
ಅಂಕೋಲಾ : ಉತ್ತರಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದ್ದು ಭಾನುವಾರ 18, ಸೋಮವಾರ 24 ಪ್ರಕರಣಗಳು ದಾಖಲಾಗಿದ್ದವು. ದಿನವೊಂದರಲ್ಲೇ ಈವರೆಗಿನ ಅತಿಹೆಚ್ಚು ಪ್ರಕರಣಗಳು ಮಂಗಳವಾರ ದಾಖಲಾಗಿದ್ದು ಜಿಲ್ಲೆಯಲ್ಲಿ ಒಟ್ಟೂ 40 ಹೊಸ ಪ್ರಕರಣಗಳು ಧೃಡಪಟ್ಟಿದ್ದು ಜಿಲ್ಲೆಯ ಜನತೆ ಬೆಚ್ಚಿ ಬೀಳುವಂತೆ ಮಾಡಿದೆ.
ಅಂಕೋಲಾದಲ್ಲಿ ಈ ಹಿಂದೆ ಭಾವಿಕೇರಿ ಮಹಿಳೆಯೋರ್ವಳಲ್ಲಿ ಸೋಂಕು ಕಾಣಿಸಿಕೊಂಡು ಚಿಕಿತ್ಸೆಯ ನಂತರ ಗುಣಮುಖರಾಗಿ ಮನೆಗೆ ವಾಪಸ್ಸಾಗಿದ್ದು ಜನತೆ ಕೊಂಚ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿತ್ತು. ಆದರೆ ಅಗ್ರಗೋಣ-ಶೇಡಿಕಟ್ಟಾ ಮೂಲದ ವ್ಯಕ್ತಿಯಲ್ಲಿ ಕಾಣಿಸಿಕೊಂಡ ಸೋಂಕು ಮತ್ತು ಆತನ ಟ್ರಾವೆಲ್ ಹಿಸ್ಟರಿ ಅಂಕೋಲಾ, ಕುಮಟಾ, ಗೋಕರ್ಣ ಸುತ್ತಮುತ್ತಲ ಪ್ರದೇಶಗಳಲ್ಲಿ ಆತಂಕಕ್ಕೆ ಕಾರಣವಾಗಿತ್ತು. ಆತನ ಸಂಪರ್ಕದಿಂದ ಪತ್ನಿ ಹಾಗೂ ಮಗಳಿಗೂ ಸೋಂಕು ಧೃಡಪಟ್ಟು, ತಾಲೂಕಿನ ಒಟ್ಟೂ ಸೋಂಕಿತರ ಸಂಖ್ಯೆ 4ಕ್ಕೆ ಏರಿಕೆಯಾಗಿತ್ತು.
ಅಗ್ರಗೋಣ-ಶೇಡಿಕಟ್ಟಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿ ಇದ್ದರೆನ್ನಲಾದ ಸ್ಥಳೀಯ 25ವರ್ಷದ ಯುವಕ, 65ವರ್ಷದ ವೃದ್ಧೆ, 72ವರ್ಷದ ವೃದ್ಧ, 33ವರ್ಷದ ಪುರುಷ ಮತ್ತು 49ವರ್ಷದ ಇನ್ನೋರ್ವ ಪುರುಷ ಸೇರಿದಂತೆ 5 ಹೊಸ ಪ್ರಕರಣಗಳು ಮಂಗಳವಾರ ಧೃಡಪಟ್ಟಿವೆ. ಅವರನ್ನು ಕುಮಟಾದಲ್ಲಿ ಹೊಸದಾಗಿ ಆರಂಭಿಸಲಾದ ಕೋವೀಡ ಹೆಲ್ತ್ ಸೆಂಟರ್ ಗೆ ದಾಖಲಿಸಲಾಗಿದೆ ಎನ್ನಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಈ ಹಿಂದೆ ಅಗ್ರಗೋಣ-ಶೇಡಿಕಟ್ಟಾ ಸೋಂಕಿತನ ಆರೋಗ್ಯ ಸ್ಥಿತಿಗತಿಗಳ ಬಗ್ಗೆ ಕೆಲವು ಸುಳ್ಳು ಸುದ್ದಿ ಹರಡಿ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದಾನೆ ಎಂಬ ವದಂತಿ ಹಬ್ಬಿತ್ತು. ಜಿಲ್ಲಾಧಿಕಾರಿ ಡಾ.ಹರೀಶಕುಮಾರ ಸುದ್ದಿಗೋಷ್ಠಿ ಕರೆದು ಸ್ಪಷ್ಟನೆ ನೀಡುವ ಮೂಲಕ ವದಂತಿಗಳಿಗೆ ತೆರೆಯೆಳೆದಿದ್ದರು. ಮಂಗಳವಾರ ಮತ್ತೊಂದು ಸುಳ್ಳು ಸುದ್ದಿ ಹರಡಿ ಅದೇ ಸೋಂಕಿತನಿಗೆ ಚಿಕಿತ್ಸೆ ನೀಡಿದ್ದ ವೈದ್ಯ ಅಥವಾ ನರ್ಸ ಓರ್ವಳಿಗೆ ಸೋಂಕು ತಗುಲಿದೆಯಂತೆ ಎಂಬ ಗಾಳಿ ಸುದ್ದಿ ಹರಡಿತ್ತು?. ಆದರೆ ಆರೋಗ್ಯ ಇಲಾಖೆ ಹೊರಡಿಸಿದ ಹೆಲ್ತ್ ಬುಲೆಟಿನ್‍ನಲ್ಲಿ ಈ ಕುರಿತು ಯಾವುದೇ ಮಾಹಿತಿ ಇರದೇ ವೈದ್ಯ ಅಥವಾ ನರ್ಸಗೆ ಸೋಂಕು ತಗುಲಿರಬಹುದು ಎಂಬ ಸಂಶಯದ ಮಾತುಗಳು ಸುಳ್ಳು ಎಂದು ಧೃಡಿಕರಿಸಿದಂತಾಗಿದೆ.
ಗಂಟಲು ದ್ರವ ಪರೀಕ್ಷೆ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಲಿದ್ದು, ಸೋಂಕಿನ ಪ್ರಮಾಣವೂ ಏರುಗತಿಯಲ್ಲಿ ಸಾಗುವುದನ್ನು ಅಲ್ಲಗಳೆಯುವಂತಿಲ್ಲ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ.