ಸಾವಿಗೆ ಮುನ್ನ ವಿಡಿಯೋ ಮಾಡಿ ಬಿಡುಗಡೆ: ಮರಕ್ಕೆ ನೇಣು ಬಿಗಿದು ಕೊಂಡು ಮೃತಪಟ್ಟ ಯುವಕ ? ವಿಡಿಯೋದಲ್ಲಿ ಏನಿದೆ ನೋಡಿ?

ಸಾಮಾಜಿಕ ಜಾಲತಾಣಗಳಲ್ಲಿ ಹರಿ ದಾಡಿದ ವಿಡಿಯೋದಲ್ಲೇನಿದೆ ?

ಅಂಕೋಲಾ: ಯುವಕನೋರ್ವನ ಮೃತ ದೇಹ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪಟ್ಟಣದ ಕೋಟೆವಾಡದ ಮಾರುತಿ ದೇವಾಲಯದ ಹತ್ತಿರದ ಮರವೊಂದರಲ್ಲಿ  ಪತ್ತೆಯಾಗಿದೆ.  ಉತ್ತರ ಪ್ರದೇಶ ಮೂಲದ ಜಿಗಣಾ ಗ್ರಾಮದ  ಸೊಹೆಲ್ ಅಹ್ಮದ್ (23) ಎಂಬಾತ ಮೃತ ವ್ಯಕ್ತಿಯಾಗಿದ್ದು ಈತ ಅಂಕೋಲಾ ಪಟ್ಟಣದ ಕಾಕರಮಠ ರಸ್ತೆಗೆ ಹೊಂದಿಕೊಂಡಿರುವ  ಹೇರ್ ಕಟಿಂಗ್ ಅಂಗಡಿಯೊಂದರಲ್ಲಿ ಕಳೆದ 5-6 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದ ಎನ್ನಲಾಗಿದೆ. 

ಅಂಗನವಾಡಿ ಕೇಂದ್ರದಲ್ಲಿ ಕಾಣಿಸಿ ಕೊಂಡ ನಾಗರ ಹಾವು|ಬುಸ್ ಬುಸ್ ಎನ್ನುತ್ತ ಹೆಡೆ ಎತ್ತಿ ರೋಷ ತೋರಿದ ನಾಗರ ಹಾವು

ಹಾಲಿ ತನ್ನ ಸಹೋದರ ಸೇರಿದಂತೆ ಇನ್ನೋರ್ವ ಸಹೋದ್ಯೋಗಿ ಯ ಜೊತೆಗೆ ಹೆರ್ ಸಲೂನ್ ಅಂಗಡಿಯ ಮೇಲ್ಮಹಡಿಯಲ್ಲಿ ವಾಸವಾಗಿದ್ದ  ಈತ  ಶನಿವಾರ ಬೆಳಿಗ್ಗೆ 5.30 ರ ಸುಮಾರಿಗೆ ತನ್ನ ರೂಮಿನಿಂದ ಹೊರಗೆ ಹೋಗಿದ್ದ ಎನ್ನಲಾಗಿದೆ. ಎರಡು – ಮೂರು ತಾಸುಗಳ ಬಳಿಕ ಕೋಟೆವಾಡದ ಮಾರುತಿ ದೇವಸ್ಥಾನದ ಎದುರಿನಿಂದ ಕೆ.ಎಲ್. ಇ ಆಸ್ಪತ್ರೆಗೆ ಸಾಗುವ ಕಾಲುದಾರಿಯ ಪಕ್ಕದ  ಮರವೊಂದಕ್ಕೆ ನೈಲನ್ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಈತನ ಮೃತ ದೇಹ ಕಂಡು ಬಂದಿದೆ  ಎನ್ನಲಾಗಿದೆ.

ಸಾವಿಗೆ ಮುನ್ನ ಮಾಡಿದ ವಿಡಿಯೋದಲ್ಲಿ ಏನಿದೆ?

ಅದಾವುದೋ ಕಾರಣದಿಂದ ಆತ್ಮಹತ್ಯೆಗೆ ಮೊದಲೇ ನಿರ್ಧಾರ ಮಾಡಿದಂತಿದ್ದ ಈತ ತಾನು ಮನನೊಂದ ಕುರಿತು, 2 -3 ವಿಡಿಯೋ ತುಣುಕುಗಳನ್ನು ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿ, ಸಾಮಾಜಿಕ ಜಾಲ ತಾಣಗಳ ಮೂಲಕ ಹರಿಬಿಟ್ಟಿರುವುದಾಗಿ ತಿಳಿದು ಬಂದಿದೆ. ಅಲ್ಲದೇ ತನ್ನ ಮೊಬೈಲ್ ಪಾಸವರ್ಡ್ , ಬ್ಯಾಂಕ್ ಅಕೌಂಟ್ ನಂಬರ ಮತ್ತಿತರ ಕೆಲ ವಿಷಯಗಳನ್ನು ವಿಡಿಯೋ ಹೇಳಿಕೆ ಮೂಲಕ ಚಿತ್ರೀಕರಿಸಿ ಬಿಟ್ಟಿದ್ದು , ಈ ಎಲ್ಲಾ ಅಂಶಗಳು ಆತ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆಗಳ ಕುರಿತು ಇಂಬು ಕೊಡುವಂತಿದೆ ಎನ್ನುತ್ತಾರೆ ಆತನ ಪರಿಚಿತರು.

ಅಂಕೋಲಾ ಪಿ.ಎಸ್. ಐ ಪ್ರವೀಣಕುಮಾರ್, ಮತ್ತು ಮಹಾಂತೇಶ ವಾಲ್ಮೀಕಿ ಹಾಗೂ ಸಿಬ್ಬಂದಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮೃತ ದೇಹವನ್ನು  ಮರಣೋತ್ತರ ಪರೀಕ್ಷೆಗಾಗಿ ತಾಲೂಕಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲು ಸ್ಥಳೀಯರ ಜೊತೆ ಸಾಮಾಜಿಕ ಕಾರ್ಯಕರ್ತ ವಿಜಯಕುಮಾರ ನಾಯ್ಕ, ರಜಾಕ್, ಸಹಿಂ, ಹಾಗೂ ಮೃತನ ಸಹೋದರ ಹಾಗೂ ಉತ್ತರ ಪ್ರದೇಶ ಮೂಲದ ಅಂಕೋಲಾದ ವಿವಿಧೆಡೆ ಕೆಲಸ ಮಾಡಿಕೊಂಡಿರುವ ಇತರರು ಸಹಕರಿಸಿದರು. ಯುವಕನ ಸಾವಿನ ಕುರಿತಂತೆ  ಹೆಚ್ಚಿನ ಮತ್ತು ನಿಖರ ಮಾಹಿತಿ ಲಭ್ಯವಾಗಬೇಕಿದೆ.             

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version