Important
Trending

ಬಲು ಅಪರೂಪ ಕೆಂಪು ಬಣ್ಣದ ಈ ಸಿಂಧೂರ ಗಣಪ: ದರ್ಶನ ಮಾತ್ರದಿಂದಲೇ ಪರಿಹಾರವಾಗುವುದಂತೆ ಜನ್ಮಾಂತರಗಳ ಪಾಪ

ಅಂಕೋಲಾ: ಬಲು ಅಪರೂಪ ಕೆಂಪು ಬಣ್ಣದ ಈ ಸಿಂಧೂರ ಗಣಪ. ದರ್ಶನ ಮಾತ್ರದಿಂದಲೇ ಪರಿಹಾರವಾಗುವುದಂತೆ ಜನ್ಮಾಂತರಗಳ ಪಾಪ. ನೂರಾರು ವರ್ಷಗಳ ಧಾರ್ಮಿಕ ಇತಿಹಾಸ ಹೊಂದಿ  ದೊಡ್ಡ ದೇವರ ಸನ್ನಿಧಿಯಲ್ಲಿ ಪ್ರತಿಷ್ಠಾಪಿಸುತ್ತಾ ಬಂದಿರುವ ಗರಿಕೆ ಪ್ರಿಯನ ಮಹಿಮೆ ಅಪಾರ, ಮೂಲಾ ನಕ್ಷತ್ರದಂದೇ ವಿಸರ್ಜನೆಗೊಳ್ಳುವ ಈ ವಿಶೇಷ  ಗಣಪತಿಯನ್ನು ಕಣ್ತುಂಬಿಕೊಳ್ಳಿ.

ವಿಶ್ವದಾದ್ಯಂತ ಪ್ರಥಮ ಪೂಜಿತ ಏಕದಂತನ ಆರಾಧನೆ  ಜೋರಾಗಿ ನಡೆದಿದ್ದು ಚೌತಿಯ ಸಂಭ್ರಮ ಎಲ್ಲೆಡೆ  ಕಂಡುಬರುತ್ತಿದೆ. ಈ ನಡುವೆ ಅಂಕೋಲಾ ತಾಲೂಕಿನ ಸಾರ್ವಜನಿಕ ಗಣಪತಿಗಳಲ್ಲಿ ಮೊದಲ ಗಣಪ ಎನ್ನುವ ಪ್ರಸಿದ್ಧಿ ಪಡೆದಿರುವುದು  ದೊಡ್ಡ ದೇವರೆಂದೇ ಖ್ಯಾತಿ  ಪಡೆದಿರುವ  ಶ್ರೀ ವೆಂಕಟರಮಣ ದೇವಾಲಯದ ಸನ್ನಿಧಿಯಲ್ಲಿ ಪ್ರತಿಷ್ಠಾಪಿಸಿದ ಮಹಾ ಗಣಪತಿಗೆ ಸಲ್ಲುತ್ತದೆ. ಕೇವಲ ಪ್ರಥಮ ಪೂಜಿತ ಎಂದಷ್ಟೇ ಅಲ್ಲದೇ  ಈ ಗಣಪ ಭಕ್ತರ ಪಾಲಿನ ಇಷ್ಟಾರ್ಥ ಕರುಣಿಸುವ ಮಹಾ ಮಹಿಮನೂ ಹೌದು. ಸಾಮಾನ್ಯವಾಗಿ ಗಣಪತಿಗೆ ಕೆಂಪು ಬಣ್ಣ ಮತ್ತು ಗರಿಕೆ ಎಂದರೆ ಬಲು ಪ್ರೀತಿ ಎನ್ನುವುದು ಹಲವು ಭಕ್ತರಿಗೆ ತಿಳಿದಿರುವ ವಿಚಾರ .

ಆದರೆ ಇಲ್ಲಿ ಆಧುನಿಕತೆಯ ಈ ದಿನಗಳಲ್ಲಿಯೂ ಈಗಲೂ ಮಣ್ಣಿನಿಂದಲೇ  ಮೂರ್ತಿ ತಯಾರಿಸುತ್ತಿರುವುದು ಒಂದು ವಿಶೇಷವಾದರೆ, ಮಂಗಲ ಮೂರ್ತಿ   ಕೆಂಪು ಬಣ್ಣದಿಂದ ಕಂಗೊಳಿಸುವುದು ಇನ್ನೊಂದು ವಿಶೇಷ. ಅದಕ್ಕೆ ಇದನ್ನು  ಸಿಂಧೂರ ಗಣಪತಿ ಯೆಂದು  ಕರೆದು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.  ಅಂಕೋಲಾ ತಾಲೂಕಿನಲ್ಲಿ ಸಾರ್ವಜನಿಕವಾಗಿ ಪೂಜಿಸಿ ಆರಾದಿಸಲ್ಪಟ್ಟ ಪ್ರಪ್ರಥಮ ಗಣಪತಿ ಎಂದೇ ಖ್ಯಾತಿ ಪಡೆದಿರುವ ಸಿಂಧೂರ ಗಣಪತಿಯನ್ನು 1880 ರಲ್ಲೇ  ಪ್ರತಿಷ್ಠಾಪಿಸಿ ಪೂಜಿಸುವ ಪದ್ಧತಿ ಆರಂಭವಾಗಿದ್ದು, ಇಂದಿಗೂ ಸಹ ಈ ಗಣಪತಿ ತಯಾರಿಸಲು ಮಣ್ಣು ಪೂರೈಕೆ ಸೇರಿದಂತೆ ಗಣೇಶನ ಹಬ್ಬದ ಸಂದರ್ಭದ ವಿವಿಧ ಸೇವೆಗಳನ್ನು ತಾಲೂಕಿನ ವಿವಿಧ ಸಮಾಜಗಳ ಜನರು ನೆರವೇರಿಸುತ್ತಾ ಬಂದಿದ್ದು ನೂರಾರು ವರ್ಷಗಳ ಪುರಾತನ ಧಾರ್ಮಿಕ ಪರಂಪರೆ ಮುಂದುವರೆಸಿಕೊಂಡು ಬರಲಾಗುತ್ತಿದೆ.

ಚೌತಿಯಂದು ಪ್ರತಿಷ್ಠಾಪನೆ ಗೊಳ್ಳುವ ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಸಾಮಾನ್ಯವಾಗಿ 5 ದಿನಗಳ ನಂತರ ಹಂತ ಹಂತವಾಗಿ ಅನಂತ ಲೋಪಿ ವರೆಗೆ  ಬೇರೆ ಬೇರೆ ಕಡೆ ಬೇರೆ ಬೇರೆ ದಿನಗಳಂದು ವಿಸರ್ಜಿಸಲಾಗುತ್ತದೆ. ಆದರೆ ದೊಡ್ಡ ದೇವರ ಸನ್ನಿಧಿಯಲ್ಲಿ  ಪ್ರತಿಷ್ಠಾಪಿಸುವ ಗಣಪನಿಗೆ ದಿನದ ಲೆಕ್ಕ ಮಾಡದೇ, ಮೂಲ ನಕ್ಷತ್ರದ ದಿನದಂದೇ   ವಿಸರ್ಜನೆ ನಡೆಸುವುದು  ಇದರ ಇನ್ನೊಂದು ವಿಶೇಷ.

ತಾಲೂಕಿನ ಜನರು ಗಣೇಶ ಚೌತಿಯ ಸಂದರ್ಭದಲ್ಲಿ ವೆಂಕಟರಮಣ ದೇವಾಲಯಕ್ಕೆ ಆಗಮಿಸಿ ಸಿಂಧೂರ ಗಣಪತಿ ದರ್ಶನ ಪಡೆದು ತಮ್ಮ  ಇಷ್ಟಾರ್ಥ ಸಿದ್ಧಿಗೆ ಪ್ರಾರ್ಥಿಸಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ. ಕೆಂಪು ಗಣಪನ  ದರ್ಶನ ಭಾಗ್ಯದಿಂದಲೇ ಜನ್ಮ -ಜನ್ಮಾಂತರಗಳ ಸಕಲ ಪಾಪ ಪರಿಹಾರವಾಗುವುದೆಂಬ ನಂಬಿಕೆ ಹಲವು ಭಕ್ತರಲ್ಲಿದೆ.  ಗರಿಕೆ ಸೇವೆ ನೀಡಿದರೂ ಸಂತೃಪ್ತನಾಗುವ ಸಿಂಧೂರ ಮಹಾಗಣಪ ಭಕ್ತರ ಕಷ್ಟ ಕಾರ್ಪಣ್ಯ ದೂರ ಮಾಡುವನೆಂಬ ನಂಬಿಕೆ ಇದೆ.

ಶನಿವಾರ ಮೂಲ ನಕ್ಷತ್ರ ದಿನದಂದು ಶ್ರೀ ದೇವರನ್ನು ಪ್ರತಿಷ್ಠಾ ಪೀಠದಿಂದ ವಿಸರ್ಜಿಸಿ, ದೇಗುಲ ಹೊರ ಆವರಣದಲ್ಲಿ ಮೆರವಣಿಗೆ ಪೀಠದಲ್ಲಿ ಕುಳ್ಳಿರಿಸಿ, ಪಲ್ಲಕಿ ಸೇವೆಯಂತೆ ನೂರಾರು ಭಕ್ತರು ಹೆಗಲ ಮೇಲೆ ಹೊತ್ತು ಸಾಗಿಸಿದರು. ಶ್ರೀ ದೇವರ ರಥಬೀದಿ, ಕಣಕಣೇಶ್ವರ ದೇಗುಲ, ದುರ್ಗಾ ಮಂದಿರದ ಎದುರಿನಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾಗಿ ಬಂದ ಗಣನಾಯಕನ ವಿಸರ್ಜನಾ ಮೆರವಣಿಗೆ ಬಂಡಿ ಭಜಾರದಲ್ಲಿ ಪ್ರತಿಷ್ಠಾಪಿಸಿದ ಗಣೇಶ ಮೂರ್ತಿ ಸನ್ನಿಧಿ ಹತ್ತಿರದ ಮಾರ್ಗವಾಗಿ ಶ್ರೀ ನರಸಿಂಹ ದೇವಸ್ಥಾನದ ಎದುರಿಂದ ಕೇಣಿ ಹಳ್ಳದತ್ತ ಆಗಮಿಸಿತು.

ದಾರಿಯುದ್ಧಕ್ಕೂ ಹಲವು ಭಕ್ತರು ಆರತಿ, ಹಣ್ಣು -ಕಾಯಿ , ಹೂವು ಸೇವೆ ನೆರವೇರಿಸಿದರು. ಕೇಣಿ ಹಳ್ಳದ ಬಳಿ ಮಂಗಲ ಮೂರ್ತಿ ಅಭರಣಗಳನ್ನು  ತೆಗೆದು, ವಿಶೇಷ ಪೂಜೆ ಸಲ್ಲಿಸಿ ಹರಿವ ನೀರಿನಲ್ಲಿ ಗಣಪವನ್ನು ಹೊತ್ತೊಯ್ದು ವಿಸರ್ಜಿಸಲಾಯಿತು. ಬಪ್ಪಾ ಮೋರಯಾ ಎನ್ನುತ್ತಾ ಭಕ್ತರು ಕೆಂಪು ಗಣಪನಿಗೆ ಕೈ ಮುಗಿದು ಈ ವರ್ಷದ ಶುಭ ವಿದಾಯ ಹೇಳಿದರು. ಕೇಣಿ ಹಳ್ಳದ ಸೇತುವೆ ಮತ್ತು ಅಕ್ಕ ಪಕ್ಕದ ಪ್ರದೇಶಗಳಲ್ಲಿ ನೂರಾರು ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡು ಪುನೀತರಾದರು, ಅಗ್ನಿ ಶಾಮಕ, ಪುರಸಭೆ, ಪೋಲೀಸ್ ಮತ್ತಿತರ ಇಲಾಖೆಯ ಕೆಲ ಅಧಿಕಾರಿ ಹಾಗೂ ಸಿಬ್ಬಂದಿಗಳು ಹಾಜರಿದ್ದು ಗಣಪನ ವಿಸರ್ಜನೆ ಕಾರ್ಯಕ್ಕೆ ಕರ್ತವ್ಯ ನಿರ್ವಹಿಸಿದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button