ಕಾಲು ಜಾರಿ ಬಿದ್ದು ನೀರಲ್ಲಿ ಕೊಚ್ಚಿ ಹೋಗಿದ್ದ ರೈತ: ಅವಿವಾಹಿತ ಮಗನನ್ನು ಕಳೆದುಕೊಂಡ ತಂದೆ ತಾಯಿಗಳ ರೋಧನ   

ನಾಟಿ ಕೆಲಸ ಮಾಡಿಕೊಂಡು ಬರುತ್ತಿದ್ದ ವೇಳೆ ಕಾಲುಜಾರಿ ದುರಂತ

ಅಂಕೋಲಾ: ರೈತಾಬಿ ಕೆಲಸಕ್ಕೆ ಹೋದ ವ್ಯಕ್ತಿ ಕಾಲು ಜಾರಿ ಬಿದ್ದು ಹಳ್ಳದ ನೀರಿನ ರಭಸಕ್ಕೆ ಕೊಚ್ಚಿ ಹೋಗಿ,ಮೃತ ಪಟ್ಟ ಘಟನೆ ತಾಲೂಕಿನ ಬೊಗ್ರಿಬೈಲ್ ನಲ್ಲಿ ಸಂಭವಿಸಿದೆ.  ತಾಲೂಕಿನ ಬಾಳೇಗುಳಿ ನಿವಾಸಿ ಸುನೀಲ ಶಂಕರ ಗೌಡ (35) ಮೃತ ದುರ್ದೈವಿಯಾಗಿದ್ದು, ಈತ ಬೊಗ್ರಿಬೈಲ್ ನಲ್ಲಿ ಇರುವ ಗೇಣಿ ಗದ್ದೆಯಲ್ಲಿ ನಾಟಿ ಕೆಲಸ ಮುಗಿಸಿ ಕಾಲು ದಾರಿಯಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಹಳ್ಳಕ್ಕೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿದ್ದ ಎನ್ನಲಾಗಿದ್ದು, ನಂತರ ಸ್ವಲ್ಪ ದೂರದಲ್ಲಿ ಆತನ ಮೃತ ದೇಹ ಪತ್ತೆಯಾಗಿತ್ತು.

ಅಂಕೋಲಾ  ತಹಶೀಲ್ದಾರ ಉದಯ ಕುಂಬಾರ, ಕಂದಾಯ ನಿರೀಕ್ಷಕ ಸಂತೋಷ ಯಳಗದ್ದೆ, ಪಿ ಎಸ್ ಐ ಮಹಾಂತೇಶ ವಾಲ್ಮೀಕಿ ಸ್ಥಳಕ್ಕೆ  ಭೇಟಿ ನೀಡಿ ಪರಿಶೀಲಿಸಿದರು. ಸ್ಥಳೀಯರು ನೀರಿನಿಂದ ಮೃತ ದೇಹವನ್ನು ಮೇಲೆತ್ತಿದರು. ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ನಾಯ್ಕ ಮತ್ತಿತರರು ಅಂಬುಲೆನ್ಸ ಮೂಲಕ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಾಲೂಕಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿದರು.

ಘಟನೆಯ ಕುರಿತಂತೆ ಮೃತನ ಸಹೋದರ ಸಂದೀಪ ಗೌಡ  ದೂರು ನೀಡಿದ್ದು ಅಂಕೋಲಾ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುನೀಲ ಗೌಡನ ನಿಧನದ ಸುದ್ದಿ ಕೇಳಿ ಸ್ಥಳೀಯ ಶಾಸಕಿ ರೂಪಾಲಿ ನಾಯ್ಕ ಮತ್ತಿತರ ಗಣ್ಯರು ಸಂತಾಪ ಸೂಚಿಸಿದ್ದಾರೆ. ಸ್ಥಳೀಯ ಮುಖಂಡರು, ಸಮಾಜದ ಪ್ರಮುಖರು, ಊರ ನಾಗರಿಕರು, ಮೃತನ ಕುಟುಂಬಸ್ಥರು ಅಂತಿಮ ದರ್ಶನ ಪಡೆದರು.

ಅವಿವಾಹಿತನಾಗಿದ್ದ ಸುನೀಲ ಗೌಡ ಕೃಷಿ ಕಾರ್ಯ ಕೈಗೊಂಡು ತನ್ನ ತಂದೆ ತಾಯಿ ಮತ್ತು ಕುಟುಂಬಕ್ಕೆ ಆಸರೆಯಾಗಿದ್ದ ಎನ್ನಲಾಗಿದ್ದು, ಆತನ  ಅಕಾಲಿಕ ಅಗಲುವಿಕೆಯಿಂದ ನೊಂದ ಬಡ ಕುಟುಂಬಕ್ಕೆ ಸರ್ಕಾರದಿಂದ ನೆರವು ದೊರೆಯಬೇಕಿದೆ ಎಂಬ ಮಾತು ಕೇಳಿಬಂದಿದೆ.                    

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version