ಕುಮಟಾ: ಸಂಸ್ಕೃತವು ವಿಶ್ವಮಾನ್ಯವಾದ ಭಾಷೆಯಾಗಿದ್ದು, ಶ್ರೀಮಂತವಾದ ಇತಿಹಾಸ-ಪರಂಪರೆಯನ್ನು ಹೊಂದಿದ್ದು, ಅದರ ಕುರಿತು ನಿರಂತರವಾದ ಅಧ್ಯಯನವನ್ನು ಕೈಗೊಂಡಲ್ಲಿ ಸಂಸ್ಕೃತಿಯು ವೃದ್ಧಿಸಲು ಸಾಧ್ಯ ಎಂದು ಕ್ಷೇತ್ರ ಸಂಪನ್ಮೂಲ ವ್ಯಕ್ತಿ ವಿನೋದ ನಾಯಕ ಗುಂಬ್ಲಿ ಹೇಳಿದರು. ಅವರು ತಾಲ್ಲೂಕಿನ ಹಿರೇಗುತ್ತಿಯ ಸೆಕೆಂಡರಿ ಪ್ರೌಢಶಾಲೆಯಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕುಮಟಾ ತಾಲ್ಲೂಕಾ ಪ್ರೌಢಶಾಲಾ ಸಂಸ್ಕೃತ ಬೋಧಕರ ಸಂಘ ಹಾಗೂ ಕರ್ನಾಟಕ ಸಂಸ್ಕೃತ ಪರಿಷತ್‌ನ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ 2022-23 ನೇ ಶೈಕ್ಷಣಿಕ ಸಾಲಿನ ಕುಮಟಾ ತಾಲ್ಲೂಕಾ ಮಟ್ಟದ ಪ್ರೌಢಶಾಲಾ ಸಂಸ್ಕೃತ ಅಧ್ಯಾಪಕರ ಪ್ರಥಮ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಸಂಸ್ಕೃತವು ಯಾವುದೇ ಜನಾಂಗಕ್ಕೆ ಮೀಸಲಾದ ಭಾಷೆಯಾಗಿರದೇ, ಎಲ್ಲರೂ ಕಲಿಯಬಹುದಾದ ಭಾಷೆಯಾಗಿದ್ದು, ಇಷ್ಟಪಟ್ಟು ಕಲಿತು ಸಂಸ್ಕೃತವನ್ನು ತಮ್ಮದಾಗಿಸಿಕೊಳ್ಳಬೇಕೆಂದು ಅವರು ಕರೆಗೊಟ್ಟರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಮುಖ್ಯಾಧ್ಯಾಪಕ ರೋಹಿದಾಸ ಗಾಂವಕರರವರು ಸಂಸ್ಕೃತದ ಕಲಿಕೆಯಿಂದ ಭಾಷಾ ಸಿದ್ಧಿಯು ಸಾಧ್ಯವಾಗುವುದರ ಜೊತೆಗೆ ಸ್ಮರಣ ಶಕ್ತಿಯು ಹೆಚ್ಚುತ್ತದೆಯಲ್ಲದೇ ಉಚ್ಚಾರದಲ್ಲಿ ಸ್ಪಷ್ಟತೆಯು ಉಂಟಾಗುವುದಲ್ಲದೇ, ಸಂಸ್ಕೃತವನ್ನು ಆಯ್ದು ಅಭ್ಯಸಿಸಿದ ವಿದ್ಯಾರ್ಥಿಗಳಲ್ಲಿ ಬಹುಸಂಖ್ಯಾತರು ಸಂಸ್ಕೃತ ವಿಷಯದಲ್ಲಿ 100 ಕ್ಕೆ 100 ಅಂಕಗಳನ್ನು ಪಡೆಯುತ್ತಿದ್ದಾರಲ್ಲದೇ, ಇತರ ವಿಷಯಗಳಲ್ಲೂ ಅಧಿಕ ಅಂಕಗಳನ್ನು ಪಡೆಯುತ್ತಿರುವುದು ಸಂಸ್ಕೃತದ ಹಿರಿಮೆ ಎಂದರು.
ಕಲಬಾಗದ ಸಿ.ವಿ.ಎಸ್.ಕೆ. ಪ್ರೌಢಶಾಲೆಯ ಶಿಕ್ಷಕ ಸುರೇಶ ಹೆಗಡೆ ಸ್ವಾಗತಿಸಿದರು. ನೆಲ್ಲಕೇರಿಯ ಕರ್ನಾಟಕ ಪಬ್ಲಿಕ್ ಸ್ಕೂಲಿನ ಶಿಕ್ಷಕಿ ಗೀತಾ ಭಟ್ಟ್ ವಂದಿಸಿದರು. ಕಾಂಚಿಕಾ ಸಂಗಡಿಗರು ಪ್ರಾರ್ಥಿಸಿದರು. ದಿವಗಿಯ ಡಿ.ಜೆ.ವಿ.ಎಸ್. ಪ್ರೌಢಶಾಲೆಯ ಶಿಕ್ಷಕ ಭಾಸ್ಕರ ಭಟ್ಟ್ ನಿರೂಪಿಸಿದರು. ಹಿರೇಗುತ್ತಿಯ ಪ್ರೌಢಶಾಲೆಯ ಕನ್ನಡ ಶಿಕ್ಷಕ ಎನ್ ರಾಮು ಹಿರೇಗುತ್ತಿ ಕಾರ್ಯಕ್ರಮವನ್ನು ಸಂಯೋಜಿಸಿದರು. ಕುಮಟಾ ತಾಲ್ಲೂಕಾ ಸಂಸ್ಕೃತ ಬೋಧಕರ ಸಂಘದ ಅಧ್ಯಕ್ಷ ಆಯ್.ವಿ. ಭಟ್ಟ್ ಹಾಗೂ ಕರ್ನಾಟಕ ಸಂಸ್ಕೃತ ಪರಿಷತ್‌ನ ರಾಜ್ಯಾಧ್ಯಕ್ಷರಾದ ಮಂಜುನಾಥ ಗಾಂವಕರ ಬರ್ಗಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ತರವಾಯ ಇಲಾಖೆಯಿಂದ ನೀಡಲಾದ ಕಲಿಕಾ ಹಾಳೆಯೊಂದಿಗೆ ಕಲಿಕಾ ಚೇತರಿಕೆ ವಿಷಯಕ್ಕೆ ಸಂಬoಧಿಸಿದ0ತೆ ಸಂಸ್ಕೃತ ಶಿಕ್ಷಕರೆಲ್ಲರೂ ವ್ಯಾಪಕವಾಗಿ ಸಮಾಲೋಚಿಸಿದರು.