ಅಂಕೋಲಾ: ರಾತ್ರಿ ವೇಳೆ ವಾಲಿಬಾಲ್ ಪಂದ್ಯಾವಳಿ ನಡೆಯುತ್ತಿದ್ದ ಮೈದಾನದ ಹತ್ತಿರ ಇಸ್ಪೀಟ್ ಜುಗಾರಾಟಕ್ಕೆ ಅವಕಾಶ ನೀಡಲಿಲ್ಲ ಎಂಬ ಕಾರಣಕ್ಕೆ ವ್ಯಕ್ತಿಯೋರ್ವ ಕರ್ತವ್ಯ ನಿರತ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಜಾತಿ ನಿಂದನೆ ಮಾಡಿರುವ ಘಟನೆ ಅಂಕೋಲಾ ತಾಲೂಕು ಪ್ರದೇಶದಿಂದ ಸುಮಾರು 50 ಕಿ.ಮೀ ಗೂ ದೂರವಿರುವ ವೈದ್ಯ ಹೆಗ್ಗಾರದಲ್ಲಿ ನಡೆದಿದೆ.
ಡೋಂಗ್ರಿ ಗ್ರಾ.ಪಂ ವ್ಯಾಪ್ತಿಯ ಕೋನಾಳ ನಿವಾಸಿ ನಾಗೇಶ ಬೀರಪ್ಪಾ ಪಟಗಾರ(44) ಎಂಬಾತನೇ ಪೋಲೀಸ್ ಸಿಬ್ಬಂದಿ ಮೇಲೆ ಹಲ್ಲೆಗೈದ ಆರೋಪಿ ಎನ್ನಲಾಗಿದೆ. ಸೋಮವಾರ ರಾತ್ರಿ ಸುಂಕಸಾಳ ಹೊರ ಠಾಣೆ ವ್ಯಾಪ್ತಿಯ ವೈದ್ಯ ಹೆಗ್ಗಾರದಲ್ಲಿ ಹಲವು ಗಣ್ಯರ ಉಪಸ್ಥಿತಿಯಲ್ಲಿ ಏರ್ಪಡಿಸಲಾಗಿದ್ದ ವಾಲಿಬಾಲ್ ಪಂದ್ಯಾವಳಿ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಪಂದ್ಯಾವಳಿಯ ಬಂದೋಬಸ್ತಿಗೆ ನಿಯೋಜನೆಗೊಂಡಿದ್ದ ಪೊಲೀಸ್ ಸಿಬ್ಬಂದಿಗಳಾದ ಸುಬ್ರಾಯ ಭಟ್ಟ ಮತ್ತು ಶೇಖರ ಸಿಧ್ಧಿ ಅವರು ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಆರೋಪಿತ ನಾಗೇಶ ಪಟಗಾರ ಇಸ್ಪೀಟ್ ಆಟಕ್ಕೆ ಅನುಮತಿ ನೀಡುವಂತೆ ಕೇಳಿದ್ದು, ಅದನ್ನು ನಿರಾಕರಿಸಿದ ಸಿಬ್ಬಂದಿ ಸುಬ್ರಾಯ ಭಟ್ಟ ಅವರಿಗೆ ಆರೋಪಿ ಏಕವಚನದಲ್ಲಿ ಮಾತನಾಡಿ ಮೈಮೇಲೆ ಏರಿ ಬಂದಾಗ ಅದನ್ನು ತಡೆಯಲು ಇನ್ನೋರ್ವ ಪೊಲೀಸ್ ಸಿಬ್ಬಂದಿ ಶೇಖರ ಸಿಧ್ಧಿ ಮುಂದಾಗಿ, ಮರ್ಯಾದೆ ಕೊಟ್ಟು ಮಾತನಾಡುವಂತೆ ಹೇಳಿದಾಗ, ಆರೋಪಿತ ನಾಗೇಶ ಈತನು, ನಿಮಗೆ ಏನು ಮರ್ಯಾದೆ ಕೊಡುವುದು ಎಂದು ಹೇಳಿ, ಅವಾಚ್ಯ ಶಬ್ದಗಳಿಂದ ಬೈದು ದೈಹಿಕ ಹಲ್ಲೆ ನಡೆಸಿದ್ದು, ಸಿದ್ಧಿ ಬುದ್ದಿ ಬಾರಾ ಬುದ್ಧಿ ಎಂದು ಪರಿಶಿಷ್ಟ ಪಂಗಡದ ಸಿದ್ಧಿ ಜನಾಂಗದ ನಿಂದನೆ ಮಾಡಿದ್ದಾನೆ.
ವಾಲಿಬಾಲ್ ಪಂದ್ಯಾವಳಿ ಕಮೀಟಿಯವರು ಬಂದು ತಪ್ಪಿಸಿದರೂ ಪೊಲೀಸ್ ಸಿಬ್ಬಂದಿಗಳಿಗೆ ಮತ್ತು ಪೊಲೀಸ್ ಇಲಾಖೆಗೆ ಅವಾಚ್ಯ ಶಬ್ದಗಳಿಂದ ಬಯ್ದು ಅಲ್ಲಿಂದ ತೆರಳಿದ್ದಾನೆ ಎಂದು ಪೊಲೀಸ್ ಸಿಬ್ಬಂದಿ ಶೇಖರ ಸಿಧ್ಧಿ ಆರೋಪಿತನ ಮೇಲೆ ದೂರು ದಾಖಲಿಸಿದ್ದಾರೆ. ಆರೋಪಿ ನಾಗೇಶ ಪಟಗಾರ ಅವರ ಮೇಲೆ (ಹಲ್ಲೆ, ಜಾತಿ ನಿಂದನೆ, ಕರ್ತವ್ಯಕ್ಕೆ ಅಡ್ಡಿ….. ) ಪ್ರಕರಣ ದಾಖಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ