ಅಂಕೋಲಾ:ತಾಲೂಕಿನ ಅಗಸೂರು ಗ್ರಾಪಂ ವ್ಯಾಪ್ತಿಯ ಅಡ್ಲೂರಿನ ಬಳಿ, ಗಸ್ತು ನಡೆಸುತ್ತಿದ್ದ ಅರಣ್ಯ ಇಲಾಖೆಯ ಅಧಿಕಾರಿಗಳು, ಅನಧಿಕೃತವಾಗಿ ಸಾಗವಾನಿ ಮರಗಳನ್ನು ಕಡಿದು ಸಾಗಿಸುತ್ತಿದ್ದ ವಾಹನ ಜಪ್ತು ಪಡಿಸಿಕೊಂಡಿದ್ದು, ಸ್ಥಳದಿಂದ ಓಡಿ ಪರಾರಿಯಾದ ಈರ್ವರು ಆರೋಪಿತರ ಪತ್ತೆಗೆ ಬಲೆ ಬೀಸಿದ್ದಾರೆ.
ನಸುಕಿನಜಾವ ರಾಷ್ಟ್ರೀಯ ಹೆದ್ದಾರಿ 63 ರ ಅಡ್ಲೂರ ಬಳಿ ಇಲಾಖೆಯವರು ಗಸ್ತು ನಡೆಸುತ್ತಿದ್ದರು. ಈ ವೇಳೆ . ಅಕ್ರಮ ಸಾಗವಾನಿ ನಾಟಾಗಳ ಸಾಗಾಟ ಯತ್ನ ಗಮನಕ್ಕೆ ಬಂದ ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನೊಳಗೊಂಡ ತಂಡ ದಾಳಿ ನಡೆಸಿದ್ದರು. ಟಾಟಾ 207 ಮೇಲೆ ಅಕ್ರಮವಾಗಿ ಸಾಗಿಸುತ್ತಿದ್ದ ಲಕ್ಷಾಂತರ ಬೆಲೆ ಬಾಳುವ ಸಾಗವಾನಿ ಮರದ ತುಂಡುಗಳನ್ನು , ವಾಹನ ಸಮೇತ ವಶಕ್ಕೆ ಪಡೆದ ಇಲಾಖೆಯವರು ಕಾನೂನು ಕ್ರಮ ಕೈಗೊಂಡಿದ್ದಾರೆ.
ಅಗಸೂರು ಮೂಲದ ಮಣಿಕಂಠ ಮಂಜುನಾಥ ನಾಯಕ ಹಾಗೂ ಅಡ್ಲೂರಿನ ಮಹೇಶ್ ಅನಂತ್ ಗೌಡ ಎನ್ನುವವರೇ ದಾಳಿಯ ಕಾಲಕ್ಕೆ, ಓಡಿ ಪರಾರಿಯಾದರು ಎನ್ನಲಾಗಿದ್ದು, ಗುನ್ನಾ ಪ್ರಕರಣ ದಾಖಲಿಸಿಕೊಂಡ ಅರಣ್ಯ ಇಲಾಖೆಯವರು ಕಾನೂನು ಕ್ರಮ ಮುಂದುವರೆಸಿದ್ದಾರೆ.
ಕಾರವಾರ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ ಕೆ.ಸಿ ಹಾಗೂ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಂಜುನಾಥ ನಾವಿಯವರ ಮಾರ್ಗದರ್ಶನದಲ್ಲಿ ಮಾಸ್ತಿಕಟ್ಟ ವಲಯ ನೂತನ ಅರಣ್ಯಾಧಿಕಾರಿ ವಿ.ಪಿ ನಾಯ್ಕ ನೇತೃತ್ವದಲ್ಲಿ ಕಾರ್ಯಚರಣೆ ನಡೆಸಲಾಗಿತ್ತು. ಉಪ ವಲಯ ಅರಣ್ಯಾಧಿಕಾರಿ ಮಲ್ಲಿಕಾರ್ಜುನ ಅಂಗಡಿ ಮತ್ತು ಸಿಬ್ಬಂದಿಗಳಾದ ಅಬಲೆಪ್ಪ ದರೆನ್ನವರ್ ಹಾಗೂ ವೆಂಕಟೇಶ್ ಮತ್ತಿತರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಅಗಸೂರಿನ ಆರೋಪಿ ಮೇಲೆ ಈ ಹಿಂದೆಯೂ ಇಂತಹದೇ ಪ್ರಕರಣ ಇತ್ತು ಎನ್ನಲಾಗಿದ್ದು, ಇಲಾಖೆ ಇಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಿದೆಯೇ ಎನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿಬಂದಂತಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ
ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.