ಕುಮಟಾ: ಮಕ್ಕಳಿಗೆ ಸಮಗ್ರ ಜೀವನ ಶಿಕ್ಷಣ ಕಲೆಯನ್ನು ಬೋಧಿಸುವ ಕಾರ್ಯ ಇಂತಹ ಸಂಸ್ಕಾರ ಶಿಬಿರದಿಂದ ಸಾಧ್ಯ. ಶಿಬಿರದ ಪಠ್ಯ ದೇಶದ ನೂತನ ಶಿಕ್ಷಣ ಪದ್ಧತಿಗೆ ಪೂರಕವಾಗಿದೆ.
ಕೋವಿಡ್‍ನಂತಹ ಮಹಾಮಾರಿಯ ಸಂದರ್ಭದಲ್ಲೂ ವಿವಿಧ ಮಾಧ್ಯಮಗಳ ಮೂಲಕ ಸಮಾಜದಲ್ಲಿ ಸಂಸ್ಕಾರ ಮೂಡಿಸುವ ಕೆಲಸವನ್ನು ಕಲಾಶ್ರೀ ಸಂಸ್ಥೆ ಮಾಡಿದೆ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ಪ್ರಾಧ್ಯಾಪಕ ಹಾಗೂ ಕರ್ನಾಟಕ ರಾಜ್ಯ ಯೋಜನಾ ನೀತಿ ಮತ್ತು ಆಯೋಗದ ಸದಸ್ಯ ಡಾ ಆರ್ ಆರ್ ಬಿರಾದಾರ ಅಭಿಪ್ರಾಯಪಟ್ಟರು.
ಅವರು ಕತಗಾಲದ ಕಲಾಶ್ರೀ ಸಾಂಸ್ಕøತಿಕ ವೇದಿಕೆ ಸತ್ಸಂಗ ಭವನದಲ್ಲಿ ಹಮ್ಮಿಕೊಂಡ ರಾಜ್ಯ ಮಟ್ಟದ ವಸತಿ ಸಹಿತ 12 ನೇ ಸಂಸ್ಕಾರ ಶಿಬಿರವನ್ನು ಉದ್ಘಾಟಿಸಿ ಮಾತನಾಡುತ್ತ ಇಂತಹ ಶಿಬಿರ ಸಂಯೋಜನೆ ಅಸಾಧಾರಣವಾಗಿದೆ. ಅದನ್ನು ಕಾರ್ಯರೂಪಕ್ಕೆ ತಂದು ಯಶಸ್ಸನ್ನು ಕಂಡುಕೊಂಡ ಡಾ ಗಣಪತಿ ಭಟ್ಟರ ನಿಸ್ವಾರ್ಥ ಸೇವೆ ಸಮಾಜಕ್ಕೆ ಹಿತಕಾರಿಯಾಗಿದೆ ಎಂದರು.
ಮುಖ್ಯ ಅತಿಥಿ ಹಾಗು ಕೃಷಿ ಸಾಧಕ ವಿವೇಕ ಜಾಲಿಸತ್ಗಿ ಮಾತನಾಡಿ 15 ವರ್ಷಗಳಿಂದ ರಾಷ್ಟ್ರ ಮಟ್ಟದಲ್ಲಿ ಗುರುತಿಕೊಳ್ಳುವಂತಹ ಕೆಲಸ ಮಾಡುತ್ತಿರುವ ಕಲಾಶ್ರೀ ವೇದಿಕೆಯ ಆರಂಭದ ಅಧ್ಯಕ್ಷನಾಗಿ ಯಥಾಶಕ್ತಿ ಸೇವೆ ಸಲ್ಲಸುವ ಭಾಗ್ಯ ನನ್ನದಾಗಿತ್ತು. ರಾಜ್ಯದ ವಿವಿಧ ಪ್ರದೇಶಗಳಿಂದ ಬಂದ ಶಿಬಿರಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ಹೆಚ್ಚಿಸಿಕೊಳ್ಳಲೆಂದು ಆಶಿಸಿದರು.
ಅತಿಥಿ, ಸಂಗೀತ ಸಾಧಕಿ ಆರ್ ರಮ್ಯಾ ಬೆಂಗಳೂರು ಮಾತನಾಡಿ ವಿದ್ಯುನ್ಮಾನ ಮಾಧ್ಯಮದ ಮೂಲಕ ಕೇವಲ ಒಂದು ವಾರದ ಹಿಂದೆ ಸಂಸ್ಕಾರ ಶಿಬಿರದ ವಿಷಯ ತಿಳಿದು ಆಶ್ಚರ್ಯವಾಯಿತು. ವೇದಕಾಲದಿಂದ ಬಂದ ಸತ್ಸಂಪ್ರದಾಯಗಳ ಪುನರವಲೋಕನ ಮತ್ತು ಗ್ರಾಮೀಣ ಪ್ರದೇಶದ ಪ್ರಕೃತಿ ಸೌಂದರ್ಯದ ಪರಿಸರದಲ್ಲಿ ಶೈಕ್ಷಣ ಕ-ಸಾಂಸ್ಕøತಿಕ-ಆಧ್ಯಾತ್ಮಿಕ ವಿಷಯಗಳನ್ನೊಳಗೊಂಡ ಶಿಬಿರದ ಪರಿಕಲ್ಪನೆ ಅದ್ಭುತವಾಗಿದೆ. ಸ್ತೋತ್ರ, ಭಗವದ್ಗೀತೆ, ಪದ್ಯಗಳನ್ನು ಶಾಸ್ತ್ರೀಯ ಸಂಗೀತಕ್ಕೆ ಅಳವಡಿಸಿ, ಶಿಬಿರಾರ್ಥಿಗಳಿಗೆ ಬೇಸರ ಬಾರದಂತೆ ಸುಸಜ್ಜಿತವಾಗಿ ಬೋಧನೆ ಮಾಡುತ್ತಿರುವುದು ವಿಶೇಷವಾಗಿದೆ ಎಂದರು.
ಇನ್ನೋರ್ವ ಅತಿಥಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರೀಕ್ಷಕ ದಿನೇಶ ಮಾತನಾಡಿ, ಈಜು ಕಲೆಯನ್ನು ಈ ಶಿಬಿರದಲ್ಲಿ ಯೋಜಿಸಿರುವುದು ಮಕ್ಕಳಿಗಾಗುವ ಮಹಾಲಾಭವಾಗಿದೆ. ಮಂಜುನಾಥ ಸ್ವಾಮಿಯ ಆಶೀರ್ವಾದ ಸಂಸ್ಕಾರ ಶಿಬಿರದ ಸಂಪೂರ್ಣ ಪ್ರಯೋಜನ ಮಕ್ಕಳಿಗೆ ಸಿಗಲೆಂದು ಹಾರೈಸಿದರು.
ಅಳಕೋಡ ಗ್ರಾಮಪಂಚಾಯತ ಸದಸ್ಯೆ ನಳಿನಿ ಮಹೇಂದ್ರ ನಾಯ್ಕ ಮತ್ತು ಯೋಗ ಸಾಧಕ ಹುಬ್ಬಳಿಯ ಎನ್ ಎಸ್ ಹೆಬ್ಳೀಕರ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಲಾಶ್ರೀ ವೇದಿಕೆಯ ಕಾರ್ಯದರ್ಶಿ ಹಾಗು ಶಿಬಿರ ಸಂಯೋಜಕ ಡಾ ಕೆ ಗಣಪತಿ ಭಟ್ಟ ಅತಿಥಿಗಳನ್ನು ಸ್ವಾಗಿತಿಸಿ ಪರಿಚಯಿಸಿದರು. ಸುವರ್ಣಾ ಭಟ್ಟ ನಿರೂಪಿಸಿದರು. ಶಿಬಿರಾರ್ಥಿ ಲೇಖಾ ಆರ್ ಧನ್ಯವಾದ ಸಮರ್ಪಿಸಿದರು. ರುಕ್ಮಿಣ ದೀಕ್ಷಿತ, ವೈಶಾಲಿ ಕಾಮತ, ಶೈಲಾ ಬಿರಾದಾರ, ರವೀಂದ್ರ ಹಾಳಿಜೋಳ, ಪ್ರಕಾಶ ಹೆಗಡೆ, ಸುವರ್ಣಾ ದೇಸಾಯಿ, ಸುಮಂಗಲಾ ಭಟ್ಟ, ಶೋಭಾ ಶುಕ್ಲಾ, ಡಾ ಸ್ನೇಹಲತಾ ಚುಳಕೀಮಠ, ವಿಜಯೀಂದ್ರ ಜಹಾಗೀರದಾರ, ಶ್ರೀನಿವಾಸ ಮಾಳವದೆ, ನಾಗಾನಂದ ಭಟ್ಟ ಮುಂತಾದವರು ಉಪಸ್ಥಿತರಿದ್ದರು.
ವಿಸ್ಮಯ ನ್ಯೂಸ್ ಕುಮಟಾ