ಅಂಕೋಲಾ: ನಾನಾ ರೀತಿಯ ಸೈಬರ್ ವಂಚಕರ ವಿರುದ್ಧ ಜಾಗೃತರಾಗಿರುವಂತೆ ಪೋಲೀಸ್ ಇಲಾಖೆ ಎಚ್ಚರಿಕೆ ನೀಡುತ್ತಲೇ ಇದ್ದರೂ, ಕೆಲವರು ಪರಿಸ್ಥಿತಿಯ ಒತ್ತಡ, ಅತಿಯಾಸೆ, ಮತ್ತಿತರ ಕಾರಣಗಳಿಂದ ಮೈಮರೆತು ವಂಚನೆಗೆ ಒಳಗಾಗುತ್ತಲೇ ಇದ್ದಾರೆ.
ಮೊಬೈಲ್ ಅಪ್ಲಿಕೇಶನ್ ಮೂಲಕ ಸಾಲ ನೀಡಿ ನಂತರ ಸಾಲ ವಸೂಲಿ ನೆಪದಲ್ಲಿ ಮತ್ತು ನಾನಾ ರೀತಿಯಲ್ಲಿ ಬ್ಲಾಕ್ ಮೇಲ್ ಮಾಡಿ ಮಾನಸಿಕವಾಗಿ ಪೀಡಿಸುವ, ಲೋನ್ ಆಪ್ ವಂಚನೆ ಪ್ರಕರಣದಲ್ಲಿ ಭಾಗಿಯಾಗಿರುವ, ಧಾರವಾಡ ಮೂಲದ ಓರ್ವ ಮತ್ತು ಉತ್ತರಕನ್ನಡ ಜಿಲ್ಲೆ ಅಂಕೋಲಾ ಮೂಲದ ನಾಲ್ವರು ತರುಣರನ್ನುಮುಂಬೈ ಸೈಬರ್ ಕ್ರೈಂ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಕರೆದುಕೊಂಡು ಹೋಗಿರುವುದಾಗಿ ಹೇಳಲಾಗುತ್ತಿದೆ.
ಬಂಧಿತ ತರುಣರು ಲೋನ್ ಆಪ್ ಮೂಲಕ ಸಾಲ ಪಡೆದವರ, ಮೊಬೈಲ್ ಹ್ಯಾಕ್ ಮಾಡಿ ಗ್ರಾಹಕರ ಮೊಬೈಲ್ ನಲ್ಲಿರುವ ವೈಯಕ್ತಿಕ ಮಾಹಿತಿ (ಪೋಟೋ, ವಿಡಿಯೋ, ಮೆಸೇಜ್ , ಇತರೆ ಡಾಟಾ ) ಸಂಗ್ರಹಿಸಿ ನಂತರ, ಅವರಿಗೆ ಕರೆ ಮಾಡಿ ಹಣ ದ ಬೇಡಿಕೆ ಮತ್ತಿತರ ಮಾನಸಿಕ ಕಿರುಕುಳ ನೀಡುವ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ.
ವಂಚಕ ಆರೋಪಿತರ ಜಾಡನ್ನು ಹಿಡಿದು ಬಂದ ಮುಂಬೈ ಪೊಲೀಸರು ಅಂಕೋಲಾ ತಾಲೂಕಿನ ಬೊಬ್ರುವಾಡಾ ಮತ್ತು ಕಾಕರಮಠ ನಿವಾಸಿಗಳೆಂದು ಹೇಳಲಾದ ಸುಹೈಲ್ ಸಯ್ಯದ್ (24) ಸಯ್ಯದ್ ಮಹ್ಮದ ಅತ್ತಾರ್ (24) ಮಹ್ಮದ ಕೈಫ್ ಖಾದ್ರಿ (22) ಮತ್ತು ಮುಪ್ತಿಯಾಜ್ ಫೀರಜಾದೆ ಎನ್ನುವವರನ್ನು ವಶಕ್ಕೆ ಪಡೆದುಕೊಂಡಿರುವುದಾಗಿ ಹೇಳಲಾಗುತ್ತಿದೆ.
ಅವರ ವಿಚಾರಣೆ ಬಳಿಕ ವಷ್ಟೇ ಈ ವಂಚನೆ ಜಾಲದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರಾ? ಇವರ ಜಾಲ ಎಲ್ಲೆಲ್ಲಿ ಸಕ್ರಿಯವಾಗಿದೆ ? ಈ ವರೆಗೆ ಇದೇ ರೀತಿ ಯಾರಿಗೆಲ್ಲಾ ವಂಚಿಸಿದ್ದಾರೆ ಎಂಬಿತ್ಯಾದಿ ವಿವರಗಳು ಪೊಲೀಸರಿಂದ ಅಧಿಕೃತವಾಗಿ ತಿಳಿದು ಬರಬೇಕಿದೆ.
ಸುಲಭದ ಸಾಲಕ್ಕಾಗಿ ಗ್ರಾಹಕರು ಬಾಯಿ ತೆರೆದು ಕುಳಿತಿರುವುದನ್ನು ಮನಗಂಡೇ , ಹತ್ತಾರು ರೀತಿಯ ಆಮಿಷ ಒಡ್ಡಿ ಗ್ರಾಹಕರನ್ನು ಗಾಳಕ್ಕೆ ಬೀಳಿಸುವ ವಂಚಕರು ನಂತರ ತಮ್ಮ ಖರಾಮತ್ತು ತೋರಿಸುತ್ತಾರೆ ಎನ್ನಲಾಗಿದೆ.
ವಂಚನೆ ಹೇಗೆ?
ಅತಿ ಶೀಘ್ರದಲ್ಲಿ ಸಾಲದ ಆಮಿಷ ಒಡ್ಡುವ ಲೋನ್ ಆಪ್ ಡೌನ್ ಲೋಡ್ ಮಾಡಿಕೊಂಡರೆ ಮೊಬೈಲ್ ಪೋನ್ ನಲ್ಲಿ ಇರುವ ಎಲ್ಲಾ ಮಾಹಿತಿಗಳನ್ನು ಪೋಟೋ, ವಿಡಿಯೋಗಳನ್ನು ಸಾಮಾಜಿಕ ಜಾಲ ತಾಣಗಳ ಮಾಹಿತಿಯನ್ನು ವಂಚಕರು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ನಂತರ ನಾನಾ ರೀತಿಯಲ್ಲಿ ಹಣಕ್ಕಾಗಿ ಪೀಡಿಸುತ್ತಾರೆ.
ದೇಶದ ನಾನಾ ಕಡೆ ಮಹಾ ನಗರಗಳು ಮತ್ತೆರಡೆ ಲೋನ್ ಆಪ್ ಗೆ ಸಂಬಂಧಿಸಿದಂತೆ ಪ್ರತಿನಿತ್ಯ ಹತ್ತಾರು ಪ್ರಕರಣಗಳು ದಾಖಲಾಗುತ್ತಲೇ ಇರುತ್ತದೆ ‘ ಸೈಬರ್ ಕಳ್ಳರು ತಾವು ಕುಳಿತಲ್ಲಿಂದಲೇ ರಿಮೋಟ್ ಕಂಟ್ರೋಲ್ ಮಾದರಿಯಲ್ಲಿ ತಮ್ಮ ಕ್ಕೆ ಚಳಕ ತೋರಿಸಿ, ಗ್ರಾಹಕರಿಗೆ ಪಂಗನಾಮ ಹಾಕುತ್ತಲೇ ಇರುತ್ತಾರೆ ಎನ್ನಲಾಗಿದ್ದು ದೂರದ ಬಿಹಾರ, ಯುಪಿ, ಮತ್ತಿತರೆಡೆಯಿಂದ ಕೇಳಿ ಬರುತ್ತಿದ್ದ ಇಂತಹ ವಂಚನೆ ಜಾಲ, ಅಂಕೋಲಾದಂತ ಸಣ್ಣ ತಾಲೂಕಿಗೂ ಹಬ್ಬಿರುವುದು ಹಲವರ ಹುಬ್ಬೇರಿಸುವಂತೆ ಮಾಡಿದೆ.
ಕೆಲವು ದಿನಗಳ ಹಿಂದೆ ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದಲೂ ಪ್ರಕಟನೆ ನೀಡಿ ಲೋನ್ ಆಪ್ ಮತ್ತಿತರ ಸೈಬರ್ ವಂಚಕರ ಕುರಿತು ಜಾಗ್ರತೆ ವಹಿಸುವಂತೆ ಸಾರ್ವಜನಿಕ ಜಾಗೃತಿಗಾಗಿ ಪ್ರಕಟಣೆ ಹೊರಡಿಸಿ, ಸಾಮಾಜಿಕ ಜಾಲ ತಾಣಗಳಲ್ಲಿ ಕಂಡು ಬರುವ ಲೋನ್ ಆಪ್ ಜಾಹಿರಾತು ಡೌನ್ ಲೋಡ್ ಮಾಡಿಕೊಳ್ಳದಂತೆ ಸೂಚನೆ ನೀಡಲಾಗಿದ್ದನ್ನು ಸ್ಮರಿಸಬಹುದಾಗಿದೆ.
ಬಂಧಿತ ಆರೋಪಿತರು ಸರಿ ಸುಮಾರು ಒಂದೇ ವಯಸ್ಸಿನ ತರುಣರಾಗಿದ್ದು, ಒರ್ವ ಎಂ.ಬಿ.ಎ ಪದವೀಧರನಾಗಿದ್ದರೆ, ಇನ್ನೋರ್ವ ಐ.ಟಿ ಕೋರ್ಸ್, ಮತ್ತೊಬ್ಬ ಪಿ.ಯು.ಸಿ ಮತ್ತು ನಾಲ್ಕನೆಯವ ಬಿ.ಕಾಂ ಪದವೀಧರನಾಗಿದ್ದ ಎನ್ನಲಾಗಿದ್ದು, ಇವರು ಲೋನ್ ಆಪ್ ವಂಚನೆಗೆ ಸಿಲುಕಿದವರ ಮೊಬೈಲ್ ನಲ್ಲಿ ಇರುವ ಪೋಟೋಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಅದನ್ನು ಕಳಿಸಿ ಹಣಕ್ಕಾಗಿ ಮಾನಸಿಕ ಹಿಂಸೆ ನೀಡುವ ಆರೋಪದಡಿಯಲ್ಲಿಯೂ ಬಂಧಿಸಲಾಗಿದೆ ಎಂಬ ಮಾತು ಕೇಳಿಬರುತ್ತಿದ್ದು ಆರೋಪಿತ ಕೆಲವರ ಕೌಟುಂಬಿಕ ಹಿನ್ನಲೆ, ಇತ್ತೀಚಿನ ಕೆಲ ವ್ಯಾಪಾರ – ವಹಿವಾಟು ಮತ್ತಿತರ ವಿಷಯಗಳ ಕುರಿತು ಸ್ಥಳೀಯರು ಅಲ್ಲಲ್ಲಿ ಚರ್ಚಿಸತೊಡಗಿದಂತಿದೆ.
ಮಹಾರಾಷ್ಟ್ರದ ಗೃಹ ಮಂತ್ರಿಗಳ ಖಡಕ್ ಎಚ್ಚರಿಕೆ ಹಿನ್ನೆಲೆಯಲ್ಲಿ ಕಳೆದ ಕೆಲ ದಿನಗಳ ಹಿಂದೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಅಲ್ಲಿಯ ಸೈಬರ್ ಕ್ಟ್ರೆಂ ವಿಭಾಗದ ಹಿರಿಯ ಅಧಿಕಾರಿಗಳು, ಲೋನ್ ಆ್ಯಪ್ ವಂಚನೆ ಜಾಲದ ಮೇಲೆ ಹದ್ದಿನ ಕಣ್ಣಿಟ್ಟು, ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಧಾರವಾಡದಲ್ಲಿ ಅಹ್ಮದ್ ಹುಸೇನ್ ಎಂಬಾತನನ್ನು ಬಂಧಿಸಿ, ನಂತರ ಆತನ ನಂಟುಳ್ಳ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದ ಆರೋಪಿತರನ್ನೂ ವಶಕ್ಕೆ ಪಡೆದಿರುವುರಾಗಿ ಹೇಳಲಾಗುತ್ತಿದೆ. ವಂಚಕರ ಕುರಿತು ಮತ್ತು ಈ ಪ್ರಕರಣಕ್ಕೆ ಸಂಬಧಿಸಿದ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ