ಶಿರಸಿ: ಗಣೇಶ ಚತುರ್ಥಿ ಬಂತು ಎಂದರೇ ಬಹುತೇಕ ಹಳ್ಳಿಗಳಲ್ಲಿ ಹಬ್ಬಕ್ಕಾಗಿ ಭರದ ಸಿದ್ಧತೆಗಳು ನಡೆಯುತ್ತವೆ. ಶಿರಸಿಯಲ್ಲಿ ಸಹಬಾಳ್ವೆ ಸಾರುವ ಕೈ ಚಕ್ಕುಲಿ ಕಂಬಳವನ್ನು ಮಾಡಲಾಗುತ್ತಿದೆ. ಶಿರಸಿ ಸಿದ್ದಾಪುರ ದ ಹಲವು ಗ್ರಾಮದಲ್ಲಿ ಊರಿನವರೆಲ್ಲಾ ಒಟ್ಟಿಗೆ ಸೇರಿ ಕೈ ನಿಂದ ಹೊಸೆದು ಮಾಡುವ ಚಕ್ಕುಲಿ ಕಂಬಳ ನಡೆಸುವ ಮೂಲಕ ಗ್ರಾಮದಲ್ಲಿ ತಮ್ಮ ನಡುವಿನ ಬಾಂಧವ್ಯ ಮತ್ತಷ್ಟು ಗಟ್ಟಿಗೊಳಿಸಿಕೊಳ್ಳುತ್ತಾರೆ.
ವೃದ್ಧೆಯ ಕಾಲಿಗೆರಗಿ ನಮಸ್ಕರಿಸಿದ ಜಿಲ್ಲಾಧಿಕಾರಿಗಳು: ಕಾರಣ ಏನು ಗೊತ್ತಾ? ಸರಳತೆ ಮೆರೆದ ಜಿಲ್ಲಾಧಿಕಾರಿಗಳು
ಕೈ ಚಕ್ಕುಲಿ ಕಂಬಳ ವಿಶೇಷ ಏನು?
ಶಿರಸಿ ತಾಲೂಕಿನ ಕಲ್ಮನೆ, ಹೆಗಡೆಕಟ್ಟಾ, ಹೆಗ್ಗಾರ ಭಾಗದಲ್ಲಿ ಪ್ರತಿ ವರ್ಷ ಬರಿಗೈ ನಿಂದ ಹೊಸೆದು ಮಾಡುವ ಚಕ್ಕುಲಿ ಸಿದ್ದಪಡಿಸಲಾಗುತ್ತದೆ. ವಾರವಿಡಿ ದಿನದಲ್ಲಿ ಒಂದು ಬಾರಿಯಂತೆ ಒಂದಲ್ಲಾ ಒಂದು ಮನೆಯಲ್ಲಿ ಈ ಕೈ ಚಕ್ಕಲಿ ಕಂಬಳ ಮಾಡಲಾಗುತ್ತದೆ. ಇದಾಕ್ಕಾಗಿ ನಿಗದಿ ಮಾಡಿದ ಮನೆಗೆ ಗ್ರಾಮದ ಜನರು ಹೋಗಿ ಬರಿಗೈನಲ್ಲಿ ಚಕ್ಕುಲಿ ಹೊಸೆದು ಮಾಡಲಾಗುತ್ತದೆ.
ಮಹಿಳೆಯರು, ಪುರುಷರೆನ್ನದೇ ಎಲ್ಲರೂ ಒಗ್ಗಟ್ಟಾಗಿ ಸೇರಿ ಚಕ್ಕುಲಿ ತೆಯಾರಿಸುತ್ತಾರೆ. ಈ ಸಂದರ್ಭದಲ್ಲಿ ಒಟ್ಟಿಗೆ ಸೇರಿ ಹಾಡುಗಳು, ಕೃಷಿ ಹಾಗೂ ಇತರೆ ವಿಷಯಗಳ ಬಗ್ಗೆ ಚರ್ಚೆ ನಡೆಸುತ್ತಾರೆ. ಈ ಮೂಲಕ ಒಬ್ಬರಿಗೊಬ್ಬರು ತಮ್ಮಲ್ಲಿರುವ ವಿಚಾರಗಳನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ಗಮ-ಗಮ ಚಕ್ಕುಲಿ ಸಿದ್ಧವಾದ ನಂತರ ಎಲ್ಲರೂ ಸವಿದು ಚಹ, ಕಾಫಿಗಳನ್ನು ಕುಡಿದು ವೀಳ್ಯದೆಲೆ ಅಡಿಕೆ ಅಗೆದು ನಾಲಿಗೆ, ತುಟಿ ಕೆಂಪಾಗಿಸಿ ತಮ್ಮ ತಮ್ಮ ಮನೆಗಳಿಗೆ ತೆರಳುತ್ತಾರೆ. ಈ ಮೂಲಕ ಊರಿನಲ್ಲಿ ತಮ್ಮ ತಮ್ಮ ಬಾಂದವ್ಯವನ್ನು ಪ್ರತಿ ವರ್ಷ ಗಣೇಶ ಚತುರ್ಥಿಗೂ ಮೊದಲು ವೃದ್ಧಿಸಿಕೊಳ್ಳುವ ಈ ಗ್ರಾಮದವರು ತಲೆ ತಲಾಂತರದಿಂದ ಈ ಕಂಬಳವನ್ನು ಜೀವಂತವಾಗಿಸಿಕೊಂಡು ಬಂದಿದ್ದಾರೆ.
ಕೈ ಚಕ್ಕುಲಿ ಮಹತ್ವ ಏನು?
ಚಕ್ಕುಲಿಯನ್ನು ಬರಿಗೈ ನಿಂದ ಹೊಸೆದು ಸುತ್ತಿ ತಯಾರಿಸುವ ಚಕ್ಕುಲಿಯೇ ಕೈಚಕ್ಕುಲಿ. ಆದರೆ ಇಂದಿನ ದಿನಗಳಲ್ಲಿ ಹಿಟ್ಟನ್ನು ಚಕ್ಕುಲಿ ಹುಟ್ಟಿನಲ್ಲಿ ಹಾಕಿ ಒತ್ತಿ ಚಕ್ಕುಲಿ ಮಾಡುತ್ತಾರೆ. ಈ ಚಕ್ಕುಲಿ ಕೈನಿಂದ ಹೊಸೆದು ಮಾಡುತ್ತಾರೆ. ಹೀಗಾಗಿ ಬಾಳಿಕೆ ರುಚಿಯಲ್ಲಿ ಇದಕ್ಕೆ ವಿಶೇಷ ಮಹತ್ವವಿದೆ.
ಗಣೇಶ ಚತುರ್ಥಿ ಮುಗಿಯುವವರೆಗೂ ಈ ಚಕ್ಕುಲಿ ಕಂಬಳ ಈ ಭಾಗದಲ್ಲಿ ನಡೆಯುವುದು ವಿಶೇಷವಾಗಿದೆ. ಗ್ರಾಮದವರೆಲ್ಲಾ ಸೇರಿ ಮಾಡುವ ಚಕ್ಕುಲಿಯನ್ನು ನೆಂಟರಿಷ್ಟರು ಹಾಗೂ ಪರಿಚಿತ ಸೇಹಿತರಿಗೂ ನೀಡಿ ಸಹಬಾಳ್ಳೆಯ ಮಹತ್ವವನ್ನು ಈ ಗ್ರಾಮದ ಜನ ಕೈ ಚಕ್ಕುಲಿ ಕಂಬಳದ ಮೂಲಕ ಸಾರುವ ಮೂಲಕ ಮಾದರಿ ಯಾಗಿದ್ದಾರೆ.
ವಿಸ್ಮಯ ನ್ಯೂಸ್, ಶಿರಸಿ