ಸೇವನೆ ಈ ಮಾಸದಲ್ಲಿ ನಿಷೇಧವಿದೆ.
ಮೂರನೆಯದಾಗಿ ಭಾದ್ರಪದ-ಆಶ್ವೀಜ ಮಾಸದಲ್ಲಿ ‘ಪಯೋವ್ರತ’ವನ್ನು ಆಚರಿಸುವರು. ವಿಶೇಷವಾಗಿ ಈ ಮಾಸದಲ್ಲಿ ಹಾಲನ್ನು ನಿಡುವ ಹಸು-ಎಮ್ಮೆ ಮುಂತಾದವುಗಳು ಗರ್ಭಧರಿಸುವುದರಿಂದ ಕ್ಷೀರ ಸೇವನೆಯನ್ನು ಬಿಡುವರು. ಹಾಲಿನ ಸೇವನೆ ಬಿಡುವುದರಿಂದ ‘ಪಯೋವ್ರತ’ ಎನ್ನುವರು.
ನಾಲ್ಕನೆಯದಾಗಿ ಆಶ್ವೀಜ-ಕಾರ್ತಿಕ ಮಾಸದಲ್ಲಿ ‘ದ್ವಿದಲವ್ರತ’ವನ್ನು ಮಾಡುವರು. ತೊಗರಿ-ಕಡಲೆ ಮುಂತಾದ ದ್ವಿದಳ ಧಾನ್ಯ ಬೇಳೆ ಕಾಳುಗಳನ್ನು ಉಪಯೋಗಿದಸಿ ಆಹಾರವನ್ನು ಸಿದ್ದಪಡಿಸುವುದಿಲ್ಲ. ಅವುಗಳ ಆಹಾರ ಸೇವನೆ ಮಾಡುವುದಿಲ್ಲ. ಗಡ್ಡೆ-ಗೆಣಸು, ಬಾಳೆಕಾಯಿ ಮುಂತಾದವುಗಳನ್ನು ಉಪಯೋಗಿಸಿ ಆಹಾರ ಸಿದ್ಧಪಡಿಸಿ ಸೇವಿಸುವರು. ಈ ಮಾಸದಲ್ಲಿ ಕಳೆದ ಮೂರು-ನಾಲ್ಕು ತಿಂಗಳುಗಳಲ್ಲಿ ಬೆಳೆದ ಹೊಸ ಧಾನ್ಯಗಳು ಬರುವುದರಿಂದ ಆರೋಗ್ಯದ ಧೃಷ್ಟಿಯಿಂದ ಹೊಸಧಾನ್ಯಗಳ ಸೇವನೆಗಿಂತ ಅವು ಹಳೆಯದಾದಾಗ ಮನುಷ್ಯನ ದೇಹಕ್ಕೆ ಹಿತಕಾರಿಯಾದ ಕಾರಣ ಈ ತಿಂಗಳಲ್ಲಿ ‘ದ್ವಿದಲವ್ರತ’ವನ್ನು ಆಚರಿಸುವುರು.

ಚಾತುರ್ಮಾಸ್ಯ ವ್ರತದ ಸಂದರ್ಭದಲ್ಲಿ ಉದ್ದು-ಬದನೆಕಾಯಿ-ಕುಂಬಳಕಾಯಿ-ಬಾಳೆಹಣ್ಣು-ಹುಣಸೆಹಣ್ಣು-ಜೇನುತುಪ್ಪ ಮುಂತಾದವುಗಳನ್ನು ಆಹಾರವಾಗಿ ಬಳಸುವ ಕ್ರಮವಿದೆ. ಅಕ್ಕಿ-ಗೋಧಿ-ಸುವರ್ಣಗಡ್ಡೆ-ಸೈಂಧವಲವಣ-ಸಕ್ಕರೆ ಮುಂತಾದವುಗಳನ್ನು ಉಪಯೋಗಿಸುವರು. ಮಂಚ-ಪಲ್ಲಂಗಗಳಲ್ಲಿ ಮಲಗುವುದಿಲ್ಲ. ಬ್ರಹ್ಮಚರ್ಯವ್ರತವನ್ನು ಪಾಲಿಸಲಾಗುವುದು. ಮಾಸದಲ್ಲಿ ಎರಡು ದಿನ ಉಪವಾಸ-ನಿತ್ಯಯೋಗಾಭ್ಯಾಸ- ಏಕಾಂತವಾಸ ಇವು ವ್ರತದ ಮುಖ್ಯ ವಿಶೇಷತೆಗಳು. ಚಾತುರ್ಮಾಸ್ಯ ವ್ರತ ಮುಗಿದ ನಂತರ ಲೋಪದೋಷ ನಿವಾರಣೆಗೆ-ಕಲ್ಯಾಣ ವೃದ್ಧಿಗೆ ವಿವಿಧದಾನಗಳನ್ನು ನಿಡುವ ಕ್ರಮವಿದೆ. ಶಯನಿ ಹಾಗೂ ಬೋಧಿನಿ ಏಕಾದಶಿಗಳಲ್ಲಿ ಎಲ್ಲಾ ವರ್ಗದವರಿಗೂ ಅವರವರ ಕುಲ ಸಂಪ್ರದಾಯಕ್ಕೆ ಅನುಗುಣವಾಗಿ ತಪ್ತಮುದ್ರಾಧಾರಣೆಯನ್ನು ಯತಿವರೇಣ್ಯರಿಂದ ಮಾಡಿಸಿಕೊಳ್ಳುವರು.

ಸಾಮಾನ್ಯವಾಗಿ ಈ ನಾಲ್ಕು ತಿಂಗಳುಗಳು ಮಳೆಗಾಲ ಹಾಗೂ ನಂತರದ ದಿನಗಳಾಗಿರುವುದರಿಂದ ಸಂಚಾರ ಮಾಡಿದರೆ ನಮ್ಮಿಂದ ಅನೇಕ ಕ್ರಿಮಿ ಕೀಟಾದಿಗಳಿಗೆ ಹಾನಿಯಾಗುವ ಸಂಭವವಿದೆ. ಒಂದೇ ಕಡೆ ವಾಸವಾಗಿದ್ದು, ಹೊರಸಂಚಾರ ಮಾಡಬಾರದು ಎನ್ನುವ ಈ ಚಾತುರ್ಮಾಸ್ಯ ವ್ರತದ ಹಿನ್ನಲೆಯನ್ನು ಗಮನಿಸಿದಾಗ ಬಹುದೊಡ್ಡ ಅಹಿಂಸಾತತ್ವದ ಪಾಲನೆಯು ಈ ವ್ರತದ ತಾತ್ವಿಕ-ವೈಜ್ಞಾನಿಕ ಹಿನ್ನೆಲೆಯಾಗಿದೆ. ಈ ಸಮಯದಲ್ಲಿ ಕೊರೋನಾದ ಭಯಭೀತಿ ಎಲ್ಲೆಲ್ಲೂ ವ್ಯಾಪಿಸಿದೆ. ಚಾತುರ್ಮಾಸ್ಯ ವ್ರತವು ಇದಕ್ಕೆ ಉತ್ತಮ ಪಥ್ಯವಾಗಬಲ್ಲದು. ನಮ್ಮ ಮೈ-ಮನ-ಮಾತುಗಳನ್ನು ಭಗವಂತನ ಚಿಂತನೆ ಧ್ಯಾನಗಳಲ್ಲಿ ತೊಡಗುವುದರಿಂದ ಆತ್ಮೋನ್ನತಿ ಸಾಧ್ಯವಾಗುವುದಲ್ಲದೇ, ಆರೋಗ್ಯ ಪೂರ್ಣ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ಈ ಚಾತುರ್ಮಾಸ್ಯ ವ್ರತವು ನೀಡಬಲ್ಲದು.

(ನಾಳೆಯಿಂದ ಆರಂಭಿಸಿ ಹೆಚ್ಚಿನ ಸಂನ್ಯಾಸಿಗಳು-ಸಾಧಕರು ಚಾತುರ್ಮಾಸ್ಯ ವ್ರತವನ್ನು ಕೈಗೊಳ್ಳುವರು. ಚಾತುರ್ಮಾಸ್ಯ ವ್ರತವೆಂದರೇನು? ಅದನ್ನು ಯಾರು ಆಚರಿಸುವರು? ಹೇಗೆ ಆಚರಿಸುವುದು? ಎಂಬ ಕುತೂಹಲ ಎಲ್ಲರಲ್ಲಿ. ಅದಕ್ಕೆ ಉತ್ತರರೂಪವಾಗಿ ಈ ಲೇಖನ.)

ಗಣೇಶ ಭಟ್ಟ

ಸಂಸ್ಕೃತ ಉಪನ್ಯಾಸಕರು.
ಹನುಮಂತ ಬೆಣ್ಣೆ ಸ.ಪ.ಪೂ.ಕಾಲೇಜು
ನೆಲ್ಲಿಕೇರಿ, ಕುಮಟಾ.

[sliders_pack id=”1487″]

Back to top button