ರಾಷ್ಟ್ರೀಯ ಹೆದ್ದಾರಿ 63 ರ ಅಂಕೋಲಾ ಯಲ್ಲಾಪುರ ಮಾರ್ಗಮಧ್ಯೆ ರಾಮನಗುಳಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಂಟೇನರ್ ಲಾರಿಯೊಂದು ಓವರ್ ಟೇಕ್ ಮಾಡುವ ಭರದಲ್ಲಿ ಎದುರುಗಡೆಯಿಂದ ಬರುತ್ತಿದ್ದ ಗೂಡ್ಸ್ ರಿಕ್ಷಾ ಮಾದರಿಯ ಸಣ್ಣ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಗೂಡ್ಸ ವಾಹನ ಚಾಲಕ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ನಡೆದಿದೆ.
ಅಂಕೋಲಾ ತಾಲೂಕಿನ ರಾಮನ ಗುಳಿ – ದುಗ್ಗನಬೈಲ್ ಬಳಿ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಸಂಭವಿಸಿದ ಈ ರಸ್ತೆ ಅಪಘಾತದಲ್ಲಿ ಗೂಡ್ಸ್ ವಾಹನ ಚಾಲಕ ಮುಂಡಗೋಡ ಪಾಳಾ ನಿವಾಸಿ ಕಿರಣ ಚಂದ್ರಶೇಖರ ಕೆಳಗಿನಮನೆ(23) ಮೃತ ದುರ್ದೈವಿಯಾಗಿದ್ದು, ಈತನು ತನ್ನ ದೋಸ್ತ ವಾಹನವನ್ನು ಯಲ್ಲಾಪುರ ಕಡೆಯಿಂದ ಅಂಕೋಲಾ ಕಡೆ ಚಲಾಯಿಸಿಕೊಂಡು ಬರುತ್ತಿರುವಾಗ, ಆತನ ಗೂಡ್ಸ್ ವಾಹನಕ್ಕೆ ಅಂಕೋಲಾ ಕಡೆಯಿಂದ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯಿಂದ ಯಾವುದೋ ಬೇರೆ ವಾಹನವನ್ನು ಓವರ್ ಟೇಕ್ ಮಾಡಲು ಹೋಗಿ ತನ್ನ ಮಾರ್ಗ ಬಿಟ್ಟು ಪೂರ್ತಿ ರಸ್ತೆಯ ಬಲಕ್ಕೆ ಬಂದ ಕಂಟೇನರ್ ಲಾರಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಗೂಡ್ಸ್ ವಾಹನದ ಮುಂಭಾಗ ನುಜ್ಜು ಗುಜ್ಜಾಗಿದ್ದು ಗೂಡ್ಸ್ ವಾಹನ ಚಾಲಕನ ಬಲಕೆನ್ನೆಗೆ, ಬಲಗಣ್ಣಿನ ಹತ್ತಿರ ಮತ್ತು ಬಲಗಾಲಿನ ಮಂಡಿಯ ಹತ್ತಿರ ಗಂಭೀರವಾಗಿ ಗಾಯಗೊಂಡು ರಕ್ತ -ಗಾಯ ನೋವಿನೊಂದಿಗೆ ಸ್ಥಳದಲ್ಲಿಯೇ ಮೃತ ಪಟ್ಟಿದ್ದಾನೆ. ಅಪಘಾತ ಪಡಿಸಿದ KA 01 AL 4176 ನಂಬರಿನ ಕಂಟೇನರ್ ಲಾರಿ ಚಾಲಕ ಉತ್ತರ ಪ್ರದೇಶದ ಆಗ್ರಾ ನಿವಾಸಿ ಮೇಘ ಸಿಂಗ್ ಎನ್ನುವವರ ವಿರುದ್ಧ ಮುಂಡಗೋಡದ ಸೆಂಟ್ರಿಗ್ ಪೋಲ್ಸ್ ವ್ಯಾಪಾರಸ್ಥ ಅಬ್ದುಲ್ ಗನಿ ನಿಜಾಮುದ್ದಿನ್ ಖಾಜಿ ಎನ್ನುವವರು ಅಂಕೋಲಾ ಪೊಲೀಸ್ ಠಾಣೆಯಲ್ಲಿ, ದೂರು ನೀಡಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಕಾನೂನು ಕ್ರಮ ಮುಂದುವರೆಸಿದ್ದಾರೆ.
ಅಂಕೋಲಾ ಸಿ.ಪಿ.ಐ ಸಂತೋಷ ಶೆಟ್ಟಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.ERSS 112 ವಾಹನ ಸಿಬ್ಬಂದಿಗಳು, ಸುಂಕಸಾಳ out post ಸಿಬ್ಬಂದಿಗಳು ಹಾಜರಿದ್ದು ಹೆದ್ದಾರಿ ಸುಗಮ ಸಂಚಾರಕ್ಕೆ ಕರ್ತವ್ಯ ನಿರ್ವಹಿಸಿದರು. ಅಪಘಾತದ ಸ್ಥಳದಿಂದ ಮೃತ ದೇಹವನ್ನು ಅಂಕೋಲಾ ತಾಲೂಕಾ ಸರಕಾರಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಸಾಮಾಜಿಕ ಕಾರ್ಯಕರ್ತ ಬೊಮ್ಮಯ್ಯ ನಾಯ್ಕ ಮತ್ತಿತರರು ಸಹಕರಿಸಿದರು.
ಅಲ್ಲಲ್ಲಿ ಕೆಟ್ಟಿರುವ ಹೆದ್ದಾರಿ, ಅತಿವೇಗ ಹಾಗೂ ನಿರ್ಲಕ್ಷದ ಚಾಲನೆ, ಜೋರಾದ ಮಳೆ ಮತ್ತಿತರ ಕಾರಣಗಳಿಂದ ಈ ಹೆದ್ದಾರಿಯಲ್ಲಿ ಅಪಘಾತ ಸಾವು – ನೋವುಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ಸುರಕ್ಷಿತ ಚಾಲನೆಗೆ ಎಲ್ಲರೂ ಒತ್ತು ನೀಡಬೇಕಿದೆ. ಇಂದು ಬೆಳಗಿನ ಜಾವದ ಸೂರ್ಯ ಕಿರಣ ಭೂಮಿ ಮೇಲೆ ಬೀಳುವ ಸಮಯದಲ್ಲಿಯೇ, ಮುಂಡಗೋಡ ಪಾಳಾ ನಿವಾಸಿ ತನ್ನ ಚಾಲಕ ವೃತ್ತಿಯ ಮೂಲಕವೇ ಬಡಕುಟುಂಬದ ಆಧಾರಸ್ತಂಭವಾಗ ಹೊರಟಿದ್ದ ಕಿರಣ ಇನ್ನಿಲ್ಲಲಾಗಿರುವುದು ವಿಧಿಯಾಟವೇ ಸರಿ ಎಂದು ಮೃತ ಯುವಕನ ಆತ್ಮೀಯರು ಗೋಗರೆಯುವಂತಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ