ಶಾಲಾ ಕಾಲೇಜ ಪಕ್ಕದ ಮುಖ್ಯ ರಸ್ತೆಗೆ ಅಡ್ಡಲಾಗಿ ಬಿದ್ದ ಭಾರೀ ಗಾತ್ರದ ಮರ : ಅಗ್ನಿ ಶಾಮಕ ಮತ್ತು ಹೆಸ್ಕಾಂ ತಂಡದ ಕಾರ್ಯಕ್ಕೆ ನಾಗರಿಕರ ಮೆಚ್ಚುಗೆ
ಅಂಕೋಲಾ: ಪಟ್ಟಣದ ಕೆ.ಸಿ ರಸ್ತೆ ಅಂಚಿಗೆ ಇರುವ ಬೃಹತ್ತ್ ಗಾತ್ರದ ಅರಳಿ ಮರವೊಂದು ಬುಧವಾರ ಬೆಳಿಗ್ಗೆ 6.30 ರ ಸುಮಾರಿಗೆ ಧರೆಗುರುಳಿದ್ದು ಜನ ಸಂಚಾರ ವಿರಳವಾಗಿದ್ದರಿಂದ ಸಂಭವನೀಯ ಭಾರೀ ಅನಾಹುತ ತಪ್ಪಿದಂತಾಗಿದೆ.
ನೂರಾರು ವರ್ಷಗಳ ಹಿಂದಿನ ಬೃಹತ್ತ್ ಅರಳಿ ಮರ ಮುರಿದು ಬಿದ್ದ ಸ್ಥಳದ 50 ಮೀಟರ್ ಸಮೀಪದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ . ಅವರಣದಲ್ಲಿ ಕನ್ನಡ ಹಾಗೂ ಉರ್ದು ಪ್ರಾಥಮಿಕ ಶಾಲೆಗಳ ಜೊತೆ ಇದೇ ಅವರಣದಲ್ಲಿ ಪ್ರೌಢ ಶಾಲೆ , ಪಿಯು ಕಾಲೇಜ್ ಗಳಿವೆ. ಇವುಗಳ ಹೊರತಾಗಿ ಈ ಮುಖ್ಯ ರಸ್ತೆಯಿಂದ ವಿವಿಧ ಶಾಲಾ ಕಾಲೇಜುಗಳಿಗೆ ತೆರಳುವ ಶಾಲಾ ವಿದ್ಯಾರ್ಥಿಗಳು ಸೇರಿದಂತೆ, ಬ್ಯಾಂಕ್ , ಕಛೇರಿ, ಆಸ್ಪತ್ರೆ, ಇಂದಿರಾ ಕ್ಯಾಂಟೀನ್ ಮತ್ತಿತರೆಡೆ ಇದೇ ಮಾರ್ಗವಾಗಿ ದಿನನಿತ್ಯ ಸಾವಿರಾರು ಜನರು ಒಡಾಡಿಕೊಂಡಿರುತ್ತಾರೆ.
ಪಟ್ಟಣ ಸೇರುವ ಪ್ರಮುಖ ರಸ್ತೆಗಳಲ್ಲಿ ಒಂದಾಗಿರುವ ಈ ರಸ್ತೆಯಿಂದಲೇ ಗ್ರಾಮೀಣ ಭಾಗದ ಹಲವು ಊರುಗಳನ್ನು ಸಂಪರ್ಕಿಸುವ ಹತ್ತಾರು ರೂಟಗಳ ಬಸ್ಸು, ಖಾಸಗಿ ವಾಹನಗಳು ಸಂಚರಿಸುವುದರಿಂದ ಈ ರಸ್ತೆ ಜನನಿಬೀಡ ಪ್ರದೇಶವಾಗಿ ಗುರುತಿಸಿಕೊಂಡಿದೆ. ಹಾಗಿದ್ದೂ ಶಾಲಾ ಕಾಲೇಜುಗಳು, ಬ್ಯಾಂಕ್ – ಕಛೇರಿಗಳು ಆರಂಭವಾಗುವ ಮೊದಲೇ ನಸುಕಿನ ವೇಳೆ ಮರ ಮುರಿದು ಬಿದ್ದದ್ದರಿಂದ ಅದೃಷ್ಟವಶಾತ್ ಯಾರಿಗೂ ತೊಂದರೆ ಆಗಿಲ್ಲ .
ಸುದ್ದಿ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಉಮೇಶ ನಾಯ್ಕ ನೇತೃತ್ವದ ಅಗ್ನಿಶಾಮಕ ತಂಡ ವಿಶೇಷವಾಗಿ ಶ್ರಮಿಸಿ ರಸ್ತೆಗೆ ಅಡ್ಡಲಾಗಿ ಬಿದ್ದ ಮರದ ರಂಬೆ – ಕೊಂಬೆಗಳನ್ನು ಕತ್ತರಿಸಿ ತುರ್ತು ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಉದಯ ಗಾಂವಕರ, ಪ್ರಶಾಂತ ಆಚಾರಿ, ರಮಾಕಾಂತ ಗಾಂವಕರ, ಗೋಪಾಲಗೌಡ ಮತ್ತಿತರ ಹೆಸ್ಕಾಂ ಸಿಬ್ಬಂದಿಗಳು ಸ್ಥಳದಲ್ಲೇ ಹಾಜರಿದ್ದು ಸೂಕ್ತ ಮುನ್ನೆಚ್ಚರಿಕೆ ಕ್ರಮ ಕೈಗೊಂಡರಲ್ಲದೇ ಕಡಿತ ಗೊಂಡ ವಿದ್ಯುತ್ತ ಸಂಪರ್ಕ ಸರಿಪಡಿಸಲು 2 ತಾಸಿಗೂ ಹೆಚ್ಚು ಕಾಲ ಕರ್ತವ್ಯ ನಿರ್ವಹಿಸಿದರು. ಈ ವೇಳೆಗಾಗಲೇ ಪುರಸಭೆ ವತಿಯಿಂದ ಮರ ಕಟಾವು ಗುತ್ತಿಗೆ ಪಡೆದಿದ್ದ ತುಳುಸು ಗೌಡ , ಹಾಗೂ ರಾಜೇಶ ಮತ್ತಿತರ ಕೆಲಸಗಾರರು ಆಗಮಿಸಿ 5 ತಾಸಿಗೂ ಹೆಚ್ಚು ಕಾಲ ಶ್ರಮಿಸಿ ಮರದ ಬೃಹತ್ ಟೊಂಗೆಗಳ ತೆರವು ಕಾರ್ಯಾಚರಣೆ ಕೈಗೊಂಡರು.
ಪುರಸಭೆ ಮುಖ್ಯಾಧಿಕಾರಿ ಎನ್ ಎಂ ಮೇಸ್ತ ಸ್ಥಳ ಪರಿಶೀಲಿಸಿ ಸಿಬ್ಬಂದಿಗಳಿಗೆ ಅಗತ್ಯ ಸೂಚನೆ ನೀಡಿ ಜೆಸಿಬಿ ಬಳಸಿ ರಸ್ತೆಯಲ್ಲಿ ಬಿದ್ದ ರಂಬೆ ಕೊಂಬೆಗಳನ್ನು ಪಕ್ಕಕ್ಕೆ ಸರಿಸಲು ಸೂಚಿಸಿದರು.ಸ್ಥಳೀಯ ವಾರ್ಡ್ ಸದಸ್ಯ ವಿಶ್ವನಾಥ್ ನಾಯ್ಕ ಇದ್ದರು. ಅರಣ್ಯ ಇಲಾಖೆ ಸಿಬ್ಬಂದಿಗಳು ಕೈ ಜೋಡಿಸಿದರು. 112 ತುರ್ತು ವಾಹನ ಸಿಬ್ಬಂದಿ ಸಂತೋಷ ನಾಯ್ಕ ಮತ್ತಿತರರ ಹಾಜರಿದ್ದು ಸಂಚಾರಕ್ಕೆ ಬದಲಿ ಮಾರ್ಗ ಸೂಚಿಸಿ ವಾಹನ ದಟ್ಟಣೆ ನಿಯಂತ್ರಿಸಿದರು. ಸ್ಥಳೀಯರು ಸಹಕರಿಸಿದರು. ಸುಮಾರು 5 ತಾಸಿಗೂ ಹೆಚ್ಚು ಕಾಲ ಈ ರಸ್ತೆಯಲ್ಲಿ ಸಂಚಾರ ವ್ಯತ್ಯಯವಾದರೂ ನಿರಂತರ ಶ್ರಮ ವಹಿಸಿ ಮರ ತೆರವುಗೊಳಿಸಿದ ಸರ್ವರ ಕಾರ್ಯಕ್ಕೆ ಸ್ಥಳೀಯರು ಸೇರಿದಂತೆ ಇತರೆ ನಾಗರಿಕರು ಮೆಚ್ಚುಗೆ ವ್ಯಕ್ತಪಡಿಸಿದರು .
ಪಟ್ಟಣದ ಇತರ ಪ್ರಮುಖ ರಸ್ತೆಗಳು, ಕುಂಬಾರಕೇರಿ ಕದಂಬೇಶ್ವರ ದೇವಸ್ಥಾನದ ಎದುರು ಹಾಗೂ ಇತರೆ ವ್ಯಾಪ್ತಿಯ ಹಲವೆಡೆ ಮರಗಳು ಬೀಳುವ ಹಂತದಲ್ಲಿದ್ದು,ಅಪಾಯವಾಗುವ ಮುನ್ನ ಸಂಬಂಧಿತ ಇಲಾಖೆಗಳು ಅಂತವುಗಳನ್ನು ಗುರುತಿಸಿ ಅವುಗಳನ್ನು ಕತ್ತರಿಸುವ ಇಲ್ಲವೇ ಕೊನೆಯ ಪಕ್ಷ ಭಾರವಾದ ದೊಡ್ಡ ಟಿಸಿಲುಗಳನ್ನಾದರೂ ಕತ್ತರಿಸಿ ಮುನ್ನೆಚ್ಚರಿಕೆ ವಹಿಸಬೇಕು ಮತ್ತು ಖಾಸಗಿ ಜಾಗದಲ್ಲಿ ಮರಗಳಿದ್ದರೆ ಅವರಿಗೆ ನೋಟಿಸ್ ಮಾಡಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕೆನ್ನುವುದು ಪ್ರಜ್ಞಾವಂತರ ಅನಿಸಿಕೆಯಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ