Focus News
Trending

ಕೆನರಾ ಎಕ್ಸಲೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಗಳ ಉದ್ಘಾಟನೆ

ಕುಮಟಾ : ಗೋರೆ ಪರ್ವತದ ಅಪ್ಯಾಯಮಾನವಾದ ಪರಿಸರದಲ್ಲಿ ರೂಪಿತಗೊಂಡಿರುವ ಕೆನರಾ ಎಕ್ಸೆಲೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘಗಳ ಉದ್ಘಾಟನಾ ಸಮಾರಂಭ ಜರುಗಿತು. ಸಭಾ ಕಾರ್ಯಕ್ರಮವನ್ನು ಮುಖ್ಯ ಅತಿಥಿಗಳಾದ ಡಾ|| ಏ ವಿ ಬಾಳಿಗಾ ಕಲಾ ಮತ್ತು ವಿಜ್ಞಾನ ಪದವಿ ಮಹಾವಿದ್ಯಾಲಯದ ವಿಶ್ರಾಂತ ಪ್ರಾಚಾರ್ಯರಾದ ಡಾ|| ಮಹೇಶ್ ಅಡಕೋಳಿಯವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು..

ಮೀನುಗಾರಿಕೆ ತೆರಳಿದ ದೋಣಿಯೊಂದು ಅಲೆಯ ಹೊಡೆತಕ್ಕೆ ಮುಳುಗಡೆ: ಓರ್ವ ನಾಪತ್ತೆ

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಯುತರು, “ಸ್ಮೃತಿ-ಮತಿ-ಬುದ್ಧಿ- ಪ್ರಜ್ಞಾ ಈ ನಾಲ್ಕು ನಿಕಾಯಗಳ ಆಂತರಿಕವಾದ ಪರಸ್ಪರ ಸಂಯೋಜನೆಯನ್ನು ಪ್ರತಿಭೆ ಎಂದು ಕರೆಯಲಾಗುತ್ತದೆ.. ಸಾಧನೆಯ ಪಥದಲ್ಲಿನ ಸಮಸ್ಯೆಗಳು ನಮ್ಮನ್ನು ವಿವೇಕವಂತರನ್ನಾಗಿಸುತ್ತವೆ” ಎಂದರು.. ವಿದ್ಯಾಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಕರ್ತವ್ಯ, ಭವಿಷ್ಯದ ಜವಾಬ್ದಾರಿಯುತ ಪ್ರಜೆಗಳಾಗುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅರಿವನ್ನು ಹೊಂದಿರಲೇಬೇಕಾದ ಅವಶ್ಯಕತೆ ಮತ್ತು ಅನಿವಾರ್ಯತೆಗಳ ಬಗ್ಗೆ ತಮ್ಮ ವಿದ್ಯಾರ್ಥಿ ಜೀವನದ ಮತ್ತು ವೃತ್ತಿ ಜೀವನದ ಕೆಲ ಘಟನಾವಳಿಗಳ ಉದಾಹರಣೆಗಳನ್ನು ಕೊಟ್ಟು ಸವಿಸ್ತಾರವಾಗಿ ವಿವರಿಸಿದರು..

ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪಠ್ಯದ ಜತೆಗೆ ಪಠ್ಯಪೂರಕ ಚಟವಟಿಕೆಗಳಾದ ಸಾಹಿತ್ಯ, ಸಂಗೀತಗಳ ಮಹತ್ವವನ್ನು ಎಳೆ ಎಳೆಯಾಗಿ ತೆರೆದಿಟ್ಟರು.. ಪ್ರತಿಯೊಬ್ಬರೂ ಮೊದಲಿಗಿಂತ ಹೇಗೆ ತನ್ನನ್ನು ತೊಡಗಿಸಿಕೊಳ್ಳುವ ಕೆಲಸಗಳಲ್ಲಿ ಪರಿಪೂರ್ಣತೆಯನ್ನು ಗಳಿಸುವ ನಿಟ್ಟಿನಲ್ಲಿ ದೈನಂದಿನ ಜೀವನದ ಘಟನಾವಳಿಗಳಿಂದ ಪ್ರೇರೇಪಿತರಾಗಬಹುದು ಎಂದು ತಿಳಿಸಿದರು.. ಕೊನೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯದ ಶುಭವನ್ನು ಹಾರೈಸಿದರು..

ಕಾರ್ಯಕ್ರಮದ ಘನಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ಅಧ್ಯಕ್ಷರಾದ ಡಾ|| ಜಿ ಜಿ ಹೆಗಡೆಯವರು ಮಾತನಾಡುತ್ತಾ, “ಪ್ರತಿಯೊಬ್ಬ ವ್ಯಕ್ತಿಗೂ ಬದುಕಿನಲ್ಲಿ ಜೀವನೋತ್ಸಾಹ ಇರಬೇಕಾದ್ದು ಅತ್ಯವಶ್ಯಕ.. ವೃತ್ತಿಗಳ ಜೊತೆಯಲ್ಲಿ ಪ್ರವೃತ್ತಿಗಳು ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ರೂಪಿಸುವಲ್ಲಿ, ಪರಿಪೂರ್ಣತೆಯನ್ನು ಸಾಧಿಸುವಲ್ಲಿ ಸಹಕರಿಸುತ್ತವೆ.. ಆನಂದವನ್ನು ನಮ್ಮ ಮನಸ್ಸಿನಲ್ಲಿಯೇ ಹುಡುಕುವ ಸುಪ್ತ ಕಾರ್ಯ ಪ್ರತಿಯೊಬ್ಬರೂ ಮಾಡಬೇಕಾದ್ದು ಇಂದಿನ ಅನಿವಾರ್ಯತೆ.. ನಮ್ಮಲ್ಲಿರುವ ಪ್ರತಿಭೆಗಳನ್ನು ಪೋಷಿಸಿ, ವ್ಯಕ್ತಪಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಲೇ ಇರಬೇಕು.. ಈ ದಿಶೆಯಲ್ಲಿ ರೂಪುಗೊಂಡ ವಿದ್ಯಾರ್ಥಿ ಸಂಘಟನೆಯು ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿ” ಎಂದು ಶುಭ ಹಾರೈಸಿದರು..

ಕಾರ್ಯಕ್ರಮದ ಪ್ರಾರಂಭದಲ್ಲಿ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಸಿಂಧು ಹೆಗಡೆ ಮತ್ತು ಬಳಗದವರು ಪ್ರಾರ್ಥಿಸಿದರು.. ಕಾಲೇಜಿನ ಪ್ರಾಚಾರ್ಯರಾದ ಶ್ರೀ ಡಿ ಎನ್ ಭಟ್ ಅತಿಥಿಗಳನ್ನು ಸಭೆಗೆ ಸ್ವಾಗತಿಸಿ, ಪರಿಚಯಿಸಿದರು.. ಕಾಲೇಜಿನ ವಿದ್ಯಾರ್ಥಿ ಸಂಘದ ಎಲ್ಲ ಹದಿನೈದು ಪದಾಧಕಾರಿಗಳಿಗೆ ಪ್ರತಿಜ್ಞಾ ವಿಧಿಯನ್ನು ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಕುಮಾರಿ ಹರ್ಷಿತಾ ಎಸ್ ವಿ ಬೋಧಿಸಿದರು.. ರಸಾಯನ ಶಾಸ್ತ್ರದ ಉಪನ್ಯಾಸಕ ಶ್ರೀ ಈಶ್ವರ ಶರ್ಮ ಕಾರ್ಯಕ್ರಮವನ್ನು ನಿರೂಪಿಸಿದರು..

ವಾಣಿಜ್ಯ ಶಾಸ್ತ್ರ ಉಪನ್ಯಾಸಕಿ ಹಾಗೂ ಕಾಲೇಜಿನ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಮಾರ್ಗದರ್ಶಕರಾದ ಕುಮಾರಿ ನಯನ ಕೊನೆಯಲ್ಲಿ ವಂದಿಸಿದರು.. ಈ ಸಂದರ್ಭದಲ್ಲಿ ಕಾಲೇಜಿನ ಎಲ್ಲ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು, ವಿದ್ಯಾರ್ಥಿ ಪ್ರತಿನಿಧಿಗಳಾದ ಕುಮಾರ ರೋಹನ್ ಗಣಪತಿ ಗುನಗಾ ಮತ್ತು ಕುಮಾರಿ ಶ್ರೀನಿಧಿ ರಮೇಶ್ ಹೆಗಡೆ, ಪಾಲಕ ವೃಂದದವರು ಮತ್ತು ಎಲ್ಲ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕುಮಾರಿ ದೀಕ್ಷಾ ವಿಘ್ನೇಶ್ವರ ಭಟ್ ಇವರಿಂದ ಭರತನಾಟ್ಯ ಪ್ರದರ್ಶನ ನಡೆಯಿತು..

ವಿಸ್ಮಯ ನ್ಯೂಸ್, ಕುಮಟಾ

Back to top button