ಅಂಕೋಲಾದಲ್ಲೂ ಲಾಕ್ ಡೌನ್:ಇಂದಿನ ಸಭೆಯಲ್ಲಿ ನಡೆದಿದ್ದೇನು?

ಅಂಕೋಲಾ ತಾಲೂಕಿನಲ್ಲಿ ಮತ್ತೆ 55 ಹೊಸ ಗಂಟಲು ದ್ರವ ಪರೀಕ್ಷೆಗೆ ರವಾನೆ?
ಪಟ್ಟಣದಲ್ಲಿ ಜುಲೈ 8 ರಿಂದ ಸ್ವಯಂಪ್ರೇರಿತ ಮಧ್ಯಾಹ್ನದ ಲಾಕ್‍ಡೌನಗೆ ಮುಂದಾದ ವ್ಯಾಪಾರಸ್ಥರು?
ಶೇಡಿಕಟ್ಟಾ ಸೋಂಕಿತನಿಗೆ ಚಿಕಿತ್ಸೆ ನೀಡಿದ್ದ ಖಾಸಗಿ ಆಸ್ಪತ್ರೆ ಸಿಬ್ಬಂದಿಗಳ ವರದಿ ನೆಗೆಟಿವ್!

ಅಂಕೋಲಾ : ಜಿಲ್ಲೆಯಲ್ಲಿ ಕೊರೊನಾ ಅಬ್ಬರ ಹೆಚ್ಚುತ್ತಿದ್ದು, ಕುಮಟಾ ಸೇರಿದಂತೆ ಇತರೆ ಕೆಲ ತಾಲೂಕುಗಳಲ್ಲಿ ಮುಂಜಾಗೃತ ಕ್ರಮವಾಗಿ ಲಾಕ್‍ಡೌನ್ ಮಾದರಿಯ ವ್ಯಾಪರ ವಹಿವಾಟು ನಡೆಸಲು ನಿಗದಿತ ಸಮಯ ಗೊತ್ತುಪಡಿಸಲಾಗಿದೆ. ತಹಶೀಲ್ದಾರ ಉದಯ ಕುಂಬಾರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ವರ್ತಕರ ಸಂಘದ ಸಮಾಲೋಚನಾ ಸಭೆಯಲ್ಲಿ, ಪಟ್ಟಣದಲ್ಲಿ ಜನ ಒತ್ತಡ ನಿಯಂತ್ರಿಸಲು ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕುರಿತು ಚರ್ಚಿಸಲಾಯಿತು. ಪುರಸಭೆ ಮುಖ್ಯಾಧಿಕಾರಿ ಬಿ.ಪ್ರಹ್ಲಾದ, ಸಿ.ಪಿ.ಐ ಕೃಷ್ಣಾನಂದ ನಾಯಕ, ಕೊರೊನಾ ನಿಯಂತ್ರಣಕ್ಕೆ ವ್ಯಾಪಾರಸ್ಥರು ಮತ್ತು ಸಾರ್ವಜನಿಕರ ಸಹಕಾರದ ಅಗತ್ಯತೆ ತಿಳಿ ಹೇಳಿದರು.
ಜುಲೈ 8ರಿಂದ ಅಂಕೋಲಾದಲ್ಲಿ ಸ್ವಯಂಪ್ರೇರಿತರಾಗಿ ಹಲವು ವ್ಯಾಪಾರ-ವಹಿವಾಟುಗಳನ್ನು ಬೆಳ್ಳಿಗ್ಗೆ ಆರಂಭಿಸಿ ಮಧ್ಯಾಹ್ನ 2 ಗಂಟೆಯವರೆಗೆ ನಡೆಸುತ್ತೇವೆಂದು ಕೆಲ ವರ್ತಕ ಪ್ರಮುಖರು ಸಭೆಯ ಗಮನಕ್ಕೆ ತಂದರು ಎನ್ನಲಾಗಿದೆ. ಈ ವೇಳೆ ಮೆಡಿಕಲ್ ಶಾಪ್‍ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಹೋಟೆಲ್‍ಗಳು ಮಧ್ಯಾಹ್ನ 3ರ ವರೆಗೆ ಪೂರ್ಣ ಪ್ರಮಾಣದಲ್ಲಿ ತೆರೆದಿರಲಿದ್ದು, ತದ ನಂತರ ರಾತ್ರಿ 8ರ ವರೆಗೆ ಪಾರ್ಸಲ್ ಸೇವೆ ನೀಡಲಿವೆ ಎಂದು ತಿಳಿದು ಬಂದಿದೆ. ತಮ್ಮ ಸ್ವಯಂಪ್ರೇರಿತ ನಿರ್ಧಾರವನ್ನು ವರ್ತಕರ ಸಂಘದ ಅಧ್ಯಕ್ಷ ಪುಂಡಲೀಕ ಪ್ರಭು, ಉಪಾಧ್ಯಕ್ಷ ರಾಜೇಂದ್ರ ಶೆಟ್ಟಿ, ಕಾರ್ಯದರ್ಶಿ ವೆಂಕಟ್ರಮಣ ಶೆಟ್ಟಿ, ಜವಳಿ ಅಸೋಶಿಯೆಸ್‍ನ ಪ್ರಸಾದ ಕಾಂಜನ, ರಾಯ್ಕರ ಮತ್ತಿತ್ತರರು ತಿಳಿಸಿದರು. ಈ ಸಂದರ್ಭದಲ್ಲಿ ಇತರೆ ಕೆಲ ವ್ಯಾಪಾರಸ್ಥರು ಪಾಲ್ಗೊಂಡಿದ್ದರು. ಪ್ರಮುಖರಾದ ಭಾಸ್ಕರ ನಾರ್ವೇಕರ, ಸಿರಸ್ತೆದಾರ ಎನ್.ಬಿ.ಗುನಗಾ ಉಪಸ್ಥತರಿದ್ದರು. ಅಂಕೋಲಾ ಪಟ್ಟಣದ ಎಲ್ಲಾ ಸ್ತರದ ವ್ಯಾಪಾರ ನಡೆಸುವ ವ್ಯವಹಾರಸ್ಥರ ಪರವಾಗಿ ಹಲವು ಪ್ರತಿನಿಧಿಗಳು ಭಾಗವಹಿಸಿಲ್ಲವಾದರೂ, ಅಂಕೋಲಾದ ಜನತೆಯ ಆರೋಗ್ಯ ಸುರಕ್ಷತೆಯಿಂದ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ನಿಗದಿತ ಸಮಯದಲ್ಲಿ ಬಂದ್ ಮಾಡಿ ಸಹಕರಿಸಬೇಕೆನ್ನುವುದು ಪ್ರಜ್ಞಾವಂತರ ಅನಿಸಿಕೆಯಾಗಿದೆ.
ಮಂಗಳವಾರ ಹೊಸದಾಗಿ 55 ಗಂಟಲುದ್ರವ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿದ್ದು ಅವು ಈ ಹಿಂದೆ ಹಳವಳ್ಳಿ, ಮತ್ತಿತ್ತರೆಡೆ ಒಂದೇ ದಿನ ಕಾಣಿಸಿಕೊಂಡ ಐವರು ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿದ್ದವರದ್ದು ಎನ್ನಲಾಗಿದೆ. ಒಟ್ಟಾರೆಯಾಗಿ ಈವರೆಗೆ ತಾಲೂಕಿನಲ್ಲಿ 844 ಗಂಟಲುದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದಂತಾಗಿದ್ದು, ಇಂದು ಬಂದ ಎಲ್ಲಾ 60 ವರದಿಗಳು ನೆಗೆಟಿವ್ ಬಂದಿವೆ. ನೆಗೆಟಿವ್ ಬಂದ ವರದಿಗಳಲ್ಲಿ ಕೆಲವು ಈ ಹಿಂದೆ ಅಗ್ರಗೋಣ-ಶೇಡಿಕಟ್ಟಾ ವ್ಯಾಪ್ತಿಯ ಪ್ರಥಮ ಸೋಂಕಿತನಿಗೆ ಚಿಕಿತ್ಸೆ ನೀಡಿದ ಪಟ್ಟಣದ ಖಾಸಗಿ ಆಸ್ಪತ್ರೆಯ ಸಿಬ್ಬಂದಿಗಳದ್ದು ಎನ್ನಲಾಗಿದ್ದು, ಕೊಂಚ ನಿರಾಳತೆ ಮೂಡಿದಂತಾಗಿದೆ. ಈ ಮೂಲಕ ಈವರೆಗೆ ಒಟ್ಟೂ ಅವುಗಳಲ್ಲಿ 730 ಪರೀಕ್ಷಾ ವರದಿಗಳು ನೆಗೆಟಿವ್ ಬಂದಂತಾಗಿದೆ. 21 ಪೊಸಿಟಿವ್ ಪ್ರಕರಣಗಳು ಪತ್ತೆಯಾಗಿ ಓರ್ವ ಸೋಂಕಿತೆ ಗುಣಮುಖರಾಗುವುದರೊಂದಿಗೆ 20 ಸಕ್ರೀಯ ಪ್ರಕರಣಗಳಿವೆ. ಹಳೆಯ 38 ಪರೀಕ್ಷಾ ವರದಿಗಳು ಬರಬೇಕಿದ್ದು, ಅವುಗಳಲ್ಲಿ ಕೆಲವು ಬೀಟ್ ಪೋಲಿಸನ ಸಂಪರ್ಕದಲ್ಲಿದ್ದವರದ್ದೂ ಇದೆ ಎನ್ನಲಾಗಿದೆ.

ವಿಸ್ಮಯನ್ಯೂಸ್ ವಿಲಾಸ ನಾಯಕ ಅಂಕೋಲಾ.

[sliders_pack id=”1487″]
Exit mobile version