Follow Us On

WhatsApp Group
Big NewsImportant
Trending

ವೈದ್ಯ ಪತಿ ಇಲ್ಲದ ವೇಳೆ SSLC ಕಲಿತ ಪತ್ನಿಯೇ ಡಾಕ್ಟರ್ ?ಖಾಸಗಿ ಕ್ಲಿನಿಕ್ ಸೀಜ್ ! ವಾರದಲ್ಲಿ ಎರಡೇ ದಿನ ತೆರೆದಿರುವ ಕ್ಲಿನಿಕ್

ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ ದಾಳಿ

ಅಂಕೋಲಾ: ನಿಯಮ ಬಾಹಿರವಾಗಿ ನಡೆಸುತ್ತಿದ್ದ ಖಾಸಗಿ ಕ್ಲಿನಿಕ್ ಒಂದರ ಮೇಲೆ ದಾಳಿ ನಡೆಸಿದ ಆರೋಗ್ಯ ಇಲಾಖೆ ಅಧಿಕಾರಿಗಳ ತಂಡ, ಅಧಿಕೃತ ಕೆ.ಪಿ.ಎಂ.ಎ ನೋಂದಣಿ ಇಲ್ಲದೇ ಇರುವುದು, ತ್ಯಾಜ್ಯ ನಿಯಂತ್ರಣದ ಅನುಮತಿ ಇಲ್ಲದೇ ಇರುವುದು, ವಿದ್ಯಾರ್ಹತೆ ಕುರಿತು ಸರಿಯಾದ ದಾಖಲೆಗಳಿಲ್ಲದಿರುವುದನ್ನು ಮನಗಂಡು ಕ್ಲಿನಿಕ್ ಗೆ ಬೀಗ ಜಡಿದಿದೆ.

ಪಟ್ಟಣದಲ್ಲಿ ನಡೆಸಲಾಗುತ್ತಿದ್ದ ಶ್ರೀಜಟಗೇಶ್ವರ ಕ್ಲಿನಿಕ್ ಮೇಲೆ ತಾಲೂಕು ವೈದ್ಯಾಧಿಕಾರಿ ನಿತಿನ್ ಹೊಸ್ಮೇಳಕರ ನೇತೃತ್ವದ ತಂಡ ದಾಳಿ ನಡೆಸಿದ್ದ ವೇಳೆ, ಅವರಿರದೇ , ಅವರ ಬದಲಿಗೆ ಎಸ್ ಎಸ್ ಎಲ್ ಸಿ ಕಲಿತಿರುವೆ ಎಂದು ಹೇಳಿಕೊಂಡ ಅವರ ಪತ್ನಿ ಇದ್ದು ಕ್ಲಿನಿಕ್ ನಡೆಸುತ್ತಿದ್ದರು ಎನ್ನಲಾಗಿದೆ.

ಇಂದಿನ ಪ್ರಮುಖ‌ ಸುದ್ದಿ: ಇದನ್ನೂ ಓದಿ

ಆಸ್ಪತ್ರೆ ಮಂಭಾಗದಲ್ಲಿರುವ ಫಲಕದಲ್ಲಿ, ಆಪರೇಶನ್ ಇಲ್ಲದೇ ಈ ಕ್ಲಿನಿಕ್ ನಲ್ಲಿ ಮೂಲವ್ಯಾಧಿ, ಅಂಡಾಶಯ, ಪಿಶರ್, ಪಿಸ್ತುಲಾ, ಚರ್ಮ ರೋಗಕ್ಕೆ ಆಯುರ್ವೇದ ಚಿಕಿತ್ಸೆ ನೀಡಲಾಗುವುದು ಎಂದು ಬರೆಸಲಾಗಿದ್ದು ಕಳೆದ ಕೆಲವು ವರ್ಷಗಳಿಂದ ನಡೆಸಲಾಗುತ್ತಿರುವ ಈ ಕ್ಲಿನಿಕ್ ವಾರದಲ್ಲಿ ಕೇವಲ ಎರಡೇ ದಿನ ( ಮಂಗಳವಾರ ಮತ್ತು ಶನಿವಾರ ) ಮಾತ್ರ ತೆರೆದಿರುತ್ತಿರೆಂದು ತಿಳಿಸಲಾಗಿದೆ.

ಶನಿವಾರದ ವಾರದ ಸಂತೆ ನಡೆಯುವ ಸಾಮಾನ್ಯ ಸ್ಥಳದ ಅತೀ ಹತ್ತಿರದಲ್ಲೇ ಈ ಕ್ಲಿನಿಕ್ ನಡೆಸುತ್ತಿದ್ದರಿಂದ ಜಾಹೀರಾತು ಫಲಕ ನೋಡಿಯೇ ಸಂತೆಗೆ ಬರುತ್ತಿದ್ದ ಕೆಲ ಹಳ್ಳಿ ಜನ ಇದೇ ಕ್ಲಿನಿಕ್ ಗೂ ಬರುತ್ತಿದ್ದು ಅವರ ಮುಗ್ದತೆಯನ್ನು ಕೆಲವೊಮ್ಮೆ ದುರುಪಯೋಗ ಪಡಿಸಿಕೊಂಡು ಆಯುರ್ವೇದಿಕ್ ಪದ್ಧತಿ ಹೊರತು ಪಡಿಸಿ, ಇತರೇ ರೀತಿಯ ಔಷಧಿ, ಚಿಕಿತ್ಸೆ ನೀಡುತ್ತಿರುವ ಆರೋಪವೂ ಅಲ್ಲಲ್ಲಿ ಕೇಳಿಬಂದಂತಿದೆ.

ಈ ಕುರಿತು ವರದಿಗಾರರು ಡಾ ರೆಡ್ಡಿ ಅವರನ್ನು ಫೋನ್ ಕರೆಯ ಮೂಲಕ ಸಂಪರ್ಕಿಸಿ ವಿಷಯದ ಸ್ಪಷ್ಟತೆ ತಿಳಿಯ ಬಯಸಿದರೂ ವೈದ್ಯರು ಕರೆ ಸ್ವೀಕರಿಸದಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ.

ತಾಲೂಕು ಆರೋಗ್ಯಾಧಿಕಾರಿ ಮತ್ತು ತಂಡ ಭೇಟಿ ನೀಡಿದ ಸಂದರ್ಭದಲ್ಲಿ ಅಧಿಕೃತ ನೋಂದಣಿ ಕುರಿತು ಮತ್ತು ವೈದ್ಯಕೀಯ ಅರ್ಹತೆ ಕುರಿತು ಸಮರ್ಪಕ ದಾಖಲೆಗಳು ಇಲ್ಲದ ಕಾರಣ ಜಟಗೇಶ್ವರ ಕ್ಲಿನಿಕ್ ಗೆ ಬೀಗ ಜಡಿದಿದೆ.

ಈ ಕುರಿತು ಪ್ರಕರಣ ದಾಖಲಿಸಿ ಮುಂದಿನ ಕ್ರಮಕ್ಕೆ ಜಿಲ್ಲಾ ಆರೋಗ್ಯ ಇಲಾಖೆ ಮುಖಾಂತರ ಜಿಲ್ಲಾಧಿಕಾರಿಗಳಿಗೆ ವರದಿ ನೀಡಲಾಗುತ್ತಿದೆ ಎಂದು ತಾಲೂಕು ವೈದ್ಯಾಧಿಕಾರಿ ಡಾ ನಿತಿನ್ ಹೊಸ್ಮೇಳಕರ ತಿಳಿಸಿದ್ದಾರೆ.

ಕಳೆದ ವರ್ಷದಿಂದೀಚೆಗೆ ಅಂಕೋಲಾದ ವಿವಿಧೆಡೆ ಬೇರೆ ಬೇರೆ ಖಾಸಗಿ ಕ್ಲಿನಿಕ್ ಗಳ ಮೇಲೆ ಆಗಾಗ ಇಂತಹ ದಾಳಿ ನಡೆಯುತ್ತಲೇ ಇವೆ. ಈ ನಡುವೆ ಕೆಲ ಕ್ಲಿನಿಕ್ ಗಳು ಕಾನೂನು ಮಾನದಂಡ ಅನುಸರಿಸಲು ಸಾಧ್ಯವಾಗದೇ ಮುಚ್ಚಿದ್ದರೆ, ಇನ್ನು ಕೆಲವು ಈಗಲೂ ಅನಧಿಕೃತವಾಗಿದ್ದು ಕದ್ದು ಮುಚ್ಚಿ ನಡೆಯುತ್ತಿವೆ ಎನ್ನಲಾಗಿದೆ.

ಇದೇ ವೇಳೆ ಸರ್ಕಾರ ಗ್ರಾಮೀಣ ಭಾಗಗಳಲ್ಲಿ ಅಧಿಕೃತ ಆರೋಗ್ಯ ಸೇವೆ ಜನಸಾಮಾನ್ಯರಿಗೂ ತಲುಪುವಂತೆ ಪೂರಕ ವ್ಯವಸ್ಥೆ ಕಲ್ಪಿಸಿ, ಜವಾಬ್ದಾರಿ ನಿರ್ವಹಿಸಬೇಕಿದೆ ಎನ್ನುವ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬರಲಾರಂಭಿಸಿದೆ. ಇಂಥ ವೈದ್ಯರಿಂದಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವ ವೈದ್ಯರನ್ನು ಅನುಮಾನದಿಂದ ನೋಡುವಂತಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button