Follow Us On

WhatsApp Group
Important
Trending

ಕಟ್ಟಡ ಕಾರ್ಮಿಕರಿಗೆ ಶೈಕ್ಷಣಿಕ ಸಹಾಯಧನ ಬಿಡುಗಡೆಗೆ ಆಗ್ರಹಿಸಿ ಪ್ರತಿಭಟನೆ

ಅಂಕೋಲಾ : ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಶೈಕ್ಷಣಿಕ ಸಹಾಯಧನ ಬಿಡುಗಡೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಫೆಡರೇಶನ್ ಅಂಕೋಲಾ ತಾಲೂಕು ಸಮಿತಿಯಿಂದ ತಹಶೀಲ್ದಾರ ಕಛೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರರ ಹಾಗೂ ಕಾರ್ಮಿಕರ ನಿರೀಕ್ಷಕರ ಮೂಲಕ ಕಾರ್ಮಿಕ ಸಚಿವ ಸಂತೋಷ ಲಾಡ್ ಅವರಿಗೆ ಮನವಿ ಸಲ್ಲಿಸಿದರು.

ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯಿಂದ ಕಾನೂನು ಪ್ರಕಾರ ಪ್ರತಿವರ್ಷ ನೀಡಬೇಕಾದ ಶೈಕ್ಷಣಿಕ ಸಹಾಯಧನವನ್ನು ಬಿಡುಗಡೆ ಮಾಡದೇ ಇರುವುದರಿಂದ ಇಂದು ಕಟ್ಟಡ ನಿರ್ಮಾಣ ಕಾರ್ಮಿಕರು ರಾಜ್ಯದಾದ್ಯಂತ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಶಾಂತಾರಾಮ ನಾಯಕ ಮಾತನಾಡಿ, ೨೦೨೩-೨೪ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿ, ಅರ್ಧ ವರ್ಷ ಕಳೆಯುತ್ತಿದ್ದರೂ ಈವರೆಗೂ ಸಹಾಯಧನಕ್ಕಾಗಿ ಅರ್ಜಿಯನ್ನೇ ಆಹ್ವಾನಿಸಿಲ್ಲ.

ಹಾಗೆಯೇ ೨೦೨೧-೨೨ನೇ ಸಾಲಿನಲ್ಲಿ ಶೈಕ್ಷಣಿಕ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದ ಸುಮಾರು ಒಂದುವರೆ ಲಕ್ಷ ಜನ ಕಾರ್ಮಿಕರಿಗೆ ಸಹಾಯಧನ ಕೊಡದೇ ಬಾಕಿ ಉಳಿಸಿಕೊಳ್ಳಲಾಗಿದೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಉದ್ಯೋಗ ಮತ್ತು ಸೇವಾ ಷರತ್ತುಗಳ ಕಾಯ್ದೆ ೧೯೯೬ರ ನಿಯಮ ೪ರ ಅಡಿಯಲ್ಲಿ ಕಟ್ಟಡ ನಿರ್ಮಾಣ ಕಾರ್ಮಿಕರ ಇಬ್ಬರು ಮಕ್ಕಳಿಗೆ ‘ಕಲಿಕಾ ಭಾಗ್ಯ’ ಯೋಜನೆಯಡಿ ಶೈಕ್ಷಣಿಕ ಸಹಾಯಧನ ನೀಡಬೇಕೆಂದು ಕಾನೂನು ಹೇಳುತ್ತದೆ. ನೊಂದಾಯಿತ ಕಾರ್ಮಿಕರು ಈ ಸೌಲಭ್ಯವನ್ನು ಪಡೆಯುತ್ತಿದ್ದಾರೆ ಎಂದರು.
ಹೋರಾಟದ ಮುಖ್ಯ ಬೇಡಿಕೆಯೆಂದರೆ, ೨೦೨೨-೨೩ ನೇ ಸಾಲಿನ ಶೈಕ್ಷಣಿಕ ಸಹಾಯಧನವನ್ನು ಕೂಡಲೇ ಬಿಡಗಡೆ ಮಾಡಬೇಕು.

೨೦೨೧-೨೨ನೇ ಸಾಲಿನಲ್ಲಿ ೧.೫ ಲಕ್ಷ ಫಲಾನುಭವಿಗಳಿಗೆ ಬಾಕಿ ಉಳಿಸಿಕೊಂಡಿರುವ ಶೈಕ್ಷಣಿಕ ಸಹಾಯಧನವನ್ನು ಪಾವತಿಸಬೇಕು. ೨೦೨೩-೨೪ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿರುವ ಹಿನ್ನೆಲೆಯಲ್ಲಿ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಬೇಕು. ಲ್ಯಾಪ್‌ಟಾಪ್, ಟ್ಯಾಬ್ ಸೇರಿದಂತೆ ಯಾವುದೇ ವಿಧವಾದ ಖರೀದಿಗಳನ್ನು ನಿಲ್ಲಿಸಬೇಕು. ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿರುವ ಎಲ್ಲ ಖರೀದಿ ವ್ಯವಹಾರಗಳನ್ನು ತನಿಖೆಗೆ ಆದೇಶಿಸಬೇಕು. ಭ್ರಷ್ಟಾಚಾರದಲ್ಲಿ ಭಾಗಿಯಾದವವರ ಮೇಲೆ ಕಠಿಣ ಕಾನೂನು ಕ್ರಮ ಜಾರಿಯಾಗಬೇಕು. ಕಾರ್ಮಿಕ ಕಚೇರಿಗಳಿಗೆ ಅವಶ್ಯಕ ಸಿಬ್ಬಂದಿಗಳ ನೇಮಕವಾಗಬೇಕು ಎಂದು ಅವರು ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದರು.

ತಹಶೀಲ್ದಾರರ ಪರವಾಗಿ ಶಿರಸ್ತೇದಾರ ಗಿರೀಶ ಬಾನಾವಳಿಕರ ಮತ್ತು ಕಾರ್ಮಿಕ ನಿರೀಕ್ಷಕರ ಪರವಾಗಿ ದಿವ್ಯಾ ನಾಯ್ಕ ಮನವಿ ಸ್ವೀಕರಿಸಿದರು. ಈ ಸಂದರ್ಭದಲ್ಲಿ ಸಿಐಟಿಯು ತಾಲೂಕು ಸಂಚಾಲಕ ಎಚ್.ಬಿ. ನಾಯಕ, ಕಟ್ಟಡ ನಿರ್ಮಾಣ ಕಾರ್ಮಿಕರ ಫೆಡರೇಶನ್ ತಾಲೂಕು ಅಧ್ಯಕ್ಷ ನಾಗಪ್ಪ ನಾಯ್ಕ, ಜಂಟಿ ಕಾರ್ಯದರ್ಶಿ ಉದಯ ನಾಯ್ಕ, ಪದಾಧಿಕಾರಿಗಳಾದ ಶೇಷು ನಾಯ್ಕ, ಮೋಹಿನಿ ಗೌಡ, ಸುಧಾ ಗೌಡ, ನಾರಾಯಣ ಗೌಡ, ಮಂಗೇಶ ಗೌಡ, ವೆಂಕಟರಮಣ ಗೌಡ, ಉದ್ದಂಡ ಗುನಗಾ, ರಾಜಗೋಪಾಲ ಶೇಟ್ ಮುಂತಾದವರಿದ್ದರು.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button