ಕೆನರಾ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಂದನಾ ಕಾರ್ಯಕ್ರಮ
"ಶ್ರೀಗುರುಚರಣದ್ವಂದ್ವಂ ವಂದೇಹಂ ವಿಗತ ಸಕಲ ಸಂದೇಹಂ | ಯಚ್ಚರಣದ್ವಯಮದ್ವಯಮನುಭವಂ ಉಪದಿಶತಿ ತತ್ಪದಸ್ಯಾರ್ಥಂ ||"
ಕುಮಟಾ : ಬದುಕಿನ ಎಲ್ಲ ಸಾರ್ಥಕತೆಗೆ ಗುರು ದಾರಿ ದೀಪವಾಗುವನು ಅಂತಹ ಗುರುವಿಗೆ ಶಿಷ್ಯರ ಕಿರು ಕಾಣಿಕೆಯೇ ಗುರು ನಮನ ಅಂತಹ ಒಂದು ಅವಿಸ್ಮರಣೀಯ ದಿನವೇ ಶಿಕ್ಷಕರ ದಿನಾಚರಣೆ; ಶ್ರೇಷ್ಠ ಶಿಕ್ಷಕರಾದ ಡಾ. ಸರ್ವೇಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಆಚರಿಸುವ ಶಿಕ್ಷಕರ ದಿನಾಚರಣೆಯನ್ನು ಶ್ರೀ ಜಿ ಎನ್ ಹೆಗಡೆ ಟ್ರಸ್ಟ್, ಕುಮಟಾ (ರಿ.) ದ ರೂವಾರಿಗಳೂ, ಪ್ರಸಿದ್ದ ಸ್ತ್ರೀ ರೋಗ ತಜ್ಞರೂ ಆಗಿರುವ ಡಾ|| ಜಿ ಜಿ ಹೆಗಡೆಯವರ ನೇತೃತ್ವದಲ್ಲಿ ಕುಮಟಾ ತಾಲೂಕಿನ ಗೋರೆಯ ಪ್ರದೇಶದಲ್ಲಿ ಸ್ಥಾಪತವಾಗಿರುವ ಕೆನರಾ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ಗುರು ಸ್ಮರಣೆಯ ಮೂಲಕ ಸಡಗರದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಡಾ|| ಜಿ ಜಿ ಹೆಗಡೆಯವರು ವಹಿಸಿಕೊಂಡಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉದಯವಾಣಿ ಪತ್ರಿಕೆಯ ಜಿಲ್ಲಾ ಪ್ರಧಾನ ವರದಿಗಾರರಾದ ಶ್ರೀ ಜಿ ಯು ಭಟ್ ರವರು ಮತ್ತು ಅತಿಥಿಗಳಾಗಿ ಶ್ರೀ ಶಾರದಾಂಬಾ ಆಂಗ್ಲಮಾಧ್ಯಮ ಪ್ರೌಢಶಾಲೆ ಭೈರುಂಬೆಯ ಮುಖ್ಯೋಪಾಧ್ಯಾಯರಾದ ಶ್ರೀ ವಸಂತ್ ಹೆಗಡೆ, ಗಿಬ್ ಆಂಗ್ಲಮಾಧ್ಯಮ ಪ್ರೌಢಶಾಲೆ ಕುಮಟಾದ ಮುಖ್ಯೋಪಾಧ್ಯಾಯರಾದ ಶ್ರೀ ವಿನಾಯಕ ಶಾನಭಾಗ್ ಹಾಗೂ ಪ್ರಗತಿ ವಿದ್ಯಾಲಯ ಮೂರೂರು ಆಂಗ್ಲಮಾಧ್ಯಮ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ವಿವೇಕ್ ಆಚಾರಿರವರು, ಕೆನರಾ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿನ ಕಟ್ಟಡ ವಿನ್ಯಾಸಗಾರರಾದ ಶ್ರೀ ಭಾಸ್ಕರ್ ಮಡಿವಾಳ ರವರು ವೇದಿಕೆಯ ಮೇಲೆ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರಥಮ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಸುಶ್ರಾವ್ಯವಾಗಿ ಪ್ರಾರ್ಥನೆಯನ್ನು ಹೇಳುವ ಮೂಲಕ ಆರಂಭಿಸಿದರು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರನ್ನೂ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಡಿ. ಎನ್ ಭಟ್ ರವರು ಸ್ವಾಗತಿಸಿದರು ಮತ್ತು ಕಾಲೇಜಿನ ವಿದ್ಯಾರ್ಥಿಗಳು ಗುರುಗಳಿಗೆ ಪುಷ್ಪ ನೀಡಿ ಗೌರವಿಸಿದರು. ಕಾರ್ಯಕ್ರಮವನ್ನು ಗೌರವಾನ್ವಿತ ಅಧ್ಯಕ್ಷರು ಮತ್ತು ಮುಖ್ಯ ಅತಿಥಿಗಳು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಜಿ ಯು ಭಟ್ ರವರಿಗೆ ಅಧ್ಯಕ್ಷರಾದ ಡಾ|| ಜಿ ಜಿ ಹೆಗಡೆಯವರು ಗೌರವ ಪೂರ್ವಕವಾಗಿ ಸನ್ಮಾನಿಸಿದರು. ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಅತಿಥಿಗಳಾದ ಶ್ರೀ ವಸಂತ ಹೆಗಡೆ, ಶ್ರೀ ವಿನಾಯಕ ಶಾನಭಾಗ್, ಶ್ರೀ ವಿವೇಕ್ ಆಚಾರಿ ರವರನ್ನು ಅವರ ಪೂರ್ವ ಮತ್ತು ಪ್ರಸ್ತುತ ಕೆನರಾ ಎಕ್ಸಲೆನ್ಸ್ ಪದವಿ ಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಗುರು ಸ್ಮರಣೆಯ ಕಾಣಿಕೆಯನ್ನು ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲ ಉಪನ್ಯಾಸಕರಿಗೆ ಸಂಸ್ಥೆಯ ಅಧ್ಯಕ್ಷರಾದ ಡಾ|| ಜಿ ಜಿ ಹೆಗಡೆಯವರು ಉಡುಗೊರೆಯ ಮೂಲಕ ಶಿಕ್ಷಕರ ದಿನಾಚರಣೆಯ ಶುಭಾಶಯ ಕೋರಿದರು ಜೊತೆಗೆ ಅಧ್ಯಕ್ಷೀಯ ನುಡಿಗಳನ್ನಾಡಿದ ಅವರು ಶಿಕ್ಷಕರ ದಿನಾಚರಣೆಯು ಬದುಕಿನಲ್ಲಿ ವಿದ್ಯೆ ಕಲಿಸಿದ ಗುರುಗಳನ್ನು ಸ್ಮರಿಸಲು ಇರುವ ಮಹತ್ತರ ದಿನ ಎಂದು ತಿಳಿಸುವುದರ ಜೊತೆಗೆ ತಮ್ಮ ಶಾಲಾ ದಿನಗಳನ್ನು, ತಮ್ಮ ಶಿಕ್ಷಕರನ್ನು ಸ್ಮರಿಸಿ ಅವರಿಂದಲೇ ಇಂದು ತಾವು ಉನ್ನತ ಸ್ಥಾನಕ್ಕೆ ತಲುಪುವಲ್ಲಿ ಸಹಕಾರಿಯಾಗಿದೆ ಎಂದರು. ಸಂಸ್ಥೆಯಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಮಾಡಿಸುವ ಧ್ಯಾನ ಯೋಗಗಳು ಹೊರೆ ಎನಿಸಿದರೆ ಅದು ಜೀವನವೇ ಹೊರೆಯಾಗುವುದು ಎಂದು ಹೇಳುವ ಮೂಲಕ ಯೋಗ ಜೀವನದ ಹೊರೆಯನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ ಎಂಬ ವಿಷಯವನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿಕೊಟ್ಟರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮುಖ್ಯ ಅತಿಥಿಗಳು ಉದಯವಾಣಿ ಪತ್ರಿಕೆಯ ಜಿಲ್ಲಾ ಪ್ರಧಾನ ವರದಿಗಾರರಾದ ಶ್ರೀ ಜಿ ಯು ಭಟ್ ರವರು ಮಾತನಾಡಿ ಸಂಸ್ಥೆಯನ್ನು ಕಟ್ಟುವಲ್ಲಿ ಡಾ|| ಜಿ ಜಿ ಹೆಗಡೆಯವರು ಪಟ್ಟ ಶ್ರಮ ಇಂದು ಜಿಲ್ಲೆಗೆ ಉತ್ತಮ ವಿದ್ಯಾಸಂಸ್ಥೆಯನ್ನು ನೀಡುವಲ್ಲಿ ಮಹತ್ತರ ಪಾತ್ರ ವಹಿಸಿದೆ ಅವರ ಪರಿಶ್ರಮದ ಹೊಳಪು ವಿದ್ಯಾರ್ಥಿಗಳ ಕಣ್ಣಿನಲ್ಲಿ ತೋರುತ್ತಿದೆ ಎಂದರು. ಮತ್ತೋರ್ವ ಅತಿಥಿಗಳಾದ ಶ್ರೀ ವಿನಾಯಕ ಶಾನಭಾಗ ಅವರು ಶಿಕ್ಷಕರ ಜವಾಬ್ದಾರಿಯ ಬಗ್ಗೆ ಮಾತನಾಡುತ್ತ ಗುರುವಿನ ಮಾರ್ಗದರ್ಶನ ಇಲ್ಲದಿದ್ದರೆ ಶಿವಾಜಿ ಹಿಂದವೀ ಸಾಮ್ರಾಜ್ಯ ಸ್ಥಾಪಿಸುವುದಕ್ಕೆ ಸಾಧ್ಯವಿರಲಿಲ್ಲ ಆದ್ದರಿಂದ ಗುರುವು ಜೀವನದಲ್ಲಿ ಪ್ರಮುಖ ಸ್ಥಾನ ಹೊಂದಿರುವರು ಎಂದರು.
ಇನ್ನೋರ್ವ ಅತಿಥಿಗಳಾದ ಶ್ರೀ ವಸಂತ ಹೆಗಡೆಯವರು ಕೋವಿಡ್ ೧೯ರ ನಂತರ ವರ್ಚುವಲ್ ನಿಂದ ಪುನಃ ಶಿಕ್ಷಕರ ಹತ್ತಿರ ಪಾಠ ಕಲಿಯಲು ಶಾಲಾ ಕಾಲೇಜುಗಳಲ್ಲಿನ ವರ್ಗ ಕೋಣೆಗೆ ಹಾಗಾಗಿ ಶಿಕ್ಷಕರ ಸ್ಥಾನವನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ ಎಂದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮತ್ತೋರ್ವ ಅತಿಥಿಗಳಾದ ಶ್ರೀ ವಿವೇಕ್ ಆಚಾರಿ ಅವರು ಶಿಕ್ಷಕರ ಜವಾಬ್ದಾರಿ ಮತ್ತು ವಿದ್ಯಾರ್ಥಿಗಳು ತಮಗಿರುವ ಅಲ್ಪ ಸಮಯದಲ್ಲಿ ಉತ್ತಮ ಸಾದಕರಾಗಲು ನಿರಂತರ ಅಧ್ಯಯನ ಅತೀ ಅಗತ್ಯವಿದೆ ಎಂದರು.
ಸಂಸ್ಥೆಯ ಭೌತಶಾಸ್ತ್ರ ಉಪನ್ಯಾಸಕರಾದ ಶ್ರೀ ಜೋಸ್ಟಮ್ ಎ ಟಿ ರವರು ಗುರುವಾಗಿ ಮೊದಲು ಕಾಣುವ ತಾಯಿ ತಂದೆ ಬದುಕನ್ನು ಕಲಿಯಲು ದಾರಿ ತೋರಿದರೆ ಶಿಕ್ಷಕರಾದವರು ಬದುಕಲ್ಲಿ ಸಾಧನೆ ಮಾಡುವುದಕ್ಕೆ ದಾರಿ ತೋರುವರು ಎಂದರು ಸದಾ ನೆನಪಿನಲ್ಲಿ ಉಳಿಯುವವರು ನಮ್ಮನ್ನು ದಂಡಿಸಿ ತಿದ್ದಿ ತೀಡಿದ ಗುರುಗಳು ಮಾತ್ರ ಎಂದರು. ಕಾರ್ಯಕ್ರಮದ ಕೊನೆಯಲ್ಲಿ ಆರ್ಕಿಟೆಕ್ಚರ್ ಆದ ಶ್ರೀ ಭಾಸ್ಕರ್ ಮಡಿವಾಳ ರವರು ತಮ್ಮ ಸಂಜೀವಿನಿ ಸಂಸ್ಥೆಯಿಂದ ಅಚ್ಚಾದ ಪುಸ್ತಕಗಳನ್ನು ಬಿಡುಗಡೆ ಮಾಡಿ ಅವುಗಳು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕವಾಗಲಿ ಎಂದರು.
ಕಾರ್ಯಕ್ರಮವನ್ನು ಕಾಲೇಜಿನ ದ್ವಿತೀಯ ಪಿಯುಸಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಕು. ವೈಶಾಲಿ ಭಟ್ ನಿರೂಪಿಸಿದರು. ಕಾರ್ಯಕ್ರಮದ ಅಂತಿಮ ಘಟ್ಟವಾದ ವಂದನಾರ್ಪಣೆಯನ್ನು ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಕು. ಬಿ ಎಸ್ ಪ್ರಗತಿ ಇವರು ನಡೆಸಿಕೊಟ್ಟರು.
ವಿಸ್ಮಯ ನ್ಯೂಸ್, ಕುಮಟಾ