Big NewsImportant
Trending

ಅಕ್ರಮ ಜಾನುವಾರು ಸಾಗಾಟ ಮಾಡುವ ಬೃಹತ್ ಜಾಲ ಪತ್ತೆ: 8 ಆರೋಪಿಗಳ ವಶ: 14 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತು ಜಪ್ತಿ: 10 ಜಾನುವಾರುಗಳ ರಕ್ಷಣೆ

S P ನಿರ್ದೇಶನದಲ್ಲಿ ಅಕ್ರಮ ಗೋ ಸಾಗಾಟ ಮತ್ತು ಮಾರಾಟ ಜಾಲ ಪತ್ತೆ ಹಚ್ಚಿದ ಅಂಕೋಲಾ ಪೊಲೀಸರು

ಅಂಕೋಲಾ: ತಾಲೂಕಿನಿಂದ ಭಟ್ಕಳದ ಕಸಾಯಿಖಾನೆಗೆ ಗೋವುಗಳನ್ನು ಸಾಗಿಸುತ್ತಿದ್ದ ಜಾಲವನ್ನು ಪತ್ತೆ ಹಚ್ಚಿದ ಅಂಕೋಲಾ ಪೊಲೀಸರ ತಂಡ ದಾಳಿ ನಡೆಸಿ 407 ಮಿನಿ ವಾಹನದಲ್ಲಿ   ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ 10 ಗೋವುಗಳನ್ನು ರಕ್ಷಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಸ್ಥಳೀಯ  ಆರೋಪಿ ಸೇರಿ 8 ಜನರನ್ನು ವಶಕ್ಕೆ ಪಡೆದಿದ್ದು, ಇನ್ನೋರ್ವ ಸ್ಥಳೀಯ ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನೂ ಓದಿ: Exclusive Video ಸೇತುವೆಯಲ್ಲಿ ನೀರಿನ ಸೆಳತಕ್ಕೆ ಸಿಲುಕಿದ ಲಾರಿ: ಐವರ ರಕ್ಷಣೆ: ಲಾರಿಯಲ್ಲಿದ್ದ ಓರ್ವನಿಗಾಗಿ ಪತ್ತೆಕಾರ್ಯ

ಅಂಕೋಲಾ ಶಿರಗುಂಜಿ ನಿವಾಸಿ ಸಂದೀಪ ಈಶ್ವರ ನಾಯಕ (34)  ಭಟ್ಕಳ ಮುಗ್ದಂ ಕಾಲನಿ ನಿವಾಸಿ ಅಲಿ ಇಸ್ಮಾಯಿಲ್ ಸಿಪಾಯಿ ಸುಕ್ರಿ ಬಾಷಾ(27) ,ಭಟ್ಕಳ ಮಾವಿನಕುರ್ವೆ ನಿವಾಸಿಗಳಾದ ಅಬ್ದುಲ್ ಮುತಾಲಿಪ ಖಾದೀರ ಭಾಷಾ (35)ಮಹಮ್ಮದ್ ಸಾದಿಕ ಖಾದೀರ ಬಾಷಾ (23) ಜೈಷ ಅಹ್ಮದ್ ಮಹ್ಮದ ಮಜಾರ (19) ಭಟ್ಕಳ ನವಾಯತ ಕಾಲನಿ ನಿವಾಸಿ ಮಹಮ್ಮದ್ ವಾಸಿಂ ಮಹಮ್ಮದ್ ಖಾಸಿಂ (27)ಕಾರವಾರ ನಂದನಗದ್ದಾ ನಿವಾಸಿ ಮೋಶಿನ್ ಮಕ್ಬೂಲ್ ಮುಕಂದರ್(25) ಕಾರವಾರ ಕೋಡಿಭಾಗದ ನಿವಾಸಿ ಅಶ್ಪಾಕ ಉಸ್ಮಾನ ಕಾಟೇವಾಡಿ (19) ಬಂಧಿತ ಆರೋಪಿಗಳಾಗಿದ್ದಾರೆ.  ಇನ್ನೊರ್ವ ಆರೋಪಿ ಅಂಕೋಲಾ ತಾಲೂಕಿನ  ಕಣಗಿಲ್ ನಿವಾಸಿ ಪ್ರಶಾಂತ ದೇವಿದಾಸ ನಾಯಕ ಓಡಿ ಪರಾರಿಯಾಗಿದ್ದಾನೆ.

ಅಂಕೋಲಾ ತಾಲೂಕಿನ ಶಿರಗುಂಜಿ ಕಡೆಯಿಂದ ವಾಸರೆ – ಕೊಡಸಣಿ  ಮಾರ್ಗವಾಗಿ 407 ವಾಹನದಲ್ಲಿ ಗೋವುಗಳನ್ನು ಭಟ್ಕಳದ ಖಸಾಯಿ ಖಾನೆಗೆ ಸಾಗಿಸಲಾಗುತ್ತಿತ್ತು . ಈ ವೇಳೆ ಅಕ್ರಮ ಸಾಗಾಣಿಕೆಗೆ ಬೆಂಗಾವಲಾಗಿ (ಎಸ್ಕಾರ್ಟ್), ಒಂದು ಇನೋವಾ ಕಾರ್ ಮತ್ತು ಮೋಟಾರು ಬೈಕ್ ಒಂದನ್ನು ಬಳಸಲಾಗಿತ್ತು ಎಂಬ ಮಾಹಿತಿ ಇದೆ. ಆರೋಪಿತರಿಂದ ನಗದು ಮತ್ತು 7 ಮೊಬೈಲಗಳನ್ನು ವಶಕ್ಕೆ ಪಡೆದಿರುವ ಪೋಲೀಸರು , ಕೃತ್ಯಕ್ಕೆ  7ಲಕ್ಷ ಮೌಲ್ಯದ ಇನೋವಾ ವಾಹನ , 6ಲಕ್ಷ ರೂಪಾಯಿ ಮೌಲ್ಯದ 407 ವಾಹನ, 25 ಸಾವಿರ ಮೌಲ್ಯದ ಮೋಟಾರ್ ಬೈಕ್ ಸೇರಿ 14.49 ಲಕ್ಷ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಜಿಲ್ಲೆಯ ದಕ್ಷ  ಮಹಿಳಾ ಅಧಿಕಾರಿಯಾಗಿ ಹಲವಾರು  ಆಕ್ರಮ ದಂಧೆಗಳಿಗೆ ಕಡಿವಾಣ ಹಾಕುತ್ತಿರುವ ಪೊಲೀಸ್  ವರಿಷ್ಠೆ ಡಾ ಸುಮನ್ ಪನ್ನೇಕರ್ ನಿರ್ದೇರ್ಶದಲ್ಲಿ ಅಂಕೋಲಾ ಪಿ ಎಸ್ ಐ ಪ್ರವೀಣ ಕುಮಾರ ನೇತೃತ್ವದ ತಂಡ ಖಚಿತ ಮಾಹಿತಿ ಆಧರಿಸಿ, ಭರ್ಜರಿ ದಾಳಿ ನಡೆಸಿ ಒಮ್ಮೇಲೆಯೇ ಹೆಚ್ಚಿನ ಸಂಖ್ಯೆಯ ಆರೋಪಿಗಳ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಬದರಿನಾಥ್,ಡಿ.ವೈ.ಎಸ್. ಪಿ ವೆಲೆಂಟನ್ ಡಿಸೋಜಾ, ಅಂಕೋಲಾ ಸಿಪಿಐ ಸಂತೋಷ ಶೆಟ್ಟಿ ಅವರ ಮಾರ್ಗದರ್ಶನದಲ್ಲಿ ನಡೆದ  ಅಂಕೋಲಾದ  ಪಿ.ಎಸ್. ಐ  ಪ್ರವಿಣಕುಮಾರ್ ನೇತೃತ್ವದ ತಂಡದಲ್ಲಿ ಠಾಣಾ ಪಿಎಸ್ಐ ಮಹಾಂತೇಶ ವಾಲ್ಮೀಕಿ, ಪ್ರೊಬೇಷನರಿ ಪಿಎಸ್ಐ ಸುನೀಲ, ಸಿಬ್ಬಂದಿಗಳಾದ ಮಂಜುನಾಥ ಲಕ್ಮಾಪುರ, ಮೋಜ, ಪುನೀತ್, ನಾಗರಾಜ, ವಿಜಯ, ಜಗದೀಶ ಮತ್ತಿತರರು  ಕಾರ್ಯಾಚರಣೆ ನಡೆಸಿದ್ದು  ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಎಸ್ಪಿ ಡಾ ಸುಮನ್ ಡಿ ಪೆನ್ನೇಕರ ಇಲಾಖೆ ಪರವಾಗಿ ಅಭಿನಂದಿಸಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿಯೇ ಅಂಕೋಲಾ . ಪೊಲೀಸರು ನಡೆಸಿದ ಈ ಭರ್ಜರಿ ಕಾರ್ಯಾಚರಣೆಗೆ ತಾಲೂಕಿನ ಹಲವು ಗೋ ಪ್ರೇಮಿಗಳು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಪೋಲೀಸ್ ಇಲಾಖಾ ಕಾರ್ಯವೈಖರಿ ಕುರಿತು ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದರೆ. ಅಲ್ಲದೇ ತಾಲೂಕಿನಲ್ಲಿ ಬೇರು ಬಿಡುತ್ತಿರುವ ಇಂತಹ ಇನ್ನಷ್ಟು ಜಾಲವನ್ನು ಪತ್ತೆ ಹಚ್ಚಿ ದನಗಳ್ಳರನ್ನು ಹೆಡೆಮುರಿ ಕಟ್ಟುವಂತಾಗಬೇಕೆಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ. ವಿಸ್ಮಯ ನ್ಯೂಸ್ ಚಾನೆಲ್ ನಲ್ಲಿಯೂ ಸಹ ಕಳೆದ ಕೆಲ ದಿನಗಳ ಹಿಂದಷ್ಟೇ ಹೆಚ್ಚುತ್ತಿದೆಯೇ ಅಕ್ರಮ ಗೋ ಸಾಗಾಟ ಮತ್ತು ಮಾರಾಟ ? ಜೋರಾದ ಮಳೆ ವೇಳೆಯಲ್ಲಿ ಕಳ್ಳ ದಂಧೆ ಕೋರರಿಗೆ ಹಬ್ಬದೂಟ   ಎಂಬ ತಲೆ ಬರಹದಡಿ ಸ್ಥಳೀಯರ ಶಾಮೀಲಾತಿಯಲ್ಲಿ ನಡೆಯುತ್ತಿರುವ ಅಕ್ರಮ ಗೋ ಸಾಗಾಟ, ದೊಡ್ಡ ದೊಡ್ಡ ಐಷಾರಾಮಿ ಕಾರುಗಳ ಬಳಕೆ ಇತ್ಯಾದಿ ಅಂಶಗಳುಳ್ಳ ವಿಸ್ತೃತ ವರದಿ ಪ್ರಕಟಿಸಿ ಸಂಬಂಧಿತ ಇಲಾಖೆಗಳ ಗಮನ ಸೆಳೆದಿದ್ದನ್ನು ಪ್ರಜ್ಞಾವಂತ ಜನ ಸ್ಮರಿಸಿಕೊಳ್ಳುತ್ತಿದ್ದಾರೆ.       

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Back to top button