ತರಗೆಲೆ ತರಲು ಹೋಗಿ ನೀರಿನಲ್ಲಿ ಕಣ್ಮರೆಯಾಗಿದ್ದ ರೈತ: ನದಿ ನೀರಿನ ಸೆಳೆತಕ್ಕೆ ಸಿಲುಕಿ ಕೊಚ್ಚಿ ಹೋದವ ಬಹುದೂರದ ಸಮುದ್ರ ಸೇರಿ, ಕಡಲ ಕಿನಾರೆಯಲ್ಲಿ ಮೃತ ದೇಹವಾಗಿ ಪತ್ತೆ
ಯಜಮಾನನನ್ನು ಕಳೆದುಕೊಂಡ ಕುಟುಂಬದಲ್ಲಿ ಶೋಕದ ಛಾಯೆ
ಅಂಕೋಲಾ: ತಾಲೂಕಿನ ಹೊಸಕಂಬಿಯಲ್ಲಿ ಸೋಮವಾರ ಗಂಗಾವಳಿ ನದಿಯ ದಂಡೆಯಲ್ಲಿ ನಡೆದು ಹೋಗುತ್ತಿರುವಾಗ ಆಕಸ್ಮಿಕವಾಗಿ ಕಾಲುಜಾರಿ ನದಿಗೆ ಬಿದ್ದು ಕಣ್ಮರೆಯಾಗಿದ್ದ ವ್ಯಕ್ತಿಯ ಮೃತ ದೇಹ ಮಂಗಳವಾರ ಬೆಳಗ್ಗೆ ತಾಲೂಕಿನ ಬೆಳಂಬಾರ ಉತ್ತರಖಾರ್ವಿವಾಡಾ ಸಮುದ್ರ ತೀರದಲ್ಲಿ ಪತ್ತೆಯಾಗಿದೆ. ಹಿಲ್ಲೂರ -ಹೊಸಕಂಬಿ ನಿವಾಸಿ ಈಶ್ವರ ಸೂರಾ ನಾಯ್ಕ (66) ಮೃತ ದುರ್ದೈವಿಯಾಗಿದ್ದು ಕೃಷಿಕನಾಗಿದ್ದ ಈತ ತರಗೆಲೆ ತರಲು ಮನೆ ಸಮೀಪದ ಕಾಡಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಕಾಲು ಜಾರಿ ನದಿಯಲ್ಲಿ ಬಿದ್ದು ಕಣ್ಮರೆಯಾಗಿದ್ದ.
ಸೋಮವಾರ ಅಂಕೋಲಾ ಪೊಲೀಸ ಠಾಣೆಯ ಪಿ ಎಸ್ ಐ ಪ್ರವೀಣ ಕುಮಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದರು. ಪೊಲೀಸ್ ಸಿಬ್ಬಂಗಳು,ಅಗ್ನಿಶಾಮಕ ದಳದ ದವರು ಮತ್ತು ಸ್ಥಳೀಯರು ಗಂಗಾವಳಿ ನದಿಯ ಅಕ್ಕ ಪಕ್ಕದಲ್ಲಿ ಶೋಧ ಕಾರ್ಯ ನಡೆಸಿದ್ದರಾದರೂ ಕತ್ತಲು ಆವರಿಸಿದ್ದರಿಂದ ಕಾರ್ಯಚರಣೆ ಮೊಟಕು ಗೊಳಿಸಿದ್ದರು. ಈ ನಡುವೆ ಮೊಗಟಾ ಮೊರಳ್ಳಿ ವ್ಯಾಪ್ತಿಯಲ್ಲಿ ಗಂಗಾವಳಿ ನದಿಯಲ್ಲಿ ಆತನ ದೇಹ ಕೊಚ್ಚಿ ಹೋಗುತ್ತಿರುವುದನ್ನು ಕೆಲವರು ಕಂಡಿದ್ದರು ಎನ್ನಲಾಗಿದೆ.ಆದರೆ ನದಿ ನೀರಿನ ರಭಸ ಹೆಚ್ಚಿದ್ದರಿಂದ ಸ್ಥಳೀಯರು ಅಸಹಾಯಕತೆ ವ್ಯಕ್ತಪಡಿಸಿದ್ದರು.
ಅಂಕೋಲಾ ಮತ್ತು ಗಂಗವಾಳಿ ನದಿ ಅಕ್ಕ ಪಕ್ಕದ ಪ್ರದೇಶಗಳಲ್ಲಿ ಕಳೆದ ಕೆಲ ದಿನಗಳಿಂದ ವ್ಯಾಪಕ ಪ್ರಮಾಣದಲ್ಲಿ ಮಳೆ ಆಗುತ್ತಿರುವ ಕಾರಣ ಗಂಗಾವಳಿ ನದಿಯಲ್ಲಿ ನೀರಿನ ಸೆಳೆತ ಹೆಚ್ಚಾಗಿದ್ದು, ನೀರಿನ ಹರಿವಿನೊಂದಿಗೆ ಕೊಚ್ಚಿ ಹೋದ ದೇಹ ಮಂಜಗುಣಿ ಅಳಿವೆ ಪ್ರದೇಶದಲ್ಲಿ ಸಮುದ್ರ ಸೇರಿ, ನಂತರ ಸಮುದ್ರ ಅಲೆಗಳ ಹೊಡೆತಕ್ಕೆ ಸಿಲುಕಿ ಬೆಳಂಬಾರ ಕಡಲ ತೀರಕ್ಕೆ ಬಂದು ಅಪ್ಪಳಿಸುವಂತಾಯಿತು ಎನ್ನಲಾಗಿದೆ. ಮಂಗಳವಾರ ಬೆಳಿಗ್ಗೆ ಕಡಲ ತೀರದಲ್ಲಿ ಮೃತ ದೇಹ ಕಂಡ ಸ್ಥಳೀಯರು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ.ಈ ಮೂಲಕ ದುರ್ದೈವಿ ರೈತ ನದಿಯಲ್ಲಿ ಬಿದ್ದು ಬಹುದೂರ ಕೊಚ್ಚಿ ಹೋಗಿ ಸಮುದ್ರ ದಂಡೆಯ ಮೇಲೆ ಮೃತ ದೇಹವಾಗಿ ಪತ್ತೆ ಆಗುವಂತಾಗಿದೆ.
ತಂದೆ ನದಿ ನೀರಿನಲ್ಲಿ ಕಣ್ಮರೆಯಾದ ಕುರಿತು ಮೃತ ವ್ಯಕ್ತಿಯ ಮಗ ಪ್ರಕಾಶ ಸೋಮವಾರ ಸಂಜೆ ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಿಸಿದ್ದರು. ನಂತರ ಕಡಲ ತೀರದಿಂದ ಮೃತ ದೇಹವನ್ನು ತಾಲೂಕಾ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಿ,ಮರಣೋತ್ತರ ಪರೀಕ್ಷೆ ನಡೆಸಿ ಮೃತ ದೇಹವನ್ನು ವಾರಸುದಾರರಿಗೆ ಹಸ್ತಂತರಿಸಲಾಯಿತು. ನಂತರ ಮೃತನ ಕುಟುಂಬಸ್ಥರು ಸಾಮಾಜಿಕ ಕಾರ್ಯಕರ್ತ ಕನಸಿಗದ್ದೆಯ ಬೊಮ್ಮಯ್ಯ ನಾಯ್ಕ ಅವರ ಸಹಕಾರದೊಂದಿಗೆ ಹೊಸ ಕಂಬಿಯ ಮನೆಗೆ ಕೊಂಡೊಯ್ದು ಅಂತ್ಯ ಸಂಸ್ಕಾರ ನಡೆಸಿದರು.
ಯಜಮಾನನನ್ನು ಕಳೆದುಕೊಂಡ ಕುಟುಂಬದಲ್ಲಿ ಶೋಕದ ಛಾಯೆ ಆವರಿಸಿದೆ.ಬಡ ಕುಟುಂಬಕ್ಕೆ ಸರ್ಕಾರದಿಂದ ಯೋಗ್ಯ ಪರಿಹಾರ ದೊರಯಬೇಕಿದೆ ಎನ್ನುವ ಮಾತು ಸ್ಥಳೀಯರಿಂದ ಕೇಳಿ ಬಂದಿದೆ. ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಜಿ ಎಮ್ ಶೆಟ್ಟಿ, ಶಿರೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಅನಂತ್ ನಾಯ್ಕ್,ಸ್ಥಳೀಯರಾದ ನಿರಂಜನ್ ನಾಯಕ ಇತರರಿದ್ದರು. ಮೃತನ ಕುಟುಂಬ ಸಂಬಂಧಿಗಳು,ಊರ ನಾಗರಿಕರು ಅಂತ್ಯ ಸಂಸ್ಕಾರ ನೆರವೇರಿಸಲು ಸಹಕರಿಸಿದರು.
ವಿಸ್ಮಯ ನ್ಯೂಸ್ ವಿಲಾಸ ನಾಯಕ