ಅಕ್ರಮ ಸಾರಾಯಿ ಸಾಗಾಟ ಮತ್ತು ಮಾರಾಟ: ಅಬಕಾರಿ ಮತ್ತು ಪೊಲೀಸ್ ಇಲಾಖೆಯಿಂದ ಪ್ರತ್ಯೇಕ ದಾಳಿ. ಒಟ್ಟೂ ಮೂರು ಪ್ರಕರಣ ದಾಖಲು.
ಅಂಕೋಲಾ: ತಾಲೂಕಿನ ಹಲವೆಡೆ ಅಕ್ರಮ ಸರಾಯಿ ಸಾಗಾಟ ಮತ್ತು ಮಾರಾಟ ಎಗ್ಗಿಲ್ಲದೇ ನಡೆಯುತ್ತಿದೆ ಎನ್ನುವ ಮಾತುಗಳು ಕೇಳಿ ಬರುತ್ತಿರುವ ನಡುವೆಯೇ ಕಳೆದ ಎರಡು ದಿನಗಳ ಅವಧಿಯಲ್ಲಿ ಅಬಕಾರಿ ಇಲಾಖೆ ತಂಡ ಮತ್ತು ಪೊಲೀಸರು ಬೇರೆ ಬೇರೆ ಕಡೆ ಪ್ರತ್ಯೇಕ ಕಾರ್ಯಚರಣೆ ನಡೆಸಿ ಒಟ್ಟು ಮೂರು ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಗುರುವಾರ ಸಂಜೆ ಅಂಕೋಲಾ ಅಬಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಹಾರವಾಡ ರೈಲ್ವೆ ಸೇತುವೆ ಸಮೀಪ ಕಾರ್ಯಾಚರಣೆ ನಡೆಸಿ ಟಿ.ವಿ.ಎಸ್ ಜುಪಿಟರ್ ದ್ವಿ ಚಕ್ರ ವಾಹನವೊಂದರಲ್ಲಿ ಸಾಗಿಸುತ್ತಿದ್ದ ಗೋವಾ ರಾಜ್ಯದಲ್ಲಿ ತಯಾರಾದ ಸುಮಾರು 7.5 ಲೀ ಸರಾಯಿ ವಶಪಡಿಸಿಕೊಂಡು, ಆರೋಪಿತನಾದ ಹಟ್ಟಿಕೇರಿ ನಿವಾಸಿ ಪ್ರಸಾದ ಪ್ರಭಾಕರ ಪಟೇಲ್ ಎಂಬಾತನನ್ನು ವಶಕ್ಕೆ ಪಡೆದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಅಂಕೋಲಾ ಅಬಕಾರಿ ನಿರೀಕ್ಷಕ ರಾಹುಲ್ ನಾಯಕ, ಸಿಬ್ಬಂದಿಗಳಾದ ಬಸಪ್ಪ ಅಂಗಡಿ, ಈರಣ್ಣ ಕುರುಬೇಟ, ರವಿ ಸಂಕಣ್ಣನವರ್, ವಿಶಾಲ ನಾಯ್ಕ, ಕೆ.ಜಿ.ಬಂಟ,ವಾಹನ ಚಾಲಕ ವಿನಾಯಕ ನಾಯ್ಕ ದಾಳಿಯಲ್ಲಿ ಪಾಲ್ಗೊಂಡಿದ್ದರು. ಅಂಕೋಲಾ ಪೊಲೀಸರು ಕಳೆದ ಮಂಗಳವಾರ ನಡೆಸಿದ ಪ್ರತ್ಯೇಕ ಕಾರ್ಯಾಚರಣೆಯಲ್ಲಿಅಕ್ರಮವಾಗಿ, ಯಾವುದೇ ಪರವಾನಗಿ ಇಲ್ಲದೇ ಮಾರಾಟ ಮಾಡುತ್ತಿದ್ದ ಕರ್ನಾಟಕ ಮತ್ತು ಗೋವಾ ರಾಜ್ಯದ ಸರಾಯಿ ವಶಪಡಿಸಿಕೊಂಡ ಪ್ರಕರಣ ದಾಖಲಿಸಿಕೊಂಡ ಘಟನೆ ತಾಲೂಕಿನ ಮೊರಳ್ಳಿ ಮತ್ತು ಗಾಬೀತ ಕೇಣಿಯಲ್ಲಿ ನಡೆದಿದೆ.
ಪಿ.ಎಸ್. ಐ ಪ್ರವಿಣಕುಮಾರ್ ಮತ್ತು ಸಿಬ್ಬಂದಿಗಳು ದಾಳಿ ನಡೆಸಿ ಮೊಗಟಾ ಮೊರಳ್ಳಿಯಲ್ಲಿ ಯಾವುದೇ ಪರವಾನಗಿ ಇಲ್ಲದೇ ಮಾರಾಟ ಮಾಡಲು ತರಲಾಗಿದ್ದ ಸುಮಾರು 9147 ರೂಪಾಯಿ ಮೌಲ್ಯದ ಕರ್ನಾಟಕ ರಾಜ್ಯದ ವಿವಿಧ ಬ್ಯಾಂಡುಗಳ ಸರಾಯಿ ವಶಪಡಿಸಿಕೊಂಡು ಮೊಗಟಾ ಮೊರಳ್ಳಿ ನಿವಾಸಿ ಬೀರಣ್ಣ ನಾರಾಯಣ ನಾಯಕ (50) ಎಂಬಾತನ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ದಾಳಿಯ ವೇಳೆ 2974 ರೂಪಾಯಿ ಮೌಲ್ಯದ ಓಲ್ಡ ಮಂಕ್ ರಮ್ 28 ಪ್ಯಾಕೆಟ್ ಗಳು, 2082 ರೂಪಾಯಿ ಮೌಲ್ಯದ ಓ.ಟಿ ವಿಸ್ಕಿ 24 ಪ್ಯಾಕೆಟ್ ಗಳು, 1912 ರೂಪಾಯಿ ಮೌಲ್ಯದ ಬೇಗಪೈಪರ್ ವಿಸ್ಕಿ 18 ಪ್ಯಾಕೆಟ್ ಗಳು 1230 ರೂಪಾಯಿ ಮೌಲ್ಯದ ಒರಿಜಿನಲ್ ಚಾಯ್ಸ್ ವಿಸ್ಕಿ 35 ಪ್ಯಾಕೆಟ್ ಗಳು ಮತ್ತು 949 ರೂಪಾಯಿ ಮೌಲ್ಯದ ಚಿಯರ್ಸ್ ವಿಸ್ಕಿ 27 ಪ್ಯಾಕೆಟ್ ಗಳನ್ನು ವಶಪಡಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಪ್ರತ್ಯೇಕ ಮತ್ತೊಂದು ಪ್ರಕರಣದಲ್ಲಿ ಪಿ.ಎಸ್.ಐ ಮಾಲಿನಿ ಹಂಸಬಾವಿ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ, ಗಾಬಿ ತಕೇಣಿ ವ್ಯಾಪ್ತಿಯ ಅಂಗನವಾಡಿ ಬಳಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಗೋವಾ ಕೋಕೋನಟ್ ಫೆನ್ನಿ (440 ರೂ ಮೌಲ್ಯದ ) ವಶಪಡಿಸಿಕೊಂಡು ಗಾಬೀತ ಕೇಣಿ ನಿವಾಸಿ ಶಾಂತಾರಾಮ ಅನಂತ ಧುರಿ (61) ಮತ್ತು ಬೆಲೇಕೇರಿ ನಿವಾಸಿ ವತ್ಸಲಾ ಕುಡ್ತಲಕರ್ (56) ಎನ್ನುವವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ತಾಲೂಕಿನ ನಾನಾ ಕಡೆ ಕೆಲವರು ಖಾಕಿ ಪಡೆಯ ಕಣ್ಣು ತಪ್ಪಿಸಿ ಅಕ್ರಮ ದಂಧೆಯಲ್ಲಿ ತೊಡಗಿಕೊಂಡಿದ್ದರೆ, ಇನ್ನು ಕೆಲವೆಡೆ ದಾಳಿಯ ಸುಳಿವರಿತೋ ಅಥವಾ ತಮ್ಮ ಇತರೆ ರೀತಿಯ ಕಳ್ಳ ಬುದ್ಧಿ ಉಪಯೋಗಿಸಿ, ಕೆಲವರಿಗೆ ಚಳ್ಳೆಹಣ್ಣು ತಿನ್ನಿಸಿ,,ಸ್ಥಳದಿಂದ ಕಾಲ್ಕಿತ್ತು ನಾಪತ್ತೆಯಾಗುವ ಮೂಲಕ ದೊಡ್ಡ ದೊಡ್ಡ ದಂಧೆಕೋರರು ಕಾನೂನಿನ ಬಲೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎನ್ನುವ ಮಾತು ಅಲ್ಲಲ್ಲಿ ಕೇಳಿ ಬಂದಿದೆ. ಇಂತಹ ಘಟನೆಗಳು ಖೀರು ಕುಡಿದವ ಓಡಿಹೋದ ನೀರು ಕುಡಿದವ ಸಿಕ್ಕು ಬಿದ್ದ ಎಂದು ಜನರು ಆಡಿಕೊಳ್ಳುವಷ್ಟರ ಮಟ್ಟಿಗೆ ಪ್ರಚಲಿತದಲ್ಲಿವೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ