ವೈಷ್ಣವಿ ಅಶೋಕ ರೇವಣಕರ ಗ್ರಾಮೀಣ ಭಾಗದ ಶಿಕ್ಷಣ ರತ್ನ.
ಸರ್ಕಾರಿ ಪಿ.ಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಗಮನ ಸೆಳೆದ ಬಾಲೆ
ಅಂಕೋಲಾ : ಗ್ರಾಮೀಣ ಭಾಗದ ವಿದ್ಯಾರ್ಥಿನಿಯೋರ್ವಳು ತನ್ನ ಸತತ ಪರಿಶ್ರಮ ಮತ್ತು ಶೃದ್ಧೆಯ ಕಲಿಕೆಯಿಂದ ದ್ವಿತೀಯ ಪಿ.ಯು.ಸಿ ವಿಜ್ಞಾನ ವಿಭಾಗದಲ್ಲಿ ಉನ್ನತ ಸಾಧನೆ ಮಾಡುವ ಮೂಲಕ ತಾಲೂಕಿಗೆ ಪ್ರಥಮಸ್ಥಾನ ಗಳಿಸಿದ್ದಾಳೆ.
ಅವರ್ಸಾದ ಸರ್ಕಾರಿ ಪಿ.ಯು ಕಾಲೇಜ್ ವಿದ್ಯಾರ್ಥಿನಿ ವೈಷ್ಣವಿ ಅಶೋಕ ರೇವಣಕರ ಶೇ96 ಅಂಕ ಗಳಿಸಿ 2019-20ನೇ ಸಾಲಿನ ವಿಜ್ಞಾನ ವಿಭಾಗದಲಿ ಉತ್ತಮ ಫಲಿತಾಂಶ ದಾಖಲಿಸಿದ್ದಾಳೆ. ಭೌತಶಾಸ್ತ್ರದಲ್ಲಿ 94, ರಸಾಯನಶಾಸ್ತ್ರ 99, ಗಣಿತ 99, ಜೀವಶಾಸ್ತ್ರ 96, ಅಂಕ ಗಳಿಸುವ ಮೂಲಕ ಪಿ.ಸಿ.ಎಮ್.ಬಿ ಯಲ್ಲಿ ಒಟ್ಟಾರೆಯಾಗಿ ಶೇ97 ಅಂಕ ಪಡೆದು ಗಮನ ಸೆಳೆದಿದ್ದಾಳೆ.
ಶಿಕ್ಷಣ ಮತ್ತಿತ್ತರ ಉದ್ದೇಶಗಳಿಂದ ಊರು ಬಿಟ್ಟು ಪಟ್ಟಣಗಳಿಗೆ ವಲಸೆ ಹೋಗುವುದು, ಟ್ಯೂಶನ್ ಪಡೆದುಕೊಳ್ಳುವುದು ಸಾಮಾನ್ಯವೆನಿಸಿರುವ ಇಂದಿನ ದಿನಗಳಲ್ಲಿ ತನ್ನ ಸ್ವಂತ ಊರಿನಲ್ಲಿಯೇ ಉಳಿದು, ಸರ್ಕಾರಿ ಶಾಲೆ, ಕಾಲೇಜುಗಳಲ್ಲಿಯೇ ವ್ಯಾಸಂಗ ಮಾಡಿ ಸಾಧನೆ ಮಾಡಬಹುದೆನ್ನುವದಕ್ಕೆ ವೈಷ್ಣವಿ ರೇವಣಕರ ಉತ್ತಮ ಉದಾಹರಣೆಯಾಗಿದ್ದಾಳೆ. ಇದೆ ವಿದ್ಯಾರ್ಥಿನಿ ಈ ಹಿಂದೆ ಕಾತ್ಯಾಯನಿ ಪ್ರೌಢಶಾಲೆಯಲ್ಲಿ ತನ್ನ ಎಸ್.ಎಸ್.ಎಲ್.ಸಿ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿಯೇ ಕಲಿತು ತಾಲೂಕಿಗೆ ಪ್ರಥಮಸ್ಥಾನ ಗಳಿಸಿದ್ದನ್ನು ಸ್ಮರಿಸಿಕೊಳ್ಳಬಹುದಾಗಿದೆ.
ಅವರ್ಸಾ ಗ್ರಾಮವು ಈ ಹಿಂದಿನಿಂದಲೂ ಕ್ರೀಡೆ, ಶೈಕ್ಷಣಿಕ, ಧಾರ್ಮಿಕ, ಸಾಂಸ್ಕøತಿಕ ಕ್ಷೇತ್ರಗಳಲ್ಲಿ ತನ್ನದೇ ಆದ ಹಿರಿಮೆ ಹೊಂದಿದ್ದು ಸ್ಥಳೀಯ ಶೈಕ್ಷಣಿಕ ಪ್ರತಿಭೆ ವೈಷ್ಣವಿ ರೇವಣಕರ ಸಾಧನೆಯಿಂದ ತನ್ನ ಕೀರ್ತಿಯನ್ನು ಮತ್ತಷ್ಟು ಹೆಚ್ಚಿಸಿಕೊಂಡಿದೆ. ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜು ಅಭಿವೃದ್ಧಿ ಸಮಿತಿಯವರು, ಪ್ರಾಂಶುಪಾಲರು, ಉಪನ್ಯಾಸಕ ವೃಂದ, ಊರನಾಗರಿಕರು, ಶ್ರೀರಾಮ ಸ್ಟಡಿ ಸರ್ಕಲ್ ಅಂಕೋಲಾ ಮತ್ತಿತ್ತರ ಶಿಕ್ಷಣ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸಾಮಾನ್ಯ ಬಡ ಕುಟುಂಬದಿಂದ ಬಂದ ಈ ವಿದ್ಯಾರ್ಥಿನಿ ಕಳೆದ 5ವರ್ಷಗಳ ಹಿಂದೆ ತನ್ನ ತಂದೆಯನ್ನು ಕಳೆದುಕೊಂಡಿದ್ದು, ಹಲವು ಸಂಕಷ್ಟಗಳನ್ನು ಸವಾಲಾಗಿ ಸ್ವೀಕರಿಸಿ ಉತ್ತಮ ಸಾಧನೆ ಮಾಡಿದ್ದಾಳೆ.
ತನಗಿರುವ ಆರ್ಥಿಕ ಸಂಕಷ್ಟ ನಿವಾರಣೆಯಾದರೆ ಮುಂದೆ ವೈದ್ಯೆಯಾಗುವ ಕನಸು ಕಂಡಿರುವ ಗ್ರಾಮೀಣ ಭಾಗದ ಬಡ ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಪ್ರೋತ್ಸಾಹ ಮತ್ತು ಉದಾರ ನೆರವಿನ ಅವಶ್ಯಕತೆ ಇದ್ದಂತೆ ಕಂಡುಬರುತ್ತಿದೆ. ಹಣಕಾಸಿನ ತೊಂದರೆಯಿಂದ ವಿದ್ಯಾರ್ಥಿನಿಯ ಕನಸು ಕಮರಿಹೋಗದಂತೆ ತಾಲೂಕು ಮತ್ತು ಜಿಲ್ಲೆಯ ಗಣ್ಯರು, ಸಂಘಸಂಸ್ಥೆಗಳು ಮತ್ತು ಶಿಕ್ಷಣ ಪ್ರೇಮಿಗಳು ನೆರವಿನ ಹಸ್ತ ಚಾಚಬೇಕಿದೆ.
ವಿಸ್ಮಯ ನ್ಯೂಸ್ ವಿಲಾಸ್ ನಾಯಕ ಅಂಕೋಲಾ.