ಗಬ್ಬೆದ್ದು ನಾರುವ ರಥ ಬೀದಿ ರಸ್ತೆ : ಕುಸಿಯುವ ಭೀತಿಯಲ್ಲಿ ಕಾಂಕ್ರೀಟ್ ರಸ್ತೆ : ಪುರಸಭೆ ವ್ಯಾಪ್ತಿಯಲ್ಲಿ ಏಕೆ ನಾನಾ ಅವ್ಯವಸ್ಥೆ ?

ರಸ್ತೆಯಲ್ಲಿ ಓಡಾಡುವ ಜನರಿಗೆ ಕಿರಿಕಿರಿ

ಅಂಕೋಲಾ:ಪಟ್ಟಣದ ರಥಬೀದಿಯ ಚರಂಡಿಗಳಲ್ಲಿ ಹೂಳೆತ್ತುವ ಕಾಮಗಾರಿ ಗುತ್ತಿಗೆ ಪಡೆದ ಗುತ್ತಿಗೆದಾರನ ಅಸಮರ್ಪಕ ಕಾಮಗಾರಿಯಿಂದ ರಸ್ತೆಯಲ್ಲಿ ಓಡಾಡುವ ಜನರು ಕಿರಿಕಿರಿ ಅನುಭವಿಸುವಂತಾಗಿದೆ.

ಸೊಳ್ಳೆ ನಿವಾರಣೆಗೆ ಬಳಸುವ ಗುಡ್ ನೈಟ್ ಲಿಕ್ವಿಡ್ ಕುಡಿದು ಬಾಲಕ ಸಾವು

ಪುರಸಭೆ ವತಿಯಿಂದ ಗುತ್ತಿಗೆ ಪಡೆದ ಗುತ್ತಿಗೆದಾರ ಕೇವಲ ಕಾಟಾಚಾರಕ್ಕೆ ಹೂಳೆತ್ತುವ ಕೆಲಸ ಮಾಡಿದಂತಿದ್ದು, ಎತ್ತಿದ ಹೂಳನ್ನು ಸರಿಯಾಗಿ ವಿಲೇವಾರಿ ಮಾಡದೇ ಅಲ್ಲೇ ರಾಶಿ ರಾಶಿಯಾಗಿ ಬಿದ್ದಿದೆ. ರಸ್ತೆಯಂಚಿನ ದೊಡ್ಡ ಕಟ್ಟಡ ಸೇರಿದಂತೆ ಇನ್ನಿತರ ಕೆಲ ಮನೆಗಳಿಂದ ಮಲೀನ ಯುಕ್ತ ನೀರನ್ನು ಗಟಾರಕ್ಕೆ ಬಿಡಲಾಗುತ್ತಿದೆ ಎನ್ನಲಾಗಿದ್ದು ಗಟಾರ ಹೊಳೆತ್ತಿದ ಅಸಮರ್ಪಕ ಕಾಮಾಗಾರಿಯಿಂದ ಮಳೆ ನೀರು ಸರಾಗವಾಗಿ ಹರಿದು ಹೋಗದೇ, ಕಟ್ಟಡದಂಚಿನ ಗಟಾರ ಬಂದು ಸೇರುವ ಕೊಚ್ಚೆ ನೀರಿಯೊಂದಿಗೆ ಬೆರೆತು ರಸ್ತೆ ಮೇಲೆ ಹರಿಯಲಾರಂಬಿಸುತ್ತದೆ.

ಇಲ್ಲಿನ ಹೊಲಸು ನೀರಿನ ದುರ್ನಾತಕ್ಕೆ ಕೆಲ ಸ್ಥಳೀಯರು ಮತ್ತು ದಾರಿ ಹೋಕರು ಮೂಗು ಮುಚ್ಚಿ ಓಡಾಡುವ ಪರಿಸ್ಥಿತಿ ಎದುರಾಗಿದೆ.

ತಾಲೂಕಿನ ದೊಡ್ಡ ದೇವರೆಂದೇ ಕರೆಯಲ್ಪಡುವ ಶ್ರೀ ವೆಂಕಟರಮಣ ದೇವಾಲಯಕ್ಕೆ ಈ ರಸ್ತೆ ಮೂಲಕವೇ ಹೋಗಿ ಬರಬೇಕಿದೆ. ಶ್ರಾವಣ ಮಾಸದ ನಿಮಿತ್ತ ವಿಶೇಷ ಪೂಜೆ,ಶನಿವಾರದ ಅನ್ನಸಂತರ್ಪಣೆ ಮತ್ತಿತರ ಕಾರಣಗಳಿಂದ ಬಂದು ಹೋಗುವ ಭಕ್ತರು, ಹಾಗೂ ಅಕ್ಕ ಪಕ್ಕದ ಶಾಲಾ ಕಾಲೇಜು, ಸಂತೆ ವ್ಯಾಪಾರ ಮತ್ತಿತರ ಕಾರಣಗಳಿಂದ ಈ ರಸ್ತೆಯಲ್ಲಿ ಸಾವಿರಾರು ಜನ ದಿನ ನಿತ್ಯ ಒಡಾಡಿಕೊಂಡಿರುವುದರಿಂದ ಅವರೆಲ್ಲ ಹೊಲಸು ವಾತಾವರಣದಿಂದ ಬೇಸರಿಸುವಂತಾಗಿದೆ.

ಅಧಿಕಾರಿಗಳು ಕಣ್ಮುಚ್ಚಿ ಕುಳಿತು ಬಿಲ್ ಪಾಸ್ ಮಾಡಿದರೆ?

ಹೊಳೆತ್ತುವ ಗುತ್ತಿಗೆ ಪಡೆದವರು ತಮ್ಮ ಕೆಲಸ ಸಮರ್ಪಕವಾಗಿ ಮಾಡಿದರೆ ಈ ರೀತಿಯ ಸಮಸ್ಯೆ ಎದುರಾಗುತ್ತಿರಲಿಲ್ಲ. ಅಲ್ಲದೇ ಸಂಬಂಧಿಸಿದ ಪುರಸಭೆ ಅಧಿಕಾರಿಗಳು ಕಣ್ಮುಚ್ಚಿ ಕುಳಿತು ಬಿಲ್ ಪಾಸ ಮಾಡದೇ, ಇಲ್ಲಿನ ಸ್ಥಿತಿ ಗತಿಗಳನ್ನು ಅವಲೋಕಿಸಿ ಸಮಸ್ಯೆ ಪರಿಹಾರಕ್ಕೆ ಕೂಡಲೇ ಕ್ರಮ ವಹಿಸುವಂತಾಗಬೇಕು ಎನ್ನುತ್ತಾರೆ ಕೆಲ ಸಾರ್ವಜನಿಕರು.

ಕೇವಲ ಕಾಟಾಚಾರಕ್ಕೆ ಹೂಳೆತ್ತುವ ಕೆಲಸ ಮಾಡಿದಂತೆ ಕಂಡು ಬರುತ್ತಿರುವುದರಿಂದ ಸುತ್ತಲ ಪರಿಸರ ಗಬ್ಬೆದ್ದು ನಾರುವಂತಾಗಿದ್ದು ಇದರಿಂದಾಗಿ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಸಾಧ್ಯತೆ ಇದೆ.

ರಥ ಬೀದಿಯ ಕಥೆ ಈ ರೀತಿಯಾದರೆ ಪಟ್ಟಣದ ಕಣಕಣೇಶ್ವರ ದೇವಸ್ಥಾನದಿಂದ ಅಜ್ಜಿಕಟ್ಟಾ ಮಾರ್ಗವಾಗಿ ಕಾರವಾರ ಕಡೆ ಹೋಗುವ ರಾ.ಹೆ ಸೇರುವ ಮುಖ್ಯ ರಸ್ತೆಯ ಮಾರ್ಗ ಮಧ್ಯೆ ವಾಜಂತ್ರಿ ಕಟ್ಟೆ ಹತ್ತಿರ (ದೀಪಕ ಹೋಟೆಲ್ ಎದುರುಗಡೆ ) ಹೊಸ ಕಾಂಕ್ರೀಟ ರಸ್ತೆಯಂಚಿನ ಗಟಾರ ಕುಸಿದಿದ್ದು, ದಿನದಿಂದ ದಿನಕ್ಕೆ ಕುಸಿತದ ಪ್ರಮಾಣ ಹೆಚ್ಚುತ್ತಲೇ ಇದೆ. ಕುಸಿತ ಹೀಗೆ ಮುಂದುವರೆದರೆ ಹೊಸ ಕಾಂಕ್ರೀಟ್ ರಸ್ತೆಯಂಚೂ ಕುಸಿಯುವ ಸಾಧ್ಯತೆ ಹೆಚ್ಚಿದೆ. ಈ ಕುರಿತು ಸಂಬಂಧಿಸಿದವರು ಕೂಡಲೇ ಗಮನಹರಿಸಬೇಕಿದೆ. ಇನ್ನು ಪುರಸಭೆ ವ್ಯಾಪ್ತಿಯ ಕೆ.ಸಿ ರಸ್ತೆ ಸಹಿತ ಕೆಲ ಪ್ರಮುಖ ರಸ್ತೆಗಳಲ್ಲಿ ಎರಡು ಮೂರು ಬಾರಿ ಪ್ಯಾಚ್ ವರ್ಕ್ ಮಾಡಲಾಗಿದ್ದರೂ, ಆ ರಸ್ತೆಗಳು ಈ ಮೊದಲಿಗಿಂತ ಹೊಂಡ ಹಾಗೂ ಧೂಳುಮಯವಾಗಿ ಆಡಳಿತ ವ್ಯವಸ್ಥೆಯನ್ನು ಅಣಕಿಸುವಂತಿದೆ.

ಜೈ ಹಿಂದ್ ಸರ್ಕಲ್, ಬಸ್ ನಿಲ್ದಾಣದ ಎದುರಿನ ರಸ್ತೆ, ಮತ್ತಿತರೆಡೆ ಹದಗೆಟ್ಟ ರಸ್ತೆಯಿಂದಾಗಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಪಟ್ಟಣ ವ್ಯಾಪ್ತಿಯಲ್ಲಿ ಸಾರ್ವಜನಿಕ ಮೂತ್ರ ಖಾನೆ, ಶೌಚಾಲಯಗಳ ಸರಿಯಾದ ವ್ಯವಸ್ಥೆ ಇರದೇ ಪುರಸಭೆ ವ್ಯಾಪ್ತಿಯಲ್ಲಿ ಹತ್ತಾರು ರೀತಿಯ ಸಮಸ್ಯೆಗಳಿಂದ ಜನರು ಹೈರಾಣಾಗಿ ಈ ಅವ್ಯವಸ್ಥೆಯ ಕುರಿತು ಪ್ರಶ್ನಿಸುವಂತಾಗಿದೆ.

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version