ಒಂದು ತಿಂಗಳಲ್ಲಿ 30ಕ್ಕೂ ಅಧಿಕ ಪ್ರಕರಣ ದಾಖಲು: ಆದರೂ ಬೆಳೆಯುತ್ತಲೇ ಇದೆ ಓಸಿ ಜಾಲ

ಮಟಕಾ ಅಡ್ಡೆ ಮೇಲೆ ಮುಂದುವರೆದ ಪೋಲೀಸ್ ದಾಳಿ: ಪ್ರತ್ಯೇಕ 3 ಪ್ರಕರಣ ದಾಖಲು

ಅಂಕೋಲಾ: ತಾಲೂಕಿನ ವಿವಿಧೆಡೆ ಮಟಕಾ ಅಡ್ಡೆಗಳ ಮೇಲೆ ದಾಳಿ ಮುಂದುವರೆಸಿರುವ ಪೊಲೀಸರು ಕಳೆದೆರಡ್ಮೂರು ದಿನಗಳಲ್ಲಿ   ಮಟಕಾ ಏಜಂಟರು,ಬುಕ್ಕಿಗಳು ಮತ್ತು  ಓ ಸಿ ಆಟದಲ್ಲಿ ತೊಡಗಿಕೊಂಡಿದ್ದವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.  ಬಳಲೆ ಮಾದನಗೇರಿಯಲ್ಲಿ ಕಾನೂನು ಬಾಹಿರವಾಗಿ ಮಟಕಾ ವ್ಯವಹಾರ ನಡೆಸುತ್ತಿದ್ದ ಸ್ಥಳಕ್ಕೆ ಅಂಕೋಲಾ ಪೊಲೀಸ್ ನಿರೀಕ್ಷಕ ಸಂತೋಷ ಶೆಟ್ಟಿ ಅವರು ದಾಳಿ ನಡೆಸಿ ಮಟಕಾ ಏಜಂಟ್, ಮಟಕಾ ಬುಕ್ಕಿ, ಮತ್ತು ಮಟಕಾ ಆಟದಲ್ಲಿ ತೊಡಗಿಕೊಂಡಿದ್ದ ಇಬ್ಬರು ಸೇರಿದಂತೆ ಒಟ್ಟು ನಾಲ್ಕು ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ. 

ರಾತ್ರಿ ನಾಟಕದಲ್ಲಿ ಅದ್ಬುತವಾಗಿ ಅಭಿನಯಿಸಿ ಎಲ್ಲರ ಮನಗೆದ್ದಿದ್ದ ವ್ಯಕ್ತಿ ಬೆಳಿಗ್ಗೆ ಹೃದಯಘಾತದಿಂದ ಸಾವು

ಗೂಡಂಗಡಿ ಇಟ್ಟು ವ್ಯಾಪಾರ ಮಾಡುತ್ತಿದ್ದ ಮಟಕಾ ಏಜಂಟ್ ಮಾದನಗೇರಿ ಬಳಲೆ ನಿವಾಸಿ ಹರಿಶ್ಚಂದ್ರ ಗಣಪತಿ ಭಂಡಾರಿ (48) ಎಂಬಾತನಿಂದ ಮಟಕಾ ಬರೆಯುವ  ಪರಿಕರಗಳನ್ನು ಮತ್ತು 3220 ರೂಪಾಯಿ ನಗದು ಹಣ ವಶಪಡಿಸಿಕೊಂಡಿದ್ದಾರೆ. ಆತ ಸಂಗ್ರಹಿಸಿದ ಜೂಗಾರಾಟದ ಹಣ ಪಡೆಯುತ್ತಿದ್ದ ಮಟಕಾ ಬುಕ್ಕಿ ಬಳಲೆ  ನಿವಾಸಿ ಮಂಜು ಯಾನೆ ಹನುಮಂತ ಮುಕುಂದ ನಾಯ್ಕ ಎಂಬಾತನ ಮೇಲೂ ಪ್ರಕರಣ ದಾಖಲಿಸಿದ್ದಲ್ಲದೇ  ಓ.ಸಿ ಆಟದಲ್ಲಿ ತೊಡಗಿಕೊಂಡಿದ್ದ ಲಕ್ಷ್ಮಣ ಮತ್ತು ನಾಗಮ್ಮ ಎನ್ನುವವರ ಮೇಲೆ ಸಹ ಪ್ರಕರಣ ದಾಖಲಿಸಿದ್ದಾರೆ.

ಬೇರೆ ಇನ್ನೊಂದು ಪ್ರಕರಣದಲ್ಲಿ ಅಂಕೋಲಾ ಪಟ್ಟಣದ  ಲೈಬ್ರರಿ ಕ್ರಾಸ್ ಬಳಿ ದಾಳಿ ನಡೆಸಿದ ಸಿಪಿಐ ಸಂತೋಷ ಶೆಟ್ಟಿ,  ಮಟಕಾ ಬರೆಯುತ್ತಿದ್ದ ಲಕ್ಷ್ಮೇಶ್ವರದ ಮಂಜುನಾಥ ವಿಶ್ವನಾಥ ನಾಯ್ಕ (40) ನಿಂದ  7030 ರೂಪಾಯಿ ನಗದು ವಶಪಡಿಸಿಕೊಂಡು, ಆತನಿಂದ ಜುಗಾರಾಟದ ಹಣ ಪಡೆದುಕೊಳ್ಳುತ್ತಿದ್ದ ಮಟಕಾ ಬುಕ್ಕಿ ಎನಿಸಿಕೊಂಡ ತೆಂಕಣಕೇರಿಯ ಲಕ್ಷ್ಮಣ  ಮುಕುಂದ ಗಾಂವಕರ್ ಎನ್ನುವವನ ಮೇಲೆಯೂ ಪ್ರಕರಣ ದಾಖಲಿಸಿದ್ದಾರೆ. 

ಅಂಕೋಲಾ ಠಾಣೆಯಲ್ಲಿ ದಾಖಲಾದ ಪ್ರತ್ಯೇಕ ಮತ್ತೊಂದು ಪ್ರಕರಣದಲ್ಲಿ ಪಟ್ಟಣದ ವಾಜಂತ್ರಿ ಕಟ್ಟೆ ಬಳಿ ಮಟಕಾ ಬರೆಯುತ್ತಿದ್ದ ಸ್ಥಳಕ್ಕೆ ದಾಳಿ ನಡೆಸಿದ ಅಂಕೋಲಾ ಪಿ.ಎಸ್. ಐ ಮಾಲಿನಿ ಹಾಸಬಾವಿ ದಾಳಿ ನಡೆಸಿ ಮಟಕಾ ಏಜಂಟ್ ಅವರ್ಸಾದ ಪೀರು ಪುತ್ತು ನಾಯ್ಕ (46 ) ಮತ್ತು ಆತ ಸಂಗ್ರಹಿಸಿದ ಜುಗಾರಾಟದ ಹಣ ಮತ್ತು ಚೀಟಿಯನ್ನು ತಡೆದುಕೊಳ್ಳುತ್ತಿದ್ದ ಎನ್ನಲಾದ ಮಟಕಾ ಬುಕ್ಕಿ ಮಂಜು ಕೃಷ್ಣ  ನಾಯ್ಕ ಹಟ್ಟಿಕೇರಿ ಎನ್ನುವವನ ಮೇಲೆಯೂ ಪ್ರಕರಣ ದಾಖಲಿಸಿ 1820 ನಗದು ಮತ್ತು ಮಟಕಾ ಬರೆಯುವ ಪರಿಕರಗಳನ್ನು ವಶಪಡಿಸಿಕೊಂಡಿದ್ದಾರೆ.   

ಒಂದು ತಿಂಗಳಲ್ಲಿ 30 ಕೇಸ್ ದಾಖಲು

ದಿನದಿಂದ ದಿನಕ್ಕೆ ಅಂಕೋಲಾದಲ್ಲಿ ಓಸಿ ಕೇಸ್ ಗಳ ಸಂಖ್ಯೆ ಹೆಚ್ಚುತ್ತಲೇ ಇದ್ದು, ತಿಂಗಳಿಂದೀಚೆಗೆ ನಿರಂತರ ದಾಳಿ ಮುಂದುವರೆಸಿರುವ ಪೋಲೀಸರು ಓಸಿ ಏಜೆಂಟರು, ಬುಕ್ಕಿಗಳು, ಜುಗಾರಾಟದಲ್ಲಿ ತೊಡಗಿಕೊಂಡವರೆಂದು ಆರೋಪಿಸಲಾದ ಇತರರು ಸೇರಿ ಸರಿ ಸುಮಾರು 30ಕ್ಕೂ ಹೆಚ್ಚು ಜನರ ಮೇಲೆ ಪ್ರಕರಣ ದಾಖಲಿಸಿ  ಪಟ್ಟಣ ಹಾಗೂ ಗ್ರಾಮಾಂತರ ಭಾಗಗಳಲ್ಲಿ ಬೇರು ಬಿಟ್ಟಿರುವ ಓಸಿ ಜಾಲ ಬೇಧಿಸಲು ಕಾನೂನು ಕ್ರಮ ಮುಂದುವರೆಸಿದ್ದಾರೆ.. ಆದರೂ ಮಟಕಾ ಜಾಲದಲ್ಲಿ ಬಾಲಂಗೋಚಿಗಳು ಸೇರಿ ಹಳೆ ಮತ್ತು ಹೊಸ ಓಸಿ ಬುಕ್ಕಿಗಳು, ಎಜೆಂಟರು ಮತ್ತಿತರರ  ಉದ್ದನೆ  ಸಾಲು ಆರೋಪ ಪಟ್ಟಿಯಲ್ಲಿ ಸೇರಿಕೊಳ್ಳುತ್ತಲೇ ಇದೆ.

ಕೆಲ ಹಾಲಿ ಹಾಗೂ ಮಾಜಿ ಜನಪ್ರತಿನಿಧಿಗಳು, ಸ್ಥಳೀಯ ಮಟ್ಟದ ಮರಿ ಪುಡಾರಿಗಳೂ ಸಾಮಾಜಿಕ ಕಾರ್ಯಕರ್ತರಂತೆ ಪೋಸು ಕೊಟ್ಟು ಈ ಅಕ್ರಮ ದಂಧೆಗೆ ಸಾಥ್ ನೀಡುತ್ತಾರೆ ಎನ್ನಲಾಗಿದ್ದು ಈ ವರೆಗೂ ಪೋಲೀಸರ ಬಲೆಯಿಂದ ತಪ್ಪಿಸಿಕೊಂಡಿದ್ದ  ಕೆಲವರು ಕಾನೂನಿನ ಚೌಕಟ್ಟಿನಲ್ಲಿ ಸಿಲುಕಿಕೊಳ್ಳುವಂತಾಗಿದ್ದು ಆ ಮಟ್ಟಿಗೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳ ಖಡಕ್ ಸೂಚನೆ ಮೇರೆಗೆ ತಾಲೂಕಿನ ಪೋಲೀಸ ಇಲಾಖೆ  ನಿರಂತರವಾಗಿ  ದಾಳಿ ಮುಂದುವರೆಸಿ ಹಲವು ಕೇಸ್ ದಾಖಲಿಸಿ ಕೊಳ್ಳುವ ಮೂಲಕ ತನ್ನ ಕರ್ತವ್ಯ ಪ್ರಜ್ಞೆ ಮೆರೆದಿದೆ ಎಂಬ ಮೆಚ್ಚುಗೆ ಮಾತು ಹಲವೆಡೆಯಿಂದ ಕೇಳಿ ಬಂದಿದೆ.

ಅಕ್ರಮ ದಂಧೆ ನಿಯಂತ್ರಣ  ಪೊಲೀಸರಿಗೆ ಸವಾಲಿನ ಕೆಲಸ

ಆದರೂ ಈಗಾಗಲೇ ಹಳ್ಳಿ ಮತ್ತು ಪಟ್ಟಣದ ಬಹುತೇಕ ಕಡೆ  ಬೆಳೆದಿರುವ ಮತ್ತು ಬೆಳೆಯುತ್ತಿರುವ  ಅಕ್ರಮ ದಂಧೆಯ ಬಾಲವನ್ನು ಕತ್ತಿರಿಸಿ ಹಾಕಲು   ಪೊಲೀಸರು ಶಕ್ತರೇ ಎಂಬ ಪ್ರಶ್ನೆಯ  ಕೇಳಿ ಬರಲಾರಂಭಿಸಿದೆ. ಏಕೆಂದರೆ ಇದೇ ವೇಳೆ ಪೊಲೀಸರ ನೈತಿಕತೆಯನ್ನು ಕುಗ್ಗಿಸುವಂತೆ ಕೆಲವರು ಭೂತದ ಬಾಯಲ್ಲಿ ಭಗವದ್ಗೀತೆ ಹೇಳಿಸಿದಂತೆ ತಮ್ಮ ಅಡ್ನಾಡಿ ದಂಧೆಯ ತಡೆಗೆ ಯಾರೂ ಬರದಂತೆ, ಬಂದರೆ ಅವರನ್ನೇ ಖಳನಾಯಕರಂತೆ ಬಿಂಬಿಸಲು ಹೊರಟಂತಿದೆ. ಅಷ್ಟಕ್ಕೂ ಈ ಹಿಂದಿನಿಂದಲೂ ತಾಲೂಕು ಹಾಗೂ ಜಿಲ್ಲೆಯ ಹಲವೆಡೆ ಅವ್ಯಾಹತವಾಗಿದ್ದ ಓಸಿ ದಂಧೆಕೋರರು ಇತ್ತೀಚೆಗೆ ಜಿಲ್ಲೆಯ ಹಿರಿಯ ಅಧಿಕಾರಿಗಳ ಮಾಗದರ್ಶನದಲ್ಲಿ ನಡೆಯುತ್ತಿರುವ ನಿರಂತರ ದಾಳಿಯಿಂದ ತತ್ತರಿಸ ತೊಡಗಿದ್ದಾರೆ.

ಕೆಲವರು ಇನ್ನು ಮುಂದೆ ಇಂತಹ ಅಕ್ರಮ ದಂಧೆ ಸಹವಾಸ ಬೇಡ ಎಂದು ಸುಮ್ಮನಾದರೆ, ಇನ್ನು ಕೆಲವರು ಈಗಲೂ ಹೈಟೆಕ್ ಮತ್ತಿತರ ರೀತಿಯಲ್ಲಿ ದಂಧೆಯನ್ನು  ಅಲ್ಲಲ್ಲಿ ನಡೆಸಿಕೊಂಡು ಬರುತ್ತಿದ್ದಾರೆ ಎನ್ನಲಾಗಿದೆ. ಬದಲಾದ ಕಾನೂನು ನಿಯಮಾವಳಿಗಳಿಂದ ಈ ಮೊದಲಿನಂತೇ ಆರೋಪಿಗಳನ್ನು ಠಾಣೆಯಲ್ಲಿಯೇ ಜಾಮೀನಿನ ಮೇಲೆ ಬಿಡುಗಡೆಗೊಳಿಸಬಹು ದಾಗಿದ್ದು, ಇದು ಅಕ್ರಮ ದಂಧೆ ಕೋರರಿಗೆ ಪ್ಲಸ್ ಪಾಯಿಂಟ್ ಆಗಿದೆ..

ಹೈಟೆಕ್ ಓಸಿ ಆಟ, ಕಾನೂನಿನ ಸಡಿಲಿಕೆಯಿಂದ ಅಕ್ರಮ ದಂಧೆ ನಿಯಂತ್ರಣ  ಪೊಲೀಸರಿಗೆ ಸವಾಲಿನ ಕೆಲಸವಾಗಿದೆ. ಆದರೂ ಕಳೆದ ಕೆಲ ವರ್ಷಗಳಿಗೆ ಹೋಲಿಸಿದಾಗ ಎಸ್ಪಿಯಾಗಿ ಜಿಲ್ಲೆಗೆ ಕಾಲಿಟ್ಟ ಡಾ. ಸುಮನ ಪೆನ್ನೇಕರ ಅವರ ಖಡಕ್ ಸೂಚನೆ ಜಿಲ್ಲೆಯಲ್ಲಿ ಈ ಹಿಂದೆ ಇದ್ದ ಹತ್ತಾರು ಆಕ್ರಮ ದಂಧೆಗಳಿಗೆ ಬಹುತೇಕ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದೆ. ಮತ್ತು ಆ ನಿಟ್ಟಿನಲ್ಲಿ ಇಲಾಖೆಯ ಹೆಚ್ಚಿನ ಅಧಿಕಾರಿ ಹಾಗೂ ಸಿಬ್ಬಂದಿಗಳ ಕರ್ತವ್ಯ ಪ್ರಶಂಸಿಸಲೇ ಬೇಕೆನ್ನುತ್ತಾರೆ ಕೆಲ ಪ್ರಜ್ಞಾವಂತರು.           

ವಿಸ್ಮಯ ನ್ಯೂಸ್ ವಿಲಾಸ ನಾಯಕ ಅಂಕೋಲಾ

Exit mobile version