ಅಂಕೋಲಾ: ಕಾಮಗಾರಿ ಬಿಲ್ ಮಂಜೂರಿ ಮಾಡಲು ಅನವಶ್ಯಕ ವಿಳಂಬ ಧೋರಣೆ ನೀತಿ ತಳೆದು ನನಗೆ ತೊಂದರೆ ಉಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿ ಗುತ್ತಿಗೆದಾರನೋರ್ವ ಪುರಸಭೆ ಎದುರಿನ ವರಾಂಡದಲ್ಲಿಯೇ ಚಾಪೆ ಹಾಸಿ, ಗಾಂಧೀಜಿ ಮತ್ತು ಅಂಬೇಡ್ಕರ ಫೋಟೋ ಇಟ್ಟು ಪೂಜಿಸಿ ಪ್ರತಿಭಟನೆಗೆ ಕುಳಿತ ಅಪರೂಪದ ಘಟನೆ ಸೆ 1 ರ ಗುರುವಾರ ಬೆಳಿಗ್ಗೆ ಅಂಕೋಲಾದಲ್ಲಿ ನಡೆದಿದೆ. ಕುಡಿಯುವ ನೀರಿನ ತೆರೆದ ಬಾವಿ ನಿರ್ಮಾಣಕ್ಕೆ ಸಂಬಂಧಿಸಿದಂತೆ ತಾನು ಮಾಡಿದ ಕಾಮಗಾರಿಗೆ ಸುಮಾರು ಒಂದುವರೆ ವರ್ಷಗಳಿಂದ ಬಿಲ್ ಪಾವತಿಯಾಗದಂತೆ ಇಂಜಿನಿಯರ್ ಭಾಸ್ಕರ ಗೌಡ ಇವರು ಸರ್ವಾಧಿಕಾರಿ ಧೋರಣೆ ತಳೆದು ತನಗೆ ಸತಾಯಿಸುತ್ತಿದ್ದಾರೆ ಎಂದು ಗುತ್ತಿಗೆದಾರ ಪಟ್ಟಣದ ಕೋಟೆವಾಡದ ನಿವಾಸಿ ಸಂಜೀವ ಪಿ ನಾಯ್ಕ ಪ್ರತಿಭಟಿಸಿದರು.
ಪವರ್ ಸ್ಟಾರ್ ಜೊತೆ ಹಾಟ್ ಸೀಟ್ ನಲ್ಲಿ ಕುಳಿತ ಗಣಪತಿ: ಗಮನಸೆಳೆದ ಕೋಟ್ಯಾಧಿಪತಿ ಕಾರ್ಯಕ್ರಮ ಮಾದರಿಯ ವಿನಾಯಕ
ಬಾವಿಗಳ ನಿರ್ಮಾಣ ಕಾಮಗಾರಿಗೆ ಪುರಸಭೆ ವತಿಯಿಂದ ಟೆಂಡರ್ ಪಡೆದು ಕಾಮಗಾರಿ ನಡೆಸಿದ್ದ ತಾನು ಶಿರಕುಳಿಯ ಒಂದು ಬಾವಿಯ ಕಾಮಗಾರಿಯನ್ನು ಈಗಾಗಲೇ ಪೂರ್ಣಗೊಳಿಸಿದ್ದೇನೆ, ಅಂಬಾರಕೊಡ್ಲದಲ್ಲಿ ನಿರ್ಮಾಣ ಮಾಡಲಾಗುತ್ತಿದ್ದ ಬಾವಿಯನ್ನು ಸುಮಾರು19 ಅಡಿ ತೋಡಿದ ಮೇಲೆ ಕೆಳಗಡೆ ಗಟ್ಟಿಯಾದ ಕಲ್ಲು ಬಂಡೆ ಕಂಡು ಬಂದಿದ್ದು ಕೂಲಿಯಾಳುಗಳ ಮೂಲಕ ಮತ್ತೆ ಆಳ ತೋಡಲು ಸಾಧ್ಯವಾಗಿಲ್ಲ. ಅಕ್ಕ ಪಕ್ಕದಲ್ಲಿ ಜನವಸತಿ ಮತ್ತು ದೇವಸ್ಥಾನ ಇರುವುದರಿಂದ ಸ್ಪೋಟಕ ಬಳಸಿದರೆ ಹಾನಿ ಸಂಭವಿಸುವ ಸಾಧ್ಯತೆ ಇರುವುದರಿಂದ ಅನಿವಾರ್ಯವಾಗಿ ಕಾಮಗಾರಿಯನ್ನು ಅರ್ಧಕ್ಕೆ ಕೈಬಿಡಬೇಕಾಯಿತು.
ಇವೆಲ್ಲವೂ ಸಂಬಂಧಿಸಿದ ಇಂಜಿನಿಯರ್ ಗೆ ಗೊತ್ತಿದ್ದೂ ಅಪೂರ್ಣ ಕಾಮಗಾರಿ ಎಂದು ಹೇಳಿ ಬಿಲ್ ಪಾಸ್ ಮಾಡುತ್ತಿಲ್ಲ. ಇದೇ ವೇಳೆ ಬೇರೆ ವಾರ್ಡವೊಂದರಲ್ಲಿ ಬೇರೊಬ್ಬ ಗುತ್ತಿಗೆದಾರ ಅಪೂರ್ಣ ಕಾಮಗಾರಿ ಮಾಡಿದ್ದರೂ ಅವನಿಗೆ ಬಿಲ್ ಪಾಸ್ ಮಾಡಲಾಗಿದೆ. ಈ ಕುರಿತು ನನ್ನ ಬಳಿ ದಾಖಲಾತಿಗಳಿದ್ದು , ತಾರತಮ್ಯ ಮಾಡಿ ಕಾಮಗಾರಿ ಬಿಲ್ ಪಾಸ್ ಮಾಡುವಲ್ಲಿ ತನಗೆ ಮಾತ್ರ ಅನ್ಯಾಯ ಮಾಡುತ್ತಿದ್ದಾರೆ. ನಾನೂ ಕೈಗಡ, ಬ್ಯಾಂಕ್ ಸಾಲ ಮಾಡಿಕೊಂಡು ಕಾಮಗಾರಿ ಮಾಡಿದ್ದೇನೆ. ಈಗ ಬಿಲ್ ಪಾಸ್ ಆಗದೇ ಹಣಕಾಸಿನ ತೊಂದರೆ ಆಗಿದೆ. ಇದಕ್ಕೆಲ್ಲಾ ಇಂಜಿನಿಯರ್ ಮತ್ತು ಕೆಲ ಕಾಣದ ಕೈಗಳ ಒತ್ತಡ ತಂತ್ರವೇ ಕಾರಣ ಎಂದು ಸಂಜು ನಾಯ್ಕ ನೇರವಾಗಿ ಆರೋಪಿಸಿದರು.
ಈ ವಿಷಯದ ಕುರಿತು ಪುರಸಭೆ ಅಂಬಾರಕೋಡ್ಲ ವ್ಯಾಪ್ತಿಯ ಕಾಮಗಾರಿ ಬಗ್ಗೆ ಪ್ರತಿಕ್ರಿಯಿಸಿದ ಪುರಸಭೆ ಇಂಜಿನಿಯರ್ ಭಾಸ್ಕರ ಗೌಡ, ಕಾಮಗಾರಿ ಅಪೂರ್ಣ ಆಗಿರುವ ಕಾರಣ ಮತ್ತು ಆ ಭಾಗದ ಜನಪ್ರತಿನಿಧಿಗಳ ಸಲಹೆ ಮತ್ತು ಸಾರ್ವಜನಿಕರ ಆಗ್ರಹದ ಹಿನ್ನಲೆಯಲ್ಲಿ ಬಿಲ್ ಹಣ ತಡೆಹಿಡಿಯಲಾಗಿತ್ತು. ಇನ್ನು ಶಿರಕುಳಿ ಬಾವಿ ಕಾಮಗಾರಿ ಇತ್ತೀಚೆಗೆ ಬಹುತೇಕ ಪೂರ್ಣಗೊಂಡಿದ್ದು ಈ ಎರಡೂ ಕಾಮಗಾರಿಗಳ ಬಿಲ್ ಮಂಜೂರಿಗೆ (part payment ) ಮಾಡಲು ಕ್ರಮ ವಹಿಸಲಾಗುತ್ತಿದೆ. ಆದರೆ ಗುತ್ತಿಗೆದಾರ ಇವನ್ನೆಲ್ಲ ಸರಿಯಾಗಿ ಅರ್ಥ್ಯೆಸಿಕೊಳ್ಳದೇ ವಿನಾಕಾರಣ ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.
ಈ ನಡುವೆ ಅಧಿಕಾರಿಗಳು ಮತ್ತು ಗುತ್ತಿಗೆದಾರರ ನಡುವೆ ಈ ಹಿಂದೆ, ಪರಸ್ಪರರು ತೆಗೆದು ಕೊಂಡ ಕಾನೂನು ಕ್ರಮ, ಸಮಸ್ಯೆ ನಿವಾರಣೆಗೆ ಇರುವ ತೊಡಕಿನ ಅಂಶಗಳು, ಈ ಹಿಂದಿನ ಪುರಸಭೆ ಮುಖ್ಯಾಧಿಕಾರಿಗಳು ತೆಗೆದುಕೊಂಡ ಕ್ರಮ ಮತ್ತಿತರ ಹಲವು ವಿಷಯಗಳ ಕುರಿತು ಕೆಲ ಕಾಲ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತಾದರೂ ಕೊನೆಯಲ್ಲಿ ಸುಖಾಂತ್ಯವಾದಂತೆ ಕಂಡು ಬಂತು.
ಪುರಸಭೆ ನೂತನ ಮುಖ್ಯಾಧಿಕಾರಿ ಎನ್. ಎಂ.ಮೇಸ್ತ ಅವರು ಈ ಕುರಿತು, ಎರಡೂ ಬಾವಿಗಳ ಕಾಮಗಾರಿಗೆ ಸಂಬಂಧಿಸಿದ ಈ ವರೆಗಿನ ಪ್ರಗತಿ ಪರಿಶೀಲಿಸಿ, ಗುತ್ತಿಗೆದಾರರಿಗೂ ಆರ್ಥಿಕ ಅನುಕೂಲವಾಗುವಂತೆ ತಮ್ಮ ಪರಿಮಿತಿಯಲ್ಲಿ ( ಭಾಗಶಃ ) ಮಂಜೂರಿ ನೀಡಬಹುದಾದ ಬಿಲ್ ಹಣವನ್ನು (ಅಂದಾಜು 2 ಲಕ್ಷ 78 ಸಾವಿರ ರೂಪಾಯಿಗಳು ) ಅತಿ ಶೀಘ್ರವಾಗಿ (ಒಂದು ವಾರದ ಅವಧಿಯಲ್ಲಿ) ಗುತ್ತಿಗೆದಾರನ ಬ್ಯಾಂಕ್ ಖಾತೆಗೆ ಜಮಾ ಮಾಡಿಸುವ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಗುತ್ತಿಗೆದಾರ ಸಂಜು ನಾಯ್ಕ ತಾತ್ಕಾಲಿಕವಾಗಿ ಪ್ರತಿಭಟನೆಯಿಂದ ಹಿಂದೆ ಸರಿದಿರುವುದಾಗಿ ತಿಳಿಸಿ, ಪ್ರತಿಭಟನಾ ಸ್ಥಳದಿಂದ ಎದ್ದು ಮನೆಯತ್ತ ಹೆಜ್ಜೆ ಇರಿಸಿದರು.
ಪುರಸಭೆ ಸದಸ್ಯ ನಾಗರಾಜ ಐಗಳ ಮತ್ತಿತರರು ಉಪಸ್ಥಿತರಿದ್ದು ಸಲಹೆ ಸೂಚನೆ ನೀಡಿ ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ಸಾಂಧರ್ಭಿಕ ಜವಾಬ್ದಾರಿ ತೋರ್ಪಡಿಸಿದರು. ಪೊಲೀಸ್ ಇಲಾಖೆ ಸಿಬ್ಬಂದಿಗಳು ಹಾಜರಿದ್ದು ಕರ್ತವ್ಯ ನಿರ್ವಹಿಸಿದರು. ಪುರಸಭೆ ಮತ್ತು ತಾಲೂಕಿನ ಇತಿಹಾಸದಲ್ಲಿಯೇ ಗುತ್ತಿಗೆದಾರನೊಬ್ಬ ತಾನು ಮಾಡಿದ ಕಾಮಾಗಾರಿ ಬಿಲ್ ಪಾವತಿಸುವಂತೆ ಆಗ್ರಹಿಸಿ, ವಿನೂತನ ರೀತಿಯಲ್ಲಿ ಪ್ರತಿಭಟಿಸಿದ ರೀತಿ ಇದೇ ಮೊದಲಿರಬಹುದಾಗಿದ್ದು, ಇಲ್ಲಿ ಯಾರದ್ದು ತಪ್ಪು ? ಯಾರು ಮೇಲು ಎನ್ನುವ ಜಿದ್ದಿಗೆ ಬೀಳದೇ ಸಾರ್ವಜನಿಕ ಕಳಕಳಿಯಿಂದ ತಮ್ಮ ಜವಾಬ್ದಾರಿ ಅರಿತು ಗುಣಮಟ್ಟದ ಮತ್ತು ಸಕಾಲಿಕ ಕಾಮಗಾರಿ ಅನುಷ್ಠಾನಗೊಳ್ಳಲು ಸಂಬಂಧಿಸಿದವರೆಲ್ಲರೂ ಒಂದಾಗಿ ತಮ್ಮ ಇಚ್ಚಾ ಶಕ್ತಿ ತೋರ್ಪಡಿಸಬೇಕೆಂಬ ಮಾತು ಪಟ್ಟಣದ ಪ್ರಜ್ಞಾವಂತ ವಲಯದಿಂದ ಕೇಳಿ ಬಂದಿದೆ.
ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ