Focus News

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವರ್ಷಾಚರಣೆ:ಪಟ್ಟಣದ ಸೌಂದರ್ಯಕ್ಕೆ ಒತ್ತು ನೀಡುವ ಕೆಲಸ

ಅಂಕೋಲಾ:ಪಟ್ಟಣದ ಜೈಹಿಂದ್ ಹೈಸ್ಕೂಲ್ ಮೈದಾನದ ಎದುರಿನ ವೃತ್ತದಲ್ಲಿ ಅಂಕೋಲಾ ಪುರಸಭೆ ವತಿಯಿಂದ ಬ್ಯಾಂಕ್ ಆಪ್ ಬರೋಡ ಸಹಕಾರದಲ್ಲಿ ಬೃಹತ್ತ್ ಜಾಹೀರಾತು ಫಲಕ ಅಳವಡಿಸುವ ಮೂಲಕ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ವರ್ಷಾಚರಣೆ ಸಂದರ್ಭದಲ್ಲಿ ಪಟ್ಟಣದ ಸೌಂದರ್ಯಕ್ಕೆ ಒತ್ತು ನೀಡುವ ಕೆಲಸ ಮಾಡಲಾಗಿದೆ.

ಇತ್ತೀಚಿನ ಕೆಲವು ವರ್ಷಗಳಿಂದ ಇಲ್ಲಿ ಅಳವಡಿಸಿದ ಜಾಹಿರಾತು ಫಲಕ ಮಳೆ,ಗಾಳಿಗೆ ಸಿಲುಕಿ ಹಾಗೂ ಮತ್ತಿತರ ಕಾರಣಗಳಿಂದ ಕಿತ್ತು ಹೋಗಿ, ಫಲಕ ಅಳವಡಿಸುವ ಕಬ್ಬಿಣದ ಚೌಕಟ್ಟುಗಳು ಅಸ್ಥಿ ಪಂಜರದಂತೆ ಗೋಚರಿಸಿ ಅಸಹ್ಯಕರವಾಗಿ ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತೆ ಕಂಡು ಬರುತ್ತಿತ್ತು.

ಸಾಮಾಜಿಕ ಕಾರ್ಯಕರ್ತರಾದ ವಿಜಯಕುಮಾರ್ ನಾಯ್ಕ ಮತ್ತು ಉಮೇಶ ನಾಯ್ಕ ಮತ್ತಿತರರು ಈ ಕುರಿತು ತಮ್ಮ ಅಸಮಾಧಾನ ವ್ಯಕ್ತಪಡಿಸಿ ಈ ದಿಶೆಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು. ವಿಸ್ಮಯ ನ್ಯೂಸ್ ಸಹ ಈ ಕುರಿತು ವಿಶೇಷ ವರದಿ ಪ್ರಕಟಿಸುವ ಮೂಲಕ ಸಂಬಂಧಿಸಿದವರ ಗಮನ ಸೆಳೆಯುವ ಪ್ರಯತ್ನ ನಡೆಸಿತ್ತು.

ಇದೀಗ ಪುರಸಭೆ ಅಧ್ಯಕ್ಷೆ ಶಾಂತಲಾ ನಾಡಕರ್ಣಿ ಮತ್ತು ಪುರಸಭೆ ಸದಸ್ಯರು ಮತ್ತು ಮುಖ್ಯಾಧಿಕಾರಿ ಎನ್. ಎಂ.ಮೇಸ್ತ ಅವರು ವಿಶೇಷ ಪ್ರಯತ್ನ ಮಾಡಿ ಸಂಬಂಧಿಸಿದ ಈ ಹಿಂದೆ ವಿಜಯ ಬ್ಯಾಂಕ್ ಎಂದು ಕರೆಯಿಸಿಕೊಂಡು ಈಗ ಬ್ಯಾಂಕ್ ಆಫ್ ಬರೋಡಾ ಎಂದು ಬದಲಾಗಿರುವ ಆಡಳಿತ ವ್ಯವಸ್ಥೆಯೊಂದಿಗೆ ಸ್ಥಳೀಯ ವ್ಯವಸ್ಥಾಪಕರ ಜೊತೆ ಸಮಾಲೋಚಿಸಿ, ಆಡಳಿತಾತ್ಮಕ ಒಪ್ಪಂದದೊಂದಿಗೆ ಜಾಹಿರಾತು ಫಲಕ ಅಳವಡಿಸಿ ಕಳೆಗುಂದಿ ಸೊರಗಿದ್ದ ಪಟ್ಟಣದ ಪ್ರಮುಖ ವೃತ್ತಕ್ಕೆ ಮೆರಗನ್ನು ಹೆಚ್ಚಿಸುವ ಪ್ರಯತ್ನ ಮಾಡಿ ಜವಾಬ್ದಾರಿ ನಿಭಾಯಿಸಿದ್ದಾರೆ.

ಆಡಳಿತಾತ್ಮಕ ಮತ್ತಿತರ ಕಾರಣಗಳಿಂದ ಬಹಳ ಕಾಲದಿಂದ ನೆನೆಗುದ್ದಿ ಗೆ ಬಿದ್ದಿದ್ದ ಈ ವಿಚಾರ ಸ್ವಾತಂತ್ರ್ಯೋತ್ಸವದ ಸುಸಂದರ್ಭದಲ್ಲಿ ಸುಧಾರಣೆ ಕಂಡ ತಾಗಿದೆ. ಈ ಕುರಿತು ಅಧಿಕಾರಿಗಳ ಮತ್ತು ಸಂಬಂಧಿಸಿದವರು ಕ್ರಮಕ್ಕೆ ಹರ್ಷ ವ್ಯಕ್ತಪಡಿಸಿರುವ ಸ್ಥಳೀಯರು ಮತ್ತು ಸಾಮಾಜಿಕ ಕಾರ್ಯಕರ್ತರು,ಇನ್ನು ಮುಂದೆಯೂ ಪುರಸಭೆ ಫಲಕ ನಿರ್ವಹಣೆಯತ್ತ ವಿಶೇಷ ಗಮನ ಹರಿಸುತ್ತಾ ಇರುವಂತಾಗಬೇಕೆಂದು ವಿನಂತಿಸಿದ್ದಾರೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button