Follow Us On

WhatsApp Group
Important
Trending

ಚುನಾವಣೆ : ಅಂಕೋಲಾ ತಾಲೂಕಿನಲ್ಲಿ ಹೆಚ್ಚಿನ ಮತದಾನ: ಹೊರಟ್ಟಿ ದಾಖಲೆಯ ಗೆಲುವು ಸಾಧಿಸಲಿದ್ದಾರೆ ಎಂದ ಶಾಸಕಿ

ಅಂಕೋಲಾ: ಪಶ್ಚಿಮ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸ್ಥಾನಕ್ಕೆ ಜೂನ್ 13 ರ ಸೋಮವಾರ ನಡೆದ ಚುನಾವಣೆಗೆ ಅಂಕೋಲಾ ತಾಲೂಕಿನಲ್ಲಿ ಶೇಕಡ 91.96 ರಷ್ಟು ಮತದಾನವಾಗಿದೆ.

ತಾಲೂಕಿನ ಒಟ್ಟು 311 ಮತದಾರರಲ್ಲಿ 286 ಮತದಾರರು ತಮ್ಮ ಮತದಾನದ ಹಕ್ಕು ಚಲಾಯಿಸಿದ್ದಾರೆ.ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿರುವ ಬಸವರಾಜ ಹೊರಟ್ಟಿ ಮತ್ತು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ಮಾಡಿರುವ ಬಸವರಾಜ ಗುರಿಕಾರ ಇವರ ನಡುವೆ ನೇರ ಸ್ಪರ್ಧೆ ಇದೆ ಎನ್ನಲಾಗುತ್ತಿರುವ ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ತಹಶೀಲ್ದಾರ ಕಾರ್ಯಾಲಯದಲ್ಲಿ ಮತದಾನ ಕೇಂದ್ರ ತೆರೆದು ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಮೋಡ ಕವಿದ ವಾತಾವರಣದ ನಡುವೆಯೇ ಆಗಾಗ ಸುರಿಯುತ್ತಿರುವ ಮಳೆ ,ಚುನಾವಣೆಯ ಕಾವು ತಗ್ಗಿಸ ಲಿಲ್ಲ. ಈ ನಡುವೆಯೇ ಹೆಚ್ಚಿನ ಶಿಕ್ಷಕರು ಬಂದು ತಮ್ಮ ಮತದಾನದ ಹಕ್ಕುಚಲಾಯಿಸಿದರು.

ಮತಗಟ್ಟೆಯ ಹೊರ ಭಾಗದಲ್ಲಿ ಬಿ.ಜೆ.ಪಿ ಮತ್ತು ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ತಮ್ಮ ಅಭ್ಯರ್ಥಿಗಳ ಪರವಾಗಿ, ಕೊನೆಯ ಹಂತದಲ್ಲಿ ಮತದಾರರ ಮನಸೆಳೆಯುವ ಪ್ರಯತ್ನ ಮಾಡಿದರು. ಕೆಲ ನಾಯಕರು ಮತದಾನದ ಅಂಕಿ ಅಂಶಗಳನ್ನು ಪಡೆದು ಸೋಲು ಗೆಲುವಿನ ಲೆಕ್ಕಚಾರದಲ್ಲಿ ನಿರತರಾದಂತೆ ಕಂಡು ಬಂತು.

ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಅವರು ಅಂಕೋಲಾಕ್ಕೆ ಆಗಮಿಸಿ, ಬಹು ಹೊತ್ತು ಇಲ್ಲಿಯೇ ಉಳಿದು ಪಕ್ಷದ ಮುಖಂಡರೊಂದಿಗೆ ಸಮಾಲೋಚನೆ ನಡೆಸಿ ಮತದಾನದ ಕುರಿತು ಮಾಹಿತಿ ಪಡೆದುಕೊಂಡರು.

ಇದೇ ವೇಳೆ ವಾಹಿನಿಯೊಂದಿಗೆ ಮಾತನಾಡಿದ ಅವರು ಪಶ್ಚಿಮ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಎಲ್ಲಾ ಕಡೆ ಬಿಜೆಪಿ ಪರವಾದ ವಾತಾವರಣ ಕಂಡು ಬರುತ್ತಿದ್ದು ಗೆಲುವು ಖಚಿತವಾಗಿದೆ. ಬಸವರಾಜ ಹೊರಟ್ಟಿಯವರ ದಾಖಲೆಯ ಗೆಲುವಿನ ಅಧಿಕೃತ ಘೋಷಣೆಗೆ ಕಾಯಬೇಕಿದೆ ಎಂದು ಹೇಳಿ, ಕಾರವಾರ ಅಂಕೋಲಾ ಕ್ಷೇತ್ರದಲ್ಲಿ ಪಕ್ಷದ ಸ್ಥಳೀಯ ಮುಖಂಡರು, ಕಾರ್ಯಕರ್ತರು ಚುನಾವಣೆಗಾಗಿ ಸಾಕಷ್ಟು ಶ್ರಮ ಪಟ್ಟು ಕೆಲಸ ಮಾಡಿದ್ದು ಕ್ಷೇತ್ರದಲ್ಲಿ ಅತಿ ಹೆಚ್ಚು ಮತ ಬಸವರಾಜ ಹೊರಟ್ಟಿ ಅವರು ಪಡೆಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿಪಿಐ ಸಂತೋಷ ಶೆಟ್ಟಿ ಮಾರ್ಗದರ್ಶನದಲ್ಲಿ
ಅಂಕೋಲಾ ಪಿ.ಎಸ್. ಐ ಪ್ರವಿಣಕುಮಾರ್, ಮಹಾಂತೇಶ ವಾಲ್ಮೀಕಿ ಮತ್ತು ಸಿಬ್ಬಂದಿಗಳು ಮತದಾನ ಕೇಂದ್ರದ ಸುತ್ತ ಮುತ್ತ ಬಿಗಿ ಬಂದೋಬಸ್ತ್ ವ್ಯವಸ್ಥೆ ಕೈಗೊಂಡಿದ್ದರು.ತಾಲೂಕ ದಂಡಾಧಿಕಾರಿ ಉದಯ ಕುಂಬಾರ್ ನೇತೃತ್ವದಲ್ಲಿ ವಿವಿಧ ಹಂತದ ಅಧಿಕಾರಿಗಳು,ಸಿಬ್ಬಂದಿಗಳು ಮತದಾನ ಸುಸೂತ್ರವಾಗಿ ನೆರವೇರಲು ಚುನಾವಣಾ ಕರ್ತವ್ಯ ನಿರ್ವಹಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button