ಓಸಿ ಅಡ್ಡೆಯ ಮೇಲೆ ಪೋಲೀಸರ ದಾಳಿ: ಬುಕ್ಕಿ ಮತ್ತು ಎಜೆಂಟರು ಸೇರಿ 15 ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ
ಈಗಲೂ ಮುಂದುವರೆದಿದೆ ಅಕ್ರಮ ದಂಧೆ ?
ಅಂಕೋಲಾ : ತಾಲೂಕಿನಲ್ಲಿ ಓಸಿ – ಮಟಕಾ – ಜುಗಾರಾಟಕ್ಕೆ ಸಂಬಂಧಿಸಿದಂತೆ ಆಗಾಗ ಒಂದೆರಡು ಪ್ರಕರಣಗಳು ದಾಖಲಾಗುತ್ತಿತ್ತಾದರೂ ಇತ್ತೀಚಿನ ದಿನಗಳಲ್ಲಿ ಓಸಿ ಅಡ್ಡೆ ಮೇಲೆ ಪೋಲೀಸರು ನಿರಂತರ ದಾಳಿ ಕೈಗೊಂಡು ಹಲವರು ಬುಕ್ಕಿಗಳು ಮತ್ತು ಏಜೆಂಟರ ಮೇಲೆ ಪ್ರಕರಣ ದಾಖಲಿಸುತ್ತಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಓಸಿ ಬುಕ್ಕಿ ಎಂದು ಹೇಳಲಾದ ಲಕ್ಷ್ಮಣ ಎನ್ನುವ ವ್ಯಕ್ತಿಯನ್ನು ವಶಕ್ಕೆ ಪಡೆದು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದ ಪೋಲೀಸರು, ಅದಾದ ಬಳಿಕವೂ ಇತರರ ಮೇಲೆ 1-2 ಪ್ರಕರಣ ದಾಖಲಿಸಿದ್ದರು.
ಎಸ್ಪಿ ಡಾ. ಸುಮನ್ ಪೆನ್ನೇಕರ ಮಾರ್ಗದರ್ಶನದಲ್ಲಿ ಜಿಲ್ಲಾ ವಿಶೇಷ ದಳದ ಪೊಲೀಸ್ ಉಪ ನಿರೀಕ್ಷಕರಾಗಿರುವ ಪ್ರೇಮನಗೌಡ ಪಾಟೀಲ ಹಾಗೂ ಅಂಕೋಲಾ ಠಾಣೆಯ ಪಿ ಎಸ್ ಐ ಪ್ರವೀಣ ಕುಮಾರ ಹಾಗೂ ಸಿಬ್ಬಂದಿಗಳ ತಂಡ ಆಗಸ್ಟ್ 10 ರಂದು ತಾಲೂಕಿನ ಪ್ರತ್ಯೇಕ ಸ್ಥಳಗಳಲ್ಲಿ ಈ ವರೆಗಿನ ದೊಡ್ಡ ದಾಳಿ ಎಂಬಂತೆ ಕಾರ್ಯಾಚರಣೆ ಕೈಗೊಂಡು ಓಸಿ ಬುಕ್ಕಿ ಸಹಿತ ಇತರೆ ಆರೋಪಿಗಳ ವಿರುದ್ಧ ಕೇಸ್ ದಾಖಲಿಸಿಕೊಂಡು ಓಸಿ – ಜುಗಾರಾಟಕ್ಕೆ ಬಳಸಿದ ಸಲಕರಣೆಗಳು ಮತ್ತು ಓಸಿ ಜುಗಾರಾಟದಿಂದ ಸಂಗ್ರಹಿಸಿದ ಒಟ್ಟೂ 51310 ರೂ. ನಗದು ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಪೊಲೀಸ್ ದಾಳಿಗೂ ಬಗ್ಗುತ್ತಿಲ್ಲ ಬುಕ್ಕಿಗಳು?
ಈ ಪ್ರಕರಣಗಳಿಗೆ ಸಂಬಂಧಿಸಿದಂತೆ ತಾಲೂಕಿನ ಅವರ್ಸಾ, ಸಕಲಬೇಣ, ಹಟ್ಟಿಕೇರಿ, ಬೇಲೇಕೇರಿ ಹಾಗೂ ಸುತ್ತಮುತ್ತಲ ಮಜಿರೆಗಳ 15 ಕ್ಕೂ ಹೆಚ್ಚು ಆರೋಪಿತರ ಮೇಲೆ ಪ್ರಕರಣ ದಾಖಲಾಗಿದೆ. ಅ 11 ರಂದು ದಾಖಲಾದ ಪ್ರತ್ಯೇಕ ಮತ್ತೊಂದು ಪ್ರಕರಣದಲ್ಲಿ ಪಿಎಸ್ಐ ಪ್ರವೀಣ ಕುಮಾರ ಮತ್ತು ಸಿಬ್ಬಂದಿಗಳು ಹೊನ್ನೇಕೇರಿ ಕ್ರಾಸ್ ಬಳಿ ದಾಳಿನಡೆಸಿ ಆರೋಪಿ ನಿಲೇಶ ಎನ್ನುವವನನ್ನು ವಶಕ್ಕೆ ಪಡೆದು ಓಸಿ – ಜುಗಾರಾಟದಿಂದ ಸಂಗ್ರಹಿಸಿದ ರೂ 1230 ನಗದು ವಶಪಡಿಸಿಕೊಂಡು ಇನ್ನೋರ್ವ ಆರೋಪಿತ ಸಂದೀಪ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ಪೊಲೀಸರ ನಿರಂತರ ದಾಳಿಯಿಂದ ಈ ಹಿಂದಿನ ಕೆಲವು ಬುಕ್ಕಿಗಳು ಮತ್ತು ಏಜೆಂಟರಿಗೆ ಬಿಸಿ ಮುಟ್ಟಿ ಓಸಿ ದಂಧೆಯನ್ನೇ ಬಿಟ್ಟಂತೆ ಕಂಡು ಬಂದರೆ, ಇನ್ನು ಕೆಲವರು ಯಾವುದೇ ದಾಳಿಗೂ ಕ್ಯಾರೇ ಎನ್ನದೇ ತಮ್ಮ ಅಕ್ರಮ ದಂಧೆ ಮುಂದುವರಿಸಿದ್ದಾರೆ ಎನ್ನಲಾಗಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ