Follow Us On

WhatsApp Group
Important
Trending

ನಕಲಿ ನೋಟು ಪ್ರಕರಣ : 4 ಆರೋಪಿಗಳು ವಶಕ್ಕೆ: ತಲೆ ಮರೆಸಿಕೊಂಡ ಪ್ರಮುಖ ಆರೋಪಿ ?

ಅಂಕೋಲಾ: ನಕಲಿ ನೋಟುಗಳ ಚಲಾವಣಾ ಜಾಲವನ್ನು ಭೇದಿಸಿರುವ ಅಂಕೋಲಾ ಪೊಲೀಸರು ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ಸಿ.ಡಿ.ಆರ್ ವಿಭಾಗದ ತಂಡದವರು ಸೇರಿ ಅಸಲಿ ನೋಟಿಗೆ ಖೋಟಾ ನೋಟು ಬದಲಾವಣೆ ಮಾಡಿಕೊಡುತ್ತಿರುವ ಸಂದರ್ಭದಲ್ಲಿ ದಾಳಿ ನಡೆಸಿ ನಾಲ್ಕು ಜನ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಾರವಾರ ಕೋಡಿಭಾಗದ ನಿವಾಸಿ ಹೊಟೇಲ್ ಕಾರ್ಮಿಕ ಪ್ರವೀಣ ರಾಜನ್ ನಾಯರ್ (46) ಗೋವಾ ಮಡಗಾವ ನಿವಾಸಿ ಲೋಯ್ಡ ಲಾರೆನ್ಸ್ ಸ್ಟೀವಿಸ್ (29) ಗೋವಾ ಪತ್ರೋಡಾ ನಿವಾಸಿ ಲಾರ್ಸನ್ ಲೂಯಿಸ್ ಸಿಲ್ವ (26) ಗೋವಾ ಮಡಗಾವ ನಿವಾಸಿ ಪ್ರನೋಯ ಫರ್ನಾಂಡಿಸ್ ಬಂಧಿತ ಆರೋಪಿಯಾಗಿದ್ದು ಅವರಿಂದ 500 ರೂಪಾಯಿ ಮುಖ ಬೆಲೆಯ 26 ಖೋಟಾ ನೋಟುಗಳು ಮತ್ತು 500 ರೂಪಾಯಿ ಮುಖ ಬೆಲೆಯ 40 ಅಸಲಿ ನೋಟುಗಳು ಕೃತ್ಯಕ್ಕೆ ಬಳಸಿದ ಒಂದು ಸ್ಕೂಟಿ ಮತ್ತು ಕಾರು ವಶಕ್ಕೆ ಪಡೆದುಕೊಳ್ಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿ ಕಾರವಾರದ ಕೋಡಿಭಾಗದ ನಿವಾಸಿ ಚಾಲಕ ವೃತ್ತಿಯ ಮುಸ್ತಾಕ ಹಸನ್ ಬೇಗ್ (43) ತಪ್ಪಿಸಿಕೊಂಡು ತಲೆ ಮರೆಸಿಕೊಂಡಿದ್ದು ಆತನ ಶೋಧ ಕಾರ್ಯ ಮುಂದುವರಿದಿದೆ. ಈತನು ಈ ಹಿಂದೆ ಅಬಕಾರಿ ಪ್ರಕರಣವೊಂದರಲ್ಲಿಯೂ ಆರೋಪಿಯಾಗಿದ್ದ,
ಇತ್ತೀಚಿನ ದಿನಗಳಲ್ಲಿ ಜಿಲ್ಲೆಯಲ್ಲಿ ನಕಲಿ ನೋಟುಗಳ ಚಲಾವಣೆ ಹೆಚ್ಚುತ್ತಿರುವ ಮಾಹಿತಿ ಆಧಾರದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠೆ ಡಾ ಸುಮನ್ ಪನ್ನೇಕರ್ ಅವರು ವಿಶೇಷ ತಂಡ ರಚಿಸಿದ್ದು, ಗುರುವಾರ ರಾತ್ರಿ ಆರೋಪಿಗಳು ಕಾರವಾರದ ಭದ್ರಾ ಹೊಟೇಲ್ ಎದುರು ನೋಟುಗಳ ವಿನಿಮಯ ಮಾಡಿಕೊಳ್ಳುತ್ತಿರುವ ಸಂದರ್ಭದಲ್ಲಿ
ಅಂಕೋಲಾ ಪೊಲೀಸರ ತಂಡ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠೆಡಾ ಸುಮನ್ ಪನ್ನೇಕರ್ ಅವರ ನಿರ್ದೇಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ್, ಡಿ.ವೈ.ಎಸ್. ಪಿ ವೆಲೆಂಟನ್ ಡಿಸೋಜ ಮಾರ್ಗದರ್ಶನದಲ್ಲಿ ಅಂಕೋಲಾ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ, ಪಿ.ಎಸ್. ಐ ಪ್ರೇಮನಗೌಡ ಪಾಟೀಲ್, ಸಿಬ್ಬಂದಿಗಳಾದ ಭಗವಾನ ಗಾಂವಕರ, ಮಂಜುನಾಥ ಲಕ್ಮಾಪುರ, ಸಂತೋಷಕುಮಾರ, ಪ್ರೇಮಾನಂದ ನಾಯ್ಕ, ಕೆ.ಶ್ರೀಕಾಂತ, ಆಸೀಫ್. ಆರ್ ಮೊದಲಾದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ನಕಲಿ ನೋಟುಗಳ ಜಾಲ ಪತ್ತೆ ಹಚ್ಚಿದ ಅಂಕೋಲಾ ಪೊಲೀಸರು ಮತ್ತು ಜಿಲ್ಲಾ ಪೊಲೀಸ್ ಕಚೇರಿಯ ಸಿ.ಡಿ.ಆರ್ ತಂಡದ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಠೆ ಡಾ ಸುಮನ್ ಪನ್ನೇಕರ್ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಈ ನಕಲಿ ನೋಟು ಜಾಲದ ಹಿಂದೆ ಮತ್ತಷ್ಟು ಕಾಣದ ಕೈಗಳಿರುವ ಸಾಧ್ಯತೆಯಿದ್ದು,ತಾಲೂಕಿನ ಓರ್ವ ವ್ಯಕ್ತಿಯೂ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದ್ದು,ಪೊಲೀಸ್ ತನಿಖೆಯಿಂದ ಈ ಕುರಿತು ಇನ್ನಷ್ಟು ಮಾಹಿತಿ ತಿಳಿದುಬರಬೇಕಿದೆ.

ಕಳ್ಳನೋಟು ಚಲಾವಣೆ ಪ್ರಕರಣದ ಸುದ್ದಿ ಕೇಳಿ ಬರುತ್ತಿದ್ದಂತೆ , ಅದರ ಆತಂಕದಿಂದ ತಾಲೂಕಿನ ಕೆಲವೆಡೆ,ಚಿಕ್ಕಪುಟ್ಟ ವ್ಯಾಪಾರಸ್ಥರು ಮತ್ತಿತರರು 500 ರೂ ಮತ್ತಿತರ ಮುಖಬೆಲೆಯ ನೋಟುಗಳನ್ನು ಪಡೆದು ದೈನಂದಿನ ವ್ಯವಹಾರ ನಡೆಸಲು ಹಿಂದೇಟು ಹಾಕುವಂತಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button