ಜಮೀನಿನ ಬೇಲಿ ತಂಟೆ – ತಕರಾರು: ಪೊಲೀಸ್ ಠಾಣೆಯಲ್ಲಿ ದಾಖಲಾಯ್ತ ದೂರು-ಪ್ರತಿದೂರು
ಅಂಕೋಲಾ:ಜಮೀನಿನ ಬೇಲಿ ವಿವಾದಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬಗಳ ನಡುವಿನ ವೈಷಮ್ಯ ತಾರಕಕ್ಕೇರಿ ಹೊಡೆದಾಟ ಮತ್ತು ಪರಸ್ಪರ ಹಲ್ಲೆಗೆ ತಲುಪಿದ ಘಟನೆ ಅಚವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಟಂಕಣಿಯಲ್ಲಿ ನಡೆದಿದ್ದು ಈ ಕುರಿತಂತೆ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿ ದೂರು ದಾಖಲಾಗಿದೆ.
ಅಚವೆ ಕುಂಟಕಣಿ ನಿವಾಸಿ ದೇವರಾಜ ಆನಂದ ನಾಯ್ಕ (27) ಇವರು ದೂರು ದಾಖಲಿಸಿ ತಾವು ಮತ್ತು ತಮ್ಮ ತಾಯಿ ಶಕುಂತಲಾ ಆನಂದು ನಾಯ್ಕ ತಮ್ಮ ತೋಟದಲ್ಲಿ ದನ ಕರುಗಳು ಬಾರದಂತೆ ಬೇಲಿ ಹಾಕುತ್ತಿದ್ದ ಸಂದರ್ಭದಲ್ಲಿ ಆರೋಪಿಗಳಾದ ಕುಂಟಕಣಿ ನಿವಾಸಿ ಗೋಪಾಲ ತಿಮ್ಮಣ್ಣ ನಾಯಕ, ಲಕ್ಷ್ಮೀ ಗೋಪಾಲ ನಾಯಕ , ಅಶ್ವಿನಿ ತಿಮ್ಮಪ್ಪ ನಾಯಕ ಇವರು ಸೇರಿ ತಮಗೆ ಕಲ್ಲಿನಿಂದ ತಲೆಯ ಮೇಲೆ ಹಲ್ಲೆ ನಡೆಸಿದ್ದಲ್ಲದೇ ತಮ್ಮ ತಾಯಿಗೆ ಕೆನ್ನೆಯ ಮೇಲೆ ಹೊಡೆದು ಹಲ್ಲೆ ನಡೆಸಿದ್ದಾರೆ.
ಭಾವಿಕೇರಿ ನಿವಾಸಿ ಹರೀಶ ನಾರಾಯಣ ನಾಯಕ ಎಂಬಾತ ಬಂದು ಕಬ್ಬಿಣದ ಹಾರೆಯಿಂದ ತಮ್ಮ ತಲೆಯ ಮೇಲೆ ಹೊಡೆದು ಅವಾಚ್ಯ ಶಬ್ದಗಳಿಂದ ಬಯ್ದು ಅಂಕೋಲಾಕ್ಕೆ ಬಂದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ದಾಖಲಿಸಿದ್ದಾರೆ.
ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾವಿಕೇರಿ ನಿವಾಸಿ ಹರೀಶ ನಾರಾಯಣ ನಾಯಕ ಎಂಬಾತ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ, ಆಪಾದಿತ ದೇವರಾಜ ಆನಂದ ನಾಯ್ಕ ಮತ್ತು ಅವರ ತಾಯಿ, ತಮ್ಮ ಚಿಕ್ಕಪ್ಪ ಗೋಪಾಲ ತಿಮ್ಮಣ್ಣ ನಾಯಕ ಅವರ ಗದ್ದೆಗೆ ಹೋಗುವ ದಾರಿಯನ್ನು ಬಂದ್ ಮಾಡಿ ಬೇಲಿ ಕಟ್ಟುತ್ತಿದ್ದ ಸಂದರ್ಭದಲ್ಲಿ ಪ್ರಶ್ನೆ ಮಾಡಿದಾಗ,ಆರೋಪಿ ದೇವರಾಜ ಹಾರೆಯಿಂದ ತಮ್ಮ ತಲೆಯ ಮೇಲೆ ಹಲ್ಲೆ ನಡೆಸಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ಬಯ್ದು ತನ್ನ ಕೈಯಲ್ಲಿ ಇದ್ದ ಕಡುಗದಿಂದ ಹಲ್ಲೆ ನಡೆಸಿ ನೆಲಕ್ಕೆ ಕೆಡವಿದ್ದು,ಆರೋಪಿಯ ಅಕ್ಕ ವಿನಯಾ ನಾಗು ನಾಯ್ಕ ಮತ್ತು ತಾಯಿ ಶಕುಂತಲಾ ಆನಂದು ನಾಯ್ಕ ಹಲ್ಲೆ ನಡೆಸುವಂತೆ ಪ್ರಚೋದಿಸಿ, ಜೀವ ತೆಗೆಯುವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಕುರಿತು ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದ್ದು,ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ