Important
Trending

ರಸ್ತೆ ಮದ್ಯದ ಡಿವೈಡರ್ ಗೆ ನುಗ್ಗಿದ ಲಾರಿ: ನಿದ್ದೆ ಮಂಪರಿನಲ್ಲಿ ಅಚಾತುರ್ಯ?

ಅಂಕೋಲಾ: ಚಲಿಸುತ್ತಿದ್ದ ಲಾರಿಯೊಂದು, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮಧ್ಯದ ಡಿವೈಡರಗೆ ಡಿಕ್ಕಿ ಪಡಿಸಿಕೊಂಡು ಹಿಂದೆ – ಮುಂದೆ ಚಲಿಸಲಾದೇ ಸಿಲುಕಿಕೊಂಡ ಘಟನೆ ಪಟ್ಟಣದ ಪ್ರಭು ಕಾಂಪ್ಲೆಕ್ಸ್ (ಈ ಹಿಂದೆ ವಿಜಯಾ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದ್ದ ಕಟ್ಟಡ ) ಎದುರಿನ ಮುಖ್ಯ ರಸ್ತೆಯಲ್ಲಿ ನಡೆದಿದೆ.  ದೊಡ್ಡ ಗಾತ್ರದ ಲಾರಿಯೊಂದು ಜಿ. ಸಿ. ಕಾಲೇಜ್ ಹತ್ತಿರದ ಬೈಪಾಸ್ ರಸ್ತೆ ಮಾರ್ಗವಾಗಿ  ಅಂಕೋಲಾ ಪಟ್ಟಣದತ್ತ ಬರುತ್ತಿರುವಾಗ, ಬಸ್ ನಿಲ್ದಾಣದ ಹತ್ತಿರ ಈ  ರಸ್ತೆ ಅವಘಡ ಸಂಭವಿಸಿದೆ.

ನಿದ್ದೆ ಮಂಪರಿನಲ್ಲಿದ್ದ ಚಾಲಕನ ಅಚಾತುರ್ಯತೆಯಿಂದ ಲಾರಿಯ ಮೂತಿ ಡಿವೈಡರ್ ಗೆ ಮುತ್ತಿಕ್ಕಿತೇ ಎಂಬ ಮಾತು ಸ್ಥಳೀಯರಿಂದ ಕೇಳಿ ಬಂದಿದೆ. ಈ ಲಾರಿಯಲ್ಲಿ ರೇತಿ ಸಾಗಿಸಲಾಗುತ್ತಿತ್ತು (ಇಂಟರ್ಲಾಕ್ ಅಳವಡಿಸುವಾಗ ಬಳಸುವ ಪುಡಿ ಮಾದರಿ ) ಎನ್ನಲಾಗಿದ್ದು, ಅದನ್ನು ಎಲ್ಲಿಂದ ಎಲ್ಲಿಗೆ ಮತ್ತು ಯಾವ ಉದ್ದೇಶಕ್ಕೆ ಸಾಗಿಸಲಾಗುತ್ತಿತ್ತು ಎಂಬಿತ್ಯಾದಿ ನಿಖರ ಮಾಹಿತಿ ತಿಳಿದು ಬರಬೇಕಿದೆ. ಅಪಘಾತದ ರಭಸಕ್ಕೆ 8-10 ಮೀಟರ್ ವರೆಗೆ ಡಿವೈಡರ್ ಮೇಲ್ಪದರ ಕಿತ್ತು ಹೋಗಿದ್ದು, ಪುರಸಭೆಗೆ ಒಳಪಡುವ ಈ ರಸ್ತೆಯ ಡಿವೈಡರ್ ಗೆ ಇನ್ನಿತರೇ ರೀತಿಯಲ್ಲಿ ಆಗಿರಬಹುದಾದ ಹಾನಿ ಅಂದಾಜು ಮತ್ತು ಇಲಾಖೆಯ ಕ್ರಮಗಳ ಕುರಿತು ತಿಳಿದು ಬರಬೇಕಿದೆ.

ಡಿವೈಡರ್ ಗೆ ಡಿಕ್ಕಿ ಪಡಿಸಿಕೊಂಡ ಲಾರಿಯ ಬಂಪರ್ ಕಿತ್ತು ಹೋಗಿದ್ದು,ಮುಂಭಾಗದ ಟೈಯರ್ ಗಳು ಕಿತ್ತು, ಪಕ್ಕಕ್ಕೆ ಸರಿದಿವೆ. ಡಿಸೈಲ್ ಟಾಕಿಯೂ ಜಖಂಗೊಂಡು ಸೋರಿಕೆಗೊಂಡಂತಿದೆ. ಕ್ರೇನ್ ಬಳಸಿ ಗಾಡಿಯನ್ನು ಪಕ್ಕಕ್ಕೆ ಸರಿಸುವ ಯತ್ನವೂ ಕೈಗೂಡಿಲ್ಲ ಎನ್ನಲಾಗಿದ್ದು, ಲಾರಿಯ ಮುಂಭಾಗ ಹಾಗೂ ಕೆಳಭಾಗ ಬಹುತೇಕ ನಜ್ಜುಗುಜ್ಜಾಗಿದೆ.

ಬೆಳ್ಳಂ ಬೆಳಿಗ್ಗೆ  ಪಟ್ಟಣದಲ್ಲಿ ನಡೆದ ಈ ರಸ್ತೆ ಅವಘಡವನ್ನು ಕೆಲವರು ಕುತೂಹಲದಿಂದ ನೋಡಿದರೆ, ಇನ್ನು ಕೆಲವರ ಪ್ರಕಾರ ವಿದ್ಯಾರ್ಥಿಗಳು ಮತ್ತಿತರರು ಸಂಚರಿಸುವ ಮುಖ್ಯ ರಸ್ತೆಯಲ್ಲಿ  ನಸುಕಿನ ಜಾವ ನಡೆದ ಈ ರಸ್ತೆ ಅವಘಡದ ವೇಳೆ ಜನಸಂಚಾರ ವಿರದುದರಿಂದ, ಅದೃಷ್ಟವಶಾತ ಯಾವುದೇ ಗಾಯ- ನೋವು, ಪ್ರಾಣ ಹಾನಿಯಾಗದೇ ಇರುವುದಕ್ಕೆ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. 

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

ವಿಶೇಷ ಸೂಚನೆ: ಉತ್ತರಕನ್ನಡದ ಪ್ರಮುಖ ಸುದ್ದಿ, ವಿಶೇಷ ವರದಿ, ಸಭೆ-ಸಮಾರಂಭ ಉದ್ಯೋಗದ ಮಾಹಿತಿಯನ್ನು ನಿರಂತರವಾಗಿ ಪಡೆಯಿರಿ. ವಿಸ್ಮಯ ಟಿ.ವಿಯ 8762287698 ಈ ನಂಬರ್ ಸೇವ್ ಮಾಡಿಕೊಂಡು, ನಮ್ಮ ವಾಟ್ಸಪ್ ನಂಬರ್‌ಗೆ ಹಾಯ್ ಅಂತ ಮೆಸೇಜ್ ಮಾಡಿ ವಿಸ್ಮಯ ಟಿ.ವಿ ನ್ಯೂಸ್ ಗ್ರೂಫ್ ಮೂಲಕ ಕ್ಷಣ ಕ್ಷಣದ ಸುದ್ದಿಗಳನ್ನು, ಮೊಬೈಲ್ ನಲ್ಲಿ ನೀವಿರುವ ಸ್ಥಳದಲ್ಲೇ ನಿರಂತರವಾಗಿ ಪಡೆಯಿರಿ. ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ., ಹಾಯ್ ಅಂತ ಮೆಸೇಜ್ ಮಾಡಿ.

Back to top button